ಕನ್ನಡ ಚಿತ್ರರಂಗದ ನಟಿಯರು ಇದೀಗ ಪರಭಾಷೆಯ ಸಿನಿಮಾಗಳಲ್ಲೂ ಭರ್ಜರಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಶ್ರೀನಿಧಿ ಶೆಟ್ಟಿ, ರುಕ್ಮಿಣಿ ವಸಂತ್ ಹಾಗೂ ಶ್ರದ್ಧಾ ಶ್ರೀನಾಥ್ ಸೇರಿದಂತೆ ಹಲವು ನಟಿಯರು ಕನ್ನಡದ ಜೊತೆಗೆ ಬೇರೆ ಭಾಷೆಗಳಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ.
ಇದೀಗ ಈ ಸಾಲಿಗೆ ಕನ್ನಡದ ಪ್ರತಿಭಾವಂತ ನಟಿ ಚೈತ್ರಾ ಜೆ. ಆಚಾರ್ ಕೂಡ ಸೇರ್ಪಡೆಯಾಗಿದ್ದಾರೆ. ಪ್ರಭಾಸ್ ಅಭಿನಯದ ‘ಫೌಜಿ’ ಸಿನಿಮಾದಲ್ಲಿ ಅವಕಾಶ ಪಡೆದಿದ್ದ ಚೈತ್ರಾ, ಇದೀಗ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಹೊಸ ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿಶೇಷವೆಂದರೆ ಖುದ್ದು ಮಣಿರತ್ನಂ ಅವರೇ ಕರೆ ಮಾಡಿ ಚೈತ್ರಾಗೆ ಅವಕಾಶ ನೀಡಿದ್ದಾರಂತೆ.
ಕನ್ನಡ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರುವ ಚೈತ್ರಾ ಆಚಾರ್, ಇದೀಗ ಪರಭಾಷೆಯ ಚಿತ್ರರಂಗದಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ. ಈ ಹಿಂದೆ ತಮಿಳಿನ ‘3 ಬಿಎಚ್ಕೆ’ ಸಿನಿಮಾದಲ್ಲಿ ನಟಿಸಿದ್ದ ಚೈತ್ರಾ, ಬಳಿಕ ಟಾಲಿವುಡ್ ಸ್ಟಾರ್ ಪ್ರಭಾಸ್ ಅಭಿನಯದ ‘ಫೌಜಿ’ ಸಿನಿಮಾದಲ್ಲಿ ಮಹತ್ವದ ಪಾತ್ರ ಗಿಟ್ಟಿಸಿಕೊಂಡಿದ್ದರು. ಇದೀಗ ಮಣಿರತ್ನಂ ನಿರ್ದೇಶನದ ‘ಇಂಜಿ ವೆಲ್ಲಂ’ ಸಿನಿಮಾದಲ್ಲಿ ನಟಿಸುವ ಮೂಲಕ ಮತ್ತೊಂದು ದೊಡ್ಡ ಅವಕಾಶ ತಮ್ಮದಾಗಿಸಿಕೊಂಡಿದ್ದಾರೆ.
ಮಣಿರತ್ನಂ ನಿರ್ದೇಶನದ ‘ಇಂಜಿ ವೆಲ್ಲಂ’ ಸಿನಿಮಾದಲ್ಲಿ ವಿಜಯ್ ಸೇತುಪತಿ ಹಾಗೂ ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರ ಜೊತೆಗೆ ಚೈತ್ರಾ ಆಚಾರ್ ಕೂಡ ಮಹತ್ವದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಅವಕಾಶ ಸಿಕ್ಕಿರುವ ಬಗ್ಗೆ ಮಾತನಾಡಿರುವ ಚೈತ್ರಾ, ಖುದ್ದು ಮಣಿರತ್ನಂ ಅವರೇ ಕರೆ ಮಾಡಿ ಸಿನಿಮಾದಲ್ಲಿ ನಟಿಸುವಂತೆ ಕೇಳಿಕೊಂಡಾಗ ತುಂಬಾ ಖುಷಿಯಾಯಿತು ಎಂದು ಸಂತಸ ಹಂಚಿಕೊಂಡಿದ್ದಾರೆ.
