ಹಾಸನ: ಹಾಸನದ ಅಧಿದೇವತೆ ಹಾಸನಾಂಬ ದೇವಿಯ ಸಾರ್ವಜನಿಕ ದರ್ಶನಕ್ಕೆ ಇಂದು 11ನೇ ದಿನ.

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕಳೆದ ದಿನಗಳಿಗೆ ಹೋಲಿಸಿದರೆ ಇಂದು ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಕೊಂಚ ಕಡಿಮೆಯಾಗಿದೆ. ಹೀಗಾಗಿ ಧರ್ಮದರ್ಶನದ ಸಾಲಿನಲ್ಲಿ ಭಕ್ತರು ಯಾವುದೇ ಹೆಚ್ಚಿನ ಕಾಯುವಿಕೆ ಇಲ್ಲದೆ ದೇವಿಯ ದರ್ಶನ ಪಡೆಯುತ್ತಿದ್ದಾರೆ.
ಸಾಮಾನ್ಯವಾಗಿ 1,000 ಮತ್ತು 300 ರೂಪಾಯಿ ವಿಶೇಷ ದರ್ಶನದ ಸಾಲುಗಳಲ್ಲಿ ಹೆಚ್ಚಿನ ಭಕ್ತರು ಕಂಡುಬರುತ್ತಿದ್ದರು. ಆದರೆ ಇಂದು ವಿಶೇಷ ದರ್ಶನದ ಸಾಲುಗಳಿಗಿಂತ ಧರ್ಮದರ್ಶನದ ಸಾಲಿನಲ್ಲಿ ಕಡಿಮೆ ಜನಸಂದಣಿ ಕಂಡುಬಂದಿದೆ. ಇದರಿಂದ ಭಕ್ತರು ಶೀಘ್ರವಾಗಿ ಹಾಸನಾಂಬೆಯ ದರ್ಶನ ಪಡೆಯುತ್ತಿದ್ದಾರೆ.
ಇಂದು ಮಧ್ಯಾಹ್ನ 2 ಗಂಟೆಯವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಮಧ್ಯಾಹ್ನ 3.30ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ನಿರಂತರವಾಗಿ ದರ್ಶನ ಪಡೆಯಲು ಅವಕಾಶ ಇರಲಿದೆ.
ಇಂದೂ ವಿವಿಧ ಕ್ಷೇತ್ರಗಳ ಗಣ್ಯರು ಹಾಸನಕ್ಕೆ ಆಗಮಿಸಿ ಹಾಸನಾಂಬ ದೇವಿಯ ದರ್ಶನ ಪಡೆಯಲಿದ್ದಾರೆ. ಈ ಬಾರಿ ನವೆಂಬರ್ 10ರವರೆಗೆ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿದ್ದು, ನವೆಂಬರ್ 11ರಂದು ದೇವಾಲಯದ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ.










