Home Blog Page 8

RCB vs CSK: ಆರಂಭದಲ್ಲಿ ಪಿಚ್ ನಿಧಾನವಾಗಿತ್ತು: ಗೆಲುವಿನ ಬಳಿಕ ಕ್ಯಾಪ್ಟನ್‌ ಹೇಳಿದ್ದೇನು..?

0

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಐಪಿಎಲ್ 11ನೇ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ RCB, 20 ಓವರ್‌ಗಳಲ್ಲಿ 250 ರನ್‌ಗಳ ಭಾರೀ ಮೊತ್ತ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸಿಎಸ್ಕೆ 19.4 ಓವರ್‌ಗಳಲ್ಲಿ 207 ರನ್‌ಗಳಿಗೆ ಸೀಮಿತಗೊಂಡು 43 ರನ್‌ಗಳಿಂದ ಸೋಲನುಭವಿಸಿತು.

ಗೆಲುವಿನ ಬಳಿಕ ಮಾತನಾಡಿದ RCB ನಾಯಕ ರಜತ್ ಪಾಟಿದಾರ್, ತಂಡದ ಸಾಂಘಿಕ ಪ್ರದರ್ಶನವನ್ನು ಶ್ಲಾಘಿಸಿದರು. ಆರಂಭದಲ್ಲಿ ಪಿಚ್ ನಿಧಾನವಾಗಿತ್ತು. ಆದರೆ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಉತ್ತಮ ಆರಂಭ ನೀಡಿದರು. ಅವರ ಬ್ಯಾಟಿಂಗ್ ಅದ್ಭುತವಾಗಿತ್ತು ಎಂದು ಹೇಳಿದರು.

13ನೇ ಓವರ್ ನಂತರ ಆಟದ ವೇಗ ಹೆಚ್ಚಿಸಿದ ಬಗ್ಗೆ ಮಾತನಾಡಿದ ಅವರು, ಬೌಲರ್‌ಗಳ ಮೇಲೆ ಒತ್ತಡ ಹೇರುವುದು ನಮ್ಮ ಯೋಜನೆ ಆಗಿತ್ತು. ಅದನ್ನು ನಾನು ಮತ್ತು ಟಿಮ್ ಡೇವಿಡ್ ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ ಎಂದರು.

ಟಿಮ್ ಡೇವಿಡ್ ವಿಶ್ವದ ಅತ್ಯುತ್ತಮ ಫಿನಿಷರ್‌ಗಳಲ್ಲಿ ಒಬ್ಬರು. ಅವರು ಹೊಡೆದ 106 ಮೀಟರ್ ಸಿಕ್ಸರ್ ಅದ್ಭುತ. ನಾನು ನಾನ್-ಸ್ಟ್ರೈಕರ್ ಎಂಡ್‌ನಿಂದ ಅದನ್ನು ಆನಂದಿಸಿದೆ. ಅವರ ಸ್ಥಿರ ಪ್ರದರ್ಶನ ತಂಡಕ್ಕೆ ದೊಡ್ಡ ಬಲ ಎಂದು ಪಾಟಿದಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ದೇಶದಲ್ಲಿ LPG ಕೊರತೆ ಇಲ್ಲ: 5 ಕೆಜಿ ಸಿಲಿಂಡರ್ ಪೂರೈಕೆ ಹೆಚ್ಚಿಸಿದ ಕೇಂದ್ರ ಸರ್ಕಾರ

0

ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ 38ನೇ ದಿನಕ್ಕೆ ಕಾಲಿಟ್ಟಿರುವ ಹಿನ್ನೆಲೆ ಎಲ್ಪಿಜಿ ಕೊರತೆ ಬಗ್ಗೆ ಆತಂಕ ವ್ಯಕ್ತವಾಗಿದ್ದರೂ, ಕೇಂದ್ರ ಸರ್ಕಾರ ಜನರಿಗೆ ಭರವಸೆ ನೀಡಿದೆ.

ದೇಶದಲ್ಲಿ ಎಲ್ಪಿಜಿ ಕೊರತೆ ಇಲ್ಲ, ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಜನರು ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇದೇ ವೇಳೆ ಕೊರತೆ ನೀಗಿಸುವ ಉದ್ದೇಶದಿಂದ 5 ಕೆಜಿ ಗ್ಯಾಸಿನ ಸಣ್ಣ ಸಿಲಿಂಡರ್‌ಗಳ ಪೂರೈಕೆಯನ್ನು ಹೆಚ್ಚಿಸಲಾಗಿದೆ.

ಸರ್ಕಾರದ ಮಾಹಿತಿ ಪ್ರಕಾರ, 5 ಕೆಜಿ ತೂಕದ ಎಲ್ಪಿಜಿ ಸಿಲಿಂಡರ್‌ಗಳು ಎಲ್ಲಾ ಗ್ಯಾಸ್ ಏಜೆನ್ಸಿಗಳಲ್ಲೂ ಲಭ್ಯವಿದ್ದು, ಗ್ರಾಹಕರು ಯಾವುದೇ ಒಂದು ಗುರುತಿನ ಚೀಟಿ ತೋರಿಸಿ ಸುಲಭವಾಗಿ ಖರೀದಿಸಬಹುದು. ವಾಸಸ್ಥಳದ ದಾಖಲೆ ಸಲ್ಲಿಸುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಈ ಸಣ್ಣ ಸಿಲಿಂಡರ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಕಳೆದ ಮಾರ್ಚ್ 23ರಿಂದ ದೇಶಾದ್ಯಂತ ಸುಮಾರು 6.6 ಲಕ್ಷ ಸಿಲಿಂಡರ್‌ಗಳು ಮಾರಾಟವಾಗಿವೆ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.

ಮನೆ ಬಳಕೆ, ಸಾರಿಗೆ ಹಾಗೂ ಇತರ ಅಗತ್ಯ ಸೇವೆಗಳಿಗಾಗಿ ಪೆಟ್ರೋಲ್, ಡೀಸೆಲ್ ಮತ್ತು ಅನಿಲ ಪೂರೈಕೆ ನಿರಂತರವಾಗಿರಲಿದೆ. ಏಪ್ರಿಲ್ 6ರಿಂದ ರಸಗೊಬ್ಬರ ಘಟಕಗಳಿಗೆ ಅನಿಲ ಪೂರೈಕೆ ಸರಾಸರಿ ಬಳಕೆಯ 90% ಮಟ್ಟಕ್ಕೆ ಹೆಚ್ಚಾಗುವ ನಿರೀಕ್ಷೆಯಿದೆ.

ದೇಶಾದ್ಯಂತ ಎಲ್ಲಾ ಸಂಸ್ಕರಣಾಗಾರಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾಕಷ್ಟು ಕಚ್ಚಾ ತೈಲ ಸಂಗ್ರಹ ಇದೆ. ಪೆಟ್ರೋಲ್ ಬಂಕ್‌ಗಳಲ್ಲೂ ಸಮರ್ಪಕ ದಾಸ್ತಾನು ಇರುವುದಾಗಿ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಕಲ್ಲಂಗಡಿ ಬೆಳೆ ಹಾಳು- ಯುದ್ಧದ ಪರಿಣಾಮಕ್ಕೆ ಗದಗ ರೈತರ ಕಣ್ಣೀರು!

0

ಗದಗ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಗದಗ ಜಿಲ್ಲೆಯ ಕಲ್ಲಂಗಡಿ ಬೆಳೆಗಾರರ ಮೇಲೆ ಭಾರೀ ಪರಿಣಾಮ ಬೀರಿದೆ. ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದಲ್ಲಿ ಕಟಾವು ಮಾಡಿದ ಕಲ್ಲಂಗಡಿ ಮಾರಾಟವಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಾಗಡಿ ಗ್ರಾಮ ಕಲ್ಲಂಗಡಿ ಬೆಳೆಗೆ ಪ್ರಸಿದ್ಧಿಯಾಗಿದ್ದು, ಈ ಬಾರಿ ಆಲಿಕಲ್ಲು ಮಳೆಯಿಂದ ಬೆಳೆ ಹಾನಿಯಾಗಿದ್ದರೂ ರೈತರು ಕಟಾವು ಮಾಡಿಕೊಂಡಿದ್ದರು. ಆದರೆ ಇದೀಗ ವ್ಯಾಪಾರಸ್ಥರು ಖರೀದಿಗೆ ಮುಂದೆ ಬರುತ್ತಿಲ್ಲ. ಇದರಿಂದ ಜಮೀನಿನಲ್ಲಿ ಶೇಖರಣೆ ಮಾಡಿಕೊಂಡಿರುವ ಕಲ್ಲಂಗಡಿ ಕೊಳೆತು ಹೋಗುತ್ತಿರುವುದು ರೈತರ ಕಳವಳಕ್ಕೆ ಕಾರಣವಾಗಿದೆ.

