ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 24ರಂದು ನಡೆಯಲಿರುವ RCB ಮತ್ತು GT ನಡುವಿನ ಐಪಿಎಲ್ ಪಂದ್ಯ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ವಿಶೇಷ ಸಂಚಾರ ನಿರ್ವಹಣಾ ವ್ಯವಸ್ಥೆ ಜಾರಿಗೆ ತಂದಿದ್ದಾರೆ.
ಪಂದ್ಯ ವೀಕ್ಷಣೆಗೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುವ ನಿರೀಕ್ಷೆಯಿರುವುದರಿಂದ ಸ್ಟೇಡಿಯಂ ಸುತ್ತಮುತ್ತ ಹಲವಾರು ರಸ್ತೆಗಳಲ್ಲಿ ವಾಹನ ನಿಲುಗಡೆ ಸಂಪೂರ್ಣ ನಿಷೇಧಿಸಲಾಗಿದೆ. ಕ್ವೀನ್ಸ್ ರಸ್ತೆ, ಎಂ.ಜಿ. ರಸ್ತೆ, ಲಿಂಕ್ ರಸ್ತೆ, ರಾಜಭವನ್ ರಸ್ತೆ, ಟಿ. ಚೌಡಯ್ಯ ರಸ್ತೆ, ರೇಸ್ ಕೋರ್ಸ್ ರಸ್ತೆ ಹಾಗೂ ಸೆಂಟ್ರಲ್ ಸ್ಟ್ರೀಟ್ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಪಾರ್ಕಿಂಗ್‌ಗೆ ನಿರ್ಬಂಧ ವಿಧಿಸಲಾಗಿದೆ.
ಕಬ್ಬನ್ ರಸ್ತೆಯ ಸಿಟಿಒ ವೃತ್ತದಿಂದ ಡಿಕ್ಕೆನ್ಸನ್ ರಸ್ತೆ ಜಂಕ್ಷನ್‌ವರೆಗೆ ಹಾಗೂ ಕಾಮರಾಜ್ ರಸ್ತೆ ಭಾಗದಲ್ಲಿಯೂ ಬಿಎಂಟಿಸಿ ಬಸ್‌ಗಳನ್ನು ಹೊರತುಪಡಿಸಿ ಇತರ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
ಇದೇ ವೇಳೆ ಸಾರ್ವಜನಿಕರ ಅನುಕೂಲಕ್ಕಾಗಿ ಸಿದ್ಧಲಿಂಗಯ್ಯ ವೃತ್ತದ ಸೇಂಟ್ ಜೋಸೆಫ್ ಶಾಲಾ ಮೈದಾನ, ಮ್ಯೂಸಿಯಂ ರಸ್ತೆ ಸೇಂಟ್ ಜೋಸೆಫ್ ಸ್ಕೂಲ್ ಮೈದಾನ, ಫ್ರೀಡಂ ಪಾರ್ಕ್ MLCP, ಗರುಡ ಮಾಲ್, ಯು.ಬಿ. ಸಿಟಿ ಹಾಗೂ ಕಂಠೀರವ ಕ್ರೀಡಾಂಗಣ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಸ್ಟೇಡಿಯಂ ಪ್ರವೇಶಕ್ಕೆ ಕಬ್ಬನ್ ರಸ್ತೆ, ಲಿಂಕ್ ರಸ್ತೆ ಮತ್ತು ಕ್ವೀನ್ಸ್ ರಸ್ತೆಗಳ ಮೂಲಕ ವಿವಿಧ ಗೇಟ್‌ಗಳನ್ನು ನಿಗದಿಪಡಿಸಲಾಗಿದೆ. VIP ಹಾಗೂ ಆಟಗಾರರಿಗೆ ಮಾತ್ರ ಪ್ರತ್ಯೇಕ ಗೇಟ್ ಮೀಸಲಾಗಿದೆ.
ಟ್ರಾಫಿಕ್ ದಟ್ಟಣೆ ತಪ್ಪಿಸಲು ಸಾರ್ವಜನಿಕರು ಮೆಟ್ರೋ ಮತ್ತು ಬಿಎಂಟಿಸಿ ಬಸ್‌ಗಳನ್ನು ಬಳಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.



