ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತೊಂದು ದೊಡ್ಡ ಹೆಜ್ಜೆಯಾಗಿ ಕಳಸಾಪುರ ರಸ್ತೆ, ಬೆಟಗೇರಿ ಹಾಗೂ ಕುರಹಟ್ಟಿ ಪೇಟೆ ಭಾಗಗಳಲ್ಲಿ ಒಟ್ಟು ₹3 ಕೋಟಿ ವೆಚ್ಚದ ಸಿ.ಸಿ ರಸ್ತೆ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.
ನಗರದ ವಾರ್ಡ್ ಸಂಖ್ಯೆ 34 ಮತ್ತು 35ರ ಕಳಸಾಪುರ ರಸ್ತೆಯ ಇಂಡಿಯನ್ ಬ್ಯಾಂಕ್ ಸಮೀಪ, ವಾರ್ಡ್ ಸಂಖ್ಯೆ 06ರ ಬೆಟಗೇರಿ ಹಾಗೂ ವಾರ್ಡ್ ಸಂಖ್ಯೆ 10ರ ಕುರಹಟ್ಟಿ ಪೇಟೆಯಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಯಾವುದೇ ರಾಜಿ ಆಗಬಾರದು ಎಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
“ಸಾರ್ವಜನಿಕರು ವರ್ಷಗಳ ಕಾಲ ಸುಗಮವಾಗಿ ಸಂಚಾರ ಮಾಡಲು ಅನುಕೂಲವಾಗುವ ರೀತಿಯಲ್ಲಿ ಕಾಮಗಾರಿ ನಡೆಯಬೇಕು. ನಾಲ್ಕು ತಿಂಗಳೊಳಗೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು,” ಎಂದು ಸೂಚಿಸಿದರು.
ನಗರ ಅಭಿವೃದ್ಧಿಗೆ ಸರ್ಕಾರ ಬದ್ಧ
ಪ್ರದೇಶದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಮುಂದಿನ ಹಂತದಲ್ಲೂ ಹೆಚ್ಚುವರಿ ಅನುದಾನ ಒದಗಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ರಸ್ತೆ, ಕುಡಿಯುವ ನೀರು, ಉದ್ಯಾನವನ ಹಾಗೂ ಶಿಕ್ಷಣ ಮೂಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂದರು.
ಕಳಸಾಪುರ ಭಾಗದ ಸಾರ್ವಜನಿಕ ಉದ್ಯಾನವನ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ ಸಚಿವರು, ಜಿಮ್ ಸಾಮಗ್ರಿ ಖರೀದಿಗೆ ₹5 ಲಕ್ಷ ಅನುದಾನ ಘೋಷಿಸಿದರು.
ಬೆಟಗೇರಿ ಹಾಗೂ ಕುರಹಟ್ಟಿ ಪೇಟೆ ಭಾಗಗಳಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ತಾನ ಯೋಜನೆಯಡಿ ನಿರ್ಮಿಸಲಾದ ನೂತನ ಅಂಗನವಾಡಿ ಕಟ್ಟಡಗಳನ್ನು ಸಚಿವರು ಲೋಕಾರ್ಪಣೆ ಮಾಡಿದರು.
“ಅಂಗನವಾಡಿಗಳು ಕೇವಲ ಪೋಷಣಾ ಕೇಂದ್ರಗಳಲ್ಲ, ಮಕ್ಕಳ ಭವಿಷ್ಯದ ಅಡಿಪಾಯ ನಿರ್ಮಿಸುವ ಮೊದಲ ಪಾಠಶಾಲೆಗಳು,” ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ವಾರ್ಡ್‌ನ 35 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ನೀಲವ್ವ ಪರಸಪ್ಪ ಬಜಂತ್ರಿ, ರೇಖವ್ವ ರಾಜಪ್ಪ ಬಜಂತ್ರಿ, ಅನಂತ ಬೋಜಪ್ಪ ಬಜಂತ್ರಿ, ಯಮನವ್ವ ಬಜಂತ್ರಿ, ಮಾಯವ್ವ ಬಜಂತ್ರಿ, ಗವಿಸಿದ್ದಪ್ಪ ಬಜಂತ್ರಿ ಸೇರಿದಂತೆ ಹಲವರು ಸಚಿವರಿಂದ ಹಕ್ಕುಪತ್ರ ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದರು.
ಗುಣಮಟ್ಟದಲ್ಲಿ ರಾಜಿ ಬೇಡ
ಕುರಹಟ್ಟಿ ಪೇಟೆ ಕಾಮಗಾರಿಯ ವೇಳೆ ಮಾತನಾಡಿದ ಸಚಿವರು, “ರಸ್ತೆ ಕಾಮಗಾರಿಗಳು ದೀರ್ಘಕಾಲ ಬಾಳಿಕೆ ಬರುವಂತಿರಬೇಕು. ಪ್ರತಿಯೊಂದು ಹಂತದಲ್ಲೂ ಅಧಿಕಾರಿಗಳು ನಿಗಾ ವಹಿಸಬೇಕು,” ಎಂದು ಎಚ್ಚರಿಕೆ ನೀಡಿದರು.
ಕಾರ್ಯಕ್ರಮಗಳಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಉಷಾ ದಾಸರ, ಅನಿಲ ಗರಗ, ದುರಗೇಶ್ ವಿಭೂತಿ, ನಗರಸಭಾ ಸದಸ್ಯೆ ಲಕ್ಷ್ಮವ್ವ ಬಜಂತ್ರಿ, ನಗರಸಭಾ ಸದಸ್ಯ ಇಮ್ತಿಯಾಜ್ ಶಿರಹಟ್ಟಿ, ಜಾಂಗೀರ ಅಣ್ಣಿಗೇರಿ, ಈಶ್ವರ ಗದುಗಿನ, ಹಣಗಿ ಭಾಷಾ, ಇಬ್ರಾಹಿಂ ಶಿರಹಟ್ಟಿ, ಸೋಪೀನ್ ಅಣ್ಣಿಗೇರಿ, ಫಾರುಕ್ ಮಖಾಂದಾರ್, ಯಾಶೀನ್, ಬಸವರಾಜ ಕಡೇಮನಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೋಟೂರ, ನಗರಸಭೆ ಪೌರಾಯುಕ್ತ ರಾಜಾರಾಮ್ ಪವಾರ ಸೇರಿದಂತೆ ಅನೇಕ ಗಣ್ಯರು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.
“ನಗರದ ಅಭಿವೃದ್ಧಿಗೆ ಗುಣಮಟ್ಟದ ರಸ್ತೆ ಮತ್ತು ಮೂಲಸೌಕರ್ಯಗಳೇ ಅಡಿಪಾಯ.”
ಎಚ್.ಕೆ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ



