ವಿಜಯಸಾಕ್ಷಿ ಸುದ್ದಿ, ಗದಗ: “ನಾವು ಹುಟ್ಟುಹಬ್ಬ ಆಚರಿಸುವಾಗ ಕೇಕ್ ಮೇಲಿನ ದೀಪವನ್ನು ಆರಿಸುತ್ತೇವೆ. ಆದರೆ ಶ್ರೀ ಕಾಳಿದಾಸ ಶಿಕ್ಷಣ ಸಮಿತಿಯು ದೀಪವೇ ಇಲ್ಲದ ಗುಡಿಸಲಿನ ಮಕ್ಕಳ ಎದೆಯಲ್ಲಿ ಅಕ್ಷರದ ದೀಪ ಹಚ್ಚುವ ಮೂಲಕ ತನ್ನ 25ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ” ಎಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.
ನಗರದ ಕಳಸಾಪೂರ ರಸ್ತೆಯ ಬಯಲು ಆಂಜನೇಯ ದೇವಸ್ಥಾನ ಆವರಣದಲ್ಲಿ ಭಾನುವಾರ ನಡೆದ ಶ್ರೀ ಕಾಳಿದಾಸ ಶಿಕ್ಷಣ ಸಮಿತಿಯ ರಜತ ಮಹೋತ್ಸವ ಅಂಗವಾಗಿ ವರ್ಷಪೂರ್ತಿ ನಡೆಯಲಿರುವ ಕಾರ್ಯಕ್ರಮಗಳಿಗೆ ಲ್ಯಾಪ್‌ಟಾಪ್‌ನಲ್ಲಿ ಗುಂಡಿಯನ್ನು ಒತ್ತುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಶಿಕ್ಷಣವೆಂದರೆ ಕೇವಲ ಶಾಲೆಯ ನಾಲ್ಕು ಗೋಡೆಗಳೊಳಗಿನ ಪಾಠವಲ್ಲ. ಈ ಜಗತ್ತೇ ದೊಡ್ಡ ಪಾಠಶಾಲೆ. ಅಮ್ಮನ ಜೋಗುಳ, ಅಪ್ಪನ ಬೈಗುಳ ಮನುಷ್ಯನ ಜೀವನವನ್ನು ಪರಿಪೂರ್ಣಗೊಳಿಸುತ್ತವೆ ಎಂದು ಶ್ರೀಗಳು ತಿಳಿಸಿದರು.
ಇಂದಿನ ಸಮಾಜದ ಮೌಲ್ಯಗಳ ಕುಸಿತದ ಕುರಿತು ಮಾತನಾಡಿದ ಅವರು, “ಸೂರ್ಯ, ಗಾಳಿ, ನೀರು, ಭೂಮಿ ಯಾವುದೂ ಕೆಟ್ಟಿಲ್ಲ. ಕೆಟ್ಟಿರುವುದು ಮನುಷ್ಯನ ಮನಸ್ಸು ಮಾತ್ರ” ಎಂದು ಅರ್ಥಪೂರ್ಣ ಸಂದೇಶ ನೀಡಿದರು.
ಹಿತ್ತಲಿನಲ್ಲಿರುವ ಒಂದು ಹೂವು ಬೆಳಿಗ್ಗೆ ಅರಳಿ ಸಂಜೆ ಬಾಡಿದರೂ ದೇವರ ಪಾದ ಸೇರಿ ತನ್ನ ಬದುಕು ಸಾರ್ಥಕ ಮಾಡಿಕೊಳ್ಳುತ್ತದೆ. ಅದೇ ರೀತಿ ಮನುಷ್ಯನ ಬದುಕಿಗೂ ಅರ್ಥಪೂರ್ಣ ಗುರಿ ಇರಬೇಕು ಎಂದು ಶ್ರೀಗಳು ಹೇಳಿದರು.
ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಮಾತನಾಡಿ, ಶ್ರೀ ಕಾಳಿದಾಸ ಶಿಕ್ಷಣ ಸಮಿತಿಯು ರಜತ ಮಹೋತ್ಸವವನ್ನು ಕೇವಲ ಸಂಭ್ರಮಕ್ಕೆ ಸೀಮಿತಗೊಳಿಸದೇ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ವಿಶಿಷ್ಟ ಸಂದೇಶ ನೀಡಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಡಾ. ಜಿ.ಬಿ. ಪಾಟೀಲ ನಿರೂಪಣೆ ಮಾಡಿದರು. ಎಸ್.ಜಿ. ಪಲ್ಲೇದ, ಬಿ.ಬಿ. ಬಾವಿಕಟ್ಟಿ, ಫಕೀರಪ್ಪ ಹೆಬಸೂರ, ಶಶಿಧರ ರೊಳ್ಳಿ, ಆರ್.ಡಿ. ಕಡ್ಲಿಕೊಪ್ಪ, ನೀಲಕಂಠ ಮರಡಿ, ವೈ.ಬಿ. ಬಾನಾಪೂರ, ಆರ್.ಎಂ. ನಿಂಬನಾಯ್ಕರ, ಎಸ್.ಡಿ. ಸಿಂಗಟಾಲಕೇರಿ, ಎಸ್.ಎಸ್. ಕರಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ದೇವರಾಜ ಅರಸು ಹಾಸ್ಟೆಲ್ ಆವರಣದಲ್ಲಿ ಶಶಿಧರ ರೊಳ್ಳಿ ಕುಟುಂಬದವರಿಂದ ಗವಿಸಿದ್ದೇಶ್ವರ ಶ್ರೀಗಳಿಗೆ ಪಾದಪೂಜೆ ಕಾರ್ಯಕ್ರಮ ನಡೆಯಿತು.



