Home Blog Page 11

ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸಿ: ಎಸ್.ಆರ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಶಕ್ತಿ, ಯುವನಿಧಿ, ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಲು ಅಧಿಕಾರಿಗಳು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ ಸೂಚಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗೃಹಲಕ್ಷ್ಮಿ ಯೋಜನೆಯಡಿ ನಿಧನರಾದ ಫಲಾನುಭವಿಗಳ ಹೆಸರುಗಳನ್ನು ತೆಗೆದುಹಾಕುವಂತೆ ಈಗಾಗಲೇ ಸೂಚನೆ ನೀಡಲಾಗಿತ್ತು. 7,725 ಮಂದಿ ಫಲಾನುಭವಿಗಳು ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದ್ದು, ಅದರಲ್ಲಿ 280 ಜನರನ್ನು ಯೋಜನೆಯಿಂದ ಕೈಬಿಡಲಾಗಿದೆ. ನಕಲಿ ಮರಣ ಪ್ರಮಾಣ ಪತ್ರಗಳೂ ಪತ್ತೆಯಾಗಿರುವುದರಿಂದ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಯುವನಿಧಿ ಯೋಜನೆಯ ಹಣ ಜನವರಿವರೆಗೆ ಮಾತ್ರ ಪಾವತಿಯಾಗಿದ್ದು, ಫೆಬ್ರವರಿಯಿಂದ ಮೇ ತಿಂಗಳವರೆಗೆ ಹಣ ಯಾಕೆ ಬಿಡುಗಡೆಯಾಗಿಲ್ಲ ಎಂಬುದರ ಕುರಿತು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚಿಸಿದರು. ಐಟಿಐ ಹಾಗೂ ಜಿಟಿಟಿಸಿ ಕಾಲೇಜುಗಳಲ್ಲಿ ಕೌಶಲ್ಯ ತರಬೇತಿ ಆಯೋಜಿಸುವಂತೆಯೂ ಹೇಳಿದರು.

ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿದ್ದು, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ಸರ್ಕಾರ ಮುಂದಾಗಿದೆ. ಮುಮ್ಮಿಗಟ್ಟಿ ಐಟಿಐ ಕಾಲೇಜು ಹಾಗೂ ದೇವಿಕೊಪ್ಪ ಭಾಗದ ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ತಿಳಿಸಿದರು.

ಮಳೆಗಾಲ ಆರಂಭವಾಗುತ್ತಿರುವುದರಿಂದ ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್ ಕಂಬಗಳ ಬಗ್ಗೆ ಹೆಸ್ಕಾಂ ಅಧಿಕಾರಿಗಳು ಗಮನಹರಿಸಬೇಕು. ಗ್ರಾಮೀಣ ಭಾಗದಲ್ಲಿ ಬೀಳುವ ಹಂತದಲ್ಲಿರುವ ಕಂಬಗಳನ್ನು ತಕ್ಷಣ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ರೇಹಾನ್ ರಝಾ ಐನಾಪೂರಿ, ಮುರುಗಯ್ಯ ವಿರಕ್ತಮಠ, ಶಾಂತಪ್ಪ ಅಕ್ಕಿ, ಸುಧೀರ ಬೋಳಾರ, ರತ್ನಾ ತೇಗೂರಮಠ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

“ಯಾವುದೇ ಕಾರಣಕ್ಕೂ ಸರ್ಕಾರದ ಹಣ ದುರುಪಯೋಗ ಆಗಬಾರದು. ಸಭೆಗೆ ಬರುವ ಮುನ್ನ ತಾಲ್ಲೂಕುವಾರು ಮಾಹಿತಿ ಸಿದ್ಧಪಡಿಸಿಕೊಂಡೇ ಅಧಿಕಾರಿಗಳು ಹಾಜರಾಗಬೇಕು”

ಎಸ್.ಆರ್. ಪಾಟೀಲ

ಜಿ.ಎಸ್. ಪಾಟೀಲರಿಗೆ ಮಂತ್ರಿ ಮಾಡಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಒತ್ತಾಯ

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ರೋಣ ಕ್ಷೇತ್ರದ ನಾಲ್ಕು ಬಾರಿ ಶಾಸಕರಾಗಿರುವ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರೋಣ ತಾಲೂಕು ಘಟಕ ಕಾಂಗ್ರೆಸ್ ಹೈಕಮಾಂಡ್‌ಗೆ ಒತ್ತಾಯಿಸಿದೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾ ತಾಲೂಕು ಅಧ್ಯಕ್ಷ ಅನಿಲಕುಮಾರ ತೆಗ್ಗಿನಕೇರಿ, “ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ವೀರಶೈವ ಲಿಂಗಾಯತ ಸಮುದಾಯದ ಪಾತ್ರ ಮಹತ್ವದ್ದಾಗಿದೆ. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಸಮುದಾಯಕ್ಕೆ ನ್ಯಾಯ ಒದಗಿಸಬೇಕು” ಎಂದು ಆಗ್ರಹಿಸಿದರು.

