ಬೆಂಗಳೂರು: ಪೆಟ್ರೋಲ್, ಡೀಸೆಲ್ ಹಾಗೂ ಸಿಎನ್‌ಜಿ ದರ ಏರಿಕೆಯ ಪರಿಣಾಮವಾಗಿ ರಾಜಧಾನಿ ಬೆಂಗಳೂರಿನಲ್ಲಿ ಕ್ಯಾಬ್ ಮತ್ತು ಟ್ಯಾಕ್ಸಿ ದರ ಹೆಚ್ಚಳದ ಸಾಧ್ಯತೆ ಎದುರಾಗಿದೆ. ಓಲಾ, ಉಬರ್ ಚಾಲಕರ ಸಂಘಟನೆಗಳು ಪ್ರತಿ ಕಿಲೋಮೀಟರ್‌ಗೆ ₹5ರಿಂದ ₹10ರವರೆಗೆ ದರ ಹೆಚ್ಚಿಸುವಂತೆ ಒತ್ತಾಯಿಸುತ್ತಿವೆ.
ಈ ಕುರಿತು ಅಗ್ರಿಗೇಟರ್ ಕಂಪನಿಗಳು ಹಾಗೂ ಸಾರಿಗೆ ಇಲಾಖೆಯ ಮೇಲೆ ಒತ್ತಡ ಹೇರಲು ಚಾಲಕರ ಸಂಘಟನೆಗಳು ಮುಂದಾಗಿವೆ. ಒಂದು ವೇಳೆ ಸಾರಿಗೆ ಇಲಾಖೆ ಇದಕ್ಕೆ ಒಪ್ಪಿಗೆ ನೀಡಿದರೆ, ಬೆಂಗಳೂರಿನ ಪ್ರಯಾಣಿಕರಿಗೆ ಮತ್ತೊಂದು ಬೆಲೆ ಏರಿಕೆಯ ಹೊರೆ ಬೀಳುವುದು ಖಚಿತವಾಗಿದೆ.
ಪ್ರಸ್ತುತ ಓಲಾ, ಉಬರ್ ಸೇರಿದಂತೆ ಅಗ್ರಿಗೇಟರ್ ಕಂಪನಿಗಳು ಸಾಮಾನ್ಯ ಅವಧಿಯಲ್ಲಿ ಪ್ರತಿ ಕಿಲೋಮೀಟರ್‌ಗೆ ವಾಹನ ಮಾಲೀಕರಿಗೆ ₹10ರಿಂದ ₹12ರವರೆಗೆ ಮಾತ್ರ ನೀಡುತ್ತಿವೆ. ಪೀಕ್ ಅವರ್ ಸಂದರ್ಭದಲ್ಲೂ ಗರಿಷ್ಠ ₹20ರವರೆಗೆ ಮಾತ್ರ ಪಾವತಿಸುತ್ತಿವೆ ಎಂದು ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂಧನ ದರ ನಿರಂತರ ಏರಿಕೆಯಿಂದ ಕಾರ್ಯಾಚರಣೆ ವೆಚ್ಚ ಹೆಚ್ಚಾಗಿದ್ದು, ಪ್ರಸ್ತುತ ದರದಲ್ಲಿ ಸೇವೆ ನೀಡುವುದು ಕಷ್ಟಕರವಾಗಿದೆ ಎಂದು ಚಾಲಕರ ಸಂಘಟನೆಗಳು ಹೇಳಿವೆ.
ಹೀಗಾಗಿ ಡೀಸೆಲ್ ಮತ್ತು ಇತರೆ ಇಂಧನ ವೆಚ್ಚದ ಏರಿಕೆಯನ್ನು ಪರಿಗಣಿಸಿ ಪ್ರತಿ ಕಿಲೋಮೀಟರ್‌ಗೆ ಕನಿಷ್ಠ ₹5ರಿಂದ ₹10ರವರೆಗೆ ಹೆಚ್ಚಳ ಮಾಡಲೇಬೇಕು ಎಂದು ಅವರು ಪಟ್ಟು ಹಿಡಿದಿದ್ದಾರೆ.
ಇತ್ತೀಚೆಗೆ ಖಾಸಗಿ ಬಸ್ ಹಾಗೂ ಖಾಸಗಿ ಶಾಲಾ ವಾಹನ ದರ ಏರಿಕೆಯ ಬಳಿಕ ಇದೀಗ ಕ್ಯಾಬ್ ಮತ್ತು ಟ್ಯಾಕ್ಸಿ ದರ ಏರಿಕೆಯ ಮಾತು ಕೇಳಿಬರುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.



