Home Blog Page 102

ನಕಲಿ ಪಿಜ್ಜಾ ಆರ್ಡರ್ ಬಲೆಗೆ ಬಿದ್ದ ತೆಲಂಗಾಣ ಯುವಕ; ಅಮೆರಿಕದಲ್ಲಿ ಭಾರತೀಯನ ಹತ್ಯೆ!

ನವದೆಹಲಿ: ಅಮೆರಿಕದಲ್ಲಿ ಪಾರ್ಟ್‌ಟೈಮ್ ಪಿಜ್ಜಾ ವಿತರಣೆ ಕೆಲಸ ಮಾಡುತ್ತಿದ್ದ ತೆಲಂಗಾಣ ಮೂಲದ 28 ವರ್ಷದ ಯುವಕನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ನಕಲಿ ಪಿಜ್ಜಾ ಆರ್ಡರ್ ನೀಡಿ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ಈ ಕೃತ್ಯ ಎಸಗಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮೃತ ಯುವಕನನ್ನು ಅಂಶುಲ್ ಕುಂಚಾ ಎಂದು ಗುರುತಿಸಲಾಗಿದೆ. ಅವರು ಅಮೆರಿಕದ ಫಿಲಡೆಲ್ಫಿಯಾ ನಗರದಲ್ಲಿರುವ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದು, ವಾರಾಂತ್ಯದಲ್ಲಿ ಹೆಚ್ಚುವರಿ ಆದಾಯಕ್ಕಾಗಿ ಪಿಜ್ಜಾ ವಿತರಣೆ ಕೆಲಸ ಮಾಡುತ್ತಿದ್ದರು.

ಶನಿವಾರ ರಾತ್ರಿ ಅಂಶುಲ್ ಅವರಿಗೆ ಪಿಜ್ಜಾ ವಿತರಣೆಯ ಆರ್ಡರ್ ಬಂದಿತ್ತು. ಆರ್ಡರ್ ನೀಡಿದ್ದ ಸ್ಥಳಕ್ಕೆ ತಲುಪಿದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಅಂಶುಲ್ ಅವರ ತಲೆಗೆ ಹಲವು ಬಾರಿ ಗುಂಡು ಹಾರಿಸಿ ದುಷ್ಕರ್ಮಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಅಂಶುಲ್ ಅವರ ಸಹೋದರಿ ತನ್ವಿ, ಇದು ಪೂರ್ವಯೋಜಿತ ಸಂಚು ಎಂದು ಆರೋಪಿಸಿದ್ದಾರೆ. ನಕಲಿ ಪಿಜ್ಜಾ ಆರ್ಡರ್ ಮೂಲಕ ಅಂಶುಲ್ ಅವರನ್ನು ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ಹತ್ಯೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದ ಅಂಶುಲ್ ಅವರ ಪಾರ್ಥಿವ ಶರೀರವನ್ನು ಶೀಘ್ರವಾಗಿ ಭಾರತಕ್ಕೆ ತರಲು ಕುಟುಂಬಸ್ಥರು ಮನವಿ ಮಾಡಿದ್ದಾರೆ. ಜೊತೆಗೆ ಹತ್ಯೆ ನಡೆಸಿದ ಆರೋಪಿಗಳನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಈ ನಡುವೆ, ನ್ಯೂಯಾರ್ಕ್‌ನ ಭಾರತೀಯ ರಾಯಭಾರ ಕಚೇರಿ ಘಟನೆಗೆ ಸಂತಾಪ ಸೂಚಿಸಿದ್ದು, ಸ್ಥಳೀಯ ಅಧಿಕಾರಿಗಳು ಹಾಗೂ ಕುಟುಂಬದವರೊಂದಿಗೆ ಸಂಪರ್ಕದಲ್ಲಿದ್ದು ಅಗತ್ಯ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದೆ.

ಹಾಸನ ಶಕ್ತಿ ಸದನ ಕೇಂದ್ರದಿಂದ ಇಬ್ಬರು ಬಾಂಗ್ಲಾದೇಶಿ ಮಹಿಳೆಯರು ಪರಾರಿ!

ಹಾಸನ: ಹಾಸನ ನಗರದ ಕೆ.ಆರ್.ಪುರಂನಲ್ಲಿರುವ ಶಕ್ತಿ ಸದನ ಕೇಂದ್ರದಿಂದ ಇಬ್ಬರು ಬಾಂಗ್ಲಾ ಮೂಲದ ಮಹಿಳೆಯರು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಪರಾರಿಯಾದ ಮಹಿಳೆಯರ ಪತ್ತೆಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಪರಾರಿಯಾದವರನ್ನು ಸೀಲಾ ಶೇಖ್ (34) ಹಾಗೂ ಸ್ವೀಟಿ ಮೊಂಡಾಲ್ (27) ಎಂದು ಗುರುತಿಸಲಾಗಿದೆ. ವೇಶ್ಯಾವಾಟಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಮಹಿಳಾ ಠಾಣೆ ಪೊಲೀಸರು ಇವರನ್ನು ವಶಕ್ಕೆ ಪಡೆದು ಕಳೆದ ನಾಲ್ಕು ತಿಂಗಳಿನಿಂದ ಶಕ್ತಿ ಸದನ ಕೇಂದ್ರದಲ್ಲಿ ಇರಿಸಿದ್ದರು.

