Home Blog Page 7

ಮತಾಂತರ ಜಾಲಕ್ಕೆ ಕಡಿವಾಣ ಹಾಕಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಅಲ್ಪವಯಿ ಹಿಂದೂ ಬಾಲಕನನ್ನು ಮತಾಂತರಗೊಳಿಸುವ ಉದ್ದೇಶದಿಂದ ಅಪಹರಿಸಿ ಜೀತಕ್ಕೆ ಇಟ್ಟುಕೊಂಡ ಮುಸ್ಲಿಂ ಸಮಾಜದ ಯುವಕನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನಾ ಕಾರ್ಯಕರ್ತರು ತಹಸೀಲ್ದಾರ ಧನಂಜಯ ಎಂ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಶ್ರೀರಾಮ ಸೇನೆ ತಾಲೂಕಾಧ್ಯಕ್ಷ ಈರಣ್ಣ ಪೂಜಾರ, ಜಿಲ್ಲೆಯಾದ್ಯಂತ ಮುಗ್ಧ ಹಿಂದೂಗಳನ್ನು ಬಲವಂತದಿಂದ, ಪುಸಲಾಯಿಸಿ ಮತಾಂತರಗೊಳಿಸುವ ಜಾಲ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಇದಕ್ಕೆ ಕಡಿವಾಣ ಹಾಕುವ ಕಾರ್ಯಗಳು ನಡೆಯುತ್ತಿಲ್ಲ. ಹಿಂದೆ ಹಿಂದೂ ಯುವತಿಯರನ್ನು ಪ್ರೀತಿಯ ಬಲೆಗೆ ಬೀಳಿಸಿ ಮದುವೆಯಾಗಿ ಮತಾಂತರ ಮಾಡಿರುವ ಘಟನೆಗಳು ನಡೆದಿದ್ದು, ಇದೀಗ ಪಟ್ಟಣದ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಅಪ್ರಾಪ್ತ ಬಾಲಕನನ್ನು ಪಟ್ಟಣದ ಮುಸ್ಲಿಂ ಯುವಕ ಅಪಹರಿಸಿ ಕಳೆದ 45 ದಿನಗಳಿಂದ ಈ ಬಾಲಕನನ್ನು ಹುಬ್ಬಳ್ಳಿಯಲ್ಲಿ ಒತ್ತಾಯದಿಂದ ಹೋಟೆಲ್ ಒಂದರಲ್ಲಿ ಜೀತಕ್ಕಿಟ್ಟಿರುವುದು ಬೆಳಕಿಗೆ ಬಂದಿದೆ. ಈ ಕೃತ್ಯವೆಸಗಿದ ವ್ಯಕ್ತಿಯ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಮನವಿ ಮಾಡುವದಾಗಿ ಹೇಳಿದರು.

ತಹಸೀಲ್ದಾರ ಧನಂಜಯ ಎಂ ಮನವಿ ಸ್ವೀಕರಿಸಿದರು. ಈ ವೇಳೆ ಶ್ರೀರಾಮ ಸೇನೆ ಕಾರ್ಯಕರ್ತರಾದ ಬಾಲಕನ ತಂದೆ ಶರಣಪ್ಪ ಗಣಧಿನಿ, ತಾಯಿ ರೂಪಾ ಗಣಧಿನಿ, ಗಂಗಾಧರ ಮೆಣಸಿನಕಾಯಿ, ಮಂಜುನಾಥ ಹೊಗೆಸೊಪ್ಪಿನ, ವಿಜಯ ಕುಂಬಾರ, ಪ್ರವೀಣ ಬೋಮಲೆ, ಹರೀಶ ಗೋಸಾವಿ, ಬಸವರಾಜ ಕಲ್ಲೂರ, ಕುಮಾರ ಕಣವಿ, ಆದೇಶ ಸವಣੂਰ, ಪ್ರಾಣೇಶ ವ್ಯಾಪಾರಿ, ಸೋಮು ಗೌರಿ, ವಿನಾಯಕ ಸಪ್ಲಡಂ, ಕಿರಣ ಮಹಾಂತಶೆಟ್ಟರ, ವಿಶಾಲ ಬಟಗುರ್ಕಿ, ಯಶವಂತ ಬಳ್ಳಾರಿ, ಸಂತೋಷ ಬೋಮಲೆ ಮುಂತಾದವರು ಹಾಜರಿದ್ದರು.

ನ. 22ರಂದು ಜಿಲ್ಲಾ ಯುವ ಕಾಂಗ್ರೆಸ್ ಸಭೆ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಮುಂಬರುವ ಪಶ್ಚಿಮ ಪದವೀಧರರ ವಿಧಾನ ಪರಿಷತ್ ಚುನಾವಣೆ ಪ್ರಯುಕ್ತ ಮತದಾರರ ಪಟ್ಟಿಯಲ್ಲಿ ಪದವೀಧರರ ಹೆಸರನ್ನು ನೋಂದಣಿ ಮಾಡಿಸುವ ಕುರಿತು ನಗರದ ದಿ. ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿರುವ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ನ. 22ರಂದು ಬೆಳಿಗ್ಗೆ 11 ಗಂಟೆಗೆ ಸಭೆ ಜರುಗಲಿದೆ.

ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣಗೌಡ ಎಚ್. ಪಾಟೀಲ ಅವರು ಸಭೆಯ ಅಧ್ಯಕ್ಷತೆ ವಹಿಸುವರು. ಯುವ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು, ಮುಖಂಡರು ಹಾಗೂ ಯುವ ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಪ್ರಕಟಣೆ ತಿಳಿಸಿದೆ.

