ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಶತಮಾನೋತ್ಸವ ಕಾರ್ಯಕ್ರಮದಲ್ಲಿ ಗಣವೇಷ ಧರಿಸಿ ಭಾಗವಹಿಸಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಪ್ರವೀಣ್ ಕುಮಾರ್ ಕೆ.ಪಿ. ಅವರನ್ನು ಅಮಾನತು ಮಾಡಲಾಗಿತ್ತು. ಇದೀಗ ಅಮಾನತು ಆದೇಶಕ್ಕೆ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಸ್ಎಟಿ) ತಡೆಯಾಜ್ಞೆ ನೀಡಿದೆ.
ರಾಜಕೀಯ ಒತ್ತಡದಿಂದಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ಅವರನ್ನು ಏಕಪಕ್ಷೀಯವಾಗಿ ಅಮಾನತು ಮಾಡಲಾಗಿದೆ ಎಂದು ಆರೋಪಿಸಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಕಚೇರಿಯ ಕಾನೂನು ತಂಡವು ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ ಈ ಕ್ರಮವನ್ನು ಪ್ರಶ್ನಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮಂಡಳಿಯು, ರಾಜ್ಯ ಸರ್ಕಾರದ ಅಮಾನತು ಆದೇಶಕ್ಕೆ ತಡೆ ನೀಡಿದೆ.
ಈ ಬಗ್ಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಪ್ರವೀಣ್ ಅವರ ಮೇಲೆ ಹೇರಲಾಗಿದ್ದ ಏಕಪಕ್ಷೀಯ ಅಮಾನತು ಆದೇಶವನ್ನು ನಾವು ಪ್ರಶ್ನಿಸಿದ್ದೆವು. ಈಗ ಅದಕ್ಕೆ ತಡೆ ಸಿಕ್ಕಿದೆ. ಯಾವುದೇ ರೀತಿಯ ಬೆದರಿಕೆ ಆರ್ಎಸ್ಎಸ್ನ ರಾಷ್ಟ್ರ ನಿರ್ಮಾಣದ ಆದರ್ಶಗಳನ್ನು ತಡೆಯಲು ಸಾಧ್ಯವಿಲ್ಲ. ಈ ಆದೇಶದಿಂದ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ ಎಂದಿದ್ದಾರೆ.



