ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದ ಐದನೇ ದಿನವೂ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿಚಾರವಾಗಿ ಲೋಕಸಭೆಯಲ್ಲಿ ಗದ್ದಲ ಮುಂದುವರಿದಿದ್ದು, ಕಲಾಪವನ್ನು ಸೋಮವಾರ ಬೆಳಗ್ಗೆ 11 ಗಂಟೆಯವರೆಗೆ ಮುಂದೂಡಲಾಗಿದೆ.
ನೀಟ್ ಪರೀಕ್ಷಾ ಅಕ್ರಮ ಪ್ರಕರಣದ ಕುರಿತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ವಿರೋಧ ಪಕ್ಷಗಳ ಸದಸ್ಯರು ಸದನ ಆರಂಭವಾಗುತ್ತಿದ್ದಂತೆಯೇ ಪ್ರತಿಭಟನೆ ನಡೆಸಿದರು.
ನೀಟ್ ಪ್ರಕರಣದ ಕುರಿತು ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದ್ದರೂ, ಚರ್ಚೆಗೂ ಮುನ್ನವೇ ಶಿಕ್ಷಣ ಸಚಿವರ ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿದವು. ಈ ವೇಳೆ ಸದನದಲ್ಲಿ ಭಾರಿ ಗದ್ದಲ ಉಂಟಾಯಿತು.
ಮಧ್ಯಾಹ್ನ 12 ಗಂಟೆಗೆ ಲೋಕಸಭೆ ಪುನಾರಂಭಗೊಂಡ ಕೆಲವೇ ಕ್ಷಣಗಳಲ್ಲಿ ವಿರೋಧ ಪಕ್ಷದ ಸದಸ್ಯರು “Education Minister Resign”, “ಇಸ್ತೀಫಾ, ಇಸ್ತೀಫಾ” ಎಂದು ಘೋಷಣೆ ಕೂಗಿದರು. ಕೆಲ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸ್ಪೀಕರ್ ಕಲಾಪವನ್ನು ಮುಂದೂಡಿದರು.
ಇದಕ್ಕೂ ಮುನ್ನ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಾತನಾಡಿ, ನೀಟ್ ವಿಚಾರದಲ್ಲಿ ಚರ್ಚೆಗೆ ವಿರೋಧ ಪಕ್ಷಗಳು ಸಹಕರಿಸಬೇಕು ಎಂದು ಮನವಿ ಮಾಡಿದರು. ಚರ್ಚೆಯಿಂದ ದೂರ ಉಳಿಯಲು ಕಾರಣಗಳನ್ನು ಹುಡುಕುವುದು ದೇಶಕ್ಕೆ ತಪ್ಪು ಸಂದೇಶ ನೀಡುತ್ತದೆ ಎಂದು ಹೇಳಿದರು.
ಸದನದ ಅಧ್ಯಕ್ಷತೆ ವಹಿಸಿದ್ದ ಜಗದಂಬಿಕಾ ಪಾಲ್ ಅವರು, ಪ್ರತಿಭಟನೆ ಕೈಬಿಟ್ಟು ಕಲಾಪ ಸುಗಮವಾಗಿ ನಡೆಯಲು ಅವಕಾಶ ನೀಡುವಂತೆ ಸದಸ್ಯರಲ್ಲಿ ಮನವಿ ಮಾಡಿದರು. ಸರ್ಕಾರ ಚರ್ಚೆಗೆ ಸಿದ್ಧವಿದೆ ಎಂದು ತಿಳಿಸಿದ ಅವರು, ತಮ್ಮ ಅಭಿಪ್ರಾಯಗಳನ್ನು ಸ್ಪೀಕರ್ ಓಂ ಬಿರ್ಲಾ ಅವರ ಗಮನಕ್ಕೆ ತರುವಂತೆ ಸಲಹೆ ನೀಡಿದರು.
ಆದರೆ, ವಿರೋಧ ಪಕ್ಷದ ಸದಸ್ಯರು ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಘೋಷಣೆ ಮುಂದುವರಿಸಿದ ಹಿನ್ನೆಲೆಯಲ್ಲಿ ಲೋಕಸಭೆ ಕಲಾಪವನ್ನು ಸೋಮವಾರದವರೆಗೆ ಮುಂದೂಡಲಾಗಿದೆ.

