ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಶಿಗ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ವತಿಯಿಂದ ರೈತರಿಗೆ ರಸಗೊಬ್ಬರ ವಿತರಣಾ ಕಾರ್ಯಕ್ಕೆ ಶಾಸಕ ಡಾ. ಚಂದ್ರು ಲಮಾಣಿ ಭಾನುವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಶಿಗ್ಲಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಕೃಷಿಯನ್ನು ಅವಲಂಬಿಸಿದ್ದು, ಅವರಿಗೆ ಸಕಾಲದಲ್ಲಿ ರಸಗೊಬ್ಬರ ದೊರೆಯುವ ಉದ್ದೇಶದಿಂದ ವಿತರಣಾ ವ್ಯವಸ್ಥೆ ಆರಂಭಿಸಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಸಹಕಾರ ಸಂಘಗಳು ರೈತರ ಹಿತಾಸಕ್ತಿಯನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಕಾರ್ಯನಿರ್ವಹಿಸಬೇಕು. ರೈತರಿಗೆ ಅಗತ್ಯ ಸೌಲಭ್ಯಗಳನ್ನು ಸಮಯಕ್ಕೆ ಒದಗಿಸುವುದೇ ಸಂಘದ ಮುಖ್ಯ ಧ್ಯೇಯವಾಗಬೇಕು ಎಂದು ಹೇಳಿದರು.
ಸಂಘದ ಅಧ್ಯಕ್ಷ ಯಲ್ಲಪ್ಪ ತಳವಾರ ಮಾತನಾಡಿ, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಡಳಿತ ಮಂಡಳಿಯು ರಸಗೊಬ್ಬರ ವಿತರಣೆಗೆ ನಿರ್ಧರಿಸಿದ್ದು, ಎಫ್‌ಐಡಿ (FID) ವ್ಯವಸ್ಥೆಯ ಮೂಲಕ ಗೊಬ್ಬರ ವಿತರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ನಾಗಪ್ಪ ತೋಟದ, ರಾಮಣ್ಣ ಲಮಾಣಿ, ಡಿ.ವೈ. ಹುನಗುಂದ, ಶಿವಣ್ಣ ಕುರಿ, ಅಶೋಕ ಶಿರಹಟ್ಟಿ, ಬಸಣ್ಣ ರ್ಜಗಿ, ಸಿದ್ದ ಪೂಜಾರ, ಬಸವರಾಜ ತೋಟದ, ಶಿವಾನಂದ ಅಡರಕಟ್ಟಿ, ದಾನಪ್ಪನವರ, ಸಂಜೀವ ದೇಸಾಯಿ, ಸುರೇಶ ಗೋದಿ, ಶಿವು ವಾರದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ರೈತರಿಗೆ ಸಕಾಲದಲ್ಲಿ ರಸಗೊಬ್ಬರ ದೊರೆಯುವುದು ಅತ್ಯಗತ್ಯ. ರೈತರ ಹಿತ ಕಾಯುವುದೇ ಸಹಕಾರ ಸಂಘಗಳ ಮೊದಲ ಆದ್ಯತೆಯಾಗಬೇಕು.”
ಡಾ. ಚಂದ್ರು ಲಮಾಣಿ, ಶಾಸಕ



