ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಕೇಂದ್ರ ಸರ್ಕಾರದ ವಿಬಿಜಿ ರಾಮ್‌ಜೀ ಯೋಜನೆಗೆ ಶಾಸಕ ಡಾ. ಚಂದ್ರು ಲಮಾಣಿ ಸೋಮವಾರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಬಳಿಕ ಯೋಜನೆಯಡಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ವಿಬಿಜಿ ರಾಮ್‌ಜೀ ಯೋಜನೆಯು ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಮಹತ್ವದ ಯೋಜನೆಯಾಗಿದೆ. ತಾಲೂಕು ಪಂಚಾಯಿತಿಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಮನ್ವಯದಿಂದ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಸ್ಥಳೀಯರಿಗೆ ಉದ್ಯೋಗ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಯೋಜನೆಯಡಿ ಸದ್ಯ ರಸ್ತೆ ಕಾಮಗಾರಿಗಳಿಗೆ ಅವಕಾಶವಿರುವುದರಿಂದ ಶಿಗ್ಲಿ ಗ್ರಾಮದಲ್ಲಿ ಅಗತ್ಯವಿರುವ ಕಡೆಗಳಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಜೊತೆಗೆ ದೊಡ್ಡೂರು–ಶಿಗ್ಲಿ ರಸ್ತೆ ಹಾಗೂ ಲಿಂಗರಾಜ ಸರ್ಕಲ್‌ನಿಂದ ಹಳೆ ಬಸ್ ನಿಲ್ದಾಣದವರೆಗೆ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಅಭಿವೃದ್ಧಿ ಕಾಮಗಾರಿಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಗುಣಮಟ್ಟದ ಕಾಮಗಾರಿ ನಡೆಸಲು ಎಲ್ಲರೂ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ರಾಗಿ, ಬಸಣ್ಣ ಕಳಸದ, ಹನಮಂತಪ್ಪ ತಳವಾರ, ಡಿ.ವೈ. ಹುನಗುಂದ, ರಾಮಣ್ಣ ಲಮಾಣಿ, ಯಲ್ಲಪ್ಪ ತಳವಾರ, ಅಶೋಕ ತೋಟದ, ಅಶೋಕಯ್ಯ ಮುಳಗುಂದಮಠ, ಈರಣ್ಣ ಅಕ್ಕೂರ, ಆನಂದ ತೆವರಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುಳ ಹಕಾರಿ, ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಕೃಷ್ಣಪ್ಪ ಧರ್ಮರ, ವೀರಣ್ಣ ಅಳ್ಳಳ್ಳಿ, ಪಿಡಿಒ ರವಿ ಕೊರಕನವರ, ಡಿಐಇಸಿ ಎಚ್.ಎಂ. ಮಂಜುನಾಥಸ್ವಾಮಿ, ಶಂಭು ಹುನಗುಂದ, ಸಂಜೀವ ದೇಸಾಯಿ, ಮಂಜುನಾಥ ಸೂರಣಗಿ, ಸಂತೋಷ ತಾಂದಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.



