ವಿಜಯಸಾಕ್ಷಿ ಸುದ್ದಿ, ಗದಗ: ರಾಣಿ ಚೆನ್ನಮ್ಮ ಪಾರ್ಟಿಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಗದುಗಿನ ಹಿರಿಯ ಸಾಮಾಜಿಕ ಧುರೀಣ, ವೀರಶೈವ ಲಿಂಗಾಯತ ಸಮಾಜದ ಮುಖಂಡ ಮಲ್ಲಿಕಾರ್ಜುನ ಬಸಪ್ಪ ದೇಸಾಯಿ (80) ಅವರು ಶನಿವಾರ ಸಂಜೆ 4.30ಕ್ಕೆ ನಿಧನರಾದರು.
ಅಖಿಲ ಕರ್ನಾಟಕ ವೀರರಾಣಿ ಕಿತ್ತೂರು ಚೆನ್ನಮ್ಮ ಸರ್ವಧರ್ಮ ಸಮಾಜ ಸೇವಾ ಸಂಸ್ಥೆ (ರಿ.)ಯ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಎಂ.ಬಿ. ದೇಸಾಯಿ ಅವರು, ಗದಗ ಜಿಲ್ಲೆಯಾದ್ಯಂತ ಸಮಾಜ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದರು. ಗದುಗಿನಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ವಿಜಯೋತ್ಸವ ಆಚರಣೆ ಹಾಗೂ ವೀರರಾಣಿ ಕಿತ್ತೂರು ಚೆನ್ನಮ್ಮಳ ಕಂಚಿನ ಪುತ್ಥಳಿ ಸ್ಥಾಪನೆಗೆ ಮುಂದಾಳತ್ವ ವಹಿಸಿ ಹೋರಾಟ ನಡೆಸಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಆ.16ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.