ಇಬ್ಬರು ಮಹಿಳೆಯರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿತ್ತು. ಈ ನಡುವೆ ಮೇ 5ರಂದು ರಾತ್ರಿ ಸುಮಾರು 8:50ರ ವೇಳೆಗೆ ಊಟ ಮಾಡುತ್ತಿದ್ದ ವೇಳೆ ಮಹಿಳೆಯರು ಏಕಾಏಕಿ ಕೊಠಡಿಯಿಂದ ಹೊರಬಂದು ಕೇಂದ್ರದ ಮುಂಭಾಗದ ಗೇಟ್ ಮೇಲಿಂದ ಹಾರಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ತಿಳಿಯುತ್ತಿದ್ದಂತೆ ಪೊಲೀಸರು ತಕ್ಷಣವೇ ಶೋಧ ಕಾರ್ಯ ಆರಂಭಿಸಿದ್ದು, ವಿವಿಧ ಸ್ಥಳಗಳಲ್ಲಿ ಹುಡುಕಾಟ ಮುಂದುವರಿದಿದೆ. ಈ ಸಂಬಂಧ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಗೃಹಬಳಕೆಯ ಗ್ಯಾಸ್ ದುಬಾರಿ!

ನವದೆಹಲಿ: ಪೆಟ್ರೋಲ್, ಡೀಸೆಲ್ ಹಾಗೂ ಸಿಎನ್‌ಜಿ ದರ ಏರಿಕೆಯ ಬೆನ್ನಲ್ಲೇ ಜನಸಾಮಾನ್ಯರಿಗೆ ಮತ್ತೊಂದು ಹೊರೆ ಬಿದ್ದಿದ್ದು, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 29 ರೂಪಾಯಿ ಹೆಚ್ಚಿಸಲಾಗಿದೆ.

ಕಳೆದ ಮೂರು ತಿಂಗಳಲ್ಲಿ ಇದು ಎರಡನೇ ಬಾರಿ ದರ ಏರಿಕೆಯಾಗಿರುವುದು ಗಮನಾರ್ಹ.

ಹೊಸ ದರ ಪರಿಷ್ಕರಣೆಯಂತೆ, ದೆಹಲಿಯಲ್ಲಿ 14.2 ಕೆಜಿ ತೂಕದ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 913 ರೂಪಾಯಿಯಿಂದ 942 ರೂಪಾಯಿಗೆ ಏರಿಕೆಯಾಗಿದೆ. ಪರಿಷ್ಕೃತ ದರಗಳು ಜೂನ್ 7ರಿಂದಲೇ ಜಾರಿಗೆ ಬಂದಿವೆ ಎಂದು ವರದಿಯಾಗಿದೆ.

ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಸಂಘರ್ಷದ ಪರಿಣಾಮ ಜಾಗತಿಕ ತೈಲ ಮತ್ತು ಅನಿಲ ಪೂರೈಕೆಯ ಮೇಲೆ ಒತ್ತಡ ಹೆಚ್ಚಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಏರಿಕೆಗೆ ಕಾರಣವಾಗಿದೆ. ಇದರ ಪರಿಣಾಮ ದೇಶೀಯ ಮಾರುಕಟ್ಟೆಯ ಮೇಲೂ ಬಿದ್ದಿದೆ.

ಈ ಮೊದಲು ಮಾರ್ಚ್ 7ರಂದು ಎಲ್‌ಪಿಜಿ ಸಿಲಿಂಡರ್ ದರವನ್ನು 60 ರೂಪಾಯಿ ಹೆಚ್ಚಿಸಲಾಗಿತ್ತು. ಪ್ರಸ್ತುತ ದರ ಏರಿಕೆಯು ತೈಲ ಕಂಪನಿಗಳಿಗೆ ಆಗುತ್ತಿರುವ ನಷ್ಟವನ್ನು ಭಾಗಶಃ ಮಾತ್ರ ಸರಿದೂಗಿಸಿದೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ತೆರಿಗೆ ಹಾಗೂ ಸಾರಿಗೆ ವೆಚ್ಚದ ವ್ಯತ್ಯಾಸದಿಂದ ರಾಜ್ಯ ಹಾಗೂ ನಗರವಾರು ಸಿಲಿಂಡರ್ ಬೆಲೆಯಲ್ಲಿ ಸ್ವಲ್ಪ ಬದಲಾವಣೆ ಕಂಡುಬರಬಹುದು. ಸರ್ಕಾರವು ಎಲ್‌ಪಿಜಿ ಲಭ್ಯತೆ ಸಮರ್ಪಕವಾಗಿ ಕಾಯ್ದುಕೊಳ್ಳಲು ದೇಶೀಯ ಉತ್ಪಾದನೆ ಹೆಚ್ಚಿಸುವುದು ಮತ್ತು ಆಮದು ಖಚಿತಪಡಿಸಿಕೊಳ್ಳುವ ಕ್ರಮಗಳನ್ನು ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಮುಂಗಾರು ಮಳೆ ಚುರುಕು: ಹಲವು ಜಿಲ್ಲೆಗಳಿಗೆ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಣೆ!

