ಬೆಂಗಳೂರು:- ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ 7 ಕೋಟಿ ದರೋಡೆ ಪ್ರಕರಣದಲ್ಲಿ ರೋಚಕ ಬೆಳವಣಿಗೆ ಬೆಳಕಿಗೆ ಬಂದಿದೆ.
ಇಡೀ ದರೋಡೆಯ ಮಾಸ್ಟರ್‌ಮೈಂಡ್ ಓರ್ವ ಪೊಲೀಸ್ ಕಾನ್ಸ್‌ಟೇಬಲ್ ಎಂಬ ಶಂಕೆ ವ್ಯಕ್ತವಾಗಿದೆ. ದರೋಡೆ ಪ್ರಕರಣ ಸಂಬಂಧ ಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್ ಎಂಬುವರನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಅಣ್ಣಪ್ಪ ನಾಯ್ಕ್ ಇಡೀ ದರೋಡೆಯ ಮಾಸ್ಟರ್‌ಮೈಂಡ್ ಎನ್ನಲಾಗುತ್ತಿದೆ. ಇವರೇ ಹುಡುಗರನ್ನ ದರೋಡೆಗೆ ಸಿದ್ಧಪಡಿಸಿದ್ದರು ಎಂಬ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.
ಕಮ್ಮನಹಳ್ಳಿ, ಕಲ್ಯಾಣನಗರ ಹುಡುಗರ ಗ್ಯಾಂಗ್ ರೆಡಿ ಮಾಡಿದ್ದ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್, ದರೋಡೆ ಕುರಿತು ಪಕ್ಕಾ ತರಬೇತಿ ನೀಡಿದ್ದರು. ಹೇಗೆ ರಾಬರಿ ಮಾಡಬೇಕು? ಹೇಗೆ ತಪ್ಪಿಸಿಕೊಳ್ಳಬೇಕೆಂದು ಟ್ರೈನಿಂಗ್ ಕೂಡ ಕೊಟ್ಟಿದ್ದರು. ಪೊಲೀಸರು ಹೇಗೆ ಕೆಲಸ ಮಾಡುತ್ತಾರೆಂದು ಸಹ ತಿಳಿಸಿದ್ದರು ಎನ್ನಲಾಗಿದೆ. ಅದರಂತೆ ಕಮ್ಮನಹಳ್ಳಿ, ಕಲ್ಯಾಣನಗರ ಹುಡುಗರ ತಂಡವೇ 7.11 ಕೋಟಿ ರೂ. ದರೋಡೆ ಮಾಡಿದೆ. ಅಲ್ಲದೆ ಸಿಎಂಎಸ್ ಸೆಕ್ಯೂರಿಟಿ ಎಜೆನ್ಸಿಯ ಮಾಜಿ ಉದ್ಯೋಗಿಗಳು ದರೋಡೆಗೆ ಸಾಥ್ ಕೊಟ್ಟಿದ್ದು, ಕದ್ದ ಹಣವನ್ನು ಬೆಂಗಳೂರಲ್ಲಿಯೇ ಬಚ್ಚಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ದರೋಡೆಕೋರರ ಪತ್ತೆಗೆ ನಾಲ್ವರು ಜಂಟಿ ಪೊಲೀಸ್ ಆಯುಕ್ತರು, 18 ಡಿಸಿಪಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದ್ದು, ಇನ್ನೋವಾ ಕಾರು ಗುರುವಾರ ತಿರುಪತಿಯಲ್ಲಿ ಸಿಕ್ಕಿದೆ. ಅಲ್ಲದೇ ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಮಧ್ಯೆ ಸಿದ್ದಾಪುರ ಪೊಲೀಸರು ಡೇವಿಡ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