ಇದುವರೆಗೆ ವ್ಯಾಪಾರಸ್ಥರು ಕಲ್ಲಂಗಡಿಯನ್ನು ಬೇರೆ ರಾಜ್ಯಗಳು ಹಾಗೂ ವಿದೇಶಗಳಿಗೆ ರಫ್ತು ಮಾಡುತ್ತಿದ್ದರು. ಆದರೆ ಯುದ್ಧದ ಪರಿಣಾಮದಿಂದ ರಫ್ತು ವ್ಯವಸ್ಥೆ ಸಂಪೂರ್ಣ ಕುಂಠಿತಗೊಂಡಿದ್ದು, ಸ್ಥಳೀಯ ಮಾರುಕಟ್ಟೆಯಲ್ಲೂ ಬೇಡಿಕೆ ಕುಸಿದಿದೆ.

ಮಾಗಡಿ ಗ್ರಾಮದ ಗೋಪಾಲಗೌಡ ಭರಮಗೌಡ್ರು ಎಂಬ ರೈತನು ನಾಲ್ಕು ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆ ಬೆಳೆದಿದ್ದು, ಸುಮಾರು ನಾಲ್ಕು ರಿಂದ ಐದು ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾನೆ. ಸುಮಾರು 50ರಿಂದ 60 ಟನ್ ಕಲ್ಲಂಗಡಿ ಕಟಾವು ಮಾಡಿಕೊಂಡಿದ್ದರೂ ಮಾರಾಟವಾಗದೇ ಜಮೀನಿನಲ್ಲೇ ಹಾಳಾಗುತ್ತಿದೆ ಎಂದು ಆತ ಆತಂಕ ವ್ಯಕ್ತಪಡಿಸಿದ್ದಾನೆ.

“ಯುದ್ಧದ ಪರಿಣಾಮವಾಗಿ ಕಲ್ಲಂಗಡಿ ಯಾರೂ ಖರೀದಿ ಮಾಡುತ್ತಿಲ್ಲ. ನಾವು ಬೆಳೆದ ಬೆಳೆ ಕಣ್ಣೆದುರೇ ನಾಶವಾಗುತ್ತಿದೆ” ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ರೈತರಿಗೆ ನೆರವು ನೀಡಬೇಕು ಎಂಬುದು ರೈತರ ಒತ್ತಾಯವಾಗಿದೆ.

ಚಿನ್ನಸ್ವಾಮಿಯಲ್ಲಿ RCB ಅಬ್ಬರ: CSK ವಿರುದ್ಧ 250 ರನ್ – 18 ವರ್ಷಗಳ ಇತಿಹಾಸ ಬದಲಿಸಿದ ಬೆಂಗಳೂರು ಬಾಯ್ಸ್‌

0

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಸೂಪರ್ ಸಂಡೇ ಪಂದ್ಯದಲ್ಲಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾ ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ CSK ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇದರ ಪ್ರಯೋಜನ ಪಡೆದುಕೊಂಡ RCB ಬ್ಯಾಟ್ಸ್‌ಮನ್‌ಗಳು ಸಿಡಿಲಬ್ಬರದ ಆಟ ಪ್ರದರ್ಶಿಸಿ 20 ಓವರ್‌ಗಳಲ್ಲಿ ಬರೋಬ್ಬರಿ 250 ರನ್ ಕಲೆಹಾಕಿದರು.

ಈ ಮೂಲಕ ಐಪಿಎಲ್ ಇತಿಹಾಸದಲ್ಲಿ CSK ವಿರುದ್ಧ 250 ರನ್ ಗಳಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ RCB ಪಾತ್ರವಾಯಿತು. ಕಳೆದ 18 ವರ್ಷಗಳಲ್ಲಿ CSK ವಿರುದ್ಧ ಯಾವುದೇ ತಂಡ 235 ರನ್‌ಗಿಂತ ಹೆಚ್ಚು ಗಳಿಸಿರಲಿಲ್ಲ ಎಂಬುದು ವಿಶೇಷ.