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಮುಂದಿನ ಕೆಲವು ದಿನಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿ ಹಾಗೂ ಒಳನಾಡಿನ ಹಲವು ಭಾಗಗಳಲ್ಲಿ ಗುಡುಗು ಸಹಿತ ಬಿರುಗಾಳಿ ಮಳೆಯ ಎಚ್ಚರಿಕೆ ನೀಡಲಾಗಿದೆ.

ಕರಾವಳಿ ಕರ್ನಾಟಕದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಗಂಟೆಗೆ 30–40 ಕಿಮೀ ವೇಗದ ಗಾಳಿ ಬೀಸುವ ನಿರೀಕ್ಷೆಯಿದ್ದು, ಈ ಮೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ರಾಜ್ಯದ ಒಟ್ಟು 10 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಜಾರಿಯಲ್ಲಿದೆ. ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ರಾಯಚೂರು ಸೇರಿದಂತೆ ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಗಂಟೆಗೆ 40–50 ಕಿಮೀ ವೇಗದ ಬಿರುಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದ್ದು, ಸಾರ್ವಜನಿಕರು ಮತ್ತು ರೈತರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಗುಡುಗು ಮತ್ತು ಮಿಂಚಿನ ಸಂದರ್ಭಗಳಲ್ಲಿ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಮನವಿ ಮಾಡಲಾಗಿದೆ.

ಬಾಗಲಕೋಟೆ, ಬೀದರ್, ಕಲಬುರಗಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

ಮೃಗಶಿರ ಮಳೆಗೆ ರೈತರಲ್ಲಿ ಹೊಸ ಉತ್ಸಾಹ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಎಲ್‌ನೀನೋ ಪರಿಣಾಮದಿಂದ ಈ ವರ್ಷ ಮಳೆ ಕೊರತೆ ಉಂಟಾಗಲಿದೆ ಎಂಬ ಆತಂಕದ ನಡುವೆಯೂ ಭೂಮಿತಾಯಿ ಮತ್ತು ಮಳೆರಾಯನ ಮೇಲಿನ ನಂಬಿಕೆಯಿಂದ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದ ರೈತ ಸಮುದಾಯಕ್ಕೆ ಶನಿವಾರ ಸುರಿದ ಮೃಗಶಿರ ಮಳೆ ಹೊಸ ಚೈತನ್ಯ ತುಂಬಿದೆ.

ಹೆಸರು, ಮೆಕ್ಕೆಜೋಳ, ಉಳ್ಳಾಗಡ್ಡಿ, ಹತ್ತಿ, ಶೇಂಗಾ, ತೊಗರಿ ಹಾಗೂ ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆ ಈಗಾಗಲೇ ಆರಂಭವಾಗಿದ್ದು, ಉತ್ತಮ ಮಳೆಯಿಂದ ರೈತರ ಮುಖದಲ್ಲಿ ಸಂತಸ ಮನೆಮಾಡಿದೆ.

ಬೀಜ, ಗೊಬ್ಬರ, ಡೀಸೆಲ್ ಸೇರಿ ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ ಬಳಿಕ ಮಳೆ ಬಾರದಿದ್ದರೆ ಹೇಗೆ ಎಂಬ ಆತಂಕದಲ್ಲಿದ್ದ ರೈತರಿಗೆ ಮಳೆ ನಿರಾಳತೆ ತಂದಿದೆ.

ತಾಲೂಕಿನ ಶಿಗ್ಲಿ, ರಾಮಗಿರಿ, ಗೊಜನೂರ, ದೊಡ್ಡೂರ, ಸೂರಣಗಿ, ಬಾಲೆಹೊಸೂರ, ಬಡ್ನಿ, ಆದ್ರಳ್ಳಿ, ಯಳವತ್ತಿ, ಯತ್ನಳ್ಳಿ ಸೇರಿದಂತೆ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಜಮೀನುಗಳ ತಗ್ಗು ಪ್ರದೇಶಗಳು, ಕೆರೆ-ಕಟ್ಟೆಗಳು ನೀರಿನಿಂದ ತುಂಬಿ, ಹಳ್ಳಗಳು ಹರಿಯಲು ಆರಂಭಿಸಿವೆ.