“ಸಚಿವ ಸ್ಥಾನ ನೀಡದಿದ್ದರೆ ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆ. ಅಗತ್ಯವಿದ್ದರೆ ಕಾಂಗ್ರೆಸ್ ಸದಸ್ಯತ್ವಕ್ಕೂ ರಾಜೀನಾಮೆ ನೀಡಲು ಸಿದ್ಧರಾಗಿದ್ದೇವೆ” ಎಂದು ಅನಿಲಕುಮಾರ ತೆಗ್ಗಿನಕೇರಿ ಎಚ್ಚರಿಕೆ ನೀಡಿದರು.

ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕತ್ವ ಈ ಹಿಂದೆ ಭರವಸೆ ನೀಡಿದ್ದು, ಈ ಬಾರಿ ಸಚಿವ ಸ್ಥಾನ ನೀಡಲೇಬೇಕು ಎಂದು ಒತ್ತಾಯಿಸಿದರು.

ರೈತರ ಸಮಸ್ಯೆ, ನೀರಾವರಿ ಯೋಜನೆಗಳು, ರಸ್ತೆ ಅಭಿವೃದ್ಧಿ ಹಾಗೂ ಗ್ರಾಮೀಣ ಭಾಗದ ಜನಪರ ಕೆಲಸಗಳಲ್ಲಿ ಜಿ.ಎಸ್. ಪಾಟೀಲ ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಪಕ್ಷ ಸಂಘಟನೆಗೂ ಅಪಾರ ಕೊಡುಗೆ ನೀಡಿರುವ ಅವರಿಗೆ ಸಚಿವ ಸ್ಥಾನ ನೀಡುವುದು ಸೂಕ್ತ ಗೌರವವಾಗಲಿದೆ ಎಂದು ಹೇಳಿದರು.

ಈ ವೇಳೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಂಜುಳಾ ರೇವಡಿ ಮಾತನಾಡಿ, “ಹಲವಾರು ಬಾರಿ ಶಾಸಕರಾಗಿ ಆಯ್ಕೆಯಾದ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು. ನಮ್ಮ ಶಾಸಕರಿಗೆ ಅನ್ಯಾಯವಾದರೆ ಸಾಮೂಹಿಕ ರಾಜೀನಾಮೆ ನೀಡಲು ಸಹ ಸಿದ್ಧರಾಗಿದ್ದೇವೆ” ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಭೀಮರೆಡ್ಡೆಪ್ಪ ರಡ್ಡೇರ, ಎಂ.ಎಸ್. ಮಲ್ಲಾಪೂರ, ಸಿದ್ದರಾಮಗೌಡ ಜೀವನಗೌಡರ, ಸಿದ್ದು ಗೊಂಗಡಶೆಟ್ಟಿಮಠ, ಶರಣು ಬ್ಯಾಳಿ, ಮಲ್ಲಿಕಾರ್ಜುನ ರಡ್ಡೇರ, ವಿಜಯಗೌಡ ಪಾಟೀಲ, ರೇಣುಕಾ ಧರ್ಮಾಯತ, ಮಂಜುನಾಥ ಅಂಗಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಜಿ.ಎಸ್. ಪಾಟೀಲ ಅವರಿಗೆ ಈ ಬಾರಿ ಸಚಿವ ಸ್ಥಾನ ಸಿಗದಿದ್ದರೆ ನಾವು ಮೌನವಾಗಿರುವುದಿಲ್ಲ. ಅಗತ್ಯವಿದ್ದರೆ ಹೋರಾಟಕ್ಕೂ, ರಾಜೀನಾಮೆಗೂ ಸಿದ್ಧ.”

ಅನಿಲಕುಮಾರ ತೆಗ್ಗಿನಕೇರಿ

ಅಧ್ಯಕ್ಷರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ರೋಣ ತಾಲೂಕು ಘಟಕ

ಜೂ. 7ರಂದು ಬ್ರಾಹ್ಮಣ ಸಂಘದಿಂದ ಪ್ರತಿಭಾ ಪುರಸ್ಕಾರ

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಪ್ರಸಕ್ತ ಸಾಲಿನ ಪ್ರತಿಭಾ ಪುರಸ್ಕಾರ, ಸರ್ಕಾರಿ ಸೇವೆಯಿಂದ ನಿವೃತ್ತರಾದವರಿಗೆ ಗೌರವ ಸಮರ್ಪಣೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಜೂನ್ 7ರಂದು ಹಮ್ಮಿಕೊಳ್ಳಲಾಗಿದೆ.

