HomeWorld Newsಸೌದಿ ಅರೇಬಿಯಾ ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: ಹೈದರಾಬಾದ್ ಮೂಲದ ವ್ಯಕ್ತಿ ಸಾವು

ಸೌದಿ ಅರೇಬಿಯಾ ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: ಹೈದರಾಬಾದ್ ಮೂಲದ ವ್ಯಕ್ತಿ ಸಾವು

For Dai;y Updates Join Our whatsapp Group

ರಿಯಾದ್/ಹೈದರಾಬಾದ್: ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿರುವ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಹೈದರಾಬಾದ್ ಮೂಲದ ಮೊಹಮ್ಮದ್ ಯೂಸುಫ್ ಅಲಿ ಮೃತಪಟ್ಟಿದ್ದಾರೆ.

ದಾಳಿಯಲ್ಲಿ ಅವರ ಇಬ್ಬರು ಪುತ್ರರು ಗಾಯಗೊಂಡಿದ್ದು, ಕುಟುಂಬದ ಇತರ ಸದಸ್ಯರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೈದರಾಬಾದ್‌ನ ಮೆಹದಿಪಟ್ನಂ ನಿವಾಸಿಯಾಗಿದ್ದ ಮೊಹಮ್ಮದ್ ಯೂಸುಫ್ ಅಲಿ ಅವರು ಅಕ್ಟೋಬರ್ 10ರಂದು ನಡೆದ ಮೊದಲ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಅವರ ಓರ್ವ ಪುತ್ರನಿಗೆ ಮೊಣಕಾಲಿನ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದು, ಮತ್ತೋರ್ವ ಪುತ್ರನ ಕಾಲಿನ ಮೂರು ಬೆರಳುಗಳು ಕತ್ತರಿಸಿಹೋಗಿವೆ. ಯೂಸುಫ್ ಅವರ ಪತ್ನಿ ಮತ್ತು ಪುತ್ರಿ ಸುರಕ್ಷಿತವಾಗಿದ್ದಾರೆ. ಅವರೊಂದಿಗೆ ಇದ್ದ ಚಿಕ್ಕಮ್ಮನ ತಲೆಗೆ ಗಾಯವಾಗಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಎಐಎಂಐಎಂ ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಅವರು ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಯೂಸುಫ್ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿರುವುದಾಗಿ ತಿಳಿಸಿರುವ ಅವರು, ರಿಯಾದ್‌ನಲ್ಲಿರುವ ಸಂಬಂಧಿಕರು ಹಾಗೂ ಭಾರತೀಯ ರಾಯಭಾರ ಕಚೇರಿಯ ಡೆಪ್ಯುಟಿ ಚೀಫ್ ಆಫ್ ಮಿಷನ್ ಅವರೊಂದಿಗೆ ಮಾತನಾಡಿರುವುದಾಗಿ ಹೇಳಿದ್ದಾರೆ. ಸಂಕಷ್ಟದಲ್ಲಿರುವ ಕುಟುಂಬಕ್ಕೆ ಅಗತ್ಯ ನೆರವು ಒದಗಿಸುವಂತೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಮನವಿ ಮಾಡುವುದಾಗಿಯೂ ತಿಳಿಸಿದ್ದಾರೆ.

ಭಾರತೀಯ ರಾಯಭಾರ ಕಚೇರಿಯ ಮಾಹಿತಿ ಪ್ರಕಾರ, ಗಾಯಗೊಂಡಿರುವ ಮೂವರು ಭಾರತೀಯರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಇಬ್ಬರು ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತರ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಸತತ ಎರಡು ದಿನ ಕ್ಷಿಪಣಿ ದಾಳಿ

ರಿಯಾದ್ ವಿಮಾನ ನಿಲ್ದಾಣದ ಮೇಲೆ ಸತತ ಎರಡು ದಿನಗಳಲ್ಲಿ ಎರಡು ದಾಳಿಗಳು ನಡೆದಿವೆ ಎಂದು ವರದಿಯಾಗಿದೆ. ಶನಿವಾರದ ಮೊದಲ ದಾಳಿಯಲ್ಲಿ ಯೂಸುಫ್ ಅಲಿ ಸೇರಿದಂತೆ 13 ಮಂದಿ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮೃತರಲ್ಲಿ ಸೌದಿ ಅರೇಬಿಯಾ ಸೇರಿದಂತೆ ಹಲವು ದೇಶಗಳ ಪ್ರಜೆಗಳಿದ್ದಾರೆ.

ಭಾನುವಾರ ನಡೆದ ಎರಡನೇ ದಾಳಿಯಲ್ಲಿ ಪಾಕಿಸ್ತಾನ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಲಾಗಿದೆ.

ಈ ಎರಡೂ ದಾಳಿಗಳ ಹೊಣೆಯನ್ನು ಯೆಮೆನ್‌ನ ಹೌತಿ ಬಂಡುಕೋರರು ಹೊತ್ತುಕೊಂಡಿದ್ದಾರೆ. ಯೆಮೆನ್ ಅಂತರ್ಯುದ್ಧದಲ್ಲಿ ಸೌದಿ ಅರೇಬಿಯಾ ಸರ್ಕಾರಿ ಪಡೆಗಳಿಗೆ ಬೆಂಬಲ ನೀಡುತ್ತಿರುವುದಕ್ಕೆ ಹಾಗೂ ಸನಾದಲ್ಲಿನ ವಿಮಾನ ನಿಲ್ದಾಣದ ಮೇಲಿನ ವೈಮಾನಿಕ ದಾಳಿಗೆ ಪ್ರತಿಯಾಗಿ ಈ ದಾಳಿ ನಡೆಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳು ಮತ್ತು ವಾಯುಪ್ರದೇಶವನ್ನು ಬಳಸದಂತೆ ವಿಮಾನಯಾನ ಸಂಸ್ಥೆಗಳು ಹಾಗೂ ಪ್ರಯಾಣಿಕರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img