ಇದಕ್ಕೂ ಮೊದಲು 2014ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು 2024ರಲ್ಲಿ ಗುಜರಾತ್ ಟೈಟಾನ್ಸ್ ತಂಡಗಳು ತಲಾ 231 ರನ್ ಗಳಿಸಿದ್ದು ಈವರೆಗಿನ ಗರಿಷ್ಠ ಸಾಧನೆ ಆಗಿತ್ತು.

ಆದರೆ ಈ ಬಾರಿ RCB ಬ್ಯಾಟ್ಸ್‌ಮನ್‌ಗಳು ಸಿಎಸ್ಕೆ ಬೌಲರ್‌ಗಳನ್ನು ಚೆಂಡಾಡಿ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದರು.

ಇದರೊಂದಿಗೆ RCB ತಂಡವು ಐಪಿಎಲ್‌ನಲ್ಲಿ ಒಟ್ಟು 36 ಬಾರಿ 200+ ರನ್ ಗಳಿಸಿದ ದಾಖಲೆ ನಿರ್ಮಿಸಿ, CSK ದಾಖಲೆಗೆ ಸಮನಾಗಿದೆ ಎಂಬುದು ಮತ್ತೊಂದು ವಿಶೇಷವಾಗಿದೆ.

ಸ್ನೇಹಿತನ ಮದುವೆಗೆ ಬಂದಿದ್ದ ಬೆಂಗಳೂರಿನ ಐಟಿ ಉದ್ಯೋಗಿ ಭದ್ರಾ ನದಿಯಲ್ಲಿ ಮುಳುಗಿ ಸಾವು

ಚಿಕ್ಕಮಗಳೂರು, ಏ.6: ಜಿಲ್ಲೆಯ ನರಸಿಂಹರಾಜಪುರ (ಎನ್.ಆರ್.ಪುರ) ತಾಲೂಕಿನ ಬನ್ನೂರು ಗ್ರಾಮದ ಬಳಿ ಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐಟಿ ಉದ್ಯೋಗಿಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರಂತ ಸಂಭವಿಸಿದೆ.

ಮೃತರನ್ನು ಗದಗ ಮೂಲದ ಅಭಿಷೇಕ್ (27) ಎಂದು ಗುರುತಿಸಲಾಗಿದೆ. ಅವರು ಬೆಂಗಳೂರಿನ ಖಾಸಗಿ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.

ಸ್ನೇಹಿತನ ಮದುವೆಯಲ್ಲಿ ಭಾಗವಹಿಸಲು ಸ್ನೇಹಿತರೊಂದಿಗೆ ಬಾಳೆಹೊನ್ನೂರು ಸಮೀಪದ ಬನ್ನೂರು ಗ್ರಾಮಕ್ಕೆ ಬಂದಿದ್ದ ಅಭಿಷೇಕ್, ಸ್ಥಳೀಯ ಹೋಂಸ್ಟೇನಲ್ಲಿ ವಾಸ್ತವ್ಯ ಹೂಡಿದ್ದರು. ಇಂದು ಬೆಳಿಗ್ಗೆ ಸ್ನೇಹಿತರೊಂದಿಗೆ ಭದ್ರಾ ನದಿಗೆ ಈಜಲು ತೆರಳಿದ ವೇಳೆ, ನೀರಿನ ಪ್ರಬಲ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದರು.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರು ಶೋಧ ಕಾರ್ಯಾಚರಣೆ ಕೈಗೊಂಡರು. ಗಂಟೆಗಳ ಕಾಲ ನಡೆದ ಹುಡುಕಾಟದ ಬಳಿಕ, ಬನ್ನೂರು ಸಮೀಪದ ನದಿಯಲ್ಲೇ ಅಭಿಷೇಕ್ ಅವರ ಮೃತದೇಹ ಪತ್ತೆಯಾಯಿತು.