ನಗರದ ಸಂಭಾಪುರ ರಸ್ತೆಯ ಶಂಕರಮಠ ಸಾಂಸ್ಕೃತಿಕ ಭವನದಲ್ಲಿ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ವೆಂಕಟೇಶ ಕುಲಕರ್ಣಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದಿಕ ವಿದ್ವಾಂಸರಾದ ರತ್ನಾಕರಭಟ್ ಜೋಶಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದು, ಶಾಸಕ ಎಚ್. ಕೆ. ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಸಂಘದ ಅಧ್ಯಕ್ಷ ಎಸ್. ರಘುನಾಥ, ಆಸುಗೋಡು ಜಯಸಿಂಹ, ಹಾಸ್ಯ ಕಲಾವಿದ ನರಸಿಂಹ ಜೋಶಿ, ಗುರುರಾಜ ಬಳಗಾನೂರ, ಡಾ. ಕುಶಾಲ ಗೋಡಖಿಂಡಿ, ಶ್ರೀನಿವಾಸ ಹುಯಿಲಗೋಳ, ಡಾ. ಜಿ.ಆರ್. ನೆರ್ಲೆಕರ, ದತ್ತಾತ್ರಯ ಜೋಶಿ, ಎನ್.ಆರ್. ಕುಲಕರ್ಣಿ ಹಾಗೂ ಕೃಷ್ಣ ಕುಲಕರ್ಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಅಂದು ಬೆಳಿಗ್ಗೆ 9 ಗಂಟೆಗೆ ಅಧಿಕ ಮಾಸದ ಅಂಗವಾಗಿ ಜಿಲ್ಲೆಯ ವಿವಿಧ ಮಹಿಳಾ ಭಜನಾ ಮಂಡಳಿಗಳಿಂದ ಕುಂಕುಮಾರ್ಚನೆ ಹಾಗೂ ಭಜನಾ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 3 ಗಂಟೆಗೆ ಗಂಗಾವತಿಯ ಪ್ರಸಿದ್ಧ ನಗೆ ಭಾಷಣಕಾರ ನರಸಿಂಹ ಜೋಶಿ ಅವರಿಂದ ನಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರತ್ನಾಕರಭಟ್ ಜೋಶಿ, ಶ್ರೀನಿವಾಸ ಹುಯಿಲಗೋಳ, ರಾಮಚಂದ್ರ ಮೊನೆ, ರವೀಂದ್ರ ಜೋಶಿ, ಶ್ರೀಪಾದ, ಕಿರಣ ಪೂಜಾರ, ಅನಿಲ ತೆಂಬದಮನಿ, ಅನಿಲ ಪುರಾಣಿಕ ಹಾಗೂ ದತ್ತಣ್ಣ ಜೋಶಿ ಉಪಸ್ಥಿತರಿದ್ದರು.

“ನೂತನ ಸಚಿವ ಸಂಪುಟದ ಮೊದಲ ಹಂತದಲ್ಲಿ ಬ್ರಾಹ್ಮಣ ಸಮಾಜಕ್ಕೆ ಯಾವುದೇ ಸಚಿವ ಸ್ಥಾನ ದೊರೆತಿಲ್ಲ. ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಾದರೂ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು”

ವೆಂಕಟೇಶ ಕುಲಕರ್ಣಿ

ವಿದ್ಯಾರ್ಥಿಗಳಿಗೆ ₹1 ಲಕ್ಷ ಶಿಷ್ಯವೇತನ

ಬ್ರಾಹ್ಮಣ ಸಮಾಜದ ಮುಖಂಡ ಗುರುರಾಜ ಬಳಗಾನೂರ ಮಾತನಾಡಿ, “ಬ್ರಾಹ್ಮಣ ಅಭಿವೃದ್ಧಿ ನಿಗಮದಿಂದ ಸಮಾಜದ ಜನರಿಗೆ ಈಗಾಗಲೇ ₹1 ಕೋಟಿಗೂ ಅಧಿಕ ಸಾಲ ಸೌಲಭ್ಯ ನೀಡಲಾಗಿದೆ. ಉನ್ನತ ಶಿಕ್ಷಣ ಪಡೆಯುವ ಬಡ ವಿದ್ಯಾರ್ಥಿಗಳಿಗೆ ₹1 ಲಕ್ಷ ಶಿಷ್ಯವೇತನ ನೀಡಲಾಗುತ್ತಿದ್ದು, ಅರ್ಹ ವಿದ್ಯಾರ್ಥಿಗಳು ಸಮಾಜದ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು” ಎಂದು ತಿಳಿಸಿದರು.

ಭಾರತ್ ಜೋಡೋ ಯುವ ಸಂಘಕ್ಕೆ ಸರ್ಕಾರಿ ಹಣ ಬೇಡ: ಛಲವಾದಿ ನಾರಾಯಣಸ್ವಾಮಿ ಆಗ್ರಹ!

