ಬೆಂಗಳೂರು: ಗ್ರೇಟರ್ ಬೆಂಗಳೂರು ಅಥಾರಿಟಿ ವ್ಯಾಪ್ತಿಯಲ್ಲಿ ಕಾವೇರಿ 2.0 ತಂತ್ರಾಂಶದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಆಸ್ತಿ ನೋಂದಣಿ ಹಾಗೂ ಖಾತಾ ಸಂಬಂಧಿತ ಸೇವೆಗಳು ಅಸ್ತವ್ಯಸ್ತಗೊಂಡಿವೆ.
ಇದರಿಂದ ತಮ್ಮ ಆಸ್ತಿ ದಾಖಲೆಗಳನ್ನು ಮಾಡಿಸಿಕೊಳ್ಳಲು ಸಾರ್ವಜನಿಕರು ಕಂದಾಯ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಕೆಲವು ದಿನಗಳಿಂದ ತಂತ್ರಾಂಶದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿರುವುದರಿಂದ ಹಲವು ಪ್ರಮುಖ ಸೇವೆಗಳು ಸ್ಥಗಿತಗೊಂಡಿವೆ. ಹೊಸದಾಗಿ ಆಸ್ತಿ ಖರೀದಿಸಿದವರು ಖಾತೆ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆಸ್ತಿ ವಿಭಜನೆ ಪ್ರಕ್ರಿಯೆಯೂ ವಿಳಂಬವಾಗಿದ್ದು, ಈಗಾಗಲೇ ಅರ್ಜಿ ಸಲ್ಲಿಸಿರುವ ಸಾವಿರಾರು ಕಡತಗಳ ಅನುಮೋದನೆ ಬಾಕಿ ಉಳಿದಿದೆ ಎಂದು ತಿಳಿದುಬಂದಿದೆ.
ತಂತ್ರಾಂಶದ ಸಮಸ್ಯೆಯಿಂದ ಕಂದಾಯ ಕಚೇರಿಗಳಲ್ಲಿ ಕೆಲಸಗಳು ವಿಳಂಬವಾಗುತ್ತಿದ್ದು, ಸಾರ್ವಜನಿಕರು ಸಮಯ ಮತ್ತು ಹಣ ವ್ಯಯಿಸುವಂತಾಗಿದೆ. ಕಚೇರಿಗಳಿಗೆ ತೆರಳಿದಾಗ ಸರ್ವರ್ ಸಮಸ್ಯೆ ಅಥವಾ ಸಾಫ್ಟ್‌ವೇರ್ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಉತ್ತರ ಸಿಗುತ್ತಿದೆ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಸ್ತಿ ನೋಂದಣಿ ಹಾಗೂ ಖಾತಾ ಯಾವಾಗ ಪೂರ್ಣಗೊಳ್ಳಲಿದೆ ಎಂಬುದು ತಿಳಿಯದೆ ಜನರು ಕಾಯುವಂತಾಗಿದೆ.
ತಾಂತ್ರಿಕ ದೋಷ ಸರಿಪಡಿಸಲು ಆಗ್ರಹ
ಕಾವೇರಿ 2.0 ತಂತ್ರಾಂಶದಲ್ಲಿನ ತಾಂತ್ರಿಕ ಸಮಸ್ಯೆಯನ್ನು ಕಂದಾಯ ಇಲಾಖೆ ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ತುರ್ತಾಗಿ ಸರಿಪಡಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ. ಹೊಸ ಖಾತೆ ನೋಂದಣಿ, ಆಸ್ತಿ ವಿಭಜನೆ ಹಾಗೂ ಬಾಕಿ ಉಳಿದಿರುವ ಅರ್ಜಿಗಳ ಅನುಮೋದನೆ ಪ್ರಕ್ರಿಯೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಅಲೆದಾಟ ತಪ್ಪಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.



