Home Blog Page 100

ವಿಶ್ವ ಛಾಯಾಗ್ರಾಹಕರ ದಿನಾಚರಣೆ: ಸಸಿ ನೆಟ್ಟು ಸಂಭ್ರಮ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನರೇಗಲ್ಲ ಹೋಬಳಿ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪಟ್ಟಣದ ಶ್ರೀ ವೀರಪ್ಪಜ್ಜನ ಮಠದ ಆವರಣದಲ್ಲಿ ಗುರುವಾರ ವಿಶ್ವ ಛಾಯಾಗ್ರಾಹಕರ 187ನೇ ದಿನಾಚರಣೆಯನ್ನು ಆಚರಿಸಲಾಯಿತು.

ಛಾಯಾಗ್ರಹಣದ ಪಿತಾಮಹ ಲೂಯಿಸ್ ಡಾಗ್ಯುರೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ದಿನಾಚರಣೆಯ ಸ್ಮರಣಾರ್ಥ ಮಠದ ಆವರಣದಲ್ಲಿ ಸಸಿ ನೆಡಲಾಯಿತು.

ಛಾಯಾಗ್ರಹಣವು ಸಮಾಜದ ಮಹತ್ವದ ಘಟನೆಗಳು, ಸಂಸ್ಕೃತಿ ಹಾಗೂ ಪರಂಪರೆಯನ್ನು ದಾಖಲಿಸಿ ಮುಂದಿನ ಪೀಳಿಗೆಗೆ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಗಣ್ಯರು ಅಭಿಪ್ರಾಯಪಟ್ಟರು.

ಡಾ. ಎಲ್.ಎಸ್. ಗೌರಿ, ನಿವೃತ್ತ ಪ್ರಾಚಾರ್ಯ ಬಿ.ಎನ್. ಜಾಲಿಹಾಳ, ಪಪಂ ಮಾಜಿ ಉಪಾಧ್ಯಕ್ಷ ಕುಮಾರಸ್ವಾಮಿ ಕೋರದಾನ್ಯಮಠ, ಈಶ್ವರ ಬೆಟಗೇರಿ, ಮಲ್ಲಯ್ಯ ಗುಂಡಗೋಪೂರಮಠ, ಮಲ್ಲಿಕಾರ್ಜುನ ಬೆಟಗೇರಿ, ಮಮ್ಮದರಫೀಕ ನದಾಫ್, ಸಮೀರ ಬಳಬಟ್ಟಿ, ಪ್ರವೀಣ ಸರ್ವಿ, ಗವಿಸಿದ್ದಪ್ಪ ಗೊಡಚಪ್ಪನವರ, ಚಂದ್ರು ಜೋಳದ, ಮಂಜು ಹುಯಿಲಗೋಳಮಠ, ಸುನೀಲ ಮಳಗಿ, ಮನೋಜ ರಾಯಬಾಗಿ ಸೇರಿದಂತೆ ಛಾಯಾಗ್ರಾಹಕರು ಉಪಸ್ಥಿತರಿದ್ದರು.

ಉರ್ದು ಶಾಲೆಗಳ ಖಾಲಿ ಶಿಕ್ಷಕ ಹುದ್ದೆ ಭರ್ತಿಗೆ ಆಗ್ರಹಿಸಿ ಮನವಿ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಸರ್ಕಾರಿ ಉರ್ದು ಮಾಧ್ಯಮ ಶಾಲೆಗಳಲ್ಲಿ ವರ್ಷಗಳಿಂದ ಖಾಲಿ ಇರುವ ಶಿಕ್ಷಕ ಹಾಗೂ ಅಗತ್ಯ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಿ, ಉರ್ದು ಶಿಕ್ಷಣ ವ್ಯವಸ್ಥೆಗೆ ನ್ಯಾಯ ಒದಗಿಸಬೇಕು ಎಂದು ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ರಾಜ್ಯಾಧ್ಯಕ್ಷ ಮಹ್ಮದಶಫಿ ಎಸ್. ನಾಗರಕಟ್ಟಿ ಆಗ್ರಹಿಸಿದರು.

ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದ ಅವರು, ಶಿಕ್ಷಕರ ಕೊರತೆಯಿಂದ ರಾಜ್ಯದ ಹಲವು ಉರ್ದು ಶಾಲೆಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ತೊಂದರೆಯಾಗುತ್ತಿದೆ. ಸರ್ಕಾರ ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುತ್ತಿರುವುದು ಸ್ವಾಗತಾರ್ಹವಾಗಿದ್ದು, ಉರ್ದು ಶಾಲೆಗಳ ಹುದ್ದೆಗಳಿಗೂ ಸಮಾನ ಆದ್ಯತೆ ನೀಡಬೇಕು ಎಂದರು.