ನ. 24ರಿಂದ ಶಿರಹಟ್ಟಿಯಲ್ಲಿ ಪಿಎಸ್‌ಐ ಈರಣ್ಣ ರಿತ್ತಿ ವರ್ಗಾವಣೆಗೆ ಆಗ್ರಹಿಸಿ ಅನಿರ್ದಿಷ್ಟ ಧರಣಿ

0

ವಿಜಯಸಾಕ್ಷಿ ಸುದ್ದಿ, ಗದಗ: ಮುಗ್ಧ ರೈತನ ಮೇಲೆ ತೀವ್ರ ಹಲ್ಲೆ ನಡೆಸಿ ಸಹಸ್ರಾರು ರೂಪಾಯಿಗಳನ್ನು ಎಗರಿಸಿರುವ ಶಿರಹಟ್ಟಿ ಪಿಎಸ್‌ಐ ಈರಣ್ಣ ರಿತ್ತಿ ಅವರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ನ. 24ರಿಂದ ಶಿರಹಟ್ಟಿ ತಹಸೀಲ್ದಾರ ಕಚೇರಿಯ ಆವರಣದಲ್ಲಿ ನೂರಾರು ಜನ ಹಿಂದೂ ಬಾಂಧವರು, ರೈತರು ಅನಿರ್ದಿಷ್ಟಾವಧಿ ಧರಣಿ ನಡೆಸಲಿದ್ದಾರೆ ಎಂದು ಹಿಂದೂ ಸಂಘಟನೆಗಳ ಹೋರಾಟಗಾರ ರಾಜೂ ಖಾನಪ್ಪನವರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಶಿರಹಟ್ಟಿ ಪಿಎಸ್‌ಐ ಈರಣ್ಣ ರಿತ್ತಿ ಕಳೆದ 15 ದಿನಗಳ ಹಿಂದೆ ಜಮೀನಿನಿಂದ ಮನೆಗೆ ವಾಪಸ್ಸು ಬರುತ್ತಿದ್ದ ರೈತ ಸೋಮಪ್ಪ ಬೂದಪ್ಪ ಲಮಾಣಿ ಎಂಬುವವರ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ತಮ್ಮ ಮೇಲೆ ಏಕೆ ಹಲ್ಲೆ ನಡೆಸುತ್ತಿದ್ದೀರೆಂದು ಪ್ರಶ್ನಿಸಿದ ಸೋಮಪ್ಪ ಲಮಾಣಿ ಬಳಿ ಇದ್ದ 32 ಸಾವಿರ ರೂಪಾಯಿಗಳನ್ನು ಕಸಿದುಕೊಂಡು ಈಸ್ಟೇಟಾಟದಲ್ಲಿ ತೊಡಗಿದ್ದಂತೆ ಪ್ರಕರಣ ದಾಖಲಿಸಿದ್ದಾರೆಂದು ಆರೋಪಿಸಿದರು.

ಜಮೀನಿನಿಂದ ಮನೆಗೆ ತೆರಳುತ್ತಿದ್ದ ವ್ಯಕ್ತಿಯ ಮೇಲೆ ದೌರ್ಜನ್ಯ ನಡೆಸಿ ಹಣ ಕಸಿದುಕೊಂಡದ್ದನ್ನು ಪ್ರಶ್ನಿಸಿದ್ದಕ್ಕೆ ಪಿಎಸ್‌ಐ ಈರಣ್ಣ ರಿತ್ತಿ ಸೋಮಪ್ಪ ಲಮಾಣಿಗೆ ಮನಬಂದಂತೆ ಬೈದು ಜಾತಿ ನಿಂದನೆ ಮಾಡಿದ್ದಾರೆ. ಓರ್ವ ಪೊಲೀಸ್ ಅಧಿಕಾರಿಯೇ ವಿನಾಕಾರಣ ರೈತರ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದಲ್ಲಿ ಯಾರ ಬಳಿ ನ್ಯಾಯ ಕೇಳಬೇಕೆಂದು ಪ್ರಶ್ನಿಸಿದರು.

ಶಿರಹಟ್ಟಿ ಪಿಎಸ್‌ಐ ಈರಣ್ಣ ರಿತ್ತಿ ಈ ಹಿಂದೆ ಅನೇಕ ವರ್ಷಗಳ ಕಾಲ ಶಿರಹಟ್ಟಿ ಪಿಎಸ್‌ಐ ಆಗಿಯೇ ಕಾರ್ಯನಿರ್ವಹಿಸಿದ್ದಾರೆ. ಶಿರಹಟ್ಟಿ ತಾಲೂಕಿನಲ್ಲಿನ ಆಕ್ರಮಗಳಿಂದಾಗಿ ಪ್ರತಿ ತಿಂಗಳೂ ಯಥೇಚ್ಛವಾಗಿ ಅಕ್ರಮ ಹಣ ಸಂಪಾದಿಸುತ್ತಿರುವ ಈರಣ್ಣ ರಿತ್ತಿ ಶಿರಹಟ್ಟಿ ತಾಲೂಕು ಬಿಟ್ಟು ಕದಲಲು ತಯಾರಿಲ್ಲ. ಕಳೆದ ವರ್ಷದ ವಿಜಯದಶಮಿಯಂದು ಲಕ್ಷ್ಮೇಶ್ವರದ ಪಿಎಸ್‌ಐ ಆಗಿದ್ದ ಸಂದರ್ಭದಲ್ಲಿ ಶಾಂತಿಯುತವಾಗಿ ದುರ್ಗಾ ಮೂರ್ತಿಯನ್ನು ವಿಸರ್ಜಿಸಿ ಮನೆಗೆ ತೆರಳುತ್ತಿದ್ದ ಮುಗ್ಧ ಗೋಸಾವಿ ಜನಾಂಗದ ಮೇಲೆ ಲಾಠಿಯಿಂದ ಥಳಿಸಿದ್ದರು. ಈ ಘಟನೆಯನ್ನು ಖಂಡಿಸಿ ತಹಸೀಲ್ದಾರ ಕಚೇರಿ ಮುಂದೆ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಗೋಸಾವಿ ಜನಾಂಗದವರು 10 ದಿನಗಳ ಕಾಲ ಅಹೋರಾತ್ರಿ ಧರಣಿ ಸತ್ಯಾಗ್ರಹ, ಲಕ್ಷ್ಮೇಶ್ವರ ಬಂದ್‌ನಂತೆ ಹೋರಾಟ ನಡೆಸಿದ ನಂತರ ಅಂದಿನ ಪೊಲೀಸ್ ವೀರಶ್ಠಾಧಿಕಾರಿಯಾಗಿದ್ದ ಬಾಬಾಸಾಹೇಬ ನೇಮಗೌಡ ರಿತ್ತಿ ಅವರನ್ನು ಬೆಳಗಾವಿಗೆ ವರ್ಗಾಯಿಸಿದ್ದರು. ಇದೀಗ ಮತ್ತೆ ಶಿರಹಟ್ಟಿ ಪಿಎಸ್‌ಐ ಆಗಿ ಆಗಮಿಸಿದ್ದಾರೆಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಸತೀಶ ಕುಂಬಾರ, ಸಂತೋಷ ಕುರಿ, ಕುಮಾರ ನಡಗೇರಿ, ಶಿವಯೋಗಿ ಹಿರೇಮಠ, ವೆಂಕಟೇಶ ದೊಡ್ಡಮನಿ, ಗಂಗವ್ವ ಲಮಾಣಿ, ಪ್ರಕಾಶ ಬಡೆಣ್ಣವರ, ಪರಶುರಾಮ ಡೊಂಕಬಳ್ಳಿ, ನಿಖಿಲ ಗೋಸಾವಿ, ಕಿರಣ ಹಿರೇಮಠ ಮುಂತಾದವರಿದ್ದರು.