ಬೆಂಗಳೂರು: ಭಾರತ್ ಜೋಡೋ ಯುವ ಸಂಘಕ್ಕೆ ಸರ್ಕಾರದಿಂದ ಹಣ ನೀಡಬಾರದು ಎಂದು ಪರಿಷತ್ ವಿಪಕ್ಷ ನಾಯಕ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ  ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರಿ ಬೊಕ್ಕಸದಿಂದ ಯಾವುದೇ ಅನುದಾನ ನೀಡಬಾರದು ಎಂದು ಒತ್ತಾಯಿಸಿದರು. ಸಮಾಜ ಕಲ್ಯಾಣ ಇಲಾಖೆಯ ಕುರಿತು ಕೂಡ ಟೀಕೆ ವ್ಯಕ್ತಪಡಿಸಿದ ಅವರು, ಇಲಾಖೆಯ ನೇಮಕಾತಿ ಮತ್ತು ನಿರ್ವಹಣೆ ವಿಚಾರದಲ್ಲಿಯೂ ಪ್ರಶ್ನೆಗಳನ್ನು ಎತ್ತಿದರು.

ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನವನ್ನು ಟೀಕಿಸಿದ ಅವರು, ಗೃಹಲಕ್ಷ್ಮೀ ಯೋಜನೆಯ ಬಾಕಿ ಪಾವತಿ, ಇಲಾಖೆಗಳ ಆಡಳಿತ ವೈಫಲ್ಯ ಹಾಗೂ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.

ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದ ಅವರು, ಆಡಳಿತದಲ್ಲಿ ಸಮನ್ವಯ ಇಲ್ಲದೆ ಗೊಂದಲ ಉಂಟಾಗಿದೆ. ವಿವಿಧ ಇಲಾಖೆಗಳ ಬದಲಾವಣೆಗಳು ಹಾಗೂ ರಾಜಕೀಯ ಬೆಳವಣಿಗೆಗಳನ್ನು ಉಲ್ಲೇಖಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಅಭ್ಯರ್ಥಿ ಆಯ್ಕೆ ಶೀಘ್ರದಲ್ಲೇ ಪ್ರಕಟವಾಗಲಿದೆ ಎಂದು ಅವರು ಇದೇ ವೇಳೆ ತಿಳಿಸಿದರು.

2,800 ಎಕರೆ ಭೂಸ್ವಾಧೀನ ವಿರೋಧಿಸಿ ರೈತರ ಬೃಹತ್ ಬೈಕ್ ರ‍್ಯಾಲಿ! ಜಿಲ್ಲಾಧಿಕಾರಿಗಳ ಮನವೊಲಿಕೆ ಬಳಿಕ ಪ್ರೊಟೆಸ್ಟ್ ವಾಪಸ್!

ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ಸುಮಾರು 2,800 ಎಕರೆ ಜಮೀನನ್ನು ಕೆಐಎಡಿಬಿ ಭೂಸ್ವಾಧೀನ ಮಾಡಿಕೊಳ್ಳಬಾರದು ಎಂದು ಆಗ್ರಹಿಸಿ ರೈತರು ಬೃಹತ್ ಬೈಕ್ ರ‍್ಯಾಲಿ ನಡೆಸಿದರು.

ಕಳೆದ 81 ದಿನಗಳಿಂದ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದ ರೈತರು ಇಂದು ಬೆಂಗಳೂರಿನ ವಿಧಾನಸೌಧದತ್ತ ಬೈಕ್ ರ‍್ಯಾಲಿ ಮೂಲಕ ಹೊರಟಿದ್ದರು. ಸಾವಿರಾರು ರೈತರು ಈ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

ಸಂಭಾವ್ಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟು ಚಿಕ್ಕಬಳ್ಳಾಪುರ ಪೊಲೀಸರು 500ಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಿದ್ದರು. ಆದರೆ ಅಣಕನೂರು ಬಳಿ ಬೈಕ್ ರ‍್ಯಾಲಿಯನ್ನು ಪೊಲೀಸರು ತಡೆದರು. ಇದರಿಂದ ರೈತರು ರಸ್ತೆ ಮಧ್ಯದಲ್ಲೇ ಕುಳಿತು ಮೂರು ಗಂಟೆಗಳ ಕಾಲ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಜಿ ಪ್ರಭು ಆಗಮಿಸಿ ರೈತರೊಂದಿಗೆ ಮಾತುಕತೆ ನಡೆಸಿ ಮನವೊಲಿಸಿದರು. ಬಳಿಕ ಎರಡು ವಾರಗಳೊಳಗೆ ಕೆಐಎಡಿಬಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.

ಈ ಭರವಸೆಯ ಬಳಿಕ ರೈತರು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.

ಮುಖ್ಯಮಂತ್ರಿ ಸೂಚನೆ ಬೆನ್ನಲ್ಲೇ ಸರ್ಕಾರಿ ನೌಕರರ ಹಾಜರಾತಿಗೆ ಹೊಸ ನಿಯಮ ಜಾರಿ!

