ವಿಜಯಸಾಕ್ಷಿ ಸುದ್ದಿ, ಗದಗ : 2024-25ನೇ ಶೈಕ್ಷಣಿಕ ವರ್ಷದ ಫಲಿತಾಂಶ ಸುಧಾರಣೆಗೆ ಈಗಿನಿಂದಲೇ ಶ್ರಮವಹಿಸಿ, ಕಾರ್ಯೋನ್ಮುಖರಾಗಿ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಸೂಚಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿರು.

ಕಾಲೇಜುಗಳಲ್ಲಿ ಬಯೋಮೆಟ್ರಿಕ್ ಅಳವಡಿಸಲಾಗಿದ್ದು, ದಿನವಹಿ ಎರಡು ಬಾರಿ ಹಾಜರಾತಿ, ಬೆಳಗ್ಗೆ 10.30ರಿಂದ ಮಧ್ಯಾಹ್ನ 4.30ವರೆಗೆ ಕಾಲೇಜಿನಲ್ಲಿ ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಿರಬೇಕು ಎಂದರು.
ಶೈಕ್ಷಣಿಕ ಸಾಲಿನ ಫಲಿತಾಂಶ ಸುಧಾರಣಾ ಕ್ರಮಗಳಾದ ರೆಮಿಡಿಯಲ್ ಟೀಚಿಂಗ್ ಅಳವಡಿಕೆ, ನಿರಂತರ ಬೋಧನಾ ಕಾರ್ಯ, ವರ್ಗ ಶಿಕ್ಷಕರ ನೇಮಕ, ವಾರಕೊಮ್ಮೆ ವಿದ್ಯಾರ್ಥಿಗಳ ಹಾಜರಾತಿ ವಿಶ್ಲೇಷಣೆಯನ್ನು ಪಾಲಕರ ಗಮನಕ್ಕೆ ತರುಲು ತಿಳಿಸಿದರಲ್ಲದೆ, ತಾಲೂಕಾ ಮಟ್ಟದ ತಪಾಸಣೆಯ ಕಮಿಟಿ ರಚಿಸಿ, ತಾಲೂಕಾ ಕಮಿಟಿಯವರು ಪ್ರತಿ ವಾರ ಕಾಲೇಜಿಗೆ ಭೇಟಿ ನೀಡಿ ಪರಿಶೀಲನಾ ವರದಿ ನೀಡಬೇಕು ಎಂದು ಸೂಚಿಸಿದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಂಗಪ್ಪ ಕುರ್ತಕೋಟಿ ಮಾತನಾಡಿ, ವಿಷಯ ಉಪನ್ಯಾಸಕರು ಕ್ರಿಯಾಯೋಜನೆ ತಯಾರಿ, ಪಾಠ ಟಿಪ್ಪಣಿ, ಡೈರಿ ಬರವಣಿಗೆ ಸೇರಿದಂತೆ ಎಲ್ಲಾ ಹಂತದ ಪರೀಕ್ಷೆಗಳು, ಮೌಲ್ಯಮಾಪನ ಕಾರ್ಯ ನಿರ್ದಿಷ್ಟ ಅವಧಿಯಲ್ಲಿ ಮುಗಿಸಿ ಅಂಕಗಳ ದಾಖಲಿಸಿ, ಸದರಿ ಮಾಹಿತಿಗಳನ್ನು ಪಾಲಕರ ಗಮನಕ್ಕೆ ತರಬೇಕು ಮತ್ತು ಕಾಲೇಜಿನ ಚಲನವಲನ ರಜಿಸ್ಟರ್‌ನಲ್ಲಿ ಕಡ್ಡಾಯ ಸಹಿ ಹಾಕುವುದು, ಜೊತೆಗೆ ಕಡ್ಡಾಯವಾಗಿ ಸಮಯಪಾಲನೆಯೊಂದಿಗೆ ಕಾರ್ಯ ನಿರ್ವಹಿಸಲು ಸೂಚಿಸಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಖಾ ಸೇರಿದಂತೆ ವಿವಿಧ ಕಾಲೇಜಿನ ಪ್ರಾಚಾರ್ಯರು ಹಾಜರಿದ್ದರು.