ಉರ್ದು ವಿಷಯದಲ್ಲಿ ಬಿ.ಎಡ್., ಟಿ.ಸಿ.ಎಚ್. ಸೇರಿದಂತೆ ಅಗತ್ಯ ವಿದ್ಯಾರ್ಹತೆ ಹೊಂದಿರುವ ಅನೇಕ ಅರ್ಹ ಅಭ್ಯರ್ಥಿಗಳು ಉದ್ಯೋಗದ ನಿರೀಕ್ಷೆಯಲ್ಲಿದ್ದಾರೆ. ಒಂದು ಕಡೆ ಶಿಕ್ಷಕರ ಕೊರತೆ, ಮತ್ತೊಂದೆಡೆ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗದ ಕೊರತೆ ಇರುವುದರಿಂದ ಸರ್ಕಾರ ಎರಡೂ ಸಮಸ್ಯೆಗಳಿಗೆ ಸಮಗ್ರ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಎಲ್ಲ ಸರ್ಕಾರಿ ಉರ್ದು ಮಾಧ್ಯಮ ಶಾಲೆಗಳ ಖಾಲಿ ಶಿಕ್ಷಕ ಹುದ್ದೆಗಳ ಸಂಪೂರ್ಣ ವಿವರ ಸಂಗ್ರಹಿಸಿ ತಕ್ಷಣ ಭರ್ತಿ ಮಾಡಬೇಕು. ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಸೂಕ್ತ ಅವಕಾಶ ಕಲ್ಪಿಸಬೇಕು. ಶಿಕ್ಷಕರ ಕೊರತೆಯಿರುವ ಶಾಲೆಗಳಿಗೆ ತಕ್ಷಣ ಶಿಕ್ಷಕರನ್ನು ನಿಯೋಜಿಸುವುದರ ಜತೆಗೆ ಶಿಕ್ಷಕೇತರ ಹುದ್ದೆಗಳನ್ನೂ ಹಂತ ಹಂತವಾಗಿ ಭರ್ತಿ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಉರ್ದು ಮಾಧ್ಯಮ ವಿದ್ಯಾರ್ಥಿಗಳಿಗೆ ಇತರ ಮಾಧ್ಯಮದ ವಿದ್ಯಾರ್ಥಿಗಳಂತೆ ಸಮಾನ ಶೈಕ್ಷಣಿಕ ಅವಕಾಶ, ಗುಣಮಟ್ಟದ ಶಿಕ್ಷಣ ಹಾಗೂ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಉರ್ದು ಶಾಲೆಗಳ ಸಮಸ್ಯೆಯನ್ನು ಕೇವಲ ಒಂದು ಸಮುದಾಯದ ಬೇಡಿಕೆಯಾಗಿ ಪರಿಗಣಿಸದೆ, ಮಕ್ಕಳ ಶಿಕ್ಷಣದ ಹಕ್ಕು ಹಾಗೂ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮಹಾಸಭಾ ಒತ್ತಾಯಿಸಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಜಾಫರ ಡಾಲಾಯತ, ಮಹಬೂಬ್ ಬಾದಷಾ ಖಾಜಿ, ತಾಜುದ್ದೀನ್ ಪಾಪಣ್ಣವರ, ಪ್ರಧಾನ ಕಾರ್ಯದರ್ಶಿ ರಿಯಾಜ್ ಅಹ್ಮದ್ ದೊಡ್ಡಮನಿ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿಗಳ ಪರವಾಗಿ ಅಪರ ಜಿಲ್ಲಾಧಿಕಾರಿಗಳು ಮನವಿ ಸ್ವೀಕರಿಸಿದರು.

Varamahalakshmi 2026: ನಾಳೆ ಶಾಲೆ, ಕಾಲೇಜುಗಳಿಗೆ ರಜೆ ಇದೆಯಾ? ಯಾವ ರಾಜ್ಯಗಳಲ್ಲಿ ರಜೆ?

0

ನಾಳೆ ಅಂದರೆ ಆಗಸ್ಟ್ 21ರಂದು ವರಮಹಾಲಕ್ಷ್ಮಿ ಹಬ್ಬವನ್ನು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಇದೆಯೇ ಎಂಬ ಗೊಂದಲ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿದೆ.

ತೆಲಂಗಾಣದಲ್ಲಿ ಶಾಲಾ-ಕಾಲೇಜುಗಳಿಗೆ ಕಡ್ಡಾಯ ರಜೆ ಇಲ್ಲ:

ತೆಲಂಗಾಣ ಸರ್ಕಾರದ 2026ರ ರಜಾಪಟ್ಟಿಯಲ್ಲಿ ಆಗಸ್ಟ್ 21ರ ವರಲಕ್ಷ್ಮಿ ವ್ರತಂ ಅನ್ನು ಐಚ್ಛಿಕ ರಜೆಯಾಗಿ (Optional Holiday) ಸೇರಿಸಲಾಗಿದೆ. ಹೀಗಾಗಿ ರಾಜ್ಯಾದ್ಯಂತ ಎಲ್ಲ ಶಾಲಾ-ಕಾಲೇಜುಗಳಿಗೆ ಕಡ್ಡಾಯ ರಜೆ ಘೋಷಿಸಿಲ್ಲ.

ಸರ್ಕಾರಿ, ಖಾಸಗಿ, CBSE ಹಾಗೂ ICSE ಶಾಲೆಗಳು ತಮ್ಮ ಆಡಳಿತ ಮಂಡಳಿ ಹಾಗೂ ಸ್ಥಳೀಯ ನಿರ್ಧಾರದ ಆಧಾರದ ಮೇಲೆ ರಜೆ ನೀಡಬಹುದು.

ತೆಲಂಗಾಣ ಬಂದ್ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳಿಗೆ ರಜೆ:

ನಲ್ಗೊಂಡ ಜಿಲ್ಲೆಯಲ್ಲಿ ಮಹಿಳಾ ಪ್ರಾಂಶುಪಾಲರ ಹತ್ಯೆ ಖಂಡಿಸಿ ಆಗಸ್ಟ್ 21ರಂದು ತೆಲಂಗಾಣದಾದ್ಯಂತ ಖಾಸಗಿ ಶಾಲೆಗಳು ಬಂದ್‌ಗೆ ಕರೆ ನೀಡಿವೆ ಎಂದು ವರದಿಯಾಗಿದೆ. ಹೀಗಾಗಿ ಹಲವು ಖಾಸಗಿ ಶಾಲೆಗಳು ನಾಳೆ ಬಂದ್ ಇರಬಹುದಾಗಿದೆ. ಆದರೆ ಶಾಲೆ ರಜೆ ಬಗ್ಗೆ ಆಯಾ ಶಿಕ್ಷಣ ಸಂಸ್ಥೆಗಳ ಅಧಿಕೃತ ಸೂಚನೆಯನ್ನು ಪರಿಶೀಲಿಸುವುದು ಸೂಕ್ತ.

ಆಂಧ್ರಪ್ರದೇಶದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ:

ಆಂಧ್ರಪ್ರದೇಶದಲ್ಲಿ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಆಗಸ್ಟ್ 21ರಂದು ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸರ್ಕಾರಿ ಕಚೇರಿಗಳಿಗೂ ರಜೆ ನೀಡಲಾಗಿದೆ.

ಪುದುಚೇರಿಯಲ್ಲಿ 2 ದಿನ ರಜೆ:

ಪುದುಚೇರಿಯಲ್ಲಿ SSC CGL ಪರೀಕ್ಷೆ 2025ಕ್ಕೆ ಪರೀಕ್ಷಾ ಕೇಂದ್ರಗಳಾಗಿ ಆಯ್ಕೆಯಾಗಿರುವ 69 ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಆಗಸ್ಟ್ 21 ಮತ್ತು 22ರಂದು ಎರಡು ದಿನಗಳ ರಜೆ ಘೋಷಿಸಲಾಗಿದೆ.

ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕಿರುವ ಹಿನ್ನೆಲೆಯಲ್ಲಿ ಈ ಶಾಲೆಗಳಿಗೆ ರಜೆ ನೀಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಸೇರಿ ಸತತ ಮೂರು ದಿನಗಳ ರಜೆ ದೊರೆಯಲಿದೆ.

 

ಬರಿದಾಗಿದ್ದ ಕೆರೆಗೆ ಜೀವಕಳೆ: ತಿಮ್ಮಾಪುರದಲ್ಲಿ ‘ನಮ್ಮೂರು ನಮ್ಮ ಕೆರೆ’ ಯಶಸ್ಸು

0

ವಿಜಯಸಾಕ್ಷಿ ಸುದ್ದಿ, ಗದಗ: ಒಮ್ಮೆ ಬರಿದಾಗಿ ಒಣಗುತ್ತಿದ್ದ ತಿಮ್ಮಾಪುರ ಗ್ರಾಮದ ಕೆರೆಗೆ ಇದೀಗ ಜೀವಕಳೆ ಬಂದಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನ ‘ನಮ್ಮೂರು ನಮ್ಮ ಕೆರೆ’ ಯೋಜನೆಯಡಿ 9 ಎಕರೆ ವಿಸ್ತೀರ್ಣದ ಕೆರೆಯನ್ನು ಪುನಶ್ಚೇತನಗೊಳಿಸಿ ಗ್ರಾಮಸ್ಥರ ಬಳಕೆಗೆ ಹಸ್ತಾಂತರಿಸಲಾಯಿತು.

ಕೆರೆ ದೇವರಿಗೆ ಬಾಗಿನ ಅರ್ಪಿಸಿ ವಿಶೇಷ ಪೂಜೆ ನೆರವೇರಿಸಿದ ಬಳಿಕ ನಾಮಫಲಕ ಅನಾವರಣಗೊಳಿಸಲಾಯಿತು. ನಂತರ ಅಭಿವೃದ್ಧಿಪಡಿಸಿದ ಕೆರೆಯನ್ನು ಗ್ರಾಮಸ್ಥರಿಗೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಹರ್ಲಾಪುರ ಕೊಟ್ಟೂರೇಶ್ವರ ಮಠದ ಶ್ರೀ ಅಭಿನವ ಕೊಟ್ಟೂರೇಶ್ವರ ಸ್ವಾಮಿಗಳು ಆಶೀರ್ವಚನ ನೀಡಿ, ಕೆರೆ ಉಳಿದರೆ ಊರು ಉಳಿಯುತ್ತದೆ. ‘ನಮ್ಮೂರು ನಮ್ಮ ಕೆರೆ’ ಯೋಜನೆಯಡಿ ಅಭಿವೃದ್ಧಿಪಡಿಸಿರುವ ಕೆರೆ ರೈತರು ಹಾಗೂ ಸಾರ್ವಜನಿಕರಿಗೆ ವರದಾನವಾಗಿದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಪ್ಪಳ ಪ್ರಾದೇಶಿಕ ನಿರ್ದೇಶಕ ಜೆ. ಚಂದ್ರಶೇಖರ ಮಾತನಾಡಿ, ಜಲಸಂರಕ್ಷಣೆ, ಸ್ವ-ಸಹಾಯ ಸಂಘಗಳ ಮೂಲಕ ಮಹಿಳಾ ಸಬಲೀಕರಣ ಹಾಗೂ ರೈತರ ಅಭಿವೃದ್ಧಿಗೆ ಯೋಜನೆ ಒತ್ತು ನೀಡುತ್ತಿದೆ. ಗ್ರಾಮಸ್ಥರ ಸಹಕಾರದಿಂದ ಇಂತಹ ಕಾರ್ಯಗಳು ಯಶಸ್ವಿಯಾಗುತ್ತವೆ ಎಂದರು.

ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ ಮಾತನಾಡಿ, ಕೆರೆ ಅಭಿವೃದ್ಧಿಯಿಂದ ತಿಮ್ಮಾಪುರ ಗ್ರಾಮದ ಸಾವಿರಾರು ಜನರಿಗೆ ಕುಡಿಯುವ ನೀರಿನ ಅನುಕೂಲವಾಗಲಿದೆ. ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ರಾಜ್ಯಾದ್ಯಂತ ಇದುವರೆಗೆ 995 ಕೆರೆಗಳನ್ನು ಪುನಶ್ಚೇತನಗೊಳಿಸಿದ್ದು, ತಿಮ್ಮಾಪುರ ಕೆರೆ ಈ ಅಭಿಯಾನದ ಮತ್ತೊಂದು ಹೆಜ್ಜೆಯಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮನಗೌಡ ದೇಸಾಯಿ ವಹಿಸಿದ್ದರು. ಗದಗ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ, ಗ್ರಾಮ ಪಂಚಾಯಿತಿ ಪಿಡಿಒ ಶಿವಲೀಲಾ ಗೂಳಪ್ಪನವರ, ಗವಿಸಿದ್ದಯ್ಯ ಹಳ್ಳಿಕೇರಿಮಠ ಸೇರಿದಂತೆ ಕೆರೆ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ಸ್ವ-ಸಹಾಯ ಸಂಘಗಳ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

“ಕೆರೆ ಉಳಿದರೆ ಊರು ಉಳಿಯುತ್ತದೆ. ‘ನಮ್ಮೂರು ನಮ್ಮ ಕೆರೆ’ ಯೋಜನೆಯಡಿ ಪುನಶ್ಚೇತನಗೊಂಡ ಕೆರೆ ರೈತರು ಹಾಗೂ ಸಾರ್ವಜನಿಕರಿಗೆ ವರದಾನವಾಗಿದೆ.”

