Home Blog Page 111

ಪಿಎಸ್‌ಐ ಮಾರುತಿ ಜೋಗದಂಡಕರಗೆ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಗದಗ: ಪ್ರತಿಷ್ಠಿತ ರಾಷ್ಟ್ರಪತಿ ಪದಕ ಹಾಗೂ ಡಿಜಿ–ಐಜಿಪಿ ಕಮೆಂಡೇಷನ್ ಡಿಸ್ಕ್ ಪ್ರಶಸ್ತಿಗೆ ಭಾಜನರಾಗಿರುವ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಪಿಎಸ್‌ಐ ಮಾರುತಿ ಜೋಗದಂಡಕರ್ ಅವರನ್ನು ಗದಗಿನ ಸಾಮಾಜಿಕ ಸಂಸ್ಥೆಯಾದ ಅಮ್ಮ ಫೌಂಡೇಶನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಇತ್ತೀಚೆಗೆ ಬೆಂಗಳೂರಿನ ಕೋರಮಂಗಲದ 3ನೇ ಪಡೆ ಕೆಎಸ್‌ಆರ್‌ಪಿ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಗೌರವ ಪ್ರದಾನ ಹಾಗೂ ಪಥಸಂಚಲನ ಸಮಾರಂಭದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರಿಂದ (ಡಿಜಿ–ಐಜಿಪಿ) ಅವರಿಗೆ ಪ್ರತಿಷ್ಠಿತ ಕಮೆಂಡೇಷನ್ ಡಿಸ್ಕ್ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಇದಕ್ಕೂ ಮುನ್ನ ರಾಷ್ಟ್ರಪತಿ ಪದಕಕ್ಕೂ ಭಾಜನರಾಗಿದ್ದ ಅವರು ಗದಗ ಜಿಲ್ಲೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಗೆ ಹೆಮ್ಮೆ ತಂದಿರುವ ಹಿನ್ನೆಲೆಯಲ್ಲಿ ಈ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸನ್ಮಾನ ಕಾರ್ಯಕ್ರಮದಲ್ಲಿ ಅಮ್ಮ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷೆ ಲಲಿತಾ ಶರಣಪ್ಪ ಗೋಳಗೊಳಕಿ, ಗದಗ–ಬೆಟಗೇರಿ ನಗರಸಭೆಯ ನಾಮನಿರ್ದೇಶಿತ ಸದಸ್ಯ ಶರಣಪ್ಪ ಗೋಳಗೊಳಕಿ, ಆಶ್ರಯ ಸಮಿತಿ ನಾಮನಿರ್ದೇಶಿತ ಸದಸ್ಯ ಇಮಾಮ್ ಹುಸೇನ್ ರೋಣದ, ಜಾಕೀರಸಾಬ ಅಂಗಡಿ, ಚನ್ನಪ್ಪ ಹರದೊಳ್ಳಿ, ಭಾಷಾಸಾಬ ರೋಣದ, ಹನುಮಂತಪ್ಪ ಕೋಟೆಕಲ್ಲ, ಅನ್ವರಸಾಬ ದೋಟಿಹಾಳ, ಮುನ್ನಾಸಾಬ ಹೆಬಸೂರ, ಯಲ್ಲನಗೌಡ ಸೋಮನಕಟ್ಟಿ, ವಿನಯ್ ಮಂಜರಗಿ, ಸಯ್ಯದ್‌ಸಾಬ್ ತಹಸೀಲ್ದಾರ್, ಫಕ್ರುಸಾಬ್ ಬಡಿಗೇರ, ನಾಗರಾಜ ಹಿರೇಮನಿ ಪಾಟೀಲ್, ಪ್ರಭುಕುಮಾರ ಗೋಳಗೊಳಕಿ, ದೇವೇಂದ್ರ ಗಂಗಪ್ಪನವರ, ಬಸವರಾಜ ಮೈಲಪ್ಪನವರ, ಬಸವರಾಜ ಹೊಟ್ಟಿ ಸೇರಿದಂತೆ ವಾರ್ಡ್ ನಂ. 11ರ ಹಿರಿಯರು, ಹಮಾಲರ ಕಾಲೋನಿಯ ನಿವಾಸಿಗಳು, ಯುವಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಬರ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಬೇಡ: ತುಳಸಿ ಮದ್ದಿನೇನಿ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಬರಗಾಲದ ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಜನರಿಗೆ ಗುಣಮಟ್ಟದ ಸೇವೆ ಒದಗಿಸಬೇಕು ಎಂದು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ತುಳಸಿ ಮದ್ದಿನೇನಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆರೋಗ್ಯ ಇಲಾಖೆಯ ಆರೋಗ್ಯ ತಪಾಸಣಾ ಶಿಬಿರಗಳು, ಅಂಗನವಾಡಿ ಮಕ್ಕಳ ಆರೋಗ್ಯ ತಪಾಸಣೆ, ಡೆಂಗ್ಯೂ ಹಾಗೂ ಮಲೇರಿಯಾ ನಿಯಂತ್ರಣ ಕ್ರಮಗಳ ಕುರಿತು ಪರಿಶೀಲನೆ ನಡೆಸಿದ ಅವರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆ-ಮನೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಬೇಕು ಎಂದು ಸೂಚಿಸಿದರು.