ಸರಕಾರ ಕೂಡಲೇ ಶಿರಹಟ್ಟಿ ಪಿಎಸ್‌ಐ ಈರಣ್ಣ ರಿತ್ತಿ ಅವರನ್ನು ಗದಗ ಜಿಲ್ಲೆಯಿಂದ ಬೇರೆ ಕಡೆಗೆ ವರ್ಗಾಯಿಸಬೇಕು. ಒಂದು ವೇಳೆ ವರ್ಗಾಯಿಸದಿದ್ದಲ್ಲಿ ಧರಣಿ ಸತ್ಯಾಗ್ರಹ, ರಸ್ತೆ ತಡೆ, ಅಹೋರಾತ್ರ ಧರಣಿ, ಉಪವಾಸ ಸತ್ಯಾಗ್ರಹ, ಶಿರಹಟ್ಟಿ ಬಂದ್‌ನಂತೆ ಉಗ್ರ ಹೋರಾಟ ಪ್ರಾರಂಭಿಸುವುದು ಅನಿವಾರ್ಯವಾಗುತ್ತದೆ ಎಂದು ರಾಜೂ ಖಾನಪ್ಪನವರ ಎಚ್ಚರಿಸಿದರು.

ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಹೋರಾಟಕ್ಕೆ ಸ್ಪಂದಿಸಿದ ಸರ್ಕಾರ: ಪ್ರತಿಭಟನಾ ಸ್ಥಳದಲ್ಲಿ ರೈತರ ವಿಜಯೋತ್ಸವ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬೆಂಬಲ ಬೆಲೆಗೆ ಗೋವಿನಜೋಳ ಖರೀದಿಸಬೇಕು ಎಂದು ಲಕ್ಷ್ಮೇಶ್ವರದಲ್ಲಿ ಸಮಗ್ರ ರೈತ ಹೋರಾಟ ಸಂಘಟನೆಗಳ ಒಕ್ಕೂಟ ಮತ್ತು ಮಠಾಧೀಶರ ನೇತೃತ್ವದಲ್ಲಿ ಕಳೆದ ಒಂದು ವಾರದಿಂದ ನಡೆಸುತ್ತಿದ್ದ ಕಠಿಣ ಉಪವಾಸ ಸತ್ಯಾಗ್ರಹದ ಹೋರಾಟಕ್ಕೆ ಸ್ಪಂದಿಸಿದ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ ಹಿನ್ನೆಲೆಯಲ್ಲಿ ರೈತರು ಧರಣಿ ಸ್ಥಳದಲ್ಲಿ ಸಂಭ್ರಮ ಆಚರಿಸಿದರು.

ಶುಕ್ರವಾರ ಸಿಎಂ ನೇತೃತ್ವದ ತುರ್ತು ಸಭೆ ಕರೆದು ಮೊದಲ ಹಂತದಲ್ಲಿ ರಾಜ್ಯದಲ್ಲಿ 10 ಲಕ್ಷ ಮೆಟ್ರಿಕ್ ಟನ್ ಗೋವಿನಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಾಗುವುದು ಎಂಬ ನಿರ್ಧಾರ ಪ್ರಕಟಿಸಿತು. ಈ ನಿರ್ಧಾರದಿಂದ ರೈತರು ನೆಮ್ಮದಿ ನಿಟ್ಟುಸಿರುಬಿಟ್ಟರು.

ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಮಾರ ಮಹಾರಾಜ ಶ್ರೀಗಳು ಧರಣಿ ಸ್ಥಳಕ್ಕೆ ಬಂದು ಉಪವಾಸ ಸತ್ಯಾಗ್ರಹ ನಿಲ್ಲಿಸಿದರು. ಈ ಸಂದರ್ಭದಲ್ಲಿ ಸ್ವಾಮೀಜಿ ಅವರ ಪೂರ್ವಾಶ್ರಮದ ತಂದೆ ನಾಗಪ್ಪ, ತಾಯಿ ಶಂಕ್ರವ್ವ ದುಃಖ ಭರಿತರಾಗಿ ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ಭೇಟಿ ಮಾಡಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರು, ಲಕ್ಷ್ಮೇಶ್ವರದಲ್ಲಿ ನಡೆದ ಶ್ರೀಗಳ ನೇತೃತ್ವದ ಹೋರಾಟ ಸರ್ಕಾರದ ಗಮನ ಸೆಳೆದಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಸರ್ಕಾರದೊಂದಿಗೆ ನಿರಂತರ ಪತ್ರ ವ್ಯವಹಾರ ಸಂಪರ್ಕದಲ್ಲಿದ್ದರು. ಶುಕ್ರವಾರ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಚಿವರು ರೈತರ ಪರಿಸ್ಥಿತಿ ಮನವರಿಕೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ 10 ಲಕ್ಷ ಮೆಟ್ರಿಕ್ ಟನ್ ಗೋವಿನವನ್ನು ಬೆಂಬಲ ಬೆಲೆಯಡಿ ಖರೀದಿಸಲು ಸರ್ಕಾರ ತೀರ್ಮಾನಿಸಿದೆ. ಲಕ್ಷ್ಮೇಶ್ವರದಲ್ಲಿ ಮೊದಲು ಖರೀದಿ ಕೇಂದ್ರ ಕಾರ್ಯಾರಂಭಕ್ಕೆ ಕ್ರಮ ಕೈಗೊಳ್ಳುತ್ತೇವೆ. ದಯವಿಟ್ಟು ಶ್ರೀಗಳು ಉಪವಾಸ ಬಿಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶ್ರೀಗಳು ಎಳೆನೀರು ಸೇವಿಸಿ ಸಮ್ಮತಿಸಿದರು. ಈ ವೇಳೆ ಅಪರ ಜಿಲ್ಲಾಧಿಕಾರಿ ದುರಗೆಶ್ ಕೆ.ಆರ್ ಮತ್ತು ಉಪವಿಭಾಗಾಧಿಕಾರಿ ಗಂಗಪ್ಪ ಎಂ ಇದ್ದರು.

ಖರೀದಿ ಕೇಂದ್ರ ತೆರೆಯುವ ಕುರಿತು ಸರ್ಕಾರದ ಅಧಿಕೃತ ಆದೇಶ ಪ್ರತಿ ಬರುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಮತ್ತು ಮೊದಲು ಖರೀದಿ ಕೇಂದ್ರ ಹೋರಾಟದ ವೇದಿಕೆಯಲ್ಲಿಯೇ ಉದ್ಘಾಟನೆಯಾಗಬೇಕು. ಅಲ್ಲಿಯವರೆಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಂದುವರೆಸುತ್ತೇವೆ ಎಂಬ ಒಮ್ಮತದ ನಿಲುವನ್ನು ಪ್ರತಿಭಟನಾಕಾರರು ವ್ಯಕ್ತಪಡಿಸಿದರು.

