ನವದೆಹಲಿ: ಭಾರತದ ರಾಜಕೀಯ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ದಾಖಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ದೀರ್ಘಾವಧಿ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಮೋದಿ ಅವರು ಪ್ರಧಾನಿಯಾಗಿ ಸತತ 4,399 ದಿನಗಳ ಆಡಳಿತಾವಧಿಯನ್ನು ಪೂರ್ಣಗೊಳಿಸಿದ್ದು, ಇದು ನೆಹರೂ ಅವರ 4,398 ದಿನಗಳ ದಾಖಲೆಯನ್ನು ಮೀರಿದೆ.
ಹಿಂದಿನ ದಾಖಲೆ ಪಂಡಿತ್ ಜವಾಹರಲಾಲ್ ನೆಹರೂ ಅವರ ಹೆಸರಿನಲ್ಲಿ ಇತ್ತು. ಅವರು 1952ರಿಂದ 1964ರವರೆಗೆ ನಿರಂತರವಾಗಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.
ನರೇಂದ್ರ ಮೋದಿ ಅವರು 2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ, 2019ರಲ್ಲಿ ಪುನಃ ಭಾರೀ ಬಹುಮತದೊಂದಿಗೆ ಆಯ್ಕೆಯಾಗಿದ್ದರು. 2024ರಲ್ಲಿ ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿ ಆಡಳಿತ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಸಾಧನೆಯ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಎನ್‌ಡಿಎ ವತಿಯಿಂದ ವಿಶೇಷ ಸಮಾವೇಶ ಆಯೋಜಿಸಲಾಗಿದ್ದು, ಹಲವು ರಾಜ್ಯಗಳ ನಾಯಕರು ಭಾಗವಹಿಸಲಿದ್ದಾರೆ.
ಪ್ರಧಾನಿ ಮೋದಿ ಅವರು ತಮ್ಮ ಸಂದೇಶದಲ್ಲಿ ಈ 12 ವರ್ಷಗಳ ಆಡಳಿತ ದೇಶದ ಅಭಿವೃದ್ಧಿ, ಜನಕಲ್ಯಾಣ ಮತ್ತು ಮೂಲಸೌಕರ್ಯ ವಿಕಾಸಕ್ಕೆ ಸಮರ್ಪಿತವಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ದೇಶದ ವಿವಿಧ ಭಾಗಗಳಲ್ಲಿ ಈ ಮೈಲಿಗಲ್ಲನ್ನು ಸಂಭ್ರಮಿಸಲು ವಿಶೇಷ ಕಾರ್ಯಕ್ರಮಗಳು ಹಾಗೂ ಪೂಜೆಗಳು ನಡೆಯಲಿದೆ.