ಮದುವೆ ಸಂಭ್ರಮದಲ್ಲಿದ್ದ ಸ್ನೇಹಿತರು ಹಾಗೂ ಕುಟುಂಬಸ್ಥರಲ್ಲಿ ಈ ಘಟನೆ ತೀವ್ರ ಶೋಕ ಮೆರೆಯಿಸಿದ್ದು, ಸಂತಸದ ವಾತಾವರಣ ಕ್ಷಣಾರ್ಧದಲ್ಲಿ ದುಃಖಕ್ಕೆ ತಿರುಗಿದೆ.

ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಎಲ್ಪಿಜಿ ಗ್ಯಾಸ್ ಸಂಕಷ್ಟ: ಆಟೋ ಚಾಲಕರ ಆಕ್ರೋಶ, ಸಚಿವ ಮುನಿಯಪ್ಪ ನಿವಾಸಕ್ಕೆ ಮುತ್ತಿಗೆ

ಬೆಂಗಳೂರು: ನಗರದಲ್ಲಿ ಉಂಟಾಗಿರುವ ಎಲ್ಪಿಜಿ ಗ್ಯಾಸ್ ಕೊರತೆ ಹೋಟೆಲ್ ಉದ್ಯಮಕ್ಕೆ ಮಾತ್ರ ಸೀಮಿತವಾಗದೇ, ಇದೀಗ ಆಟೋ ಚಾಲಕರ ಜೀವನೋಪಾಯಕ್ಕೂ ಭಾರೀ ಹೊಡೆತ ನೀಡುತ್ತಿದೆ. ಗ್ಯಾಸ್ ತುಂಬಿಸಲು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾಗಿರುವ ಪರಿಸ್ಥಿತಿಗೆ ಬೇಸತ್ತ ಚಾಲಕರು, ಆಹಾರ ಸಚಿವ ಕೆ. ಹೆಚ್ ಮುನಿಯಪ್ಪ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಹೆಬ್ಬಾಳದ ಸಂಜಯನಗರದಲ್ಲಿರುವ ಸಚಿವರ ನಿವಾಸದ ಎದುರು ಜಮಾಯಿಸಿದ ಆಟೋ ಚಾಲಕರು, “ಗ್ಯಾಸ್ ಕೊಡಿಸಲೇಬೇಕು” ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಹಲವೆಡೆ ಆಟೋಗಳಿಗೆ ಅಗತ್ಯವಿರುವ LPG ಗ್ಯಾಸ್ ಲಭ್ಯವಾಗದೆ, ದಿನನಿತ್ಯದ ಆದಾಯಕ್ಕೆ ಭಾರಿ ಹೊಡೆತ ಬಿದ್ದಿದೆ ಎಂದು ಚಾಲಕರು ಅಳಲು ತೋಡಿಕೊಂಡರು.

ಪ್ರತಿಭಟನಾಕಾರರ ಜೊತೆ ಮಾತನಾಡಿದ ಸಚಿವ ಮುನಿಯಪ್ಪ, ಕೇಂದ್ರ ಸರ್ಕಾರದಿಂದ ಪ್ರತಿದಿನ ಸುಮಾರು 3 ಸಾವಿರ ಸಿಲಿಂಡರ್‌ಗಳ ಪೂರೈಕೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿ, ಸರಬರಾಜಿನಲ್ಲಿ ವ್ಯತ್ಯಾಸ ಇಲ್ಲ ಎಂದು ಹೇಳಿದರು. ಆದರೆ ಕೆಲವು ಖಾಸಗಿ ಗ್ಯಾಸ್ ಬಂಕ್‌ಗಳಲ್ಲಿ ಹೆಚ್ಚುವರಿ ದರ ವಸೂಲಿ ನಡೆಯುತ್ತಿರುವ ಬಗ್ಗೆ ಮಾಹಿತಿ ದೊರೆತಿದ್ದು, ಬಂಕ್ ಮಾಲೀಕರೊಂದಿಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.

ಆಟೋ ಚಾಲಕರಿಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ ಸಚಿವರು, ಏಪ್ರಿಲ್ 10ರಂದು ಅಧಿಕಾರಿಗಳು ಮತ್ತು ಪೊಲೀಸರೊಂದಿಗೆ ಸಭೆ ನಡೆಸಿ ಶಾಶ್ವತ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದರು. ಇಂದು ಮಧ್ಯಾಹ್ನದ ನಂತರವೂ ಸಂಬಂಧಪಟ್ಟವರೊಂದಿಗೆ ಚರ್ಚೆ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಪ್ರತಿಭಟನೆ ವೇಳೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟರು. ಸಮಸ್ಯೆ ತಕ್ಷಣ ಪರಿಹಾರವಾಗದಿದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ವಿವಿಧ ಆಟೋ ಚಾಲಕರ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಇದರ ನಡುವೆ, ಪೀಸ್ ಆಟೋ ಸಂಘಟನೆಯ ಅಧ್ಯಕ್ಷ ರಘು ಸರ್ಕಾರದ ವಿರುದ್ಧ ಕಿಡಿಕಾರಿದ್ದು, ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಸಚಿವರು ತೆರಳುವ ಎಲ್ಲೆಡೆ ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ಹಾಗೂ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಜನಪ್ರತಿನಿಧಿಗಳ ಮನೆಗಳಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದಾರೆ.

ಕಲಬುರಗಿಯಲ್ಲಿ ಭೀಕರ ಕೊಲೆ: ಸರ್ಕಾರಿ ಶಾಲಾ ಶಿಕ್ಷಕಿ ಹತ್ಯೆ ಬಳಿಕ ಶವ ಸುಟ್ಟುಹಾಕಿದ ದುಷ್ಕರ್ಮಿಗಳು

0

ಕಲಬುರಗಿ: ಜಿಲ್ಲೆಯ ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಲೆಗೈದು, ಬಳಿಕ ಶವವನ್ನು ಸುಟ್ಟುಹಾಕಿದ ಭೀಕರ ಘಟನೆ ಬೆಳಕಿಗೆ ಬಂದಿದೆ.

ಮೃತರನ್ನು ಜ್ಯೋತಿ ಕಪಾಳೆ ಹಿರೇಮಠ (57) ಎಂದು ಗುರುತಿಸಲಾಗಿದೆ. ಇವರು ಕಲಬುರಗಿ ನಗರದ ಆನಂದ್ ಕಾಲೋನಿ ನಿವಾಸಿಯಾಗಿದ್ದು, ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಂದರಖೇಡ ಗ್ರಾಮದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಜ್ಯೋತಿ ಅವರು ಸಾಮಾನ್ಯವಾಗಿ ವಾರಕ್ಕೊಮ್ಮೆ ಕಲಬುರಗಿಗೆ ಬಂದು ಮತ್ತೆ ಬೀದರ್‌ಗೆ ತೆರಳುತ್ತಿದ್ದರು. ಇದೇ ವೇಳೆ ಕಲಬುರಗಿಯಿಂದ ಬೀದರ್‌ಗೆ ತೆರಳುವ ಮಾರ್ಗ ಮಧ್ಯೆ, ಕಮಲಾಪುರ ಸಮೀಪದ ಕಲ್ಮೂಡ ಗ್ರಾಮದಲ್ಲಿ ದುಷ್ಕರ್ಮಿಗಳು ಅವರನ್ನು ಕೊಲೆಗೈದು, ರಸ್ತೆ ಬದಿಯಲ್ಲಿ ಪೆಟ್ರೋಲ್ ಸುರಿದು ಶವವನ್ನು ಸುಟ್ಟುಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರಂಭದಲ್ಲಿ ಅಪರಿಚಿತ ಶವ ಪತ್ತೆ ಪ್ರಕರಣವಾಗಿ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖೆ ವೇಳೆ ಮೃತರ ಗುರುತು ಪತ್ತೆಹಚ್ಚಿದ್ದಾರೆ. ಈ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತನಿಖೆ ಮುಂದುವರಿದಿದೆ.

ಹಾವೇರಿಯಲ್ಲಿ ಘೋರ ದುರಂತ: ಟ್ರ್ಯಾಕ್ಟರ್ ಹರಿದು 2 ವರ್ಷದ ಪುಟ್ಟ ಕಂದಮ್ಮ ಸಾವು!