ಈ ವೇಳೆ ಹೋರಾಟದ ನೇತೃತ್ವ ವಹಿಸಿರುವ ಮಂಜುನಾಥ ಮಾಗಡಿ, ರವಿಕಾಂತ ಅಂಗಡಿ, ನಾಗರಾಜ ಚಿಂಚಲಿ, ಶರಣು ಗೋಡಿ, ಉಪವಾಸ ನಿರತ ಬಸಣ್ಣ ಬೆಂಡಿಗೇರಿ, ಪೂರ್ಣಾಜಿ ಖರಾಟೆ, ವಕೀಲರಾದ ಎಂ.ಎಸ್. ದೊಡ್ಡಗೌಡ್ರ ಮಾತನಾಡಿ, ಈ ಹೋರಾಟದ ಜಯ ಮಠಾಧೀಶರು ಮತ್ತು ರೈತರಿಗೆ, ಜಿಲ್ಲಾಧಿಕಾರಿಗಳಿಗೆ ಸಲ್ಲುತ್ತದೆ. ಅನ್ನದಾತ ಒಗ್ಗಟ್ಟಾಗಿ ಹೋರಾಟ ಮಾಡಿದರೆ ಜಯ ಇದ್ದೇ ಇರುತ್ತದೆ ಎಂಬುದಕ್ಕೆ ಈ ಹೋರಾಟವೇ ಸಾಕ್ಷಿಯಾಗಿದೆ ಎಂದರು.

ಕುಂದಗೋಳದ ಬಸವಣ್ಣಜ್ಜ ಸ್ವಾಮೀಜಿ ಮಾತನಾಡಿ, ರೈತರು ಹೋರಾಟಕ್ಕೆ ಇಳಿಯುವ ಮುನ್ನವೇ ಸರ್ಕಾರ ಎಚ್ಚೆತ್ತು ಅವರ ಸಮಸ್ಯೆ ಪರಿಹರಿಸಲು ಮುಂದಾಗಬೇಕು ಎಂದು ತಿಳಿಸಿದರು.

ಬಟಗುರ್ಕಿಯ ಗದಗೆಯ್ಯ ದೇವರು, ಮಾಜಿ ಶಾಸಕ ರಾಮಣ್ಣ ಲಮಾಣಿ, ಮಹೇಶ ಹೊಗೆಸೊಪ್ಪಿನ, ಚಂದ್ರಣ್ಣ ಮುಂಡವಾಡ, ಶಿವಣ್ಣ ಬಂಕಾಪುರ, ಶಿವನಗೌಡ್ರ ಪಾಟೀಲ, ವೀರೇಂದ್ರಗೌಡ ಪಾಟೀಲ, ಟಾಕಪ್ಪ ಸಾತಪುತೆ, ಸೋಮಣ್ಣ ಡಾಣಗಲ್ಲ, ಸುರೇಶ, ಅಭಯ ಜೈನ್, ದಾದಾಪೀರ್ ಮುಚ್ಛಾಲೆ, ಶಿವಾನಂದ ಲಿಂಗಶೆಟ್ಟಿ, ಗುರಪ್ಪ ಮುಳಗುಂದ, ವಿರುಪಾಕ್ಷಪ್ಪ ಮುದಕಣ್ಣವರ, ಪವನ ಬಂಕಾಪುರ, ಸುರೇಶ ಹಟ್ಟಿ, ರಾಮಣ್ಣ ಗೌರಿ, ಪ್ರಕಾಶ ಕೊಂಚಿಗೇರಿಮಠ ಸೇರಿದಂತೆ ಮತ್ತಿತರರು ಇದ್ದರು.

ಶುಕ್ರವಾರ ಬೆಳಿಗ್ಗೆಯಿಂದಲೂ ಹೋರಾಟ ಮುಂದುವರೆಸಿದ್ದ ರೈತರು ಬೆಳಿಗ್ಗೆ ಕುಂದಗೋಳ ಶ್ರೀಗಳ ನೇತೃತ್ವದಲ್ಲಿ ಪಾಳಾ-ಬಾದಾಮಿ ರಸ್ತೆಯಲ್ಲಿ ಬಾರಕೋಲು ಚಳುವಳಿ ಮಾಡಿ ಪ್ರತಿಭಟಿಸಿದ್ದರು. ಜೋಗತಿ ಭರಮಮ್ಮ ಬಸಾಪುರ, ನಾಮದೇವ ಮಾಂಡ್ರೆ ಜಾನಪದ ಗೀತೆಗಳ ಮೂಲಕ ಗಮನ ಸೆಳೆದಿದ್ದರು.

 

ದೀಪೋತ್ಸವ ಮನಸ್ಸಿನ ಅಂಧಕಾರವನ್ನೂ ಕಳೆಯುತ್ತದೆ

0

ವಿಜಯಸಾಕ್ಷಿ ಸುದ್ದಿ, ಗದಗ: ಹಿಂದೂ ಧರ್ಮದಲ್ಲಿ ಬರುವ ಮಾಸಗಳಲ್ಲಿ ಅತ್ಯಂತ ಶ್ರೇಷ್ಠವಾದ ಮಾಸವೆಂದರೆ ಕಾರ್ತಿಕ ಮಾಸ. ಈ ಮಾಸದಲ್ಲಿ ಉಪವಾಸ ವ್ರತ ಸೇರಿ ಕೆಲವೊಂದು ಆಚರಣೆಗಳನ್ನು ಪಾಲಿಸಿದರೆ ಸಕಲ ಪಾಪಗಳು ಕಳೆದು, ಪುಣ್ಯಪ್ರಾಪ್ತಿಯಾಗುವ ಜೊತೆಗೆ ಧರ್ಮದ ಹಾದಿಯಿಂದ ಕಾನೂನು ಪರಿಪಾಲಕರಾಗಿ ಬದುಕಲು ಸಾಧ್ಯವಾಗುವದೆಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಅಭಿಪ್ರಾಯಪಟ್ಟರು.

