ಧರ್ಮ ಶ್ರದ್ಧೆಗೆ ಸಮಾರಂಭವೇ ಸಾಕ್ಷಿ : ರಂಭಾಪುರಿ ಶ್ರೀಗಳು

0
Ishtalinga Maha Puja as part of Sharannavaratri Dussehra celebrations
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ದಾಸೋಹದ ಕಾರ್ಯಕ್ಕೆ ಅಬ್ಬಿಗೇರಿಯ ಜನ ಎಂದಿಗೂ ಮುಂದಿದ್ದು, ಅದಕ್ಕೆಂದೇ ಇಂತಹ ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿ, ಅದರಲ್ಲಿ ಯಶಸ್ವಿಯೂ ಆಗಿದ್ದಾರೆ ಎಂದು ಶ್ರೀಮದ್ ರಂಭಾಪುರಿ ಜಗದ್ಗುರುಗಳು ಹೇಳಿದರು.

Advertisement

ಅಬ್ಬಿಗೇರಿಯ ಹಿರೇಮಠದಲ್ಲಿ ಗುರುವಾರ ಬೆಳಿಗ್ಗೆ ಶರನ್ನವರಾತ್ರಿ ದಸರಾ ಮಹೋತ್ಸವದ ಅಂಗವಾಗಿ ಇಷ್ಟಲಿಂಗ ಮಹಾ ಪೂಜೆಯನ್ನು ನೆರವೇರಿಸಿದ ನಂತರ ನೆರೆದ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದರು.

ನಿನ್ನೆಯ ದಿನ ಅಬ್ಬಿಗೇರಿ ಮತ್ತು ಸುತ್ತಲಿನ ಭಕ್ತರು ನೀಡಿದ ಸ್ವಾಗತ ಭವ್ಯವಾಗಿತ್ತು. ಭಕ್ತರಲ್ಲಿನ ಧರ್ಮ ಶ್ರದ್ಧೆಗೆ ಈ ಸಮಾರಂಭ ಸಾಕ್ಷಿಯಾಗಿದೆ. ಅಬ್ಬಿಗೇರಿ ಮತ್ತು ಸುತ್ತಲಿನ ಗ್ರಾಮಗಳ ಹಾಗೂ ಗದಗ ಜಿಲ್ಲೆಯ ಎಲ್ಲ ಭಾವಿಕ ಜನಗಳ ಸುದೈವದಿಂದ ಅಬ್ಬಿಗೇರಿಯಂತಹ ಗ್ರಾಮೀಣ ಪ್ರದೇಶದಲ್ಲಿ ಇಂತಹದ್ದೊಂದು ದೊಡ್ಡ ಸಮಾರಂಭ ನಡೆಯುತ್ತಿದೆ. ರಂಭಾಪುರಿ ಪೀಠದ ಗುರುಮನೆ ದಸರಾ ಮಹೋತ್ಸವ ಎಂದರೆ ಅದು ಎಲ್ಲರಿಗೂ ನೀಗುವುದಲ್ಲ. ಅದನ್ನು ನಿಭಾಯಿಸಲು ಒಪ್ಪಿಕೊಂಡ ನಿಮಗೆಲ್ಲರಿಗೂ ಪೀಠದ ಪರವಾಗಿ ಶುಭ ಆಶೀರ್ವಾದಗಳು ಎಂದರು.

ಈ ದಿನ ನಡೆದ ಈ ಇಷ್ಟಲಿಂಗ ಮಹಾ ಪೂಜೆಯನ್ನು ಮೊದಲ ಬಾರಿಗೆ ಸಾಮೂಹಿಕವಾಗಿ, ಸಾರ್ವಜನಿಕವಾಗಿ ಆಚರಣೆಗೆ ತಂದವರು ಪೀಠದ ಹಿಂದಿನ ಜಗದ್ಗುರುಗಳಾದ ಶ್ರೀಮದ್ ಗಂಗಾಧರ ಮಹಾಸ್ವಾಮಿಗಳು. ಅವರ ನಂತರ ಕಳೆದ 33 ವರ್ಷಗಳಿಂದ ನಾವು ಈ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದೇವೆ. ಇದರಿಂದ ಸ್ಫೂರ್ತಿ ಪಡೆದು ನೀವುಗಳು ನಿಮ್ಮ ಮನೆಯಲ್ಲಿ ಹತ್ತೇ ನಿಮಿಷ ಶ್ರದ್ಧೆಯಿಂದ ಲಿಂಗ ಪೂಜೆ ಮಾಡಿದರೆ ಖಂಡಿತ ನಿಮಗೆ ಶುಭವಾಗುತ್ತದೆ. ಲಿಂಗಕ್ಕೆ ಎಂದಿಗೂ ಮೈಲಿಗೆ ಎಂಬುದಿಲ್ಲ. ಲಿಂಗವನ್ನು ಸ್ಪರ್ಶಿಸಿದವರೆಲ್ಲರೂ ಪವಿತ್ರರಾಗುತ್ತಾರೆ ಎಂದು ಶ್ರೀಗಳು ತಿಳಿಸಿದರು.

ಯಡಿಯೂರಿನ ಶ್ರೀ ರೇಣುಕ ಶಿವಾಚಾರ್ಯರು ನಡೆಯುವ ಕಾರ್ಯಕ್ರಮಗಳ ಪ್ರಕಟಣೆಯನ್ನು ನೀಡಿದರು. ಇಷ್ಟಲಿಂಗ ಮಹಾ ಪೂಜೆಯಲ್ಲಿ ಕೋಡಿಕೊಪ್ಪ, ಕೋಚಲಾಪೂರ, ತೋಟಗಂಟಿ ಹಾಗೂ ಅಬ್ಬಿಗೇರಿ ಗ್ರಾಮದ 5ನೇ ವಾರ್ಡಿನ ಮಹಿಳೆಯರು ಕುಂಭಗಳನ್ನು ತೆಗೆದುಕೊಂಡು ಬಂದು ಮಹಾ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು, ಇಷ್ಟಲಿಂಗ ಮಹಾ ಪೂಜೆಯಲ್ಲಿ ಪಾಲ್ಗೊಳ್ಳುವದೆಂದರೆ ಶಿವನ ಸನ್ನಿಧಿಯಲ್ಲಿ ಇದ್ದಂತೆ. ದೇವರ ಪೂಜೆಯಿಂದ ಮನಸ್ಸು ಪ್ರಸನ್ನಗೊಳ್ಳುತ್ತದೆ. ಪೂರ್ವ ಜನ್ಮದ ಪುಣ್ಯವಿದ್ದರೆ ಮಾತ್ರ ಹರ ಸೇವೆ, ಗುರು ಪೂಜೆಗೆ ಅವಕಾಶ ದೊರಕುತ್ತದೆ. ಇಂದು ನೀವು ಅಂತಹ ಭಾಗ್ಯಶಾಲಿಗಳಾಗಿದ್ದೀರಿ ಎಂದರು.


Spread the love

LEAVE A REPLY

Please enter your comment!
Please enter your name here