— ಶ್ರೀ ಅಭಿನವ ಕೊಟ್ಟೂರೇಶ್ವರ ಸ್ವಾಮಿಗಳು

ಶ್ರಾವಣದಲ್ಲಿ ಪುರಾಣ ಶ್ರವಣದಿಂದ ಉತ್ತಮ ಸಂಸ್ಕಾರ: ಶ್ರೀ ಪ್ರಭುಲಿಂಗ ದೇವರು

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶ್ರಾವಣ ಮಾಸವು ಧಾರ್ಮಿಕ ಆಚರಣೆ, ಭಕ್ತಿ ಹಾಗೂ ಸತ್ಕಾರ್ಯಗಳಿಗೆ ವಿಶೇಷವಾದ ಮಾಸ. ಪುರಾಣ ಪ್ರವಚನಗಳ ಮೂಲಕ ಧರ್ಮ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಿರಂತರವಾಗಬೇಕು ಎಂದು ನೀಲಗುಂದದ ಗುದ್ನೇಶ್ವರ ಮಠದ ಶ್ರೀ ಪ್ರಭುಲಿಂಗ ದೇವರು ಹೇಳಿದರು.

ಪಟ್ಟಣದ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗದ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿದ್ದ ಶ್ರೀ ವೀರಭದ್ರೇಶ್ವರ ಪುರಾಣ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.

ಪುರಾಣಗಳು ಕೇವಲ ಧಾರ್ಮಿಕ ಕಥೆಗಳಲ್ಲ. ಅವು ಸತ್ಯ, ಧರ್ಮ, ನೀತಿ ಹಾಗೂ ಸಂಸ್ಕಾರದ ಸಂದೇಶ ನೀಡುತ್ತವೆ. ಆಧುನಿಕ ಜೀವನಶೈಲಿಯ ನಡುವೆ ಯುವಜನತೆ ನಮ್ಮ ಪರಂಪರೆ ಮತ್ತು ಸಂಸ್ಕೃತಿಯನ್ನು ಮರೆಯದೆ, ಹಿರಿಯರು ಪಾಲಿಸಿಕೊಂಡು ಬಂದ ಧಾರ್ಮಿಕ ಆಚರಣೆಗಳನ್ನು ಮುಂದುವರಿಸಬೇಕು ಎಂದರು.

ಶ್ರಾವಣದಲ್ಲಿ ಪುರಾಣ ಶ್ರವಣ ಮಾಡುವುದರಿಂದ ಮನಸ್ಸಿಗೆ ಶಾಂತಿ ದೊರೆಯುವುದರ ಜತೆಗೆ ಉತ್ತಮ ವಿಚಾರಗಳು ಬದುಕಿನಲ್ಲಿ ಮೂಡುತ್ತವೆ. ಸಮಾಜದಲ್ಲಿ ಒಗ್ಗಟ್ಟು ಹಾಗೂ ಪರಸ್ಪರ ಗೌರವ ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ಜಯಲಕ್ಷ್ಮಿ ಗಡ್ಡದೇವರ ಮಠ ಕಾರ್ಯಕ್ರಮ ಉದ್ಘಾಟಿಸಿದರು. ಬಳಗದ ಅಧ್ಯಕ್ಷೆ ಸುವರ್ಣಭಾಯಿ ಬಹದ್ದೂರ್ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಜಯಲಕ್ಷ್ಮಿ ಮಾಂತ ಶೆಟ್ಟರ್ ಹಾಗೂ ಎಸ್.ಎಫ್. ಆದಿ ಮುಖ್ಯ ಅತಿಥಿಗಳಾಗಿದ್ದರು. ಪ್ರಭು ಏಕಿಕೊಪ್ಪ ಪುರಾಣ ಪ್ರವಚನ ನಡೆಸಿಕೊಟ್ಟರು.

ಎಸ್.ಎಂ. ವಿರಕ್ತಮಠ ವೇದಘೋಷ ನೆರವೇರಿಸಿದರು. ಶಾರಕ್ಕಾ ಮಹಾಂತ ಶೆಟ್ಟರ್ ಸ್ವಾಗತಿಸಿದರು. ಎಸ್.ಎನ್. ಹುಲ್ಲಣ್ಣನವರ್ ಪುಷ್ಪಾರ್ಪಣೆ ಹಾಗೂ ಮಾಲಾರ್ಪಣೆ ನೆರವೇರಿಸಿದರು. ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು, ಬಳಗದ ಸದಸ್ಯರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

“ಪುರಾಣಗಳು ಜೀವನದ ಮೌಲ್ಯ, ಸತ್ಯ, ಧರ್ಮ, ನೀತಿ ಹಾಗೂ ಸಂಸ್ಕಾರದ ಸಂದೇಶವನ್ನು ನೀಡುತ್ತವೆ. ಇವುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿ.”

— ಶ್ರೀ ಪ್ರಭುಲಿಂಗ ದೇವರು, ಗುದ್ನೇಶ್ವರ ಮಠ, ನೀಲಗುಂದ

ಶ್ರಾವಣದಲ್ಲಿ ಪುರಾಣ ಶ್ರವಣ ಸನ್ಮಾರ್ಗದ ದಾರಿ: ಶ್ರೀ ಚನ್ನವೀರ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶ್ರಾವಣದ ಪವಿತ್ರ ಕಾಲದಲ್ಲಿ ಮಹಾತ್ಮರು, ಶರಣರು, ಸಂತರು ಹಾಗೂ ಪುಣ್ಯ ಪುರುಷರ ಪುರಾಣ ಪ್ರವಚನ, ಸತ್ಸಂಗ ಮತ್ತು ಧರ್ಮ ಕಾರ್ಯಗಳು ಮನುಷ್ಯನನ್ನು ಸನ್ಮಾರ್ಗದತ್ತ ಕೊಂಡೊಯ್ದು ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ನೀಡುತ್ತವೆ ಎಂದು ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಐತಿಹಾಸಿಕ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಸೋಮೇಶ್ವರ ಪುರಾಣ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಗುಂಜೂರು ರಾಮಚಂದ್ರ ಶಾಸ್ತ್ರಿ ವಿರಚಿತ ಶ್ರೀ ರೇಣುಕಾದೇವಿ ಮಹಾತ್ಮೆ ಪುರಾಣ ಪ್ರಾರಂಭೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ನಿತ್ಯದ ಬದುಕಿನ ಜಂಜಾಟದ ನಡುವೆ ಧರ್ಮಕಾರ್ಯ, ಸತ್ಸಂಗ ಹಾಗೂ ಪುರಾಣ-ಪುಣ್ಯಕಥೆಗಳನ್ನು ಆಲಿಸುವುದರಿಂದ ಸಾರ್ಥಕ ಬದುಕಿನ ಮಾರ್ಗ ತೆರೆದುಕೊಳ್ಳುತ್ತದೆ. ಶ್ರಾವಣ ಮಾಸದಲ್ಲಿ ಸಂತರ, ಶರಣರ ಹಾಗೂ ಮಹಾತ್ಮರ ಜೀವನ ಚರಿತ್ರೆಗಳನ್ನು ತಿಳಿದು, ಅವರ ಆದರ್ಶದಂತೆ ಬದುಕಲು ಹಿರಿಯರು ಒಂದು ತಿಂಗಳನ್ನು ಪುರಾಣ ಶ್ರವಣಕ್ಕೆ ಮೀಸಲಿಟ್ಟಿದ್ದಾರೆ ಎಂದರು.

