ಚಿಕ್ಕಬಳ್ಳಾಪುರ:- ಮರು ಮದುವೆ ಆಗುವುದಾಗಿ ವಿಚ್ಛೇದಿತ ಮಹಿಳೆಯರನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿದ್ದ ಆರೋಪಿಯು ಸೂಸೈಡ್ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ಕನ್ನಂಪಲ್ಲಿ ಮನೆಯಲ್ಲಿ ಜರುಗಿದೆ.
ಗಿರೀಶ್ ಸೂಸೈಡ್ ಮಾಡಿಕೊಂಡ ಆರೋಪಿ. ವಂಚನೆ ಪ್ರಕರಣ ಸಂಬಂಧ ನಾಲ್ವರು ಸಂತ್ರಸ್ತೆಯರು ಈತನ ವಿರುದ್ಧ ದೂರು ನೀಡಿದ್ದರು. ಈ ಬಗ್ಗೆ ನಿನ್ನೆಯಷ್ಟೇ ಚಿಕ್ಕಬಳ್ಳಾಪುರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರು ದಾಖಲಾಗುತ್ತಿದ್ದಂತೆ ಭಯದಿಂದ ಗಿರೀಶ್ ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದ್ದು, ತಿಂಗಳ ಹಿಂದೆಯೂ ಈತ ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಪಡೆದಿದ್ದ ಎನ್ನಲಾಗಿದೆ.
ಸಿ.ಎಂ.ಗಿರೀಶ್ ಅಲಿಯಾಸ್ ಸಾಯಿಸುದೀಪ್ ಎನ್ನುವ ಈತ ವಿವಾಹಿತ ಮಹಿಳೆಯರನ್ನೇ ಟಾರ್ಗೆಟ್ ಮಾಡ್ತಿದ್ದ. ಫೇಸ್ಬುಕ್ ಮೂಲಕ ಪರಿಚಯ ಮಾಡಿಕೊಂಡು, ಮರುಮದುವೆ ಹೆಸರಲ್ಲಿ ಅವರನ್ನು ಪುಸಲಾಯಿಸುತ್ತಿದ್ದ. ಲೈಂಗಿಕವಾಗಿ ಮಹಿಳೆಯರನ್ನು ದುರ್ಬಳಕೆ ಮಾಡಿಕೊಂಡಿದ್ದಲ್ಲದೆ, ವಿಡಿಯೋ ಮತ್ತು ಆಡಿಯೋಗಳನ್ನು ಇಟ್ಟುಕೊಂಡಿದ್ದ. ನಂದಗುಡಿ, ಬೆಂಗಳೂರು, ಚಿಕ್ಕಬಳ್ಳಾಪುರ, ಬಂಗಾರಪೇಟೆ ಸೇರಿದಂತೆ 5ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿ, ಅವರಿಂದ ಲಕ್ಷಾಂತರ ರೂ. ಹಣ ಪಡೆದುಕೊಂಡಿದ್ದ ಎಂದು ಆರೋಪಿಸಲಾಗಿತ್ತು.
ಈ ಬಗ್ಗೆ ಸಂತ್ರಸ್ತ ಮಹಿಳೆಯರು ಗಿರೀಶ್ ವಿರುದ್ಧ ಚಿಂತಾಮಣಿ ನಗರಠಾಣೆಗೆ ದೂರು ನೀಡಿದ್ದರು. ದೂರು ದಾಖಲಾಗುತ್ತಿದ್ದಂತೆ ಆರೋಪಿ ಸೂಸೈಡ್ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪೋಲೀಸರು ತನಿಖೆ ಕೈಗೊಂಡಿದ್ದಾರೆ.