ಮಳೆಯ ಪರಿಣಾಮ ರೈತರು ಬೀಜ ಮತ್ತು ರಸಗೊಬ್ಬರ ಖರೀದಿಗಾಗಿ ಕೃಷಿ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಂತ ದೃಶ್ಯ ಸಾಮಾನ್ಯವಾಗಿತ್ತು. ಆದರೆ ಪ್ರತಿ ವರ್ಷದಂತೆ ಈ ವರ್ಷವೂ ಡಿಎಪಿ ಹಾಗೂ ಯೂರಿಯಾ ಗೊಬ್ಬರಕ್ಕಾಗಿ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನೊಂದೆಡೆ, ಪಟ್ಟಣ ಹಾಗೂ ಗ್ರಾಮೀಣ ಭಾಗದ ಚರಂಡಿಗಳು ತ್ಯಾಜ್ಯದಿಂದ ಮುಚ್ಚಿಕೊಂಡಿದ್ದರಿಂದ ಮಳೆ ನೀರು ರಸ್ತೆ ಮೇಲೆ ಹರಿದು ಅವ್ಯವಸ್ಥೆ ಸೃಷ್ಟಿಸಿತು. ತಗ್ಗು-ಗುಂಡಿಗಳಿಂದ ಕೂಡಿರುವ ರಸ್ತೆಗಳ ದುಸ್ಥಿತಿ ಮತ್ತೊಮ್ಮೆ ಬಯಲಾಗಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ಸಂಚಾರಕ್ಕೆ ಪರದಾಡುವಂತಾಯಿತು.
ಲಕ್ಷ್ಮೇಶ್ವರ ಪಟ್ಟಣಕ್ಕೆ ಕಳೆದ ಒಂದು ತಿಂಗಳಿನಿಂದ ನದಿ ನೀರಿನ ಪೂರೈಕೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಹಲವರು ಮಳೆ ನೀರನ್ನು ಸಂಗ್ರಹಿಸಿಕೊಂಡ ದೃಶ್ಯ ಕಂಡುಬಂತು. ಸಂಜೆ ವೇಳೆ ಆರಂಭವಾದ ನಿರಂತರ ಮಳೆಯಿಂದ ವ್ಯಾಪಾರ-ವಹಿವಾಟು ಹಾಗೂ ಸಂಚಾರಕ್ಕೂ ಅಡಚಣೆ ಉಂಟಾಯಿತು. ಜನರು ಮತ್ತೆ ಛತ್ರಿ, ರೇನ್‌ಕೋಟ್ ಹಾಗೂ ಸ್ವೆಟರ್‌ಗಳ ಮೊರೆ ಹೋದರು.

“ಮಳೆ ಕೊರತೆ ಆತಂಕದ ನಡುವೆಯೂ ಕೃಷಿ ನಂಬಿ ಬಿತ್ತನೆ ಮಾಡಿದ್ದೇವೆ. ಇದೀಗ ಸುರಿದ ಮೃಗಶಿರ ಮಳೆ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.”
ಚನ್ನಪ್ಪ ಚಣ್ಮುಕಿ, ರೈತ ಮುಖಂಡ

ಗದಗ ಜಿಲ್ಲಾ ಪದಾಧಿಕಾರಿಗಳ ನೇಮಕ

ವಿಜಯಸಾಕ್ಷಿ ಸುದ್ದಿ, ಗದಗ: ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ಗದಗ ಜಿಲ್ಲಾ ಘಟಕದ ಪದಾಧಿಕಾರಿಗಳ ನೇಮಕಾತಿ ಸಂಬಂಧ ಜಿಲ್ಲಾ ಕಚೇರಿಯಲ್ಲಿ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಎಂ.ಡಿ. ಜಾಫರ್ ಡಾಲಾಯತ್ ವಹಿಸಿಕೊಂಡಿದ್ದು, ಮುಖ್ಯ ಅತಿಥಿಯಾಗಿ ರಾಜ್ಯಾಧ್ಯಕ್ಷ ಮಹ್ಮದಶಫಿ ನಾಗರಕಟ್ಟಿ ಭಾಗವಹಿಸಿದ್ದರು. ಸಭೆಯಲ್ಲಿ ಜಿಲ್ಲಾ ಘಟಕದ ಉಪಾಧ್ಯಕ್ಷ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳ ನೇಮಕ ಕುರಿತು ಚರ್ಚಿಸಿ, ನಿವೃತ್ತ ನೌಕರರಾದ ಮಹಬೂಬ ಬಾದಷಾ ಅಮೀರಸಾಹೇಬ ಖಾಜಿ ಅವರನ್ನು ಜಿಲ್ಲಾ ಉಪಾಧ್ಯಕ್ಷರಾಗಿ ಹಾಗೂ ರಿಯಾಜ ಅಹ್ಮದ್ ಈಟಿ ಅವರನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಒಮ್ಮತದಿಂದ ಆಯ್ಕೆ ಮಾಡಲಾಯಿತು.

