ಜೈಪುರ: ಭಾರತ ಮತ್ತು ಪಾಕಿಸ್ತಾನದ ಅಂತಾರಾಷ್ಟ್ರೀಯ ಗಡಿಯ ಸಮೀಪವಿರುವ ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ರೈಲ್ವೆ ಹಳಿಯ ಮೇಲೆ ಭಾರೀ ಸ್ಫೋಟ ಸಂಭವಿಸಿದೆ.
ಘಟನೆಯಿಂದ ರೈಲ್ವೆ ಹಳಿಯ ಕಾಂಕ್ರೀಟ್ ಪಿಲ್ಲರ್ಗಳು ಹಾಗೂ ಸ್ಲೀಪರ್ಗಳು ಹಾನಿಗೀಡಾಗಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಅನೂಪ್ಗಢ್ ಮತ್ತು ಸೂರತ್ಗಢ್ ನಡುವಿನ ರೈಲು ಸಂಚಾರವನ್ನು ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ.
ಅನೂಪ್ಗಢ್-ಸೂರತ್ಗಢ್ ರೈಲು ಮಾರ್ಗದ 50 ಜಿಬಿ ಪಾಯಿಂಟ್ ಬಳಿ ಈ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಹಳಿಗೆ ಆಧಾರವಾಗಿದ್ದ ಎರಡು ಕಾಂಕ್ರೀಟ್ ಪಿಲ್ಲರ್ಗಳು ಮತ್ತು ಹಲವು ರೈಲ್ವೆ ಸ್ಲೀಪರ್ಗಳು ಜಖಂಗೊಂಡಿವೆ. ಅಲ್ಲದೆ, ರೈಲ್ವೆ ಹಳಿಯ ಕೆಳಭಾಗದಲ್ಲಿ ಬೃಹತ್ ಗುಂಡಿಯೂ ನಿರ್ಮಾಣವಾಗಿದೆ. ಸ್ಫೋಟದ ಸದ್ದು ಸುಮಾರು 200 ಮೀಟರ್ ದೂರದವರೆಗೂ ಕೇಳಿಬಂದಿದೆ ಎಂದು ವರದಿಯಾಗಿದೆ.
45 ನಿಮಿಷದ ಅಂತರದಲ್ಲಿ ತಪ್ಪಿದ ಭಾರಿ ದುರಂತ!
ಘಟನೆಗೂ ಮುನ್ನ ರಾತ್ರಿ ಸುಮಾರು 9 ಗಂಟೆಗೆ ಅನೂಪ್ಗಢ್ನಿಂದ ಸೂರತ್ಗಢ್ಗೆ ತೆರಳುತ್ತಿದ್ದ ರೈಲೊಂದು ಇದೇ ಮಾರ್ಗದಲ್ಲಿ ಸಂಚರಿಸಿತ್ತು. ರೈಲು ಹಾದುಹೋದ ಕೇವಲ 45 ನಿಮಿಷಗಳ ಬಳಿಕ ಸ್ಫೋಟ ಸಂಭವಿಸಿದೆ. ಹೀಗಾಗಿ ಸಂಭವಿಸಬಹುದಾಗಿದ್ದ ಭಾರಿ ರೈಲು ದುರಂತವೊಂದು ಅದೃಷ್ಟವಶಾತ್ ತಪ್ಪಿದಂತಾಗಿದೆ.
ಸ್ಥಳಕ್ಕೆ ATS, CID ತಂಡಗಳ ಭೇಟಿ:
ಸ್ಫೋಟದ ಮಾಹಿತಿ ತಿಳಿಯುತ್ತಿದ್ದಂತೆ ಭಯೋತ್ಪಾದನಾ ನಿಗ್ರಹ ದಳ (ATS), ಅಪರಾಧ ತನಿಖಾ ಇಲಾಖೆ (CID), ಶ್ವಾನದಳ, ರೈಲ್ವೆ ಅಧಿಕಾರಿಗಳು ಹಾಗೂ ವಿವಿಧ ಭದ್ರತಾ ಸಂಸ್ಥೆಗಳ ತಂಡಗಳು ಸ್ಥಳಕ್ಕೆ ಧಾವಿಸಿವೆ. ರಾತ್ರಿ ಸುಮಾರು 2 ಗಂಟೆಗೆ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ತಲುಪಿ ಸುತ್ತಮುತ್ತಲ ಪ್ರದೇಶವನ್ನು ಸುತ್ತುವರಿದು ಪರಿಶೀಲನೆ ಆರಂಭಿಸಿದ್ದಾರೆ.
ಬೆಳಿಗ್ಗೆ 9 ಗಂಟೆಯವರೆಗೆ ರೈಲು ಸಂಚಾರ ಸ್ಥಗಿತ:
ಸ್ಫೋಟದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಅನೂಪ್ಗಢ್ ಮತ್ತು ಸೂರತ್ಗಢ್ ನಡುವಿನ ರೈಲು ಸಂಚಾರವನ್ನು ಬೆಳಿಗ್ಗೆ 9 ಗಂಟೆಯವರೆಗೆ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಸ್ಫೋಟಕ್ಕೆ ನಿಖರ ಕಾರಣವೇನು? ಇದರ ಹಿಂದೆ ಯಾರ ಕೈವಾಡವಿದೆ ಎಂಬ ಬಗ್ಗೆ ಭದ್ರತಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಘಟನೆಯಿಂದ ಭಾರತ-ಪಾಕ್ ಗಡಿ ಪ್ರದೇಶದಲ್ಲಿ ಭದ್ರತಾ ಎಚ್ಚರಿಕೆ ಹೆಚ್ಚಿಸಲಾಗಿದೆ.