ಸಜ್ಜನರ ಸಹವಾಸ, ಶ್ರೇಷ್ಠರ ಆಚಾರ-ವಿಚಾರ ಹಾಗೂ ಧಾರ್ಮಿಕ ಸಂಸ್ಕಾರ ಮನುಷ್ಯನ ಬದುಕಿಗೆ ಅಗತ್ಯ. ಐತಿಹಾಸಿಕ ಸೋಮೇಶ್ವರ ದೇವಸ್ಥಾನದಲ್ಲಿ ಪುರಾಣ ಆಲಿಸುವ ಅವಕಾಶ ಕಲ್ಪಿಸಿರುವುದು ಶ್ಲಾಘನೀಯ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಬಸವೇಶ ಮಹಾಂತಶೆಟ್ಟರ ಕಾರ್ಯಕ್ರಮ ಉದ್ಘಾಟಿಸಿದರು. ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಅಧ್ಯಕ್ಷ ಗುರುರಾಜ ಪಾಟೀಲಕುಲಕರ್ಣಿ, ಅರ್ಚಕ ಕೃಷ್ಣಾಜಿ ಪೂಜಾರ, ದಿಗಂಬರ ಪೂಜಾರ, ಶಂಕರ ಬಾಳಿಕಾಯಿ, ನಾಗರಾಜ ಕಳಸಾಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪಂ. ಗುರುಮಹಾಂತಯ್ಯ ಶಾಸ್ತ್ರಿ ಆರಾಧ್ಯಮಠ ಗವಾಯಿಗಳು ಪುರಾಣ ಪಠಣ-ಪ್ರವಚನ ನಡೆಸಿಕೊಟ್ಟರು. ಶಿವಾನಂದ ಹಿರೇಮಠ ತಬಲಾ ಸಾಥ್ ನೀಡಿದರು. ಬಳಿಕ ಮಹಾಪ್ರಸಾದ ಸೇವೆ ನಡೆಯಿತು. ಪ್ರತಿದಿನ ಸಂಜೆ 7 ಗಂಟೆಯಿಂದ ಪುರಾಣ ಪ್ರವಚನ ನಡೆಯಲಿದೆ.

“ಧರ್ಮಕಾರ್ಯ, ಸತ್ಸಂಗ ಹಾಗೂ ಪುರಾಣ-ಪುಣ್ಯಕಥೆಗಳನ್ನು ಆಲಿಸುವುದರಿಂದ ಸಾರ್ಥಕ ಬದುಕಿನ ಮಾರ್ಗ ತೆರೆದುಕೊಳ್ಳುತ್ತದೆ.”

— ಶ್ರೀ ಚನ್ನವೀರ ಮಹಾಸ್ವಾಮಿಗಳು, ಹೂವಿನಶಿಗ್ಲಿ ವಿರಕ್ತಮಠ

ಅಡುಗೆ ಸ್ಪರ್ಧೆಯಲ್ಲಿ ಶೈಲಜಾ ಹೆಗಡೆ, ದೀಪಾ ಉಗಲಾಟ ಪ್ರಥಮ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಗ್ರಾಮೀಣ ಮತ್ತು ಸಣ್ಣ ಉದ್ಯಮ ವಿಭಾಗ ಹಾಗೂ ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಎಪಿಎಂಸಿ ಯಾರ್ಡ್‌ನ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ನಡೆಯುತ್ತಿರುವ ಗದಗ ಉತ್ಸವದ ಅಂಗವಾಗಿ ಮಹಿಳೆಯರಿಗಾಗಿ ಅಡುಗೆ ಸ್ಪರ್ಧೆ ಆಯೋಜಿಸಲಾಗಿತ್ತು.

ಹಲಸಿನ ಹಣ್ಣು ಹಾಗೂ ಬಾಳೆಹಣ್ಣಿನ ಸಿಹಿ ಪದಾರ್ಥ ಮತ್ತು ಜೋಳ ಹಾಗೂ ಜೋಳದ ಹಿಟ್ಟಿನ ಖಾರದ ಪದಾರ್ಥ ತಯಾರಿಕೆಯ ಎರಡು ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ 60ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.

ಸಿಹಿ ಪದಾರ್ಥ ವಿಭಾಗದಲ್ಲಿ ಶೈಲಜಾ ಹೆಗಡೆ ಪ್ರಥಮ, ರಾಜೇಶ್ವರಿ ಅಂಗಡಿ ದ್ವಿತೀಯ ಹಾಗೂ ಗೀತಾ ಹೆಗಡೆ ತೃತೀಯ ಸ್ಥಾನ ಪಡೆದರು. ಸಂಜನಾ ಮಲ್ಲಾಡದ ಅವರಿಗೆ ವಿಶೇಷ ಬಹುಮಾನ ದೊರೆಯಿತು.

