ವಿಜಯಸಾಕ್ಷಿ ಸುದ್ದಿ, ಮುಳಗುಂದ: ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲ ಮೂಲಸೌಕರ್ಯ ಹಾಗೂ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕು ಎಂದು ಗದಗ ಜಿಲ್ಲಾ ಡಿಡಿಪಿಐ ಆರ್.ಎಸ್. ಬುರಡಿ ಹೇಳಿದರು.
ಪಟ್ಟಣದ ಸರ್ಕಾರಿ ಮಾದರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಎಲ್ಕೆಜಿ ಹಾಗೂ ಯುಕೆಜಿ ತರಗತಿಗಳ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮುಳಗುಂದದ ಸರ್ಕಾರಿ ಶಾಲೆಗಳು ದಾಖಲಾತಿ ಹೆಚ್ಚಿಸುವಲ್ಲಿ ಪರಸ್ಪರ ಪೈಪೋಟಿಯಿಂದ ಉತ್ತಮ ಸಾಧನೆ ಮಾಡುತ್ತಿವೆ. ಇಂತಹ ಶಾಲೆಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಇಲಾಖೆ ಸದಾ ಸಿದ್ಧವಿದ್ದು, ಅತಿಥಿ ಶಿಕ್ಷಕರನ್ನೂ ಶೀಘ್ರವೇ ನೇಮಕ ಮಾಡಲಾಗುವುದು ಎಂದರು.
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಪೌಷ್ಟಿಕ ಆಹಾರ, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೂ-ಸಾಕ್ಸ್ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳು ದೊರೆಯುತ್ತಿವೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕು ಎಂದು ಮನವಿ ಮಾಡಿದರು.
ಎಂ.ಎಚ್. ಕಂಬಳಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಕನ್ನಡದ ಜೊತೆಗೆ ಇಂಗ್ಲಿಷ್ ಮಾಧ್ಯಮ ಶಿಕ್ಷಣವೂ ಲಭ್ಯವಿದ್ದು, ಅನುಭವಿ ಶಿಕ್ಷಕರಿಂದ ಗುಣಮಟ್ಟದ ಬೋಧನೆ ನಡೆಯುತ್ತಿದೆ. ಪಾಲಕರು ಸರ್ಕಾರಿ ಶಾಲೆಗಳ ಬಗ್ಗೆ ವಿಶ್ವಾಸ ಹೊಂದಬೇಕು ಎಂದರು.
ಎಸ್ಡಿಎಂಸಿ ಅಧ್ಯಕ್ಷರು ಮಾತನಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಆಡಳಿತ ಮಂಡಳಿ ಶ್ರಮಿಸುತ್ತಿದ್ದು, ಶಿಕ್ಷಣ ಇಲಾಖೆ ಹಾಗೂ ಸಾರ್ವಜನಿಕರ ಸಹಕಾರದಿಂದ ಇನ್ನಷ್ಟು ಉತ್ತಮವಾಗಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿ.ಡಿ. ಕಣವಿ, ಮಹಾಂತೇಶ ಕಣವಿ, ಮುಖ್ಯ ಶಿಕ್ಷಕಿ ಗುಂಜಳ, ಶೋಭಾ ಪಾಟೀಲ, ಕಾಂತಪ್ಪ ಕಾಗಿ, ಚಂದ್ರು ಭಜಂತ್ರಿ, ಬಿ.ಎಲ್. ಜಾಧವ, ಮಹೇಶ ನೀಲಗುಂದ ಸೇರಿದಂತೆ ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



