ಬೆಂಗಳೂರು: ಪಬ್ನಲ್ಲಿ ಗಲಾಟೆ ಮಾಡಿಕೊಂಡಿದ್ದ ಯುಟ್ಯೂಬರ್ ಅಮುಕು ಡುಮುಕು ಮಂಜು (ಮಂಜುನಾಥ್) ವಿರುದ್ಧ ಇದೀಗ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಈ ಬಾರಿ ಪಕ್ಕದ ಮನೆಯವರ ಜೊತೆ ಗಲಾಟೆ ಮಾಡಿಕೊಂಡ ಆರೋಪ ಕೇಳಿಬಂದಿದ್ದು, ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು–ಪ್ರತಿದೂರು ದಾಖಲಾಗಿದೆ.
ಯಶವಂತಪುರ ಪೊಲೀಸ್ ಠಾಣೆಯಲ್ಲಿ ಅಮುಕು ಡುಮುಕು ಮಂಜು ವಿರುದ್ಧ ನೆರೆಮನೆಯ ವಿಕ್ರಂ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ವಿಕ್ರಂ ಹಾಗೂ ಮಂಜುನಾಥ್ ಅಕ್ಕಪಕ್ಕದ ಮನೆಯವರಾಗಿದ್ದು, ಸಿದ್ದ ಎಂಬ ವ್ಯಕ್ತಿಯ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ.
ಎರಡು ಕುಟುಂಬಗಳ ನಡುವೆ ಗಲಾಟೆ
ಸಿದ್ದನ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ಬಳಿಕ ಎರಡು ಮನೆಯವರ ನಡುವೆ ವಾಗ್ವಾದಕ್ಕೆ ತಿರುಗಿದೆ. ಮಾತಿಗೆ ಮಾತು ಬೆಳೆದು ಎರಡೂ ಕಡೆಯವರು ಕೈ ಕೈ ಮಿಲಾಯಿಸಿದ್ದಾರೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ವಿಕ್ರಂ ಅವರು ಮಂಜುನಾಥ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಮತ್ತೊಂದೆಡೆ, ಮಂಜುನಾಥ್ ಕೂಡ ವಿಕ್ರಂ ವಿರುದ್ಧ ದೂರು ಸಲ್ಲಿಸಿದ್ದಾರೆ. ಹೀಗಾಗಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು–ಪ್ರತಿದೂರು ದಾಖಲಾಗಿದೆ.
ಪೊಲೀಸರಿಂದ ತನಿಖೆ ಆರಂಭ
ಎರಡೂ ಕಡೆಯವರ ದೂರುಗಳನ್ನು ಸ್ವೀಕರಿಸಿರುವ ಯಶವಂತಪುರ ಪೊಲೀಸರು ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದಾರೆ. ಗಲಾಟೆಗೆ ಕಾರಣವೇನು ಹಾಗೂ ಘಟನೆಯ ವೇಳೆ ಏನು ನಡೆದಿದೆ ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.