ರಾಜ್ಯಾಧ್ಯಕ್ಷ ಮಹ್ಮದಶಫಿ ನಾಗರಕಟ್ಟಿ ಅವರ ಆದೇಶದ ಮೇರೆಗೆ ಜಿಲ್ಲಾಧ್ಯಕ್ಷ ಎಂ.ಡಿ. ಜಾಫರ್ ಡಾಲಾಯತ್ ಅವರು ನೇಮಕಾತಿ ಆದೇಶ ಹೊರಡಿಸಿದರು.

ನೇಮಕಗೊಂಡ ಪದಾಧಿಕಾರಿಗಳು ಗದಗ ಜಿಲ್ಲೆಯ ಮುಸ್ಲಿಂ ಸಮುದಾಯವನ್ನು ಸಂಘಟಿಸಿ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಸೂಚಿಸಲಾಗಿದೆ.

ಜನರ ಜೀವಕ್ಕೆ ಕಂಟಕವಾದ ‘ಲಂಡಿ ಹಳ್ಳ’

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಮಧ್ಯ ಭಾಗದ ಮೂಲಕ ಹರಿಯುತ್ತಿರುವ ‘ಲಂಡಿ ಹಳ್ಳ’ ಇದೀಗ ಸುತ್ತಮುತ್ತಲಿನ ಜನರ ಜೀವ-ಜೀವನಕ್ಕೆ ವಿಷ ವರ್ತುಲವಾಗಿ ಪರಿಣಮಿಸಿದ್ದು, ನೂರಾರು ಕುಟುಂಬಗಳು ರೋಗ-ರುಜಿನ, ಗಬ್ಬು ವಾಸನೆ ಹಾಗೂ ವಿಷಜಂತುಗಳ ಭೀತಿಯಲ್ಲಿ ದಿನ ಕಳೆಯುವಂತಾಗಿದೆ.

ಹಳ್ಳದಕೇರಿ, ಕೆಂಚಲಾಪುರ, ಬನಶಂಕರಿ ಬಡಾವಣೆ, ಆಸಾರ ಓಣಿ, ಬಳಿಗಾರ ಓಣಿ, ಉಪ್ಪಿನ ಮಾಳ, ಸೊಪ್ಪಿನಕೇರಿ, ಅಂಬೇಡ್ಕರ ನಗರ, ಮಂಜಲಾಪುರ ಹಾಗೂ ಅಡರಕಟ್ಟಿ ಭಾಗದ ಜನರು ಈ ಸಮಸ್ಯೆಯಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.

ಜನವಸತಿ ಪ್ರದೇಶದ ಅಂಚಿನುದ್ದಕ್ಕೂ ಹರಿದಿರುವ ಹಳ್ಳದಲ್ಲಿ ವರ್ಷಪೂರ್ತಿ ಆಳೆತ್ತರ ಬೆಳೆದ ಗಿಡಗಂಟೆಗಳು, ತ್ಯಾಜ್ಯ ಮಿಶ್ರಿತ ಕೊಳಚೆ ನೀರು, ಹಾವು-ಚೇಳು ಸೇರಿದಂತೆ ವಿಷಜಂತುಗಳ ಕಾಟ, ಸೊಳ್ಳೆ-ಕ್ರಿಮಿಗಳ ಹಾವಳಿ ಮತ್ತು ದುರ್ವಾಸನೆಯಿಂದ ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಮಳೆಯಾದರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದ್ದು, ಸೇತುವೆ ಮೇಲೆ ನೀರು ಹರಿದು ಸಂಚಾರ ಸ್ಥಗಿತಗೊಳ್ಳುವುದು ಸಾಮಾನ್ಯವಾಗಿದೆ. ಚರಂಡಿ ನೀರು ಕೂಡ ಇದೇ ಹಳ್ಳಕ್ಕೆ ಸೇರುತ್ತಿರುವುದರಿಂದ ತ್ಯಾಜ್ಯ ಮತ್ತು ಕೊಳಚೆ ಮತ್ತಷ್ಟು ಹೆಚ್ಚಾಗಿದೆ.