ಖಾರದ ಪದಾರ್ಥ ವಿಭಾಗದಲ್ಲಿ ದೀಪಾ ಉಗಲಾಟ ಪ್ರಥಮ, ನಯನಾ ಮಲ್ಲಾಡದ ದ್ವಿತೀಯ ಹಾಗೂ ಕಲಾವತಿ ಹಿರೇಮಠ ತೃತೀಯ ಸ್ಥಾನ ಪಡೆದರು. ಶಿಲ್ಪಾ ರಾಯ್ಕರ್ ವಿಶೇಷ ಬಹುಮಾನ ಪಡೆದರು.

ಕೃಷಿ ಇಲಾಖೆಯ ಉಪನಿರ್ದೇಶಕಿ ಸ್ಮೃತಿ ಬಿ.ಎಸ್. ಹಾಗೂ ಡಾ. ರಾಧಿಕಾ ಕುಲಕರ್ಣಿ ನಿರ್ಣಾಯಕರಾಗಿದ್ದರು. ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ದಾನಪ್ಪಗೌಡ್ರ ಅಧ್ಯಕ್ಷತೆ ವಹಿಸಿದ್ದರು.

ಸಮಾರೋಪದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ರೂರಲ್‌ ಕಿಂಗ್ಸ್‌ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ನೈಟ್‌ ರೈಡರ್ಸ್‌

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ನಡೆಯುತ್ತಿರುವ ಗದಗ ಮೀಡಿಯಾ ಕ್ರಿಕೆಟ್‌ ಲೀಗ್‌ ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ಳುತ್ತಿದ್ದು, ನೈಟ್‌ ರೈಡರ್ಸ್‌ ತಂಡವು ತನ್ನ ಎರಡನೇ ಪಂದ್ಯದಲ್ಲೇ ರೂರಲ್‌ ಕಿಂಗ್ಸ್‌ ತಂಡವನ್ನು 7 ವಿಕೆಟ್‌ಗಳ ಅಂತರದಿಂದ ಮಣಿಸಿ, ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಫೈನಲ್‌ಗೆ ಲಗ್ಗೆಯಿಟ್ಟಿದೆ.

ಗುರುವಾರ ನಡೆದ ಪಂದ್ಯಾವಳಿಯ ನಾಲ್ಕನೇ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ರೂರಲ್‌ ಕಿಂಗ್ಸ್‌ ತಂಡ ನಿಗದಿತ 10 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 85 ರನ್‌ ಗಳಿಸಿತು. ಸೂರಜ್‌ ಮಯೇಕರ್‌ 28, ಪ್ರಕಾಶ ಗುದ್ದಿನ 14 ಹಾಗೂ ನಿಂಗನಗೌಡ ಹನಮಗೌಡ್ರ 13 ರನ್‌ ಗಳಿಸಿದರು. ನೈಟ್‌ ರೈಡರ್ಸ್‌ ಪರ ಮಂಜು ಪತ್ತಾರ 2 ವಿಕೆಟ್‌ ಪಡೆದರೆ, ಅರುಣಕುಮಾರ ಹಿರೇಮಠ, ಸಂಗನಗೌಡ ಖಾನಪ್ಪಗೌಡ್ರ ಹಾಗೂ ಸುರೇಶ ಕಡ್ಲಿಮಟ್ಟಿ ತಲಾ ಒಂದು ವಿಕೆಟ್‌ ಪಡೆದರು.

86 ರನ್‌ಗಳ ಗುರಿ ಬೆನ್ನತ್ತಿದ ನೈಟ್‌ ರೈಡರ್ಸ್‌ ತಂಡ ಮೊದಲ ಓವರ್‌ನಲ್ಲಿ 8 ರನ್‌ ಗಳಿಸಿದ್ದಾಗಲೇ ಒಂದು ವಿಕೆಟ್‌ ಕಳೆದುಕೊಂಡಿತು. ಆದರೆ ನಾಯಕ ಸುರೇಶ ಕಡ್ಲಿಮಟ್ಟಿ ಹಾಗೂ ಅರುಣಕುಮಾರ ಹಿರೇಮಠ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿ 73 ರನ್‌ಗಳ ಅಮೋಘ ಜೊತೆಯಾಟ ನೀಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ನೈಟ್‌ ರೈಡರ್ಸ್‌ ತಂಡ ಒಂದು ಓವರ್‌ ಬಾಕಿ ಇರುವಂತೆಯೇ 3 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ನಾಯಕ ಸುರೇಶ ಕಡ್ಲಿಮಟ್ಟಿ ಕೇವಲ 19 ಎಸೆತಗಳಲ್ಲಿ 41 ರನ್‌ ಸಿಡಿಸಿದರೆ, ಅರುಣಕುಮಾರ ಹಿರೇಮಠ 20 ಎಸೆತಗಳಲ್ಲಿ 33 ರನ್‌ ಗಳಿಸಿ ಮಿಂಚಿದರು. ಸ್ಫೋಟಕ ಬ್ಯಾಟಿಂಗ್‌ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಸುರೇಶ ಕಡ್ಲಿಮಟ್ಟಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಆರ್‌ಸಿಬಿಗೆ ಸೋಲು; ವಿನ್ನರ್ಸ್‌ ಸೆಮಿಫೈನಲ್‌ಗೆ

ಇದಕ್ಕೂ ಮುನ್ನ ನಡೆದ ಮೂರನೇ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿದ ವಿನ್ನರ್ಸ್‌ ತಂಡ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡ ಆರ್‌ಸಿಬಿ ತಂಡ ಟೂರ್ನಿಯಿಂದ ಹೊರಬಿದ್ದಿತು.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಆರ್‌ಸಿಬಿ ತಂಡ ನಿಗದಿತ 10 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 84 ರನ್‌ ಗಳಿಸಿತು. ವಿನಾಯಕ ಚೌಡಾಪೂರ 24 ಹಾಗೂ ಫಿರೋಜ್‌ ಮೊಮಿನ್‌ 18 ರನ್‌ ಗಳಿಸಿದರು. ವಿನ್ನರ್ಸ್‌ ಪರ ಅಶೋಕ ಹೂಗಾರ 2 ವಿಕೆಟ್‌ ಪಡೆದರೆ, ಈಶ್ವರ ತಿಪ್ಪರಡ್ಡಿ, ಬನೇಶ ಕುಲಕರ್ಣಿ ಹಾಗೂ ಪರಮೇಶ ಲಮಾಣಿ ತಲಾ ಒಂದು ವಿಕೆಟ್‌ ಪಡೆದರು.

