ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ಐದು ವರ್ಷಗಳ ಹಿಂದೆ ಭಿಕ್ಷೆ ಬೇಡುತ್ತಿದ್ದ ಮಹಿಳೆ, ಆರ್ಥಿಕ ಸಂಕಷ್ಟದಿಂದ ತನ್ನ ಮಗುವನ್ನು ಮಾರಾಟ ಮಾಡಲು ಮುಂದಾಗಿದ್ದ ಘಟನೆ ಇದೀಗ ಹೊಸ ತಿರುವು ಪಡೆದುಕೊಂಡಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಮಗುವನ್ನು ರಕ್ಷಿಸಿ ವಶಕ್ಕೆ ಪಡೆದುಕೊಳ್ಳಲಾಗಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿ ಬಾಲಕಿಗೆ ಹೃದಯ ಸಂಬಂಧಿತ ಸಮಸ್ಯೆ ಇರುವುದೂ ಬೆಳಕಿಗೆ ಬಂದಿತ್ತು. ಬಳಿಕ ಐದು ವರ್ಷಗಳ ಕಾಲ ಇಲಾಖೆಯ ಆರೈಕೆಯಲ್ಲಿ ಬೆಳೆದ ಈ ಬಾಲಕಿಗೆ ಇದೀಗ ಹೊಸ ಕುಟುಂಬ ದೊರೆತಿದೆ.
ಭಾರತೀಯ ಮೂಲದ, ದುಬೈನಲ್ಲಿ ನೆಲೆಸಿರುವ ದಂಪತಿ ಈ ಏಳು ವರ್ಷದ ಬಾಲಕಿಯನ್ನು ದತ್ತು ಪಡೆದುಕೊಂಡಿದ್ದಾರೆ. ಮಗುವಿಗೆ ಹೃದಯ ಸಮಸ್ಯೆ ಇದ್ದರೂ ಚಿಕಿತ್ಸೆ ನೀಡಿ ಸಾಕಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಾಲಕಿ ದಂಪತಿಯೊಂದಿಗೆ ದುಬೈಗೆ ಪ್ರಯಾಣ ಬೆಳೆಸಿದ್ದಾಳೆ.
ಚಿಕ್ಕಬಳ್ಳಾಪುರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನವತಾಜ್ ಮಾತನಾಡಿ, ಭಾರತದಲ್ಲಿ ಯಾರೂ ದತ್ತು ಪಡೆಯಲು ಮುಂದೆ ಬರದಿದ್ದರೂ ದುಬೈ ದಂಪತಿ ಮುಂದೆ ಬಂದು ಮಾನವೀಯತೆ ತೋರಿದ್ದಾರೆ ಎಂದು ತಿಳಿಸಿದ್ದಾರೆ. ಮಗುವಿಗೆ ಮುಂದಿನ ದಿನಗಳಲ್ಲಿ ಅಗತ್ಯ ಚಿಕಿತ್ಸೆ ನೀಡಲಾಗುವುದು ಎಂದು ಅವರು ಹೇಳಿದರು.
ಈ ಘಟನೆ ಬಾಲಕಿಯ ಜೀವನಕ್ಕೆ ಹೊಸ ಆಶಾಕಿರಣ ನೀಡಿದಂತಾಗಿದೆ.



