ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕದಲ್ಲಿ ಗೋವಿನಜೋಳ ಆಧಾರಿತ ₹6 ಸಾವಿರ ಕೋಟಿ ವೆಚ್ಚದ ಇಥೆನಾಲ್ ಉತ್ಪಾದನಾ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿತ್ತು. ಆದರೆ ರಾಜ್ಯ ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ ಯೋಜನೆಯನ್ನು ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಆರೋಪಿಸಿದರು.
ನಗರದ ರೋಟರಿ ವೃತ್ತದ ಮಾನ್ವಿ ಕಟ್ಟಡದಲ್ಲಿ ವಿಜಯ ಎಂಆರ್‌ಎನ್ ಸೌಹಾರ್ದ ಕ್ರೆಡಿಟ್ ಸಹಕಾರ ಸಂಘ ನಿಯಮಿತದ 73ನೇ ಶಾಖೆ ಉದ್ಘಾಟನೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಕೈಗಾರಿಕೆ ಸ್ಥಾಪಿಸಲು ಉದ್ಯಮಿಗಳಿಗೆ ಅಗತ್ಯ ಬೆಂಬಲ ಮತ್ತು ಪ್ರೋತ್ಸಾಹ ದೊರೆಯುತ್ತಿಲ್ಲ. ಇದೇ ಕಾರಣಕ್ಕೆ ಇತರೆ ರಾಜ್ಯಗಳು ಭೂಮಿ, ಸಬ್ಸಿಡಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಿ ಬಂಡವಾಳ ಹೂಡಿಕೆಗಳನ್ನು ಸೆಳೆಯುತ್ತಿವೆ. ಪರಿಣಾಮ ರಾಜ್ಯದ ರೈತರು ಮತ್ತು ಯುವಕರಿಗೆ ದೊರೆಯಬೇಕಿದ್ದ ಉದ್ಯೋಗಾವಕಾಶಗಳು ಹೊರರಾಜ್ಯಗಳಿಗೆ ವರ್ಗವಾಗುತ್ತಿವೆ ಎಂದು ಹೇಳಿದರು.
ರಾಜ್ಯ ಸರ್ಕಾರ ವಿದೇಶಿ ಉದ್ಯಮಿಗಳನ್ನು ಆಹ್ವಾನಿಸಲು ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಆದರೆ ಕನ್ನಡಿಗ ಉದ್ಯಮಿಗಳಿಗೆ ಸೂಕ್ತ ಅವಕಾಶ ಕಲ್ಪಿಸುತ್ತಿಲ್ಲ ಎಂದು ಅವರು ಟೀಕಿಸಿದರು.
ನಿರಾಣಿ ಗ್ರೂಪ್ ದೇಶದ ಅಗ್ರ ಸಕ್ಕರೆ ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾಗಿದ್ದು, ಪ್ರತಿದಿನ 30 ಲಕ್ಷ ಲೀಟರ್ ಇಥೆನಾಲ್ ಹಾಗೂ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ. ಗ್ರೀನ್ ಹೈಡ್ರೋಜನ್, ಕಂಪ್ರೆಸ್ಡ್ ಬಯೋ ಗ್ಯಾಸ್ (ಸಿಬಿಜಿ), ಶಿಕ್ಷಣ, ಸಿಮೆಂಟ್ ಹಾಗೂ ಬ್ಯಾಂಕಿಂಗ್ ಕ್ಷೇತ್ರಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದು, ಬಿಹಾರದಲ್ಲಿ ಸಾವಿರಾರು ಕೋಟಿ ರೂಪಾಯಿ ವೆಚ್ಚದ ಹೊಸ ಯೋಜನೆಗೆ ಸರ್ಕಾರದಿಂದ ಉತ್ತಮ ಪ್ರೋತ್ಸಾಹ ದೊರೆಯುತ್ತಿದೆ ಎಂದರು.
ಮೆಕ್ಕೆಜೋಳ, ಕಬ್ಬು ಹಾಗೂ ಅಕ್ಕಿಯಿಂದ ಇಥೆನಾಲ್ ಉತ್ಪಾದನೆಯಿಂದ ರೈತರಿಗೆ ಉತ್ತಮ ಬೆಲೆ ದೊರೆಯಲಿದೆ. ಅದರ ಉಪ ಉತ್ಪನ್ನ ಜಾನುವಾರುಗಳಿಗೆ ಗುಣಮಟ್ಟದ ಆಹಾರವಾಗಲಿದ್ದು, ಹಾಲಿನ ಉತ್ಪಾದನೆಯೂ ಹೆಚ್ಚಲಿದೆ. ಇಥೆನಾಲ್ ಮಿಶ್ರಿತ ಇಂಧನದಿಂದ ಕಚ್ಚಾ ತೈಲ ಆಮದು ವೆಚ್ಚ ಕಡಿಮೆಯಾಗುವುದರೊಂದಿಗೆ ದೇಶದ ಆರ್ಥಿಕತೆಗೆ ಲಾಭವಾಗಲಿದೆ ಎಂದು ಹೇಳಿದರು.
ಬರ ಪರಿಸ್ಥಿತಿ: ಸಾಲ ಮನ್ನಾಗೆ ಆಗ್ರಹ
ರಾಜ್ಯದಲ್ಲಿ ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಬೆಳೆಗಳು ಹಾನಿಗೀಡಾಗಿದ್ದು, ಅನೇಕ ಕಡೆ ಕೃಷಿ ಭೂಮಿಯೇ ಖಾಲಿ ಉಳಿದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಸಿ.ಸಿ. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕುರಡಗಿ, ಬಿಜೆಪಿ ಮುಖಂಡರಾದ ಎಂ.ಎಸ್. ಕರಿಗೌಡ್ರ, ವಿಜಯಕುಮಾರ್ ಗಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಕರ್ನಾಟಕದಲ್ಲಿ ಅನುಮತಿ ಸಿಗದ ಕಾರಣ ₹6 ಸಾವಿರ ಕೋಟಿ ಇಥೆನಾಲ್ ಯೋಜನೆಯನ್ನು ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಕ್ಕೆ ಸ್ಥಳಾಂತರಿಸಿದ್ದೇವೆ. ರಾಜ್ಯ ಸರ್ಕಾರ ಸ್ಥಳೀಯ ಉದ್ಯಮಿಗಳಿಗೂ ಸಮಾನ ಪ್ರೋತ್ಸಾಹ ನೀಡಬೇಕು.”
– ಮುರುಗೇಶ ನಿರಾಣಿ, ಮಾಜಿ ಸಚಿವ
2028ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ
2028ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷ ಸಂಘಟನೆ ನಡೆಯುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷರು ಯಾರೇ ಆಗಿದ್ದರೂ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಾಗುವುದು. ಕೆ.ಎಸ್. ಈಶ್ವರಪ್ಪ ಹಾಗೂ ಬಸನಗೌಡ ಪಾಟೀಲ ಯತ್ನಾಳ್ ಪಕ್ಷದ ಮುಖ್ಯವಾಹಿನಿಗೆ ಬಂದರೆ ಬಿಜೆಪಿಗೆ ಮತ್ತಷ್ಟು ಬಲ ಬರಲಿದೆ. ಕಾಂಗ್ರೆಸ್‌ನ ಅಸಮಾಧಾನಿತ ಶಾಸಕರೂ ಮುಂದಿನ ದಿನಗಳಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.