ಅವರು ಶ್ರೀ ಕೈಲಾಸ ವರಸಿದ್ಧಿ ಗಣಪತಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ತಿಕ ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾರ್ತಿಕ ಮಾಸದಲ್ಲಿ ದಿನದ ಅವಧಿ ಕಡಿಮೆ, ರಾತ್ರಿಯೇ ದೀರ್ಘವಾಗಿರುವ ಕಾರಣದಿಂದ ಅಂಧಕಾರದ ಪ್ರಭಾವ ಜಾಸ್ತಿ. ಋತುಮಾನದ ಅಂಧಕಾರದ ಜೊತೆಗೆ ಮನಸ್ಸಿನ ಅಂಧಕಾರವನ್ನೂ ಕಳೆಯುವುದು ಈ ಮಾಸದ ವಿಶೇಷ. ಹಾಗಾಗಿಯೇ ಇದನ್ನು ದೀಪೋತ್ಸವದ ತಿಂಗಳೆಂದು ಕರೆಯುತ್ತಾರೆ. ಈ ಮಾಸ ಆಧ್ಯಾತ್ಮ ಸಾಧಕರ ಮಾಸ. ಕಾರ್ತಿಕ ಮಾಸದಲ್ಲಿ ನಿಯಮ-ನಿಷ್ಠೆಯಿಂದ ಉಪವಾಸವಿದ್ದು ದೇವಸ್ಥಾನಕ್ಕೆ ಹೋಗಿ ದೀಪ ಹಚ್ಚಿದರೆ ಪುಣ್ಯಪ್ರಾಪ್ತಿ ಆಗುತ್ತದೆ ಎಂದು ಹೇಳಲಾಗುತ್ತದೆ ಎಂದರು.

ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಬಿ.ಪ್ರಸನ್ನಕುಮಾರ ಮಾತನಾಡಿ, ಭಕ್ತರ ಕಲ್ಯಾಣದ ಜೊತೆಗೆ ಲೋಕ ಕಲ್ಯಾಣಕ್ಕಾಗಿ ಕಾರ್ತಿಕ ದೀಪೋತ್ಸವ ಆಚರಿಸಲಾಗುವದಲ್ಲದೆ ರಂಗ ಪೂಜೆ ಸೇರಿದಂತೆ ವಿಶೇಷ ಪೂಜೆಗಳನ್ನು ದೇವಸ್ಥಾನದಲ್ಲಿ ಪ್ರತಿ ವರ್ಷ ನಡೆಸಲಾಗುವದೆಂದರು.

ಈ ಸಂದರ್ಭದಲ್ಲಿ ಶ್ರೀಮತಿ ಸಿ.ಎಸ್. ಶಿವನಗೌಡ್ರ, ಗಣ್ಯವರ್ತಕರಾದ ಈಶ್ವರಸಾ ಮೇಹರವಾಡೆ, ನ್ಯಾಯವಾದಿ ಟಿ.ಎನ್. ಭಾಂಡಗೆ ದಂಪತಿಗಳು, ನ್ಯಾಯವಾದಿಗಳಾದ ಪ್ರಭಾಕುಮಾರಿ ಬಿ.ಎಂ., ಮಧು ಪೂಜಾರಿ ಉಪಸ್ಥಿತರಿದ್ದರು.

ಪತ್ರಕರ್ತ ಹಾಗೂ ನ್ಯಾಯವಾದಿ ಅನಂತ ಎಸ್. ಕಾರ್ಕಳ ಪ್ರಸ್ತಾವಿಕ ಮಾತನಾಡಿದರು. ದೇವಸ್ಥಾನ ವ್ಯವಸ್ಥಾಪಕ ರಾಮಚಂದ್ರ ಹೆಗಡೆ ವಂದಿಸಿದರು.

ಕನ್ನಡ ಶಾಲೆಗಳನ್ನು ಉಳಿಸುವ ಕಾರ್ಯವಾಗಲಿ: ಚಂದ್ರಶೇಖರ ವಸ್ತ್ರದ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕನ್ನಡ ನಾಡಿನಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಕಡಿಮೆಯಾಗುತ್ತಿವೆ. ಇದನ್ನು ಕನ್ನಡ ಪ್ರಾಧಿಕಾರ ದೃಢತೆಯಿಂದ ತಡೆದು ಕನ್ನಡ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ನಿವೃತ್ತ ಪ್ರಾಚಾರ್ಯ ಚಂದ್ರಶೇಖರ ವಸ್ತ್ರದ ಹೇಳಿದರು.

ಪಟ್ಟಣದ ಶ್ರೀ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಡೆದ `ಆಧುನಿಕ ಕರ್ನಾಟಕ ನಿರ್ಮಾಣ; ಗದಗ ಜಿಲ್ಲೆಯ ಕೊಡುಗೆ’ ಒಂದು ದಿನದ ಕಮ್ಮಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಲಿಕೆ ಎಂದಿಗೂ ಹಾಸ್ಯಾಸ್ಪದ ಕಲಿಕೆಯಾಗಬಾರದು. ಅದು ನಮ್ಮ ಜೀವನಕ್ಕೆ ಬೆಳಕು ನೀಡುವಂತಿರಬೇಕು. ಓದದಿದ್ದರೂ, ಬರೆಯದಿದ್ದರೂ ರೈತ ನಮಗೆಲ್ಲ ಅನ್ನ ನೀಡುತ್ತಾನೆ. ಅವನ ಭಾಷೆ ಬದುಕಿನ ಭಾಷೆ. ಇಂತಹ ಭಾಷೆಯು ನಮ್ಮ ಮಕ್ಕಳ ಭಾಷೆಯಾಗಬೇಕು. ಅಂದರೆ ಭಾಷೆಯನ್ನು ಮಕ್ಕಳ ಮನದಲ್ಲಿ ಅಚ್ಚೊತ್ತುವಂತೆ ಸರಿಯಾಗಿ ಕಲಿಸಬೇಕೆಂದು ವಸ್ತ್ರದ ಅಭಿಪ್ರಾಯಪಟ್ಟರು.

