HomeGadag Newsಪಕ್ಷಿ ಪ್ರೇಮ ಸದಾ ಇರಲಿ : ಸುರೇಶ ಕುಂಬಾರ

ಪಕ್ಷಿ ಪ್ರೇಮ ಸದಾ ಇರಲಿ : ಸುರೇಶ ಕುಂಬಾರ

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಪಕ್ಷಿಗಳು ನಮ್ಮ ಚೈತನ್ಯಕ್ಕೆ ಹಾಗೂ ಕ್ರಿಯಾಶೀಲತೆಗೆ ಆದರ್ಶವಾಗಿವೆ. ಪಕೃತಿಯಲ್ಲಿ ಹಾರಾಡುವ ಹಕ್ಕಿಗಳಿಗೆ ನೀರು, ಕಾಳು ನೀಡಿ ಅವುಗಳ ಜೀವ ಮತ್ತು ಜೀವನಕ್ಕೆ ಸಹಕಾರ ನೀಡಬೇಕು. ಮಾನವರಾದ ನಾವು ಎಲ್ಲ ಜೀವಿಗಳ ಮೇಲೆ ದಯೆ ಹೊಂದಿರಬೇಕು ಎಂದು ಶರಣರು ಹೇಳಿದ್ದಾರೆ. ಅದರಂತೆ ಪಕ್ಷಿ ಪ್ರೇಮ ಎಂಬ ಪರಿಕಲ್ಪನೆ ವಿಭಿನ್ನವಾಗಿರುವ ಕಾರ್ಯಕ್ರಮವಾಗಿರುವದರಿಂದ ಇಂತಹ ಬಿರು ಬಿಸಿಲಿನ ತಾಪಕ್ಕೆ ಬಳಲುವ ಹಕ್ಕಿಗಳಿಗೆ ಸಹಕಾರ ನೀಡಿದರೆ ಪುಣ್ಯ ಗಳಿಸಿದಂತೆ. ಪಕ್ಷಿಗಳು ರೈತನ ಮಿತ್ರನಾಗಿದ್ದು, ಪಕ್ಷಿ ಪ್ರೇಮ ಸದಾ ಇರಲಿ ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಸುರೇಶ ಕುಂಬಾರ ಕರೆ ನೀಡಿದರು.

ನವರಸ ಕಲಾ ಸಂಘ ಬೆಟಗೇರಿ, ನಿರ್ಮಲ ವಿವಿಧೋದ್ದೇಶಗಳ ಸೇವಾ ಸಂಸ್ಥೆ ಮುಂಡರಗಿ, ನಯನತಾರಾ ಕಲಾ ಸಂಘ, ಶ್ರೀ ಗಣೇಶ ವಿವಿಧೋದ್ದೇಶಗಳ ಸೇವಾ ಸಂಸ್ಥೆ, ಬೆಟಗೇರಿ, ಭಾಗ್ಯಶ್ರೀ ವಿವಿಧೋದ್ದೇಶಗಳ ಸೇವಾ ಸಂಸ್ಥೆ ಅಂತೂರ-ಬೆಂತೂರ ಇವುಗಳ ಸಹಯೋಗದಲ್ಲಿ ವಿಶ್ವ ಕಲಾ ದಿನಾಚರಣೆ ನಿಮಿತ್ತ ಆಯೋಜಿಸಿದ್ದ `ಪಕ್ಷಿ ಪ್ರೇಮ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಂಜುನಾಥ ಹುಯಿಲಗೋಳ ಮಾತನಾಡಿ, ವಿಶ್ವಕಲಾ ದಿನಾಚರಣೆಯ ರೂವಾರಿ ಲಿಯೊನಾರ್ಡ ಡ ವಿಂಚಿ ಈ ಜಗತ್ತು ಕಂಡ ಮಹಾನ್ ಕಲಾವಿದ. ಅಂತಹ ಕಲಾವಿದನ ಜನ್ಮ ದಿನವನ್ನು ವಿಶ್ವ ಕಲಾ ದಿನಚರಣೆಯನ್ನಾಗಿ ಆಚರಿಸಲಾಗುತ್ತದೆ. ಮೊನಾಲಿಸಾ ಕಲಾಕೃತಿ ರಚಿಸಿದ ಕಲಾವಿದರ ಸ್ಮರಣೆಯಲ್ಲಿ ಪಕ್ಷಿ, ನಿಸರ್ಗವನ್ನು ಸ್ಮರಿಸಲು ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸುವದು ಮತ್ತು ಪಕೃತಿಯ ಕುರಿತು ಕಾವ್ಯ ವಾಚನ, ಪಕ್ಷಿಗಳಿಗೆ ಕಾಳು ನೀರು ನೀಡುವ ಪರಿಕಲ್ಪನೆಯ ಕಾರ್ಯಕ್ರಮ ವಿಶೇಷವಾಗಿದೆ. ಮನುಜ ತನ್ನ ಸ್ಥಳದಲ್ಲಿ ಗಿಡ ಮರ ಬೆಳಸಿದರೆ ಪಕ್ಷಿಗಳು ಗುಡ್ಡ ಬೆಟ್ಟಗಳಲ್ಲಿ ಬೀಜ ತೆಗೆದುಕೊಂಡು ಹೋಗಿ ಬಿಡುತ್ತವೆ.

