ವಿಜಯಸಾಕ್ಷಿ ಸುದ್ದಿ, ಗದಗ : ತಾಲೂಕಿನ ಸುಕ್ಷೇತ್ರ ಬಳಗಾನೂರಿನ ಚಿಕೇನಕೊಪ್ಪದ ಚನ್ನವೀರ ಶರಣರ ಮಠದಲ್ಲಿ ಚನ್ನವೀರ ಶರಣರ ೨೯ನೇ ಪುಣ್ಯಸ್ಮರಣೋತ್ಸವ, ಜಾತ್ರಾ ಮಹೋತ್ಸವದ ಅಂಗವಾಗಿ ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿಯ ಸ್ವಾಮಿ ವಿವೇಕಾನಂದ ಯೋಗ ಮತ್ತು ಮಲ್ಲಕಂಬ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ಮಲ್ಲಕಂಬ ಪ್ರದರ್ಶನ ಜರುಗಿತು.
ವಿದ್ಯಾರ್ಥಿಗಳು ವಿವಿಧ ಕೌಶಲ, ಸಾಹಸಗಳನ್ನು ಪ್ರದರ್ಶಿಸಿ ರೋಮಾಂಚನವನ್ನುಂಟು ಮಾಡಿದರು. ಇದೇ ಸಂದರ್ಭದಲ್ಲಿ ಬಳಗಾನೂರ ಶರಣರ ಮಠ ಹಾಗೂ ನವಲಗುಂದದ ಉಮಾ ವಿದ್ಯಾಶ್ರೀ ಟ್ರಸ್ಟ್ ಸಿದ್ದಲಿಂಗನಗೌಡ ಎಸ್.ಜಂಗ್ಲೆಪ್ಪಗೌಡ್ರ ಮೆಮೋರಿಯಲ್ ಅವರ ಸಹಯೋಗದಲ್ಲಿ ಮಲ್ಲಕಂಬ ತರಬೇತಿ ಸಂಸ್ಥೆಗೆ `ಶರಣಶ್ರೀ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಶ್ರೀ ಶಿವಶಾಂತವೀರ ಶರಣರು ಪ್ರಶಸ್ತಿ ಪ್ರದಾನ ಮಾಡಿ ನಮ್ಮ ದೇಶಿ ಸಂಸ್ಕೃತಿ ಉಳಿಸಿ, ಬೆಳೆಸುವಲ್ಲಿ ಮಲ್ಲಕಂಬದಂತಹ ಕ್ರೀಡೆ ಅವಶ್ಯವಿದೆ. ವಿದ್ಯಾರ್ಥಿಗಳಲ್ಲಿ ಮಾನಸಿಕ ಹಾಗೂ ದೈಹಿಕ ಸ್ಥೈರ್ಯವನ್ನು ತುಂಬಿ ಆತ್ಮಸ್ಥೈರ್ಯ, ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ದೇಶಿ ಕ್ರೀಡೆಗಳು ಹೆಚ್ಚು ಪರಿಣಾಮಕಾರಿಯಾಗಿವೆ. ಯುವ ಜನತೆ ಯೋಗ, ಧ್ಯಾನ, ಕ್ರೀಡೆ, ಆಟೋಟಗಳನ್ನು ರೂಢಿಸಿಕೊಂಡು ಸದೃಢ ಆರೋಗ್ಯ ಹೊಂದುವುದು ಅವಶ್ಯವೆಂದರು. ಶಿವಲಿಂಗಶಾಸ್ತ್ರಿಗಳು ಸಿದ್ದಾಪೂರ ನಿರೂಪಿಸಿದರು. ಶಿವು ಗಣಾಚಾರಿ ವಂದಿಸಿದರು.