ನಾವೆಂದಿಗೂ ನವೆಂಬರ್ ಒಂದರ ಕನ್ನಡಿಗರಾಗಬಾರದು. ಅದೊಂದು ದಿನ ಕನ್ನಡದ ಬಗ್ಗೆ ಮಾತನಾಡಿ ಮತ್ತೆ ಅದನ್ನು ಮರೆತು ಇರುವುದನ್ನೆಂದಿಗೂ ಸಹಿಸಲು ಸಾಧ್ಯವಿಲ್ಲ. ಕನ್ನಡ ಶಬ್ದಗಳನ್ನು ಸರಿಯಾಗಿ ಅರ್ಥೈಸಿಕೊಳ್ಳುವ ಕೆಲಸವಾಗಬೇಕಿದೆ. ಆಯೋಗಗಳು ಮಂಡನೆ ಮಾಡಿರುವ ವರದಿಗಳನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿ, ಅವುಗಳ ಅನುಷ್ಠಾನಕ್ಕೆ ಮುಂದಾಗಬೇಕು. ಅಂದಾಗ ಕನ್ನಡಕ್ಕೊಂದು ಮಹತ್ವದ ಸ್ಥಾನ ದೊರಕುತ್ತದೆ. ಕನ್ನಡವು ನಮ್ಮ ನಿತ್ಯದ ಉಸಿರಿನಲ್ಲಿ ಬೆರೆತಾಗ ಮಾತ್ರ ಕನ್ನಡ ಉಳಿದು, ಬೆಳೆದು ಬರಲು ಸಾಧ್ಯವಾಗುತ್ತದೆ ಎಂದು ವಸ್ತ್ರದ ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯೆ ದಾಕ್ಷಾಯಣಿ ಹುಡೇದ ಆಶಯ ನುಡಿಗಳನ್ನಾಡಿ, ಈ ಕಾರ್ಯಕ್ರಮವನ್ನು ಇಲ್ಲಿ ಹಮ್ಮಿಕೊಂಡ ಔಚಿತ್ಯತೆಯ ಬಗ್ಗೆ ತಿಳಿಸಿದರು. ವೇದಿಕೆಯ ಮೇಲೆ ನಿವೃತ್ತ ಪ್ರಾಚಾರ್ಯ ಹೊಳಿಯಪ್ಪ ಯಲಬುರ್ಗಿ, ಪ್ರಾಚಾರ್ಯ ಎಸ್.ಜಿ. ಕೇಶಣ್ಣವರ ಉಪಸ್ಥಿತರಿದ್ದರು. ಡಾ. ಕಲ್ಲಯ್ಯ ಹಿರೇಮಠ ಸ್ವಾಗತಿಸಿದರು. ಪ್ರಾಧ್ಯಾಪಕ ಪುಂಡಲೀಕ ಮಾದರ ನಿರೂಪಿಸಿದರು. ಐಕ್ಯೂಎಸಿ ಸಂಯೋಜಕ ಡಾ. ಡಿ.ಎಲ್. ಪವಾರ ವಂದಿಸಿದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಚಾರ್ಯ ಬಿ.ಎಫ್. ಚೇಗರೆಡ್ಡಿ ಮಾತನಾಡಿ, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನವೇನೋ ಸಿಕ್ಕಿದೆ. ಆದರೆ ಅದಕ್ಕೆ ಉಳಿದ ಭಾಷೆಗಳಿಗೆ ಸಿಕ್ಕಷ್ಟು ಅನುದಾನವಾಗಲಿ, ಸೌಕರ್ಯವಾಗಲಿ ಸಿಕ್ಕಿಲ್ಲ. ಇದು ವಿಷಾದನೀಯ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈ ಕಡೆಗೆ ಹೆಚ್ಚಿನ ಗಮನ ನೀಡಿ ಕನ್ನಡಕ್ಕೆ ಸಿಗಬೇಕಾದ ಎಲ್ಲ ಸೌಲಭ್ಯಗಳೂ ಸಿಗುವಂತೆ ನೋಡಿಕೊಳ್ಳಲಿ ಎಂದರು.

ಸಂವಿಧಾನ ದಿನಾಚರಣೆಯ ಪೂರ್ವಭಾವಿ ಸಭೆ

0

ವಿಜಯಸಾಕ್ಷಿ ಸುದ್ದಿ, ಗದಗ: ಸಂವಿಧಾನ ದಿನಾಚರಣೆಯನ್ನು ಜಿಲ್ಲೆಯ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ನವೆಂಬರ್ 26ರಂದು ಅರ್ಥಪೂರ್ಣವಾಗಿ ಆಚರಿಸಲು ಕ್ರಮ ವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಡಾ. ದುರುಗೇಶ ಕೆ.ಆರ್ ತಿಳಿಸಿದರು.

ಜಿಲ್ಲಾಡಳಿತ ಭವನದ ವಿಡಿಯೋ ಕಾನ್ಫರೆನ್ಸ್ ಹಾಲ್‌ನಲ್ಲಿ ಗುರುವಾರ ಜರುಗಿದ ಸಂವಿಧಾನ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂವಿಧಾನ ದಿನಾಚರಣೆ ನಿಮಿತ್ತ ಪ್ರೌಢಶಾಲೆ/ಕಾಲೇಜು ವಿದ್ಯಾರ್ಥಿಗಳಿಂದ ಜಿಲ್ಲಾ/ತಾಲೂಕು ಮಟ್ಟದಲ್ಲಿ ಜಾಥಾ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜದ ಪ್ರದರ್ಶನದೊಂದಿಗೆ ಸಂವಿಧಾನ ಪುಸ್ತಕವನ್ನು ಪ್ರದರ್ಶಿಸುವುದು, ವಿವಿಧ ಕನ್ನಡಪರ ಸಂಘಟನೆಗಳು, ದಲಿತಪರ ಸಂಘಟನೆಗಳ ಮುಖಂಡರು, ಸಂಸ್ಥೆಯ ಪದಾಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಯವರು, ಎನ್.ಸಿ.ಸಿ, ಎನ್.ಎಸ್.ಎಸ್ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಹೆಚ್ಚು ಜನರನ್ನು ಸೇರಿಸುವ ಮೂಲಕ ಅಚ್ಚುಕಟ್ಟಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಆಚರಿಸಲು ಅಧಿಕಾರಿಗಳಿಗೆ ಸೂಚಿಸಿದರು.

ನ. 26ರಂದು ಜಿಲ್ಲೆಯ ವೀರರಾಣಿ ಕಿತ್ತೂರು ಚನ್ನಮ್ಮ ಸರ್ಕಲ್‌ನಿಂದ ಜಿಲ್ಲಾಡಳಿತ ಭವನದವರೆಗೂ ಸಂವಿಧಾನ ದಿನಾಚರಣೆಯ ನಿಮಿತ್ತ ತಾಲೂಕು ಮಟ್ಟದಲ್ಲಿ ರಾಷ್ಟ್ರಧ್ವಜದ ಪ್ರದರ್ಶನದೊಂದಿಗೆ ಸಂವಿಧಾನ ಪುಸ್ತಕವನ್ನು ಪ್ರದರ್ಶಿಸುವುದರ ಮೂಲಕ ಜಾಥಾಗಳನ್ನು ಹಮ್ಮಿಕೊಳ್ಳುವುದು. ಸಂವಿಧಾನ ಪುಸ್ತಕಗಳನ್ನು, ಡಾ. ಬಿ.ಆರ್. ಅಂಬೇಡ್ಕರ್ ವೇಷ-ಭೂಷಣ ಪ್ರದರ್ಶನ ಮಾಡುವುದು, ಜಿಲ್ಲಾ-ತಾಲೂಕು ಕೇಂದ್ರದಲ್ಲಿನ ಅಂಬೇಡ್ಕರ್ ಭವನ ಸೇರಿದಂತೆ ಇತರ ಸಭಾಭವನಗಳಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಸಂವಿಧಾನದ ಕುರಿತು ಉಪನ್ಯಾಸಗಳನ್ನು ನೀಡುವುದರ ಮೂಲಕ ಕಾರ್ಯಕ್ರಮಗಳನ್ನು ಆಯಾ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಆಸಕ್ತಿಯಿಂದ ಆಯೋಜಿಸಿ ಯಶಸ್ವಿಗೊಳಿಸಲು ಅಪರ ಜಿಲ್ಲಾಧಿಕಾರಿ ಡಾ. ದುರುಗೇಶ ಕೆ.ಆರ್ ಸೂಚಿಸಿದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಗಂಗಪ್ಪ ಎಮ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಬರಟ್ಟಿ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶರಣು ಗೊಗೇರಿ, ಪ್ರವಾಸೋದ್ಯಮ ಅಧಿಕಾರಿ ಕೊಟ್ರೇಶ ವಿಭೂತಿ, ಮಾಸನಾಯಕ, ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು, ಎನ್.ಸಿ.ಸಿ, ಎನ್.ಎಸ್.ಎಸ್ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸಫಾಯಿ ಕರ್ಮಚಾರಿಗಳಿಗೆ ಅಗತ್ಯ ಸೌಲಭ್ಯ ಒದಗಿಸಿ

