ಮೈಸೂರು:- ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಆಗಲು ಸಮರ್ಥರು ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಹೇಳಿದ್ದಾರೆ. ಸಂಸತ್ತಿನ ವ್ಯವಹಾರ ಮಂತ್ರಿಗಳಿಗೆ ವಿಪಕ್ಷಗಳ ಕೆಲಸವೇ ಅರ್ಥವಾಗುತ್ತಿಲ್ಲ. ಪ್ರಶ್ನಿಸಿದವರನ್ನೇ ಅಮಾನತ್ತುಗೊಳಿಸುತ್ತಿದ್ದಾರೆ. ಮೂರು ಸುತ್ತಿನ ಬೇಹುಗಾರಿಕೆ ಭೇದಿಸಿ ಒಳ ಬಂದಿದ್ದಾರೆ ಅಂದರೆ ಅದರ ಹಿಂದೆ ಯಾರಿದ್ದಾರೆ? ಅದನ್ನ ಕೇಳಲು ಹೋದರೆ ಅಮಾನತು ಮಾಡಿದ್ದಾರೆ. ಹಾಗಾದರೇ ಸಂಸತ್ ಇರೋದು ಯಾಕೇ? ಸಂಸತ್ ಚರ್ಚೆ ಮಾಡಲಿಕ್ಕೆ ಇರುವ ಒಂದು ವೇದಿಕೆ ಅಲ್ಲವೇ ಎಂದರು.
ಪ್ರಧಾನಿಗೆ ಮಾಧ್ಯಮ ಎದುರು ಬಂದು ನಿಲ್ಲುವ ತಾಕತ್ತು ಇಲ್ಲ. ಇಡೀ ಜಗತ್ತಿನ ಮುಂದೆ ಭಾರತದ ಮಾನ ಬೆತ್ತಲಾಗಿದೆ. ಸಂಸತ್ತನ್ನು ಸಂಸತ್ತಿನ ಪ್ರಶ್ನೋತ್ತರಗಳನ್ನು ದುರ್ಬಲಗೊಳಿಸುವುದು ಪ್ರಜಾಪ್ರಭುತ್ವಕ್ಕೆ ದೊಡ್ಡ ದ್ರೋಹ ಮಾಡಿದಂತೆ. ಇಂಥಾ ವ್ಯವಸ್ಥೆಯಲ್ಲಿ ಪ್ರಶ್ನೆ ಮಾಡೋದೆ ಬೇಡ ಅಂದರೆ ಹೇಗೆ? ಇದು ನಮ್ಮ ದೇಶದ ಸಂವಿಧಾನ ವ್ಯವಸ್ಥೆಗೆ ಮಾರಕ. 141 ಜನರ ಅಮಾನತನ್ನು ಹಿಂದಕ್ಕೆ ಪಡೆಯಬೇಕು. ಆರೋಗ್ಯಕರ ವಾತಾವರಣದಲ್ಲಿ ಚರ್ಚೆಗಳ ನಡೆಯಬೇಕು ಎಂದು ಭಾರತ ಸರ್ಕಾರವನ್ನು ನಾನು ಒತ್ತಾಯ ಮಾಡುತ್ತಿದ್ದೇನೆ. ಈ ಕೂಡಲೇ ಅಮಾನತು ಆದೇಶ ಹಿಂದಕ್ಕೆ ಪಡೆಯಬೇಕು ಎಂದು ಅವರು ಆಗ್ರಹಿಸಿದರು.