0

ಹಾವೇರಿ:  ಹಾವೇರಿ ಜಿಲ್ಲೆಯಲ್ಲಿ ಘೋರ ದುರಂತ ಸಂಭವಿಸಿದ್ದು, ಮನೆಯ ಮುಂದೆ ನಿಂತಿದ್ದ 2 ವರ್ಷದ ಮಗುವಿನ ಮೇಲೆ ಟ್ರ್ಯಾಕ್ಟರ್ ಹರಿದು ಮಗು ಸ್ಥಳದಲ್ಲಿಯೇ ಮೃತ ಪಟ್ಟಿರುವ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನ ಹಳೆಬಂಕಾಪುರ ಗ್ರಾಮದಲ್ಲಿ ನಡೆದಿದೆ.

ರಬೀಯಾ ದೊಡ್ಡಮನಿ (2) ಮೃತ ಮಗು ಎಂದು ಗುರುತಿಸಲಾಗಿದೆ. ಮನೆಯ ಮುಂದೆ ನಿಂತಿದ್ದ ಮಗುವಿನ ಮೇಲೆ ಏಕಾಏಕಿ ಟ್ರ್ಯಾಕ್ಟರ್ ಹರಿದು ಸಾವನ್ನಪ್ಪಿದೆ. ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದಾನೆ. ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇಂದೂ ಗುಡುಗು ಸಹಿತ ಮಳೆಯಾಗುವ ಸಂಭವ: 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​!

ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯ ಅಬ್ಬರ ಮುಂದುವರಿದಿದ್ದು, ಇಂದೂ ಸಹ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಕಲಬುರ್ಗಿ, ಧಾರವಾಡ, ಗದಗ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಕರಾವಳಿ ಭಾಗಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿದಂತೆ, ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ರಾಯಚೂರು ಹಾಗೂ ಕಲಬುರ್ಗಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ.

ಇನ್ನೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಹಾಸನ, ಚಾಮರಾಜನಗರ, ಮೈಸೂರು, ಮಂಡ್ಯ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಗಂಟೆಗೆ 30–40 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಮಳೆಯ ತೀವ್ರತೆ ಹೆಚ್ಚಿರಲಿದೆ. ಗುಡುಗು, ಮಳೆ ಹಾಗೂ ಗಾಳಿಯ ಹಿನ್ನೆಲೆ ಜನರು ಅಗತ್ಯವಿದ್ದರೆ ಮಾತ್ರ ಹೊರಗೆ ತೆರಳುವುದು, ಮರಗಳ ಕೆಳಗೆ ನಿಲ್ಲದಿರುವುದು ಹಾಗೂ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ.

ಬೈಕ್‌ಗೆ ಡಿಕ್ಕಿ ಹೊಡೆದ ಗೂಡ್ಸ್ ವಾಹನ: ಅರಣ್ಯ ಇಲಾಖೆಯ ಇಬ್ಬರು ವಾಚರ್ಸ್ ಸ್ಥಳದಲ್ಲೇ ಸಾವು

0

ಬಳ್ಳಾರಿ: ಬೈಕ್‌ಗೆ ಹಿಂಬದಿಯಿಂದ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಅರಣ್ಯ ಇಲಾಖೆಯ ಇಬ್ಬರು ವಾಚರ್ಸ್ ಮೃತಪಟ್ಟಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ವೆಂಕಟಾಪುರ ಗ್ರಾಮದ ಬಳಿ ನಡೆದಿದೆ.

ಮೃತರನ್ನು ಕಮಲಾಪುರದ ಕೃಷ್ಣ (26) ಮತ್ತು ವೆಂಕಟಾಪುರದ ಹನುಮಂತಪ್ಪ (50) ಎಂದು ಗುರುತಿಸಲಾಗಿದೆ. ಇವರು ಹೊರಗುತ್ತಿಗೆ ಆಧಾರದ ಮೇಲೆ ಅರಣ್ಯ ಇಲಾಖೆಯಲ್ಲಿ ವಾಚರ್ಸ್ ಆಗಿ ಕೆಲಸ ಮಾಡುತ್ತಿದ್ದರು.

ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಬೈಕ್‌ಗೆ ಹಿಂಬದಿಯಿಂದ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದ ಬಳಿಕ ಪರಾರಿಯಾಗಲು ಯತ್ನಿಸಿದ ಬುಲೇರೋ ಗೂಡ್ಸ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸ್ಥಳಕ್ಕೆ ರಾಜೇಶ್ ಭಟಗುರ್ಕಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

 

error: Content is protected !!