HomeGadag Newsಕಾರ್ಮಿಕರ ಪಿಎಫ್‌ಗೂ ಮೋದಿ ಸರ್ಕಾರ ಕತ್ತರಿ: ಕೃಷ್ಣಗೌಡ ಎಚ್. ಪಾಟೀಲ ಆರೋಪ

ಕಾರ್ಮಿಕರ ಪಿಎಫ್‌ಗೂ ಮೋದಿ ಸರ್ಕಾರ ಕತ್ತರಿ: ಕೃಷ್ಣಗೌಡ ಎಚ್. ಪಾಟೀಲ ಆರೋಪ

ವಿಜಯಸಾಕ್ಷಿ ಸುದ್ದಿ, ಗದಗ: ಕೇಂದ್ರದ ಮೋದಿ ಸರ್ಕಾರ ಜಾರಿಗೆ ತರಲು ಮುಂದಾಗಿರುವ ‘ಹೊಸ ಭವಿಷ್ಯ ನಿಧಿ (ಪಿಎಫ್) ಯೋಜನೆ–2026’ ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕಾರ್ಮಿಕರ ನಿವೃತ್ತಿ ಭದ್ರತೆಗೆ ಕತ್ತರಿ ಹಾಕಲಾಗುತ್ತಿದೆ ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಎಚ್. ಪಾಟೀಲ ಆರೋಪಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಾರ್ಮಿಕರ ಕಡ್ಡಾಯ ಪಿಎಫ್ ಕೊಡುಗೆಯನ್ನು ₹1,800ಕ್ಕೆ ಸೀಮಿತಗೊಳಿಸುವ ಮೂಲಕ ಸುಮಾರು 8 ಕೋಟಿ ಕಾರ್ಮಿಕರ ನಿವೃತ್ತಿ ನಿಧಿಗೆ ಶೇ.50ಕ್ಕೂ ಹೆಚ್ಚು ಹೊಡೆತ ಬೀಳಲಿದೆ ಎಂದು ಆರೋಪಿಸಿದ್ದಾರೆ.

2014ರಿಂದ ಕನಿಷ್ಠ ವೇತನ ಮಿತಿಯನ್ನು ₹15 ಸಾವಿರದಲ್ಲೇ ಉಳಿಸಿಕೊಂಡಿರುವ ಕೇಂದ್ರ ಸರ್ಕಾರ, ಹಣದುಬ್ಬರ ಹೆಚ್ಚಾಗಿದ್ದರೂ ಅದನ್ನು ₹21 ಸಾವಿರಕ್ಕೆ ಏರಿಸಿಲ್ಲ. ಹೆಚ್ಚುವರಿ ಪಿಎಫ್ ಉಳಿತಾಯದ ಮೇಲಿನ ತೆರಿಗೆ ವಿನಾಯಿತಿಯನ್ನೂ ಕಡಿತಗೊಳಿಸಿ ಕಾರ್ಮಿಕರ ಮೇಲೆ ಹೆಚ್ಚುವರಿ ಹೊರೆ ಹಾಕಲಾಗಿದೆ ಎಂದು ಟೀಕಿಸಿದ್ದಾರೆ.

ಕೇಂದ್ರ ಸರ್ಕಾರ ಕಾರ್ಪೊರೇಟ್ ಸಂಸ್ಥೆಗಳ ತೆರಿಗೆಯನ್ನು ಕಡಿಮೆ ಮಾಡಿ, ಲಕ್ಷಾಂತರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದೆ. ಆದರೆ ದೇಶದ ಬೆನ್ನೆಲುಬಾಗಿರುವ ಕಾರ್ಮಿಕರ ಭವಿಷ್ಯ ನಿಧಿಯನ್ನೇ ಕಡಿತಗೊಳಿಸುತ್ತಿದೆ. ಕೈಗೆ ಹೆಚ್ಚು ಸಂಬಳ ಸಿಗುತ್ತದೆ ಎಂಬುದು ಕೇವಲ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಎಂದು ಆರೋಪಿಸಿದ್ದಾರೆ.

