ಬೆಳಗಾವಿ: ಹೆಚ್ಚಿನ ಬಡ್ಡಿ ನೀಡುವ ಭರವಸೆ ನೀಡಿ ಸಾವಿರಾರು ಜನರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿದ್ದ ಖಾಸಗಿ ಫೈನಾನ್ಸ್ ಸಂಸ್ಥೆಯ ವಿರುದ್ಧ ಭಾರೀ ವಂಚನೆ ಆರೋಪ ಕೇಳಿಬಂದಿದೆ. ಟಿಳಕವಾಡಿಯ ‘ಅಪೇಕ್ಸ್ ಬಿಜ್ ಕಾರ್ಫ್ ಎಲ್ಎಲ್ಪಿ’ ಸಂಸ್ಥೆ ಸುಮಾರು ₹165 ಕೋಟಿ ವಂಚನೆ ನಡೆಸಿದೆ ಎಂದು ಆರೋಪಿಸಿ ಹೂಡಿಕೆದಾರರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರ ಆರೋಪದಂತೆ, ಸುಮಾರು 3,500ಕ್ಕೂ ಹೆಚ್ಚು ಜನರಿಂದ ತಿಂಗಳಿಗೆ 4 ಶೇಕಡಾ ಬಡ್ಡಿ ನೀಡುವುದಾಗಿ ಹೇಳಿ ಹಣ ಹೂಡಿಕೆ ಮಾಡಿಸಿಕೊಂಡ ಕಂಪನಿ, ಬಳಿಕ ಹಣ ಮರುಪಾವತಿಸದೇ ವಂಚಿಸಿದೆ.
ಕಂಪನಿಯ ಮಾಲೀಕರಾದ ಕಾಶೀನಾಥ ವಾಗ್ಮೂರೆ ಮತ್ತು ಗಣೇಶ್ ಭಂಡಾರಿ ದುಬೈಗೆ ತೆರಳಿದ್ದು, ಹೂಡಿಕೆದಾರರ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ದೂರಲಾಗಿದೆ. ವಿಡಿಯೋ ಸಂದೇಶಗಳ ಮೂಲಕ ಮಾತ್ರ ಪ್ರತಿಕ್ರಿಯಿಸುತ್ತಿರುವ ಅವರು ಹೂಡಿಕೆದಾರರ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಹೂಡಿಕೆದಾರರು, ಆರೋಪಿಗಳನ್ನು ಬಂಧಿಸಿ ತಮ್ಮ ಹಣ ವಾಪಸ್ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಈ ಪ್ರಕರಣವು ಬೆಳಗಾವಿಯಲ್ಲಿ ಖಾಸಗಿ ಹಣಕಾಸು ಸಂಸ್ಥೆಗಳ ಕಾರ್ಯವೈಖರಿಯ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಎಬ್ಬಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳ ತನಿಖೆ ನಿರೀಕ್ಷೆಯಲ್ಲಿದೆ.