ಬೆಂಗಳೂರು: ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿ ಪ್ರತಿದಿನ ಬೆಳಿಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗುವುದು ಕಡ್ಡಾಯವಾಗಿದ್ದು, ಈ ಕುರಿತು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.

ಮುಖ್ಯಮಂತ್ರಿ ಡಿಕೆ ಶಿವಕುಮಾರ್  ಅವರ ಖಡಕ್ ಸೂಚನೆ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಈ ಆದೇಶವನ್ನು ಜಾರಿಗೆ ತಂದಿದ್ದಾರೆ. ಎಲ್ಲಾ ಸರ್ಕಾರಿ ನೌಕರರು ಬೆಳಿಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಹಾಜರಾತಿ ದಾಖಲಿಸಲು ‘ಕರ್ತವ್ಯ ಆ್ಯಪ್’ ಬಳಕೆ ಕಡ್ಡಾಯಗೊಳಿಸಲಾಗಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿ ಕಚೇರಿಗೆ ಬಂದ ತಕ್ಷಣ ‘Check In’ ಮತ್ತು ಕೆಲಸ ಮುಗಿದ ಬಳಿಕ ‘Check Out’ ಮಾಡಬೇಕೆಂದು ಆದೇಶದಲ್ಲಿ ಸೂಚಿಸಲಾಗಿದೆ.

ಇ-ಆಡಳಿತ ಇಲಾಖೆಯು AI ತಂತ್ರಜ್ಞಾನ ಬಳಸಿ ಜಿಲ್ಲಾವಾರು ಹಾಗೂ ಇಲಾಖಾವಾರು ಹಾಜರಾತಿ ಮಾಹಿತಿಯನ್ನು ಪ್ರತಿದಿನ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ ಸ್ವಯಂಚಾಲಿತವಾಗಿ ಕಳುಹಿಸುವ ವ್ಯವಸ್ಥೆ ರೂಪಿಸಿದೆ. ಇಲಾಖಾ ಮುಖ್ಯಸ್ಥರು ತಮ್ಮ ಲಾಗಿನ್ ಮೂಲಕ ‘ಕರ್ತವ್ಯ ಡ್ಯಾಶ್‌ಬೋರ್ಡ್’ನಲ್ಲಿ ಹಾಜರಾತಿ ಪರಿಶೀಲನೆ ಮಾಡಬೇಕಾಗುತ್ತದೆ.

ಕಚೇರಿ ಕರ್ತವ್ಯದ ನಿಮಿತ್ತ ಹೊರಗೆ ತೆರಳುವ ಅಧಿಕಾರಿಗಳು ‘OOD’ ಆಯ್ಕೆಯನ್ನು ಬಳಸಿಕೊಂಡು ವಿವರಗಳನ್ನು ದಾಖಲಿಸಬೇಕು. ಇದನ್ನು ಸಂಬಂಧಿಸಿದ ಮೇಲಾಧಿಕಾರಿಗಳು ದೃಢೀಕರಿಸುವ ವ್ಯವಸ್ಥೆಯೂ ಇದೆ.

ಅಣ್ಣನ ಕಣ್ಮುಂದೆಯೇ ತಮ್ಮನ ಬಲಿ..! ಸಿಡಿಲು ಬಡಿದು 19 ವರ್ಷದ ಯುವಕ ದಾರುಣ ಸಾವು

ಗದಗ: ಜಿಲ್ಲೆಯ ಹಲವೆಡೆ ಶುಕ್ರವಾರ ಗುಡುಗು-ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಗಜೇಂದ್ರಗಡ ಪೊಲೀಸ್ ಠಾಣೆ ವ್ಯಾಪ್ತಿಯ ರಾಜೂರು ಗ್ರಾಮದಲ್ಲಿ ಸಿಡಿಲು ಬಡಿದು 19 ವರ್ಷದ ಯುವಕನೊಬ್ಬ ದಾರುಣವಾಗಿ ಮೃತಪಟ್ಟಿದ್ದಾನೆ.

ಮೃತ ಯುವಕನನ್ನು ಪ್ರಶಾಂತ್ ಹುಡೇದ ಎಂದು ಗುರುತಿಸಲಾಗಿದೆ.

