ವಿಜಯಪುರ: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಧರಿಸಿ ಶಾಲೆಗೆ ತೆರಳುವಂತೆ ಕರೆ ನೀಡಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಜೂನ್‌ನಲ್ಲಿ ಶಾಲೆಗಳು ಆರಂಭವಾದ ಬಳಿಕ ಪ್ರತಿಯೊಬ್ಬ ವಿದ್ಯಾರ್ಥಿಗೂ ಕೇಸರಿ ಶಾಲು ವಿತರಿಸುವುದಾಗಿ ಘೋಷಿಸಿದರು.
ಇನ್ನು ಮುಂದೆ ಶಾಲೆಗಳಲ್ಲಿ ಹಾಜರಾತಿ ವೇಳೆ ‘ಎಸ್ ಸರ್’ ಎನ್ನುವ ಬದಲು ‘ಜೈ ಶ್ರೀರಾಮ್’ ಎಂದು ಹೇಳಬೇಕು. ಶಿಕ್ಷಕರಿಗೆ ನಮಸ್ಕರಿಸುವಾಗಲೂ ‘ಜೈ ಶ್ರೀರಾಮ್’ ಎನ್ನಬೇಕು ಎಂದು ಅವರು ಕರೆ ನೀಡಿದರು.
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, ಕೇಸರಿ ಶಾಲು ಧರಿಸುವುದಕ್ಕೆ ನಿಷೇಧ ಹೇರಲು ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟವರು ಯಾರು? ಕೇಸರಿ ಶಾಲು ಹಾಕುವುದು ನಮ್ಮ ಹಕ್ಕು ಎಂದು ಹೇಳಿದರು.
ರಾಜ್ಯದ ಎಲ್ಲಾ ಹಿಂದೂ ಪೋಷಕರಿಗೆ ಕರೆ ನೀಡಿದ ಅವರು, ತಮ್ಮ ಮಕ್ಕಳಿಗೆ ತಿಲಕ ಇಟ್ಟು, ಕೇಸರಿ ಶಾಲು ಹಾಕಿಸಿ ಶಾಲೆಗೆ ಕಳುಹಿಸಿ. ಇದನ್ನು ಹೇಗೆ ತಡೆಯುತ್ತಾರೆ ಎಂಬುದನ್ನು ನಾವು ನೋಡುತ್ತೇವೆ ಎಂದು ಸವಾಲು ಹಾಕಿದರು.
ಇದೇ ವೇಳೆ ಮಧ್ಯಪ್ರಾಚ್ಯದಲ್ಲಿನ ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಕಾಂಗ್ರೆಸ್ ಟೀಕೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಾಯಕರ ವಿರುದ್ಧವೂ ವಾಗ್ದಾಳಿ ನಡೆಸಿದರು.
ಬಿಜೆಪಿ ಸರ್ಕಾರ ಇದ್ದಾಗ ತಮಿಳುನಾಡಿನಲ್ಲಿ ಸ್ಟಾಲಿನ್ ಇಂಧನ ದರ ಇಳಿಕೆ ಮಾಡಿದ್ದರು. ಅದೇ ರೀತಿ ಬಿಜೆಪಿ ಸರ್ಕಾರವೂ ಮಾಡಬೇಕು ಎಂದು ಕಾಂಗ್ರೆಸ್ ನಾಯಕರು ಟ್ವೀಟ್ ಮಾಡಿದ್ದರು. ಈಗ ದಮ್ ಇದ್ದರೆ ರಾಜ್ಯದಲ್ಲಿ ದರ ಇಳಿಕೆ ಮಾಡಿ ತೋರಿಸಲಿ”ಎಂದು ಸವಾಲು ಹಾಕಿದರು.