0

ವಿಜಯಸಾಕ್ಷಿ ಸುದ್ದಿ, ಗದಗ: ಸಫಾಯಿ ಕರ್ಮಚಾರಿಗಳಿಗೆ ಸರ್ಕಾರದಿಂದ ಜಾರಿಯಾಗಿರುವ ವಿವಿಧ ಯೋಜನೆಗಳ ಸೌಲಭ್ಯ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.

ಗದಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಫಾಯಿ ಕರ್ಮಚಾರಿ, ಮ್ಯಾನುವಲ್ ಸ್ಕ್ಯಾವೆಂಜರ್ ನಿಯೋಜನೆ ನಿಷೇಧ ಮತ್ತು ಅವರ ಪುನರ್ವಸತಿ ಸೌಲಭ್ಯಗಳ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಫಾಯಿ ಕರ್ಮಚಾರಿಗಳಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಕುರಿತು ಕ್ರಮ ಜರುಗಿಸಬೇಕು. ನೇರವಾಗಿ ಪಾವತಿಸಲಾಗುತ್ತಿರುವ ಪೌರಕಾರ್ಮಿಕರ ವೇತನದಲ್ಲಿ ಭವಿಷ್ಯ ನಿಧಿ ಹಾಗೂ ಇಎಸ್‌ಐ ಕಡಿತಗಳ ಕುರಿತು ಪರಿಶೀಲಿಸಬೇಕು. ಪೌರಕಾರ್ಮಿಕರು ಹಾಗೂ ಅವಲಂಬಿತರಿಗೆ ದೊರಕಬೇಕಾದ ಸೌಲಭ್ಯಗಳು ಹಾಗೂ ಕುಂದುಕೊರತೆ ಕುರಿತು ತಾಲೂಕು ಮಟ್ಟದಲ್ಲಿಯೂ ಸಭೆ ಜರುಗಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ನಿರ್ದೇಶನ ನೀಡಿದರು.

ಸಭೆಯಲ್ಲಿ ಪೌರಕಾರ್ಮಿಕರಿಗೆ ಪರಿಕರಗಳ ಬಳಕೆಗಳ ಕುರಿತು ಕಾರ್ಯಾಗಾರ, ಪೌರಕಾರ್ಮಿಕರ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಧನ, ನಗರಸಭೆಯ ವ್ಯಾಪ್ತಿಯಲ್ಲಿನ ಶೌಚಾಲಯಗಳ ದುರಸ್ತಿ ಕುರಿತು ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸವನಗೌಡ ಕೋಟೂರ, ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಬರಟ್ಟಿ, ಜಿಲ್ಲಾ ಸಂಯೋಜಕರಾದ ರಮೇಶ ಕೊಳೂರ, ಸಮಿತಿ ಸದಸ್ಯರಾದ ಯುವರಾಜ ಬಳ್ಳಾರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಮೆಕ್ಕೆಜೋಳದ ಬೆಲೆಕುಸಿತದಿಂದ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರದ ನೆರವು: ಸಿಎಂ

0

ವಿಜಯಸಾಕ್ಷಿ ಸುದ್ದಿ, ಮೈಸೂರು: ಮೆಕ್ಕೆಜೋಳ ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಎಲ್ಲ ರೀತಿಯ ನೆರವು ಒದಗಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಶುಕ್ರವಾರ ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಒಂದು ಕ್ವಿಂಟಾಲ್ ಮೆಕ್ಕೆಜೋಳಕ್ಕೆ 2400 ರೂ.ಗಳ ಎಂಎಸ್‌ಪಿ ದರ ನಿಗದಿಯಾಗಿದ್ದು, ಇದುವರೆಗೆ ಖರೀದಿ ಕೇಂದ್ರ ಪ್ರಾರಂಭವಾಗಿಲ್ಲ. ಖರೀದಿ ಪ್ರಕ್ರಿಯೆ ಪ್ರಾರಂಭಿಸಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ. ಆದ್ದರಿಂದ ಮೆಕ್ಕೆಜೋಳದ ಖರೀದಿ ಬಗ್ಗೆ ಸಂಬಂಧಪಟ್ಟ ಸಚಿವರು, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ. ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಬೆಲೆ ಕುಸಿತ ಕಂಡಿದ್ದು, ಉತ್ಪಾದನೆ ಹೆಚ್ಚಾಗಿದೆ. ಸುಮಾರು 55 ಲಕ್ಷ ಮೆಟ್ರಿಕ್ ಟನ್‌ನಷ್ಟು ಮೆಕ್ಕೆಜೋಳವನ್ನು ರೈತರು ಬೆಳೆಯಬಹುದೆಂಬ ಅಂದಾಜಿದೆ. ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಮೆಕ್ಕೆಜೋಳ ಉತ್ಪಾದನೆಯಲ್ಲಿ ಏರಿಕೆ ಕಂಡಿದ್ದರೂ ಸಹ ಕೇಂದ್ರ ಸರ್ಕಾರ ಸುಮಾರು 70 ಲಕ್ಷ ಮೆ.ಟನ್‌ನಷ್ಟು ಮೆಕ್ಕೆಜೋಳವನ್ನು ಆಮದು ಮಾಡಿಕೊಳ್ಳುತ್ತಿದೆ. ಕೇಂದ್ರದ ಈ ನಿರ್ಧಾರದಿಂದ ನೋಡಲ್ ಏಜೆನ್ಸಿಗಳಾದ ನಫೆಡ್, ಎನ್‌ಸಿಸಿಎಫ್ ಸಂಸ್ಥೆಗಳು ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ನಡೆಯದೇ ಇರುವುದರಿಂದ, ರೈತರು ಕೆಲವಡೆ ಧರಣಿ ನಡೆಸುತ್ತಿದ್ದಾರೆ ಎಂದರು.