ಜಮೀನಿನಲ್ಲಿ ಜಾನುವಾರುಗಳನ್ನು ಮೇಯಿಸಲು ಇಬ್ಬರು ಸಹೋದರರು ತೆರಳಿದ್ದ ವೇಳೆ ಏಕಾಏಕಿ ಗುಡುಗು-ಸಿಡಿಲು ಸಹಿತ ಮಳೆ ಆರಂಭವಾಗಿದೆ. ಈ ವೇಳೆ ಸುಮಾರು 60 ಮೀಟರ್ ದೂರದಲ್ಲಿದ್ದ ತಮ್ಮ ಪ್ರಶಾಂತ್‌ಗೆ ಸಿಡಿಲು ಬಡಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಅಣ್ಣನ ಕಣ್ಮುಂದೆಯೇ ತಮ್ಮ ಮೃತಪಟ್ಟ ದೃಶ್ಯ ಕಂಡು ಆತ ಬೆಚ್ಚಿಬಿದ್ದಿದ್ದು, ಬಳಿಕ ತಮ್ಮನ ಶವವನ್ನು ಹೊತ್ತುಕೊಂಡೇ ಊರಿಗೆ ಕರೆತಂದ ಘಟನೆ ಗ್ರಾಮಸ್ಥರ ಮನಕಲಕುವಂತಿತ್ತು.

ಘಟನೆ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಶೋಕ ಮಡುಗಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.

ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹೊಟ್ಟೆ ಗ್ಯಾಸ್ ಸಮಸ್ಯೆಗೆ ಆಹಾರ ಮಾತ್ರವಲ್ಲ, ಈ ಕೆಟ್ಟ ಅಭ್ಯಾಸಗಳೂ ಕಾರಣ!

ಇತ್ತೀಚಿನ ದಿನಗಳಲ್ಲಿ ಗ್ಯಾಸ್, ಹೊಟ್ಟೆ ಉಬ್ಬರ ಮತ್ತು ಅಜೀರ್ಣದಂತಹ ಸಮಸ್ಯೆಗಳು ಸಾಮಾನ್ಯವಾಗುತ್ತಿದ್ದು, ಇದಕ್ಕೆ ಕೇವಲ ಆಹಾರ ಪದ್ಧತಿ ಮಾತ್ರವಲ್ಲದೆ ದೈನಂದಿನ ಜೀವನಶೈಲಿಯ ಕೆಲವು ಕೆಟ್ಟ ಅಭ್ಯಾಸಗಳೂ ಪ್ರಮುಖ ಕಾರಣಗಳಾಗಿವೆ ಎಂದು ತಜ್ಞರು ತಿಳಿಸಿದ್ದಾರೆ.

ತಜ್ಞರ ಪ್ರಕಾರ, ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು, ಎರಡು ಊಟಗಳ ನಡುವೆ ಹೆಚ್ಚು ಅಂತರ ಇಡುವುದು ಹಾಗೂ ಆತುರಾತುರವಾಗಿ ಆಹಾರ ಸೇವಿಸುವುದು ಜೀರ್ಣಕ್ರಿಯೆಗೆ ತೊಂದರೆ ಉಂಟುಮಾಡಬಹುದು. ಇದರ ಪರಿಣಾಮವಾಗಿ ಹೊಟ್ಟೆಯಲ್ಲಿ ಗ್ಯಾಸ್, ಉಬ್ಬರ ಹಾಗೂ ಅಜೀರ್ಣದಂತಹ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ಜಂಕ್ ಫುಡ್, ಮೈದಾ ಪದಾರ್ಥಗಳು, ಅತಿಯಾದ ಎಣ್ಣೆ ಮತ್ತು ಮಸಾಲೆಯುಕ್ತ ಆಹಾರಗಳ ಸೇವನೆಯೂ ಹೊಟ್ಟೆ ಸಮಸ್ಯೆಗಳಿಗೆ ಕಾರಣವಾಗಬಹುದು. ಅಲ್ಲದೆ ಕರುಳಿನಲ್ಲಿರುವ ಉತ್ತಮ ಮತ್ತು ಹಾನಿಕಾರಕ ಬ್ಯಾಕ್ಟೀರಿಯಾಗಳ ಸಮತೋಲನ ಹದಗೆಡುವುದರಿಂದ ಜೀರ್ಣಕ್ರಿಯೆ ದುರ್ಬಲಗೊಂಡು ಗ್ಯಾಸ್ಟ್ರಿಕ್ ಸಮಸ್ಯೆಗಳು ಹೆಚ್ಚಾಗಬಹುದು ಎಂದು ವೈದ್ಯರು ಹೇಳಿದ್ದಾರೆ.