ಆದರೆ ಬೆಟ್ಟದ ಮೇಲೆ ಗಿಡ ಮರ ನೆಟ್ಟವರು ಪಕ್ಷಿಗಳೇ. ಹೀಗಾಗಿ ಬೀಜ ಪ್ರಸರಣಕ್ಕೆ ಪಕ್ಷಿಗಳು ಸಾಕ್ಷಿಯಾಗಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿರ್ಮಲ ಸೇವಾ ಸಂಸ್ಥೆಯ ಅಧ್ಯಕ್ಷೆ ನಿರ್ಮಲಾ ತರವಾಡೆ, ಮನುಷ್ಯ ಸದಾ ಸತ್ಕಾರ್ಯದಲ್ಲಿ ತೊಡಗಬೇಕು. ಇಂತಹ ವಾತಾವರಣದಲ್ಲಿ ನಮಗೆ ಸಾಧ್ಯವಾದಷ್ಟು ಪ್ರಾಣಿ-ಪಕ್ಷಿಗಳಿಗೆ ಕಾಳು, ನೀರು ನೀಡುವದರಿಂದ ನಮಗೆ ಪುಣ್ಯ ಬರುತ್ತದೆ. ಈ ಬಗ್ಗೆ ಎಲ್ಲರಲ್ಲಿ ಜಾಗೃತಿ ಮೂಡಲಿ ಎಂದರು.

ವೇದಿಕೆಯ ಮೇಲೆ ಹಿರಿಯ ಸಾಹಿತಿ ಅಂದಾನೆಪ್ಪ ವಿಭೂತಿ, ಪರಿಸರ ಪ್ರೇಮಿಗಳಾದ ಪ್ರಕಾಶ ಅಕ್ಕಿ, ಜನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ, ಕವಿಯಿತ್ರಿ ಮಂಜುಳಾ ವೆಂಕಟೇಶಯ್ಯ, ರಮೇಶ ಹಾದಿಮನಿ, ಸಂಸ್ಕೃತಿ, ಶಾರದಾ ಟಿ., ವಿಶ್ವನಾಥ ಬೇಂದ್ರೆ, ಕಲಾವಿದರಾದ ಎಸ್.ಎಫ್ ಬೆನಕಣ್ಣವರ, ಜಗದೀಶ ಶೀಲವಂತ, ನಿರಂಜನ ಬಗಲಿ ಉಪಸ್ಥಿತರಿದ್ದರು.

ಕವಿಗಳಾದ ನಾಜಿಯಾ ನೂರಭಾಷಾ, ರಮಾಚಿಗಟೇರಿ, ಶಿವಲೀಲಾ ಧನ್ನಾ, ಸಂಗೀತ ಅರಳಿಕಟ್ಟಿ, ನಾಗರತ್ನಾ ಹೊಸಮನಿ, ಕೊಟ್ರೇಶ ಜವಳಿ, ಕಸ್ತೂರಿ ಕಡಗದ, ಭಾಗ್ಯಶ್ರೀ ಹುರಕಡ್ಲಿ ಪರಿಸರದ ಕುರಿತು ಕವಿತೆ ವಾಚಿಸಿದರು. ಶಿಕ್ಷಕ ಕಳಕೇಶ ಅರಕೇರಿ ಪ್ರಾರ್ಥಿಸಿದರು. ಪ್ರೊ. ಬಸವರಾಜ ನೆಲಜೇರಿ ನಿರೂಪಿಸಿ ವಂದಿಸಿದರು. ಜಿ.ಬಿ. ಕಲ್ಯಾಣಶಟ್ಟಿ, ದ್ಯಾಮಣ್ಣ ಉಗಲಾಟ, ಗಣೇಶ ಕಬಾಡಿ, ಧಮೇಂದ್ರ ಇಟಗಿ, ಬಸಮ್ಮ ಹಳ್ಳಿ ಕಾರ್ಯಕ್ರಮದ ಯಶಸಿಗೆ ಶ್ರಮಿಸಿದರು.

ಇಂತಹ ಬಿರು ಬಿಸಿಲಿಗೆ ಪಕ್ಷಿಗಳು ಕಾಳು ನೀರಿನ ಕೊರತೆಯಿಂದ ಬಳಲುತ್ತವೆ, ತಾಪಮಾನಕ್ಕೆ ನಲುಗುತ್ತವೆ. ಪಕ್ಷಿಗಳ ಪ್ರೇಮ ಆಮೂಲ್ಯವಾಗಿದ್ದು, ಅವುಗಳಿಗೆ ಕಾಳು, ನೀರು ಕೊಡುವ ಕಾರ್ಯ ಶ್ಲಾಘನೀಯ. ಪಕ್ಷಿಗಳ ಮೇಲಿನ ಅಕ್ಕರೆ, ಅವುಗಳ ಒಡನಾಟ ನಿಮ್ಮ ಮನಸ್ಸನ್ನು ಶಕ್ತಿಯುತವಾಗಿ ಮಾಡುತ್ತವೆ ಎಂದು ಸುರೇಶ ಕುಂಬಾರ ಅಭಿಪ್ರಾಯಪಟ್ಟರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!