ಗೃಹಲಕ್ಷ್ಮಿ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಮೃತಪಟ್ಟ ಫಲಾನುಭವಿಗಳ ಮಾಹಿತಿಯನ್ನು ಪರಿಶೀಲಿಸಿ, ಅರ್ಹತೆ ಇಲ್ಲದವರ ಹೆಸರನ್ನು ಯೋಜನೆಯಿಂದ ಕೈಬಿಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಶಿಕ್ಷಣ ಕ್ಷೇತ್ರದಲ್ಲಿ ಜಿಲ್ಲೆಯು ರಾಜ್ಯದಲ್ಲೇ ಮುಂಚೂಣಿಯಲ್ಲಿರಬೇಕು ಎಂದು ಸೂಚಿಸಿದ ಅವರು, ಶಾಲೆಗಳಲ್ಲಿ ಎಐ (ಕೃತಕ ಬುದ್ಧಿಮತ್ತೆ) ಪಠ್ಯಕ್ರಮ, ವಿದ್ಯಾರ್ಥಿಗಳ ಹಾಜರಾತಿ, ಅತಿಥಿ ಉಪನ್ಯಾಸಕರ ನೇಮಕ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ಕುರಿತು ಮಾಹಿತಿ ಪಡೆದರು.

ಅಂಗವಿಕಲರಿಗೆ ಯುಡಿಐಡಿ ಕಾರ್ಡ್ ವಿತರಣೆ, ಸ್ವಯಂ ಉದ್ಯೋಗ ತರಬೇತಿ, ಪಡಿತರ ವಿತರಣೆ ಹಾಗೂ ಸರ್ಕಾರಿ ಅಧಿಕಾರಿಗಳು ಕರ್ತವ್ಯ ಆ್ಯಪ್ ಮೂಲಕ ಕಡ್ಡಾಯವಾಗಿ ಹಾಜರಾತಿ ದಾಖಲಿಸಬೇಕು. ನಿಯಮ ಪಾಲಿಸದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಾಹಿತಿ ನೀಡಿ, ಜೂನ್ 1ರಿಂದ ಜುಲೈ 29ರವರೆಗೆ ಜಿಲ್ಲೆಯಲ್ಲಿ ವಾಡಿಕೆ 265.9 ಮಿ.ಮೀ. ಮಳೆಯ ಬದಲಿಗೆ 176.5 ಮಿ.ಮೀ. ಮಳೆಯಾಗಿದ್ದು, ಶೇ.34ರಷ್ಟು ಮಳೆ ಕೊರತೆ ದಾಖಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕೃಷಿ ಬೆಳೆಯ 2.82 ಲಕ್ಷ ಹೆಕ್ಟೇರ್ ಗುರಿಯಲ್ಲಿ 2.71 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದ್ದು, ಶೇ.95.89ರಷ್ಟು ಸಾಧನೆ ಕಂಡಿದೆ. ತೋಟಗಾರಿಕೆ ಬೆಳೆ 22,857 ಹೆಕ್ಟೇರ್ ಗುರಿಯಲ್ಲಿ 16,234 ಹೆಕ್ಟೇರ್ ಬಿತ್ತನೆಯಾಗಿದ್ದು, ಶೇ.71ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.

ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಯಾವುದೇ ಕೊರತೆಯಿಲ್ಲ. ಜಿಲ್ಲೆಯ 18 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, 21 ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಜಾನುವಾರುಗಳಿಗೆ ಮುಂದಿನ 45 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 7 ಮೇವು ಬ್ಯಾಂಕ್‌ಗಳನ್ನು ತೆರೆಯಲು ಸ್ಥಳ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

“ಬರಗಾಲದ ಸಂದರ್ಭದಲ್ಲಿ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಪರಿಣಾಮಕಾರಿಯಾಗಿ ಸೇವೆ ಒದಗಿಸಬೇಕು. ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಂಡು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು.”

– ತುಳಸಿ ಮದ್ದಿನೇನಿ, ಧಾರವಾಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

ಗುರುಭಕ್ತಿ, ಶಿಸ್ತು ಜೀವನದ ಶ್ರೇಷ್ಠ ಸಂಪತ್ತು: ಅಭಿನವ ಚನ್ನಬಸವ ಶ್ರೀಗಳು

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: “ಗುರು ಎಂದರೆ ಕೇವಲ ಪಾಠ ಬೋಧಿಸುವ ಶಿಕ್ಷಕರಲ್ಲ; ಅಜ್ಞಾನದಿಂದ ಜ್ಞಾನದತ್ತ ಕರೆದೊಯ್ಯುವ ದಾರಿದೀಪ. ವಿದ್ಯಾರ್ಥಿಗಳು ಗುರುಗಳ ಬಗ್ಗೆ ಗೌರವ, ಶಿಸ್ತು, ಸೇವಾಭಾವ ಹಾಗೂ ಉತ್ತಮ ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಶಿಕ್ಷಣ ಸಾರ್ಥಕವಾಗುತ್ತದೆ” ಎಂದು ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಅಭಿನವ ಚನ್ನಬಸವ ಶ್ರೀಗಳು ಹೇಳಿದರು.

ಸಮೀಪದ ನಿಡಗುಂದಿಕೊಪ್ಪದ ಚೆನ್ನಚೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗುರುಪೂರ್ಣಿಮೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಗುರು-ಶಿಷ್ಯ ಪರಂಪರೆ ಭಾರತೀಯ ಸಂಸ್ಕೃತಿಯ ಅತ್ಯುನ್ನತ ಮೌಲ್ಯಗಳಲ್ಲಿ ಒಂದಾಗಿದ್ದು, ಗುರುಗಳ ಮಾರ್ಗದರ್ಶನ ವಿದ್ಯಾರ್ಥಿಗಳ ಜೀವನಕ್ಕೆ ದಿಕ್ಕು ತೋರಿಸುವ ಶಕ್ತಿಯಾಗಿದೆ ಎಂದರು.

ವಿದ್ಯಾಭ್ಯಾಸದ ಜೊತೆಗೆ ಸಂಸ್ಕಾರ, ಶಿಸ್ತು, ವಿನಯ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳು ಸಮಾಜಕ್ಕೆ ಆದರ್ಶ ನಾಗರಿಕರಾಗಿ ರೂಪುಗೊಳ್ಳಲು ಸಾಧ್ಯ. ಉತ್ತಮ ವ್ಯಕ್ತಿತ್ವ ನಿರ್ಮಾಣದಲ್ಲಿ ಗುರುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವೇದಮಂತ್ರಗಳ ಘೋಷ, ಪೂರ್ಣಕುಂಭ ಮತ್ತು ಪುಷ್ಪವೃಷ್ಟಿಯೊಂದಿಗೆ ಅಭಿನವ ಚನ್ನಬಸವ ಶ್ರೀಗಳನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸಿದರು. ಬಳಿಕ ಶ್ರೀಗಳ ಪಾದಪೂಜೆ ನೆರವೇರಿಸಿ ಪುಷ್ಪಾರ್ಚನೆ ಸಲ್ಲಿಸಿ ಆಶೀರ್ವಾದ ಪಡೆದರು.