‘ನನ್ನ ಸಿನಿಮಾದಲ್ಲಿ ಒಂದು ಪಾತ್ರವಿದೆ. ಆ ಪಾತ್ರದಲ್ಲಿ ನೀವು ನಟಿಸಬೇಕು ಎಂಬುದು ನನ್ನ ಆಸೆ’ ಎಂದು ಮಣಿರತ್ನಂ ಹೇಳಿದಾಗ ತಕ್ಷಣವೇ ಒಪ್ಪಿಕೊಂಡೆ. ಅವರಂತಹ ಖ್ಯಾತ ನಿರ್ದೇಶಕರ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ನನಗೆ ತುಂಬಾ ಸಂತೋಷ ತಂದಿದೆ ಎಂದು ಚೈತ್ರಾ ತಿಳಿಸಿದ್ದಾರೆ.
ಇನ್ನು ‘ಇಂಜಿ ವೆಲ್ಲಂ’ ಸಿನಿಮಾದಲ್ಲಿ ಚೈತ್ರಾ ಆಚಾರ್ ಅವರ ಬಹುತೇಕ ದೃಶ್ಯಗಳು ವಿಜಯ್ ಸೇತುಪತಿ ಅವರ ಜೊತೆಯಲ್ಲೇ ಇವೆಯಂತೆ. ವಿಜಯ್ ಸೇತುಪತಿ ಅವರೊಂದಿಗೆ ಕೆಲಸ ಮಾಡಿದ್ದು ವಿಭಿನ್ನ ಅನುಭವ ನೀಡಿದೆ. ಸಿನಿಮಾ ಸೆಟ್ನಲ್ಲಿ ಅತ್ಯಂತ ಉತ್ಸಾಹಭರಿತ ವಾತಾವರಣವಿತ್ತು. ಮಣಿರತ್ನಂ ಅವರಂತಹ ನಿರ್ದೇಶಕರ ಜೊತೆ ಕೆಲಸ ಮಾಡಿದ್ದು ನನ್ನ ವೃತ್ತಿಜೀವನದ ವಿಶೇಷ ಅನುಭವಗಳಲ್ಲಿ ಒಂದು ಎಂದು ಚೈತ್ರಾ ಸಂತಸ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ‘ಇಂಜಿ ವೆಲ್ಲಂ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಜನವರಿ 29ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಲಾಗಿದೆ. ಮಣಿರತ್ನಂ ನಿರ್ದೇಶನದ ಸಿನಿಮಾದಲ್ಲಿ ತಮ್ಮನ್ನು ತಾವು ಬೆಳ್ಳಿತೆರೆಯ ಮೇಲೆ ನೋಡಲು ಕಾತರದಿಂದ ಕಾಯುತ್ತಿರುವುದಾಗಿ ಚೈತ್ರಾ ಹೇಳಿದ್ದಾರೆ.
ಮತ್ತೊಂದೆಡೆ ಪ್ರಭಾಸ್ ಅಭಿನಯದ ‘ಫೌಜಿ’ ಸಿನಿಮಾದಲ್ಲೂ ಚೈತ್ರಾ ಆಚಾರ್ ಮಹತ್ವದ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅಮೆರಿಕ ಮೂಲದ ಹೊಸ ನಟಿಯೊಬ್ಬರು ನಾಯಕಿಯಾಗಿ ಕಾಣಿಸಿಕೊಂಡಿದ್ದು, ಚೈತ್ರಾ ಅವರಿಗೂ ಪ್ರಮುಖ ಪಾತ್ರ ನೀಡಲಾಗಿದೆ ಎನ್ನಲಾಗಿದೆ. ಈಗಾಗಲೇ ಚೈತ್ರಾ ತಮ್ಮ ಭಾಗದ ಚಿತ್ರೀಕರಣ ಮುಗಿಸಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿವೆ ಎಂದು ತಿಳಿಸಿದ್ದಾರೆ.










