ವಿಜಯಸಾಕ್ಷಿ ಸುದ್ದಿ, ಗದಗ: ಜೈನ ಮುನಿಗಳು ಹಾಗೂ ಸಾಧ್ವಿಯರ ಮೇಲೆ ಇತ್ತೀಚೆಗೆ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಗದಗ ಜಿಲ್ಲಾ ಜೈನ ಸಮಾಜ, ಅಹಿಂಸೆಯ ಸಂದೇಶ ಹೊತ್ತು ದೇಶಾದ್ಯಂತ ಬರಿಗಾಲಿನಲ್ಲಿ ಪಾದಯಾತ್ರೆ ಮಾಡುವ ಜೈನ ತಪಸ್ವಿಗಳಿಗೆ ತಕ್ಷಣ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿತು.
ನಗರದ ಗುಜ್ಜರ ಬಸ್ತಿಯಿಂದ ಶುಕ್ರವಾರ ಆರಂಭವಾದ ಶಾಂತ ಹಾಗೂ ಮೌನ ಬೃಹತ್ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿತು. ಮೆರವಣಿಗೆಯಲ್ಲಿ ಜೈನ ಸಮಾಜದ ನೂರಾರು ಸದಸ್ಯರು ಭಾಗವಹಿಸಿ ತಪಸ್ವಿಗಳ ರಕ್ಷಣೆಗೆ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದರು.
ಮನವಿಯಲ್ಲಿ, “ಶತಮಾನಗಳಿಂದ ಜೈನ ಸಾಧು-ಸಾಧ್ವಿಯರು ಅಹಿಂಸೆ, ಶಾಂತಿ ಹಾಗೂ ಆಧ್ಯಾತ್ಮಿಕ ಶಿಸ್ತಿನ ಸಂದೇಶದೊಂದಿಗೆ ದೇಶಾದ್ಯಂತ ಪಾದಯಾತ್ರೆ ನಡೆಸುತ್ತಿದ್ದಾರೆ. ಆದರೆ ಇಂದು ಹೆದ್ದಾರಿಗಳಲ್ಲೇ ಅವರ ಜೀವ ಅಪಾಯಕ್ಕೆ ಸಿಲುಕುತ್ತಿದೆ,” ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಪಕ್ಕದಲ್ಲಿ ಜೈನ ತಪಸ್ವಿಗಳು, ಗ್ರಾಮೀಣರು ಹಾಗೂ ಕಾಲ್ನಡಿಗೆ ಪ್ರಯಾಣಿಕರಿಗಾಗಿ ಪ್ರತ್ಯೇಕ ಸುರಕ್ಷಿತ ಪಾದಚಾರಿ ಕಾರಿಡಾರ್ ನಿರ್ಮಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಇದೇ ವೇಳೆ “ಸನ್ಯಾಸಿ ದಾಟುವಿಕೆ ವಲಯ” ಎಂಬ ಶಾಶ್ವತ ಎಚ್ಚರಿಕೆ ಫಲಕಗಳ ಅಳವಡಿಕೆ, ವಾಹನಗಳ ವೇಗ ನಿಯಂತ್ರಣ, ಅಪಘಾತ ಪ್ರಕರಣಗಳಲ್ಲಿ ನಿಷ್ಪಕ್ಷಪಾತ ತನಿಖೆ ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಜೈನ ಮುನಿಗಳು ಹೆಚ್ಚಾಗಿ ವಿಹಾರ ಮಾಡುವ ಬೆಳಿಗ್ಗೆ 4ರಿಂದ 8 ಗಂಟೆ ಹಾಗೂ ಸಂಜೆ 5ರಿಂದ 6.30ರ ಅವಧಿಯಲ್ಲಿ ಹೆದ್ದಾರಿಗಳಲ್ಲಿ ವಿಶೇಷ ಪೊಲೀಸ್ ಗಸ್ತು ಹಾಗೂ ಮೇಲ್ವಿಚಾರಣೆ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಆರ್‌ಟಿಓ ಮೂಲಕ ಚಾಲನಾ ಪರವಾನಗಿ ನೀಡುವ ಪ್ರಕ್ರಿಯೆಯಲ್ಲಿ “ಬರಿಗಾಲಿನ ತಪಸ್ವಿಗಳ ಸುರಕ್ಷತೆ” ಕುರಿತು ಜಾಗೃತಿ ಮಾಡ್ಯೂಲ್ ಸೇರಿಸಬೇಕೆಂದೂ ಆಗ್ರಹಿಸಲಾಗಿದೆ.
ಶ್ವೇತಾಂಬರ ಮೂರ್ತಿಪೂಜಕ ಸಮಾಜದ ಅಧ್ಯಕ್ಷ ಇಂದ್ರಕುಮಾರ ಬಾಫಣಾ, ವರ್ಧಮಾನ ಸ್ಥಾನಕವಾಸಿ ಸಮಾಜದ ಅಧ್ಯಕ್ಷ ರೂಪಚಂದಜೀ ಪಾಲರೇಚಾ, ತೇರಾಪಂಥ ಸಮಾಜದ ಅಧ್ಯಕ್ಷ ಖೀಮಚಂದ ಬನ್ಸಾಲಿ, ಕೆಡಿಒ ಜೈನ ಮಹಾಜನ್ ಸಮಾಜದ ಅಧ್ಯಕ್ಷ ವಿಜಯ ಲೂಥಿಯಾ, ದಿಗಂಬರ ಜೈನ ಸಮಾಜದ ಅಧ್ಯಕ್ಷ ಪದ್ಮರಾಜ ಕುಲಕರ್ಣಿ ಸೇರಿದಂತೆ ಸಮಾಜದ ಮುಖಂಡರು, ಮಹಿಳಾ ಹಾಗೂ ಯುವಕ ಮಂಡಳದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಸರ್ಕಾರಕ್ಕೆ ರವಾನಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪ್ರಮುಖ ಬೇಡಿಕೆಗಳು
- ಜೈನ ಮುನಿಗಳಿಗಾಗಿ ಸುರಕ್ಷಿತ ಪಾದಚಾರಿ ಕಾರಿಡಾರ್ ನಿರ್ಮಾಣ
- “ಸನ್ಯಾಸಿ ದಾಟುವಿಕೆ ವಲಯ” ಎಚ್ಚರಿಕೆ ಫಲಕ ಅಳವಡಿಕೆ
- ಹೆದ್ದಾರಿಗಳಲ್ಲಿ ವೇಗ ನಿಯಂತ್ರಣ ಕ್ರಮ
- ಅಪಘಾತ ಪ್ರಕರಣಗಳಲ್ಲಿ ನಿಷ್ಪಕ್ಷಪಾತ ತನಿಖೆ
- ವಿಶೇಷ ಪೊಲೀಸ್ ಗಸ್ತು ವ್ಯವಸ್ಥೆ
- ಚಾಲನಾ ಪರವಾನಗಿಯಲ್ಲಿ ಜಾಗೃತಿ ಮಾಡ್ಯೂಲ್ ಸೇರ್ಪಡೆ



