ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೆಂಗೇರಿ ಸಮೀಪದ ಅಂಚೆಪಾಳ್ಯದಲ್ಲಿ ನಿನ್ನೆಯಷ್ಟೇ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದ ಘಟನೆ ಹಸಿಯಾಗಿರುವಾಗಲೇ, ಅದೇ ಜಾಗದ ಹತ್ತಿರದಲ್ಲೇ ಇದೀಗ ಚಿರತೆಯೊಂದು (Leopard) ಕಾಣಿಸಿಕೊಂಡು ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
ಅಂಚೆಪಾಳ್ಯದ ನಿರ್ಜನ ಪ್ರದೇಶದಲ್ಲಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಚಿರತೆ ಸಂಚರಿಸಿರುವುದು ಬೆಳಕಿಗೆ ಬಂದಿದೆ. ಚಿರತೆ ಓಡಾಟ ನಡೆಸುತ್ತಿದ್ದ ದೃಶ್ಯವನ್ನು ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್ಗಳು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ನಿನ್ನೆಯಷ್ಟೇ ಬನ್ನೇರುಘಟ್ಟ ಕಾಡಿನಿಂದ ಬಂದಿದ್ದ ಕಾಡಾನೆಯೊಂದು ಪ್ರತ್ಯಕ್ಷವಾಗಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿತ್ತು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಡ್ರೋನ್ ಬಳಸಿ, ಕಾಡಾನೆಯನ್ನು ವಾಪಸ್ ಬನ್ನೇರುಘಟ್ಟ ಕಾಡಿಗೆ ಅಟ್ಟಿದ್ದರು. ಈ ಕಾರ್ಯಾಚರಣೆ ಮುಗಿದ ಬೆನ್ನಲ್ಲೇ ಇದೀಗ ಅದೇ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ.
ನಗರದ ಪ್ರದೇಶಗಳಲ್ಲಿ ಪದೇ ಪದೇ ವನ್ಯಜೀವಿಗಳು ಕಾಣಿಸಿಕೊಳ್ಳುತ್ತಿರುವುದು ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಭಯವನ್ನುಂಟುಮಾಡಿದೆ. ಅರಣ್ಯ ಇಲಾಖೆಯು ತಕ್ಷಣವೇ ಚಿರತೆಯನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.