85 ರನ್‌ಗಳ ಗುರಿ ಬೆನ್ನತ್ತಿದ ವಿನ್ನರ್ಸ್‌ ತಂಡದ ಆರಂಭಿಕ ಆಟಗಾರರಾದ ಅನಿಲ ತೆಂಬದಮನಿ ಹಾಗೂ ಅನಿಲ ಚಲವಾದಿ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದರು. ಅನಿಲ ತೆಂಬದಮನಿ 33 ಹಾಗೂ ಅನಿಲ ಚಲವಾದಿ 31 ರನ್‌ ಗಳಿಸಿ ಅಜೇಯರಾಗುಳಿದು ತಂಡವನ್ನು 8 ವಿಕೆಟ್‌ಗಳ ಭರ್ಜರಿ ಗೆಲುವಿನತ್ತ ಕೊಂಡೊಯ್ದರು. ಆರ್‌ಸಿಬಿ ಪರ ಗೌರೀಶ ಒಂದು ವಿಕೆಟ್‌ ಪಡೆದರು. 33 ರನ್‌ ಗಳಿಸಿ ಅಜೇಯರಾಗಿದ್ದ ಅನಿಲ ತೆಂಬದಮನಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಆ.22ರಂದು ಸೆಮಿಫೈನಲ್‌, ಆ.23ಕ್ಕೆ ಫೈನಲ್‌

ಆ.22ರಂದು ರೂರಲ್‌ ಕಿಂಗ್ಸ್‌ ಹಾಗೂ ವಿನ್ನರ್ಸ್‌ ತಂಡಗಳ ನಡುವೆ ಸೆಮಿಫೈನಲ್‌ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ಫೈನಲ್‌ಗೆ ಅರ್ಹತೆ ಪಡೆಯಲಿದೆ. ನಂತರ ನೈಟ್‌ ರೈಡರ್ಸ್‌ ಹಾಗೂ ಆರ್‌ಸಿಬಿ ನಡುವೆ ಔಪಚಾರಿಕ ಪಂದ್ಯ ನಡೆಯಲಿದೆ.

ಹೀಗಾಗಿ ರೂರಲ್‌ ಕಿಂಗ್ಸ್‌–ವಿನ್ನರ್ಸ್‌ ನಡುವಿನ ಸೆಮಿಫೈನಲ್‌ ಪಂದ್ಯದತ್ತ ಎಲ್ಲರ ಚಿತ್ತ ನೆಟ್ಟಿದ್ದು, ಗೆಲುವು ಸಾಧಿಸುವ ತಂಡ ಆ.23ರಂದು ನಡೆಯುವ ಫೈನಲ್‌ನಲ್ಲಿ ಈಗಾಗಲೇ ಫೈನಲ್‌ ಪ್ರವೇಶಿಸಿರುವ ನೈಟ್‌ ರೈಡರ್ಸ್‌ ತಂಡವನ್ನು ಎದುರಿಸಲಿದೆ.

ಗ್ರಾಮೀಣ ಅಭಿವೃದ್ಧಿಗೆ ಕಳಕಪ್ಪ ಬಂಡಿ ಕೊಡುಗೆ ಅಪಾರ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಮಾಜಿ ಸಚಿವ ಕಳಕಪ್ಪ ಬಂಡಿ ಅವರು ಅಧಿಕಾರದಲ್ಲಿದ್ದ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿ ರಸ್ತೆ, ಕುಡಿಯುವ ನೀರು, ಶಿಕ್ಷಣ, ನೀರಾವರಿ ಹಾಗೂ ಮೂಲಸೌಕರ್ಯ ಕ್ಷೇತ್ರಗಳಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದರು ಎಂದು ಬಿಜೆಪಿ ಡಂಬಳ ಮಂಡಳ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಮಲ್ಲಪ್ಪ ಮಠದ ಹೇಳಿದರು.

ಕಳಕಪ್ಪ ಬಂಡಿ ಅವರ 58ನೇ ಜನ್ಮದಿನದ ಅಂಗವಾಗಿ ಡಂಬಳ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು ವಿತರಿಸಿ, ಆವರಣದಲ್ಲಿ ಸಸಿ ನೆಟ್ಟು ಹಾಗೂ ಅಂಗನವಾಡಿ ಮಕ್ಕಳಿಂದ ಕೇಕ್ ಕತ್ತರಿಸಿ ಹಣ್ಣು ಹಂಪಲ ವಿತರಿಸುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲಪ್ಪ ಮಠದ, ಗಜೇಂದ್ರಗಡ, ಮುಂಡರಗಿ ಹಾಗೂ ರೋಣ ಪಟ್ಟಣಗಳ ಅಭಿವೃದ್ಧಿಗೂ ಕಳಕಪ್ಪ ಬಂಡಿ ಅವರ ಕೊಡುಗೆ ಇದೆ ಎಂದರು.

ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಭೀರಪ್ಪ ಬಂಡಿ, ಮುಖಂಡರಾದ ನಾಗರಾಜ ಕಾಟರಳ್ಳಿ ಹಾಗೂ ಉಮೇಶ ಅಂಕದ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ರೋಣ ಕ್ಷೇತ್ರಕ್ಕೆ ಶಿಕ್ಷಣ, ಕಾಲೇಜು, ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ದೊರಕಿಸುವಲ್ಲಿ ಕಳಕಪ್ಪ ಬಂಡಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.

