ರೈತರಿಗೆ ಶೀಘ್ರವೇ ಪರಿಹಾರ ತಲುಪಿಸಿ : ಡಿಸಿ ವೈಶಾಲಿ ಎಂ.ಎಲ್

0
Naragunda Taluk Level Janaspandan presided over by DC Vaishali M.L
Spread the love

ವಿಜಯಸಾಕ್ಷಿ ಸುದ್ದಿ, ನರಗುಂದ : ಜನಸ್ಪಂದನ ಸಭೆಯಲ್ಲಿ ಬಂದಿರುವ ಅರ್ಜಿಗಳಲ್ಲಿ ಅರ್ಧದಷ್ಟು ಅರ್ಜಿಗಳು ಬೆಳೆ ಪರಿಹಾರ, ಕಿಸಾನ ಸಮ್ಮಾನ ಹಾಗೂ ಬೆಳೆ ವಿಮೆಗೆ ಸಂಬಂಧಿಸಿವೆ. ರೇಣುಕಾ ತರಕಾರ ಎಂಬ ರೈತ ಮಹಿಳೆ ಪರಿಹಾರ ಬಾರದ್ದರಿಂದ ಜಿಲ್ಲಾಧಿಕಾರಿಗಳ ಮುಂದೆ ಕಣ್ಣೀರು ಹಾಕಿದಾಗ, ನಿನ್ನೆಯಿಂದ ಪರಿಹಾರ 10 ಸಾವಿರ ರೂ ಹಾಕಲು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಮ್.ಎಲ್ ಹೇಳಿದರು.

ಶುಕ್ರವಾರ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಟ್ಟು 77 ಅರ್ಜಿಗಳು ಬಂದಿವೆ. ರೈತರಿಗೆ ಶೀಘ್ರದಲ್ಲಿ ಪರಿಹಾರ ತಲುಪಿಸುವಂತೆ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಚಿಕ್ಕನರಗುಂದ ಗ್ರಾ.ಪಂ ಮಾಜಿ ಅಧ್ಯಕ್ಷ ಮುತ್ತು ರಾಯರಡ್ಡಿ ಮಾತನಾಡಿ, ತಾಲೂಕಿನಲ್ಲಿರುವ ಮಲಪ್ರಭೆಯ ಎಲ್ಲಾ ಕಾಲುವೆಗಳಲ್ಲಿ ಹೂಳು ತುಂಬಿದ್ದು, ಕಾಲುವೆ ಪಕ್ಕದ ರಸ್ತೆಗಳಲ್ಲಿ ಕಂಟಿ ಬೆಳೆದಿದೆ, ರೈತರ ಜಮೀನುಗಳಿಗೆ ಹೋಗಲು ರಸ್ತೆ ಇಲ್ಲದಂತಾಗಿದೆ. ನೀರು ಬಂದರೆ ಜಮೀನಿಗೆ ತೆರಳಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರಣ, ನೀರಾವರಿ ಇಲಾಖೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡಿದರು.