ಸ್ಥಳೀಯರು ಹಲವು ವರ್ಷಗಳಿಂದ ಹಳ್ಳವನ್ನು ಸಂಪೂರ್ಣ ಸ್ವಚ್ಛಗೊಳಿಸಿ, ಎರಡೂ ಬದಿಯಲ್ಲಿ ಕಾಂಕ್ರೀಟ್ ತಡೆಗೋಡೆ ಹಾಗೂ ಕಾಂಪೌಂಡ್ ನಿರ್ಮಿಸುವಂತೆ ಆಗ್ರಹಿಸುತ್ತಿದ್ದರೂ ಶಾಶ್ವತ ಪರಿಹಾರ ಮಾತ್ರ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ಮಕ್ಕಳನ್ನು ಹಗಲಲ್ಲೂ ಹೊರಗೆ ಬಿಡಲು ಭಯವಾಗುತ್ತಿದೆ. ದೊಡ್ಡ ಮಳೆ ಬಂದರೆ ರಾತ್ರಿ ನಿದ್ದೆಯೇ ಇರುವುದಿಲ್ಲ. ಹಾವು-ಚೇಳು, ಹಂದಿ, ನಾಯಿಗಳ ಕಾಟದ ನಡುವೆ ಬದುಕುವುದು ದುಸ್ತರವಾಗಿದೆ” ಎಂದು ಸ್ಥಳೀಯರು ಅಳಲು ತೋಡಿಕೊಂಡರು.

ಈ ಹಿಂದೆ ಪುರಸಭೆ ಮುಖ್ಯಾಧಿಕಾರಿಯಾಗಿದ್ದ ಶಂಕರ ಹುಲ್ಲಮ್ಮನವರ ಜಿಲ್ಲಾಧಿಕಾರಿಗಳ ಸಹಕಾರದೊಂದಿಗೆ ಹಳ್ಳ ಸ್ವಚ್ಛಗೊಳಿಸುವ ಕಾರ್ಯ ಕೈಗೊಂಡಿದ್ದರು. ಆದರೆ ಇದೀಗ ಮತ್ತೆ ಸಮಸ್ಯೆ ತೀವ್ರಗೊಂಡಿದೆ.

ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ಪ್ರತಿಕ್ರಿಯಿಸಿ, “ಈ ಹಳ್ಳಕ್ಕೆ ಮಳೆ ನೀರಿನ ಜೊತೆಗೆ ಚರಂಡಿ ನೀರು ಕೂಡ ಸೇರುತ್ತಿದೆ. ಅಪಾರ ಪ್ರಮಾಣದಲ್ಲಿ ಗಿಡಗಂಟೆ ಹಾಗೂ ಕೊಳಚೆ ಸಂಗ್ರಹವಾಗಿದೆ. ಕೇವಲ ಪೌರಕಾರ್ಮಿಕರಿಂದ ಸ್ವಚ್ಛತೆ ಸಾಧ್ಯವಿಲ್ಲ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಹಿಟ್ಯಾಚಿ ಹಾಗೂ ಜೆಸಿಬಿ ಬಳಸಿ ಶೀಘ್ರ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

“ಹಳ್ಳದಂಚಿನಲ್ಲಿ ಬದುಕುತ್ತಿರುವ ಜನರು ನಿತ್ಯ ಭಯದಲ್ಲೇ ದಿನ ಕಳೆಯುತ್ತಿದ್ದಾರೆ. ಸಮಸ್ಯೆ ಪರಿಹರಿಸದಿದ್ದರೆ ಜಾನುವಾರುಗಳೊಂದಿಗೆ ರಾಜ್ಯ ಹೆದ್ದಾರಿ ತಡೆದು ಹೋರಾಟ ನಡೆಸುತ್ತೇವೆ.”

ಮಂಜುನಾಥ ಮಾಗಡಿ

ರೈತ ಮುಖಂಡ

ಎಚ್.ಕೆ. ಪಾಟೀಲರ ಕಡೆಗಣನೆಗೆ ಯುವ ಕಾಂಗ್ರೆಸ್ ಆಕ್ರೋಶ: ಮುಂದಿನ ವಿಸ್ತರಣೆಯಲ್ಲಿ ನ್ಯಾಯ ಕೊಡಲಿ

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜಕೀಯದಲ್ಲಿ ಜನಪರ ಕೆಲಸಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ನಾಯಕ ಡಾ. ಎಚ್.ಕೆ. ಪಾಟೀಲರಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡದಿರುವುದು ಉತ್ತರ ಕರ್ನಾಟಕದ ಜನತೆಗೆ ಮಾಡಿದ ಅನ್ಯಾಯವಾಗಿದೆ ಎಂದು ಗದಗ-ಬೆಟಗೇರಿ ಶಹರ ಯುವ ಕಾಂಗ್ರೆಸ್ ಅಧ್ಯಕ್ಷ ಅನ್ವರ ನದಾಫ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ದಶಕಗಳ ಕಾಲ ಶಾಸಕರಾಗಿ, ವಿವಿಧ ಇಲಾಖೆಗಳ ಸಚಿವರಾಗಿ ಹಾಗೂ ಜನಪರ ಆಡಳಿತಗಾರರಾಗಿ ಎಚ್.ಕೆ. ಪಾಟೀಲರು ಸೇವೆ ಸಲ್ಲಿಸಿದ್ದಾರೆ. ನೀರಾವರಿ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕಾನೂನು ಹಾಗೂ ಸಂಸದೀಯ ವ್ಯವಹಾರಗಳಂತಹ ಪ್ರಮುಖ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿರುವ ಅನುಭವ ಅವರಿಗೆ ಇದೆ ಎಂದು ಹೇಳಿದರು.

“ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರಾಗಿ ಸರ್ಕಾರದಲ್ಲಿ ಅತ್ಯುತ್ತಮ ಕೆಲಸ ಮಾಡಿದ ಕೀರ್ತಿ ಎಚ್.ಕೆ. ಪಾಟೀಲರಿಗೆ ಸಲ್ಲುತ್ತದೆ. ಉತ್ತರ ಕರ್ನಾಟಕದ ಧ್ವನಿಯಾಗಿ ರೈತರ ಪರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ” ಎಂದು ಶ್ಲಾಘಿಸಿದರು.

ರಾಜ್ಯದ ಸರ್ವ ಸಮುದಾಯಗಳ ಪ್ರೀತಿಗೆ ಪಾತ್ರರಾಗಿರುವ ಎಚ್.ಕೆ. ಪಾಟೀಲರು ದೀನ ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ನಿರಂತರ ಶ್ರಮಿಸಿದ್ದಾರೆ. ಇಂತಹ ಅನುಭವಿ, ಪ್ರಾಮಾಣಿಕ ಹಾಗೂ ಜನಪರ ನಾಯಕರಿಗೆ ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ನೀಡಿ ಪ್ರಮುಖ ಜವಾಬ್ದಾರಿ ನೀಡಬೇಕು ಎಂದು ಆಗ್ರಹಿಸಿದರು.

ಉತ್ತರ ಕರ್ನಾಟಕ ಹಾಗೂ ಅಖಂಡ ಧಾರವಾಡ ಜಿಲ್ಲೆಯ ಜನರ ಆಶಯದಂತೆ ಎಚ್.ಕೆ. ಪಾಟೀಲರಿಗೆ ಸೂಕ್ತ ಸ್ಥಾನಮಾನ ನೀಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಮನವಿ ಮಾಡಿದ್ದಾರೆ.

“ಜನಪರ ಆಡಳಿತ, ಪ್ರಾಮಾಣಿಕ ರಾಜಕಾರಣ ಮತ್ತು ಉತ್ತರ ಕರ್ನಾಟಕದ ಧ್ವನಿಯಾಗಿ ಕೆಲಸ ಮಾಡಿದ ಎಚ್.ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡದಿರುವುದು ಈ ಭಾಗದ ಜನತೆಗೆ ಮಾಡಿದ ಅನ್ಯಾಯ.”

ಅನ್ವರ ನದಾಫ

ಗದಗ-ಬೆಟಗೇರಿ ಶಹರ ಯುವ ಕಾಂಗ್ರೆಸ್ ಅಧ್ಯಕ್ಷ

ಅಗ್ನಿವೀರ್‌ಗೆ ನಾಲ್ವರು ವಿದ್ಯಾರ್ಥಿಗಳ ಆಯ್ಕೆ

ವಿಜಯಸಾಕ್ಷಿ ಸುದ್ದಿ, ನರೇಗಲ್: ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ನಾಲ್ವರು ವಿದ್ಯಾರ್ಥಿಗಳು ಭಾರತೀಯ ಸೇನೆಯ ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್‌ಗೆ ಆಯ್ಕೆಯಾಗಿದ್ದು, ಕಾಲೇಜಿಗೆ ಹೆಮ್ಮೆ ತಂದಿದ್ದಾರೆ.

ಇತ್ತೀಚೆಗೆ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಬಿಎ 6ನೇ ಸೆಮಿಸ್ಟರ್‌ನ ಕಳಕಾಪುರ ಗ್ರಾಮದ ಶಾರುಖ್ ಹಸನಸಾಬ್ ಗೌಡರ, ಬಿಎ 4ನೇ ಸೆಮಿಸ್ಟರ್‌ನ ಮಾರನಬಸರಿ ಗ್ರಾಮದ ಬಸವರಾಜ್ ಲಂಕೆಪ್ಪ ಕುರಿ, ಬಿಎ 4ನೇ ಸೆಮಿಸ್ಟರ್‌ನ ಜಕ್ಕಲಿ ಗ್ರಾಮದ ಶಬ್ಬೀರಸಾಬ್ ಅಲ್ಲಿಸಾಬ್ ಬಸಾಪುರ ಹಾಗೂ ಬಿಎಸ್‌ಸಿ 4ನೇ ಸೆಮಿಸ್ಟರ್‌ನ ಜಕ್ಕಲಿ ಗ್ರಾಮದ ಶಂಕರಪ್ಪ ಮಲ್ಲಪ್ಪ ಇಟಗಿ ಅವರು ಸೇನೆಗೆ ಆಯ್ಕೆಯಾಗಿದ್ದಾರೆ ಎಂದು ಪ್ರಾಂಶುಪಾಲೆ ಜಯಶ್ರೀ ಮುತಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಗ್ನಿವೀರ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ, ಸಿಡಿಸಿ ಸದಸ್ಯರು ಹಾಗೂ ಕಾಲೇಜಿನ ಸಿಬ್ಬಂದಿ ಅಭಿನಂದಿಸಿದ್ದಾರೆ.