ಯುವ ಮುಖಂಡರಾದ ಪ್ರಕಾಶ ಕೋತಂಬ್ರಿ ಹಾಗೂ ಶಿವಾನಂದ ಬಂಡಿ ಮಾತನಾಡಿ, ರೈತರು, ಬಡವರು, ಕಾರ್ಮಿಕರು ಹಾಗೂ ಹಿಂದುಳಿದ ವರ್ಗಗಳ ಸಮಸ್ಯೆಗಳಿಗೆ ಸ್ಪಂದಿಸಿದ ಕಳಕಪ್ಪ ಬಂಡಿ, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಲವು ಗ್ರಾಮಗಳಿಗೆ ಅನುದಾನ ಕಲ್ಪಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕೆ.ಕೆ. ಬಂಡಿ, ಹನಮಂತಪ್ಪ ಹಾದಿಮನಿ, ರವಿ ಕರಿಗಾರ, ಬಸವರಾಜ ಸಂಗನಾಳ, ಗವಿಯಪ್ಪ ಮಠದ, ಪುಂಡಲೀಕ ಪಾರಪ್ಪನವರ, ಪ್ರಜ್ವಲ ಮಾನೆ, ಶ್ರೀಧರ ಬಂಡಿ, ಹನಮಪ್ಪ ಬಂಡಿ, ಫಕೀರಪ್ಪ ಬಿಸಾಟಿ, ಮುದಕಪ್ಪ ಮುಳಗುಂದ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಉದ್ಯೋಗ ಖಾತ್ರಿ ಯೋಜನೆ ಸದುಪಯೋಗಪಡಿಸಿಕೊಳ್ಳಿ: ಚಂದ್ರಶೇಖರ ಬಿ. ಕಂದಕೂರ

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಉದ್ಯೋಗದ ಅಗತ್ಯವಿರುವ ಕೂಲಿಕಾರರು ಜಾಬ್ ಕಾರ್ಡ್ ಮಾಡಿಸಿಕೊಂಡು ಉದ್ಯೋಗ ಖಾತ್ರಿ ಯೋಜನೆಯ ಸೌಲಭ್ಯ ಪಡೆಯಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ಹೇಳಿದರು.

ತಾಲೂಕಿನ ಗೋಗೇರಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ಜಾಬ್ ಕಾರ್ಡ್ ಮೇಳ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆ.15ರಿಂದ ಸೆ.15ರವರೆಗೆ ತಾಲೂಕಿನಾದ್ಯಂತ ಅಭಿಯಾನ ನಡೆಯಲಿದೆ. ಜಾಬ್ ಕಾರ್ಡ್ ಇಲ್ಲದವರು ಹೊಸ ಕಾರ್ಡ್ ಮಾಡಿಸಿಕೊಳ್ಳಬಹುದು. ಕಾರ್ಡ್‌ನಲ್ಲಿ ತಿದ್ದುಪಡಿ ಅಗತ್ಯವಿದ್ದರೆ ಮಾಡಿಸಿಕೊಳ್ಳುವುದರ ಜತೆಗೆ ಇ-ಕೆವೈಸಿ ನವೀಕರಣಕ್ಕೂ ಅವಕಾಶವಿದೆ ಎಂದರು.

ಕೆಲಸದ ಅಗತ್ಯವಿರುವವರು ನಮೂನೆ-6ರಲ್ಲಿ ಅರ್ಜಿ ಸಲ್ಲಿಸಿದರೆ ಯೋಜನೆಯಡಿ ಉದ್ಯೋಗ ಒದಗಿಸಲಾಗುವುದು. ಗ್ರಾಮ ಪಂಚಾಯಿತಿ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಕೂಲಿಕಾರರು ಅಗತ್ಯ ಮಾಹಿತಿ ನೀಡಿ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಯೋಜನೆಯ ಕ್ರಿಯಾಯೋಜನೆಯಲ್ಲಿ ವೈಯಕ್ತಿಕ ಫಲಾನುಭವಿಗಳಾಗಿ ಆಯ್ಕೆಯಾಗಿರುವವರು ತಕ್ಷಣ ಕಾಮಗಾರಿ ಆದೇಶ ಪಡೆದು ಕಾಮಗಾರಿ ಆರಂಭಿಸುವಂತೆ ಸಿಬ್ಬಂದಿಗೆ ಸೂಚಿಸಿದರು. ಬಳಿಕ ಕಾಯಕ ಬಂಧುಗಳು ಹಾಗೂ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ, ಯೋಜನೆಯಡಿ ದೊರೆಯುವ ಉದ್ಯೋಗಾವಕಾಶ ಹಾಗೂ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಭಾರತ್ ಜೋಡೋ ಯುವ ಸಂಘ ನೋಂದಣಿ ಕುರಿತು ಮಾಹಿತಿ ನೀಡಿದ ಕಂದಕೂರ, 18ರಿಂದ 35 ವರ್ಷದೊಳಗಿನ ಯುವಕರು ನೋಂದಣಿ ಮಾಡಿಕೊಳ್ಳಬೇಕು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕನಿಷ್ಠ 100 ಯುವಕರ ನೋಂದಣಿಯಾದರೆ ಸಂಘ ರಚನೆಯಾಗಲಿದ್ದು, ಎಲ್ಲ ಸಮುದಾಯಗಳ ಯುವಕರು ಹಾಗೂ ಮಹಿಳೆಯರು ಭಾಗವಹಿಸುವಂತೆ ಕ್ರಮವಹಿಸಬೇಕು ಎಂದರು.

ಐಇಸಿ ಸಂಯೋಜಕ ಮಂಜುನಾಥ ಹಳ್ಳದ, ಕಾರ್ಯದರ್ಶಿಗಳಾದ ಎಂ.ಎಂ. ಗೋಡೆಕಾರ, ಎನ್.ಜಿ. ಭಾಗವಾನ, ಕೆ.ಬಿ. ಮಾದರ, ಡಿ.ಕೆ. ವಾಲಿಕಾರ, ಯಲ್ಲವ್ವ ಗಾರಗಿ, ನಿಂಗಪ್ಪ ಸೋಂಪೂರ, ಕಾಯಕ ಬಂಧುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

“ಜಾಬ್ ಕಾರ್ಡ್ ಇಲ್ಲದ ಕೂಲಿಕಾರರು ಹೊಸ ಕಾರ್ಡ್ ಮಾಡಿಸಿಕೊಳ್ಳಿ, ತಿದ್ದುಪಡಿ ಹಾಗೂ ಇ-ಕೆವೈಸಿ ನವೀಕರಣಕ್ಕೂ ಅವಕಾಶವಿದೆ. ಎಲ್ಲರೂ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಉದ್ಯೋಗ ಖಾತ್ರಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು.”

— ಚಂದ್ರಶೇಖರ ಬಿ. ಕಂದಕೂರ, ತಾ.ಪಂ. ಇಒ, ಗಜೇಂದ್ರಗಡ