Naragunda Taluk Level Janaspandan presided over by DC Vaishali M.L

ತಾಲೂಕಾಸ್ಪತ್ರೆಯಲ್ಲಿ ಹಾವು ಕಡಿತಕ್ಕೆ ಔಷಧವಿಲ್ಲದೇ ಹಲವಾರು ಜನ ಸಾವನ್ನಪ್ಪಿದ್ದಾರೆ. ಕೂಡಲೇ ಔಷಧ ಒದಗಿಸುವಂತೆ ಉರಗ ರಕ್ಷಕ ಬುಡ್ನೆಸಾಬ ಸುರೇಬಾನ ಒತ್ತಾಯಿಸಿದರು. ತಾಲೂಕಿನ ಪಶು ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದಿರುವುದರಿಂದ ಜಾನುವಾರುಗಳಿಗೆ ಸೂಕ್ತ ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಹೆಚ್ಚುವರಿ ವೈದ್ಯರನ್ನು ನೇಮಕ ಮಾಡಿಕೊಳ್ಳಬೇಕು, ಅಂಬಿಗರ ಚೌಡಯ್ಯ ವೃತ್ತದಲ್ಲಿ ಪುತ್ಥಳಿ ಸ್ಥಾಪನೆಗೆ ಸ್ಥಳವಕಾಶಕ್ಕೆ ಬೇಡಿಕೆ, ಮಹರ್ಷಿ ವಾಲ್ಮೀಕಿ ಭವನ ಕಟ್ಟಡ ಕಾಮಗಾರಿ ನಿರ್ಮಿತಿ ಕೇಂದ್ರದಿಂದ ಸ್ಥಗಿತಗೊಂಡಿದ್ದು, ಕೂಡಲೇ ಕಟ್ಟಡ ಕಾಮಗಾರಿ ಪ್ರಾರಂಭಿಸಲು ಮನವಿ, ರೈತ ಸ್ಮಾರಕ ಭವನಕ್ಕೆ ನಿವೇಶನ ನೀಡಲು ಹೀಗೆ ಹಲವಾರು ಸಮಸ್ಯೆಗಳ ಮನವಿಗಳು ಸಲ್ಲಿಕೆಯಾದವು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ್ರ, ಜಿ.ಪಂ ಸಿಇಓ ಭರತ್ ಎಸ್, ಡಿವೈಎಸ್‌ಪಿ ಪ್ರಭುಗೌಡ ಕಿರೇಗೌಡ್ರ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಕೆ. ಇನಾಮದಾರ್, ಹೆಚ್.ಬಿ. ಹುಲಗನ್ನವರ, ತಹಸೀಲ್ದಾರ ಶ್ರೀಶೈಲ ತಳವಾರ, ಪಿಎಸ್‌ಐ ಸವಿತಾ ಮುನ್ಯಾಳ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಜನಸ್ಪಂದನ ಸಭೆ ಪ್ರಾರಂಭದ ಮೊದಲೇ ವಿದ್ಯುತ್ ಕೈಕೊಟ್ಟಿತು. ಜಿಲ್ಲಾಧಿಕಾರಿಗಳು ಕತ್ತಲಲ್ಲೇ ಮೊಬೈಲ್ ಟಾರ್ಚ್ ಹಿಡಿದು ಸಭೆ ನಡೆಸಿದರು. ಸಭೆ ಮುಕ್ತಾಯಗೊಳಿಸಿ ಹೊರಹೋದ ನಂತರ ವಿದ್ಯುತ್ ಬಂದಿದೆ. ವಿದ್ಯುತ್ ಬೆಳಕು ಇಲ್ಲದ್ದಕ್ಕೆ ಸಾರ್ವಜನಿಕರು ಆಗಾಗ ಸಭೆಗೆ ವಿರೋಧ ವ್ಯಕ್ತಪಡಿಸಿದ ಪ್ರಸಂಗವೂ ಜರುಗಿತು.

ಕೊಣ್ಣೂರ ಕೆಇಬಿ ಗ್ರಿಡ್‌ನಿಂದ ಚಿಕ್ಕನರಗುಂದ, ಹಿರೇಕೊಪ್ಪ, ಬೆನಕನಕೊಪ್ಪ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ 6 ಹಳ್ಳಿಗಳಿಗೆ ಪೂರೈಕೆಯಾಗುತ್ತಿರುವ ವಿದ್ಯುತ್ತಿನಿಂದ ದಿನನಿತ್ಯ ಸಮಸ್ಯೆ ಅನುಭವಿಸುವ ಪರಿಸ್ಥಿತಿ ಎದುರಾಗಿದೆ. ಇದರ ಬದಲಾಗಿ ನರಗುಂದ ಗ್ರಿಡ್‌ನಿಂದ ಚಿಕ್ಕನರಗುಂದ, ಬೆನಕನಕೊಪ್ಪ, ಸಂಕಧಾಳ, ಅರಿಷಿನಗೋಡಿ, ಕುರುಗೋವಿನಕೊಪ್ಪ, ಹಿರೇಕೊಪ್ಪ ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಮಾಡಬೇಕೆಂದು ಮುತ್ತು ರಾಯರಡ್ಡಿ ಆಗ್ರಹಿಸಿದರು.


Spread the love

LEAVE A REPLY

Please enter your comment!
Please enter your name here