ಇತ್ತೀಚೆಗೆ ಕಾಲೇಜಿನಲ್ಲಿ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ವಿವಿಧ ಕಂಪನಿಗಳಿಗೆ 79 ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. ಇದೀಗ ನಾಲ್ವರು ವಿದ್ಯಾರ್ಥಿಗಳು ಸೇನೆಗೆ ಆಯ್ಕೆಯಾಗುವ ಮೂಲಕ ಕಾಲೇಜಿನ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಪ್ರಸಕ್ತ ಸಾಲಿನ ಪ್ರಥಮ ವರ್ಷದ ಪದವಿ ಕೋರ್ಸ್‌ಗಳ ಪ್ರವೇಶಾತಿಗೆ ವಿವಿಧ ಊರುಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಿದ್ದು, ಬಿಸಿಎ ವಿಭಾಗದ ಪ್ರವೇಶಾತಿ ಈಗಾಗಲೇ ಪೂರ್ಣಗೊಂಡಿದೆ. ಬಿಎ, ಬಿಕಾಂ ಹಾಗೂ ಬಿಎಸ್‌ಸಿ (ಸಿಎಸ್) ವಿಭಾಗಗಳಿಗೆ ಪ್ರವೇಶಾತಿ ಪ್ರಕ್ರಿಯೆ ಮುಂದುವರಿದಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

15 ವರ್ಷಗಳ ಕಾಯುವಿಕೆ ಅಂತ್ಯ? ನಿವೇಶನ ವಿತರಣೆಗೆ ವೇಗ!

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪಟ್ಟಣ ಪಂಚಾಯತಿ ವತಿಯಿಂದ 2012ರಿಂದ ಕಡುಬಡವರು ಹಾಗೂ ನಿರ್ಗತಿಕರಿಗೆ ಹಂಚಿಕೆಯಾಗಬೇಕಿದ್ದ ನಿವೇಶನಗಳ ವಿತರಣೆ ವಿಳಂಬವಾಗಿರುವುದನ್ನು ಖಂಡಿಸಿ ಮಹಿಳೆಯರು ಪಟ್ಟಣ ಪಂಚಾಯತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಪಪಂ ಮುಖ್ಯಾಧಿಕಾರಿ ಮಂಜುನಾಥ ಗುಳೆದ, ಕಳೆದ 15 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಿವೇಶನ ಹಂಚಿಕೆ ಪ್ರಕ್ರಿಯೆ ಇದೀಗ ಚುರುಕುಗೊಂಡಿದೆ ಎಂದು ತಿಳಿಸಿದರು.

ಸುಮಾರು 4 ಸಾವಿರ ಅರ್ಜಿಗಳ ಪೈಕಿ 373 ಫಲಾನುಭವಿಗಳ ತಾತ್ಕಾಲಿಕ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದ್ದು, ಪರಿಶೀಲನಾ ಪ್ರಕ್ರಿಯೆ ನಡೆಯುತ್ತಿದೆ. ಉಸ್ತುವಾರಿ ಸಚಿವರ ಸೂಚನೆಯಂತೆ ಜಿಲ್ಲಾಧಿಕಾರಿ, ಆಡಳಿತಾಧಿಕಾರಿ ಹಾಗೂ ಅಧಿಕಾರಿಗಳು ಸರ್ವೇ ಕಾರ್ಯ ಕೈಗೊಂಡಿದ್ದು, ನಿವೇಶನ ರಹಿತ ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ ಎಂದು ಹೇಳಿದರು.

ಆಗಸ್ಟ್ 15ರಂದು ಉಸ್ತುವಾರಿ ಸಚಿವರಿಂದ ಹಕ್ಕುಪತ್ರ ವಿತರಣೆ ಮಾಡುವ ಕುರಿತು ಚರ್ಚೆ ನಡೆದಿದ್ದು, ಪಟ್ಟಣದ ಹಿರಿಯರ ಸಮ್ಮುಖದಲ್ಲಿ ಅಂತಿಮ ನಿರ್ಧಾರ ಕೈಗೊಂಡು ಅರ್ಹ ಕುಟುಂಬಗಳಿಗೆ ನಿವೇಶನ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮುಳಗುಂದ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಜಿ. ಸುಬ್ಬಾಪೂರಮಠ ಹಾಗೂ ಪೊಲೀಸ್ ಸಿಬ್ಬಂದಿ ಬಂದುಬಸ್ತ್ ಕೈಗೊಂಡಿದ್ದು, ಪ್ರತಿಭಟನೆ ಶಾಂತಿಯುತವಾಗಿ ಅಂತ್ಯವಾಯಿತು.