ಬೆಂಗಳೂರು: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಭಾರಿ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಹೆಚ್ಚಳಗೊಂಡಿದೆ.
ಮಧ್ಯಪ್ರಾಚ್ಯ ಯುದ್ಧದ ಭೀತಿ ಹಾಗೂ ಜಾಗತಿಕ ತೈಲ ಮಾರುಕಟ್ಟೆಯ ಏರಿಳಿತ ಇದರ ಪ್ರಮುಖ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಬರೋಬ್ಬರಿ 993 ರೂ. ಏರಿಕೆ ಕಂಡು 3,154 ರೂ.ಗೆ ತಲುಪಿದೆ. ಇದರ ನೇರ ಪರಿಣಾಮವಾಗಿ ಹೋಟೆಲ್ ಮಾಲೀಕರು ತಿಂಡಿ, ಊಟ ಹಾಗೂ ಪಾನೀಯಗಳ ದರವನ್ನು ಶೇ.20ರಷ್ಟು ಹೆಚ್ಚಿಸಲು ಮುಂದಾಗಿದ್ದಾರೆ.
ಗಾಂಧಿನಗರದ ‘ರಸಪಾಕ’ ಹೋಟೆಲ್ ಸೇರಿದಂತೆ ಹಲವೆಡೆ ಈಗಾಗಲೇ ಹೊಸ ದರ ಜಾರಿಗೆ ಬಂದಿದ್ದು,
- ಊಟ: 100 ರೂ. ನಿಂದ 120 ರೂ.
- ದೋಸೆ: 75 ರೂ. ನಿಂದ 85 ರೂ.
- ಪೂರಿ: 60 ರೂ. ನಿಂದ 75 ರೂ.
- ಟೀ: 20 ರೂ. ನಿಂದ 25 ರೂ.ಗೆ ಏರಿಕೆ ಮಾಡಲಾಗಿದೆ.
ಈ ಬಗ್ಗೆ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದು, ನಿರಂತರ ಬೆಲೆ ಏರಿಕೆ ಸಾಮಾನ್ಯ ಜನರ ಜೇಬಿಗೆ ಹೊರೆ ಆಗುತ್ತಿದೆ ಎಂದು ಹೇಳಿದ್ದಾರೆ. ಇತ್ತ ಬೆಂಗಳೂರು ನಗರ ಹೋಟೆಲ್ ಮಾಲೀಕರ ಸಂಘವು, ಬೆಲೆ ಏರಿಕೆ ನಿರ್ಧಾರವು ಹೋಟೆಲ್ ಮಾಲೀಕರ ವಿವೇಚನೆಗೆ ಬಿಟ್ಟ ವಿಚಾರ ಎಂದು ಪ್ರತಿಕ್ರಿಯಿಸಿದೆ.