ಪದೇಪದೇ ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ಳುವುದರ ಜೊತೆಗೆ ನಿರಂತರ ಹೊಟ್ಟೆನೋವು, ತೀವ್ರ ಹೊಟ್ಟೆ ಉಬ್ಬರ, ತೂಕ ಇಳಿಕೆಯಾಗುವುದು, ವಾಂತಿ ಅಥವಾ ಮಲವಿಸರ್ಜನೆಯ ಕ್ರಮದಲ್ಲಿ ಬದಲಾವಣೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಜೀರ್ಣಕ್ರಿಯೆ ಸುಧಾರಿಸಲು ಸಮಯಕ್ಕೆ ಸರಿಯಾಗಿ ಊಟ ಮಾಡುವುದು, ಆಹಾರವನ್ನು ಚೆನ್ನಾಗಿ ಜಗಿದು ಸೇವಿಸುವುದು, ಸಾಕಷ್ಟು ನೀರು ಕುಡಿಯುವುದು ಹಾಗೂ ಹಣ್ಣು, ತರಕಾರಿ ಮತ್ತು ನಾರಿನಾಂಶಯುಕ್ತ ಆಹಾರಗಳನ್ನು ಸೇವಿಸುವುದು ಮುಖ್ಯವಾಗಿದೆ. ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಜೀವನಶೈಲಿ ಅನುಸರಿಸುವುದರಿಂದ ಗ್ಯಾಸ್ ಹಾಗೂ ಹೊಟ್ಟೆ ಉಬ್ಬರದ ಸಮಸ್ಯೆಯಿಂದ ದೂರವಿರಬಹುದು ಎಂದು ತಜ್ಞರು ತಿಳಿಸಿದ್ದಾರೆ.

ಉಡುಪಿ ಸರ್ಕಾರಿ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ; 8 ಕೆಜಿ ಫೈಬ್ರಾಯ್ಡ್ ಗಡ್ಡೆ ಯಶಸ್ವಿ ತೆರವು!

ಉಡುಪಿ: ಉಡುಪಿ ಜಿಲ್ಲಾ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರ ತಂಡ ಅಪರೂಪದ ಹಾಗೂ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ 44 ವರ್ಷದ ಮಹಿಳೆಯ ಗರ್ಭಕೋಶದಲ್ಲಿದ್ದ ಸುಮಾರು 8 ಕೆಜಿ ತೂಕದ ಫೈಬ್ರಾಯ್ಡ್ ಗಡ್ಡೆಯನ್ನು ಹೊರತೆಗೆದಿದೆ.

ಕಳೆದ ಒಂದು ವರ್ಷದಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆ ಹಲವು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರೂ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡಿರಲಿಲ್ಲ. ಬಳಿಕ ಉಡುಪಿ ಜಿಲ್ಲಾ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಸಮಗ್ರ ತಪಾಸಣೆ ನಡೆಸಿದ್ದಾರೆ.

ಪರಿಶೀಲನೆ ವೇಳೆ ಮಹಿಳೆಯ ಹೊಟ್ಟೆ ಗರ್ಭಿಣಿಯರ ಹೊಟ್ಟೆಯಂತೆ ಅಸಹಜವಾಗಿ ಉಬ್ಬಿಕೊಂಡಿರುವುದು ವೈದ್ಯರ ಗಮನಕ್ಕೆ ಬಂದಿದೆ. ತಕ್ಷಣ ಅಲ್ಟ್ರಾಸೌಂಡ್ ಹಾಗೂ ಸಿಟಿ ಸ್ಕ್ಯಾನ್ ಪರೀಕ್ಷೆ ನಡೆಸಿದಾಗ ಗರ್ಭಕೋಶದಲ್ಲಿ ಬೃಹತ್ ಗಾತ್ರದ ಫೈಬ್ರಾಯ್ಡ್ ಗಡ್ಡೆ ಇರುವುದು ಪತ್ತೆಯಾಗಿದೆ.

ಪ್ರಕರಣದ ಗಂಭೀರತೆಯನ್ನು ಅರಿತ ವೈದ್ಯರ ತಂಡ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದು, ಜಿಲ್ಲಾ ಸರ್ಜನ್ ಡಾ. ಹೆಚ್. ಅಶೋಕ್ ಅವರ ಮಾರ್ಗದರ್ಶನದಲ್ಲಿ ಚಿಕಿತ್ಸೆ ಕೈಗೊಳ್ಳಲಾಗಿದೆ. ಸ್ತ್ರೀರೋಗ ತಜ್ಞರಾದ ಡಾ. ಶಶಾಂಕ್ ಕಿಣಿ, ಡಾ. ಜಾಸ್ಮಿನ್, ಡಾ. ಕವಿತಾ ಹಾಗೂ ಡಾ. ಅಮೃತಾಂಶ್ ನೇತೃತ್ವದ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಸುಮಾರು 8 ಕೆಜಿ ತೂಕದ ಫೈಬ್ರಾಯ್ಡ್ ಗಡ್ಡೆಯನ್ನು ಹೊರತೆಗೆದಿದೆ.

ಶಸ್ತ್ರಚಿಕಿತ್ಸೆಯಲ್ಲಿ ಅರವಳಿಕೆ ತಜ್ಞರಾದ ಡಾ. ಸೂರ್ಯನಾರಾಯಣ ಹಾಗೂ ಡಾ. ರಾಜಗೋಪಾಲ್ ಭಂಡಾರಿ ಸಹಕರಿಸಿದ್ದು, ಶುಶ್ರೂಷಾಧಿಕಾರಿ ರಕ್ಷಿತಾ ಮತ್ತು ಓಟಿ ಸಹಾಯಕಿ ಸಂಗೀತಾ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ.