ದೀರ್ಘಾವಧಿಯಲ್ಲಿ ಪಿಎಫ್ ಕೊಡುಗೆ ಕಡಿಮೆಯಾಗುವುದರಿಂದ ನಿವೃತ್ತಿ ನಂತರ ಕಾರ್ಮಿಕರಿಗೆ ದೊಡ್ಡ ಪ್ರಮಾಣದ ಆರ್ಥಿಕ ನಷ್ಟವಾಗಲಿದೆ. ಶೇ.8.25ರಷ್ಟು ಸುರಕ್ಷಿತ ಬಡ್ಡಿಯ ಲಾಭವೂ ಕಡಿಮೆಯಾಗಲಿದ್ದು, ಒಬ್ಬ ಉದ್ಯೋಗಿಗೆ ₹15ರಿಂದ ₹20 ಲಕ್ಷದವರೆಗೆ ನಷ್ಟವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಇನ್ನೂ 30.91 ಲಕ್ಷ ಕಾರ್ಮಿಕರ ₹9,330 ಕೋಟಿ ಪಿಎಫ್ ಹಣವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿರುವ ಅವರು, ಬಡ ಕಾರ್ಮಿಕರ ದುಡಿಮೆಯ ಹಣವನ್ನು ತಡೆಹಿಡಿಯುವ ಮೂಲಕ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ದೂರಿದ್ದಾರೆ.

ಮುಂಬೈ ಇಪಿಎಫ್‌ಒದಲ್ಲಿ ₹18.97 ಕೋಟಿ, ಬೆಂಗಳೂರಿನ ಇಪಿಎಫ್‌ಒ ಸಿಬ್ಬಂದಿ ಸಹಕಾರ ಸಂಘದಲ್ಲಿ ₹70 ಕೋಟಿ ಹಾಗೂ ಉತ್ತರ ಪ್ರದೇಶದ ಯುಪಿಪಿಸಿಎಲ್ ಹಗರಣ ಸೇರಿದಂತೆ ಹಲವು ಪ್ರಕರಣಗಳನ್ನು ಉಲ್ಲೇಖಿಸಿದ ಅವರು, ಕಾರ್ಮಿಕರ ಉಳಿತಾಯದ ಹಣದ ಭದ್ರತೆಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ಡಿಜಿಟಲ್ ವ್ಯವಸ್ಥೆಯ ಹೆಸರಿನಲ್ಲಿ ಕಾರ್ಮಿಕರ ಹಣದ ಮೇಲೆ ನಿಯಂತ್ರಣ ಸಾಧಿಸಲು ಸರ್ಕಾರ ಮುಂದಾಗಿದ್ದು, ಭ್ರಷ್ಟಾಚಾರ ತಡೆಯುವ ಕನಿಷ್ಠ ಸುರಕ್ಷತಾ ಕ್ರಮಗಳನ್ನೂ ಕೈಗೊಂಡಿಲ್ಲ. ಇಂತಹ ಧೋರಣೆಯಿಂದ ಕಾರ್ಮಿಕರ ಭವಿಷ್ಯಕ್ಕೆ ದೊಡ್ಡ ಅಪಾಯ ಎದುರಾಗಿದೆ ಎಂದು ಕೃಷ್ಣಗೌಡ ಎಚ್. ಪಾಟೀಲ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

“ಕೈಗೆ ಹೆಚ್ಚು ಸಂಬಳ ಸಿಗುತ್ತದೆ ಎಂಬುದು ಬಿಜೆಪಿ ಸರ್ಕಾರದ ಕಣ್ಣೊರೆಸುವ ತಂತ್ರ. ವಾಸ್ತವದಲ್ಲಿ ಕಾರ್ಮಿಕರ ಭವಿಷ್ಯ ನಿಧಿಯನ್ನೇ ಕಡಿತಗೊಳಿಸಿ ಕಾರ್ಪೊರೇಟ್ ಸಂಸ್ಥೆಗಳಿಗೆ ಲಾಭ ಮಾಡಿಕೊಡಲಾಗುತ್ತಿದೆ.”

– ಕೃಷ್ಣಗೌಡ ಎಚ್. ಪಾಟೀಲ, ಅಧ್ಯಕ್ಷರು, ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img