ಡಿಸ್ಟಿಲರಿಗಳು ಮೆಕ್ಕೆಜೋಳ ಬೆಲೆ ಕಡಿಮೆ ಇದ್ದಾಗಲೇ ಹಿಂದೆಯೇ ಖರೀದಿಸಿ ಶೇಖರಣೆ ಮಾಡಿಕೊಂಡಿವೆ. ಮೆಕ್ಕೆಜೋಳವನ್ನು ನಿಯಮಾನುಸಾರ ಖರೀದಿಸಿ ರೈತರಿಗೆ ಅನುಕೂಲ ಕಲ್ಪಿಸಲು ಡಿಸ್ಟಿಲರಿ ಮಾಲೀಕರೊಂದಿಗೆ ಚರ್ಚಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಮೆಕ್ಕೆಜೋಳದ ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ರೈತರಿಗೆ ಎಲ್ಲ ರೀತಿಯ ಸಹಾಯವನ್ನು ಸರ್ಕಾರ ಮಾಡಲಿದೆ. ರಾಜ್ಯ ಸರ್ಕಾರ, ರೈತರಿಂದ ಸುಮಾರು 10 ಲಕ್ಷ ಮೆ.ಟನ್ ಮೆಕ್ಕೆಜೋಳ ಖರೀದಿಗೆ ಖರೀದಿ ಕೇಂದ್ರ ಸ್ಥಾಪಿಸಲು ಸೂಚನೆ ನೀಡಲಾಗಿದೆ. ದೇಶದಲ್ಲಿಯೇ ಹೇರಳವಾಗಿ ಮೆಕ್ಕೆಜೋಳವನ್ನು ಬೆಳೆದಿದ್ದು, ಅದನ್ನು ಆಮದು ಮಾಡಿಕೊಳ್ಳದಂತೆ ಕೇಂದ್ರ ಸರ್ಕಾರವನ್ನು ಪತ್ರಮುಖೇನ ಕೋರಲಾಗುವುದು ಎಂದರು.

ಈ ಸಂದರ್ಭದಲ್ಲಿ ರಾಜ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ, ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹಾದೇವಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮೆಕ್ಕೆಜೋಳದ ಜೊತೆಗೆ ಹೆಸರುಕಾಳು ಬೆಳೆ ಸಮಸ್ಯೆ ಬಗ್ಗೆ ಚರ್ಚಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ಎಫ್‌ಎಕ್ಯು ಬದಲಾವಣೆಗೆ ಕೇಂದ್ರ ಸರ್ಕಾರ ಮನವಿ ಸಲ್ಲಿಸುವ ಜೊತೆಗೆ ಸಂಬಂಧಪಟ್ಟವರ ತಂಡ ಈ ಬಗ್ಗೆ ದೆಹಲಿಗೂ ಭೇಟಿ ನೀಡಬೇಕೆಂದು ಸೂಚನೆ ನೀಡಲಾಗಿದೆ. ಇತ್ತೀಚೆಗೆ ಪ್ರಧಾನಿಯವರನ್ನು ಭೇಟಿಯಾಗಿ ಮಳೆಯಿಂದಾದ ಬೆಳೆ ಹಾನಿಗೆ ಪರಿಹಾರ ಕೋರಲಾಗಿದೆ. ಈ ಬಾರಿ ರಾಜ್ಯದಲ್ಲಿ ಸುಮಾರು 15.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ರಾಜ್ಯದ ಮನವಿಗೆ ಕೇಂದ್ರ ಪೂರಕವಾಗಿ ಸ್ಪಂದಿಸಲಿದೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು.

 

 

ಹೆಸರು ನೋಂದಾಯಿಸಲು ಅವಧಿ ವಿಸ್ತರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ದಿನಾಂಕ 25-11-2025ರಿಂದ 10-12-2025ರವರೆಗೆ ಅವಕಾಶ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರದ ಆಕಾಂಕ್ಷಿ ಅಭ್ಯರ್ಥಿ ಡಾ. ಅಮರೇಶ ನಾಶಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದಿನಾಂಕ 06-11-2022ರ ಪೂರ್ವದಲ್ಲಿ ಪದವಿ ಪಡೆದವರು ಮಾತ್ರ ಅರ್ಹರಾಗಿದ್ದು, ನಮೂನೆ 18ನ್ನು ಭರ್ತಿ ಮಾಡಿ ನಿಗದಿಪಡಿಸಿದ ಕಾರ್ಯಾಲಯಗಳಲ್ಲಿ ಸಲ್ಲಿಸಬಹುದು. ಮೂರು ವರ್ಷಗಳ ಅಂಕಪಟ್ಟಿ, ಘಟಿಕೋತ್ಸವ ಪ್ರಮಾಣಪತ್ರ, ಪಾಸಾದ ಪ್ರಮಾಣಪತ್ರ, ಡಿಪ್ಲೋಮಾ ಪ್ರಮಾಣಪತ್ರ, ಆಧಾರ್ ಕಾರ್ಡ್, ಮತದಾರರ ಚೀಟಿ, ಪಾಸ್‌ಪೋರ್ಟ್ ಅಳತೆಯ (ಬಿಳಿ ಬಣ್ಣದ ಹಿನ್ನೆಲೆಯ) ಭಾವಚಿತ್ರದ ಪ್ರತಿಗಳನ್ನು ಗಜೆಟೆಡ್ ಅಧಿಕಾರಿಗಳಿಂದ ಅಥವಾ ನೋಟರಿಯವರಿಂದ ದೃಢಿಕರಿಸಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

ಧಾರವಾಡ, ಹಾವೇರಿ, ಉತ್ತರ ಕನ್ನಡ, ಗದಗ ಜಿಲ್ಲೆಗಳ ಪದವೀಧರರು ನೋಂದಣಿ ಮಾಡಲು ಅವಧಿ ವಿಸ್ತರಿಸಲಾಗಿದೆ ಎಂದು ಡಾ. ಅಮರೇಶ ನಾಶಿ ತಿಳಿಸಿದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ–9886752869 ಸಂಪರ್ಕಿಸಲು ಕೋರಿದ್ದಾರೆ.

error: Content is protected !!