ಶಸ್ತ್ರಚಿಕಿತ್ಸೆಯ ಬಳಿಕ ಮಹಿಳೆ ಚೇತರಿಸಿಕೊಳ್ಳುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯರ ಈ ಸಾಧನೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಸರ್ಕಾರಿ ಆರೋಗ್ಯ ಸೇವೆಗಳ ಮೇಲಿನ ಜನರ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.

ಮುನಿಯಪ್ಪ ಸಿಟ್ಟಿಗೆ ಹೈಕಮಾಂಡ್ ಎಂಟ್ರಿ: ರಾಹುಲ್ ಭರವಸೆ ಬಳಿಕ ‘ಐ ಆ್ಯಮ್ ಹ್ಯಾಪಿ’ ಎಂದ ಸಚಿವ

ಬೆಂಗಳೂರು: ಸಚಿವರ ಖಾತೆ ಹಂಚಿಕೆ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆ ಎದ್ದಿರುವ ನಡುವೆಯೇ ಹಿರಿಯ ಸಚಿವ ಕೆ.ಎಚ್. ಮುನಿಯಪ್ಪ ಅವರ ಅಸಮಾಧಾನ ಶಮನಗೊಳಿಸಲು ಹೈಕಮಾಂಡ್ ಮಧ್ಯಪ್ರವೇಶಿಸಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡಿದ್ದಕ್ಕೆ ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದ್ದ ಮುನಿಯಪ್ಪ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ತಮ್ಮ ಅಸಮಾಧಾನವನ್ನು ವಿವರಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದ ರಾಹುಲ್ ಗಾಂಧಿ ಅವರೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಚಿವರ ಖಾತೆ ಹಂಚಿಕೆ ವಿಚಾರವಾಗಿ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಕೈತಪ್ಪಿದ ಹಿನ್ನೆಲೆಯಲ್ಲಿ ಸಚಿವ ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಿರುವ ಬೆಳವಣಿಗೆಯ ಜೊತೆಗೆ ಮುನಿಯಪ್ಪ ಅವರ ಅಸಮಾಧಾನವೂ ಹೈಕಮಾಂಡ್ ಗಮನಕ್ಕೆ ಬಂದಿದೆ.

ಬಳಿಕ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾದ ಮುನಿಯಪ್ಪ, ಖಾತೆ ಹಂಚಿಕೆ ಕುರಿತ ತಮ್ಮ ಆಕ್ಷೇಪಣೆಗಳನ್ನು ದಾಖಲಿಸಿದ್ದಾರೆ. ಈ ವೇಳೆ ಉಂಟಾಗಿರುವ ಗೊಂದಲವನ್ನು ಸರಿಪಡಿಸುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಮುನಿಯಪ್ಪ, “ರಾಹುಲ್ ಗಾಂಧಿ ಗೊಂದಲ ಸರಿಪಡಿಸುವುದಾಗಿ ಹೇಳಿದ್ದಾರೆ. ನಾನು ಸಂತೃಪ್ತನಾಗಿದ್ದೇನೆ” ಎಂದು ಪ್ರತಿಕ್ರಿಯೆ ನೀಡಿದರು. ಹೀಗಾಗಿ ರಾಜೀನಾಮೆ ಕುರಿತ ಚರ್ಚೆಗಳಿಗೆ ತಾತ್ಕಾಲಿಕ ತೆರೆ ಬಿದ್ದಂತಾಗಿದೆ.

ಇದಕ್ಕೂ ಮೊದಲು ಮಾತನಾಡಿದ್ದ ಮುನಿಯಪ್ಪ, ತಾವು ಎಂಟು ಬಾರಿ ಜನಪ್ರತಿನಿಧಿಯಾಗಿ ಆಯ್ಕೆಯಾಗಿರುವ ಹಿರಿಯ ನಾಯಕನಾಗಿದ್ದು, ಸೀನಿಯಾರಿಟಿ ಮತ್ತು ಅನುಭವಕ್ಕೆ ತಕ್ಕಂತೆ ಖಾತೆ ಹಂಚಿಕೆ ಆಗಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಸಮಾಜ ಕಲ್ಯಾಣ ಅಥವಾ ಕೃಷಿ ಇಲಾಖೆಯಂತಹ ಪ್ರಮುಖ ಖಾತೆಗಳನ್ನು ನೀಡುವಂತೆ ಮನವಿ ಮಾಡಿದ್ದರೂ ಅದನ್ನು ಪರಿಗಣಿಸಲಾಗಿಲ್ಲ ಎಂದು ಅವರು ಬೇಸರ ಹೊರಹಾಕಿದ್ದರು.

error: Content is protected !!