ಬಳಿಕ ವಿದ್ಯಾರ್ಥಿಗಳು ಭಕ್ತಿಗೀತೆ, ವಚನಗಾಯನ, ಭಾಷಣ, ಸಮೂಹ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಗುರುಗಳ ಮಹತ್ವ, ಭಾರತೀಯ ಸಂಸ್ಕೃತಿ ಹಾಗೂ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಕಾರ್ಯಕ್ರಮಗಳು ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾದವು. ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಗಳು ವಿಶೇಷ ಆಕರ್ಷಣೆಯಾಗಿದ್ದವು.

ಶಾಲೆಯ ಮುಖ್ಯ ಶಿಕ್ಷಕಿ ಜೆ.ಬಿ. ಹಿರೇಮಠ ಸ್ವಾಗತಿಸಿ ಮಾತನಾಡಿ, ಗುರುಪೂರ್ಣಿಮೆ ಕೇವಲ ಆಚರಣೆಯ ದಿನವಲ್ಲ, ಗುರುಗಳ ತ್ಯಾಗ, ಮಾರ್ಗದರ್ಶನ ಹಾಗೂ ಶಿಕ್ಷಣದ ಮಹತ್ವವನ್ನು ಸ್ಮರಿಸುವ ಪವಿತ್ರ ದಿನವಾಗಿದೆ. ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಶಿಕ್ಷಣದೊಂದಿಗೆ ಮೌಲ್ಯಾಧಾರಿತ ಬದುಕನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದರು.

ಎಸ್.ಬಿ. ಅಣಗೌಡ್ರ ವಂದಿಸಿದರು.

ಕಾರ್ಯಕ್ರಮದಲ್ಲಿ ಆರ್.ಎಂ. ಬನ್ನಿಗೋಳ, ಆರ್.ಸಿ. ಶಾಂತಗಿರಿಮಠ, ಶಿವಪ್ಪ ಕೊಪ್ಪದ, ಧರ್ಮಪ್ಪ ಕೊಪ್ಪದ, ಪುಲಕೇಶಿ ಸರ್ವಿ, ಮಲ್ಲೇಶಪ್ಪ ಸರ್ವಿ, ಶರಣಪ್ಪ ನವಲಗುಂದ, ಕಲ್ಲಪ್ಪ ಅಣಗೌಡ್ರ, ಗಿರೀಶ್ ಕುಲಕರ್ಣಿ, ವೀರಮ್ಮ ಚಂಪನಗೌಡರ, ಅಮರಪ್ಪ ವಿವೇಕಿ, ತಾರಾನಾಥ ಮೇಟಿ, ವೇದಾ ಸರ್ವಿ, ಪ್ರವೀಣ ಮೇಟಿ ಸೇರಿದಂತೆ ಅನೇಕ ಗಣ್ಯರು, ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

“ಗುರುಗಳ ಮಾರ್ಗದರ್ಶನವು ವಿದ್ಯಾರ್ಥಿಗಳ ಬದುಕಿಗೆ ದಿಕ್ಕು ತೋರಿಸುವ ಬೆಳಕಾಗಿದೆ. ಸಂಸ್ಕಾರ, ಶಿಸ್ತು ಮತ್ತು ಗುರುಭಕ್ತಿಯೊಂದಿಗೆ ಶಿಕ್ಷಣ ಪಡೆದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ.”

– ಅಭಿನವ ಚನ್ನಬಸವ ಶ್ರೀಗಳು

ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದಲ್ಲಿ ಶಾಲೆಗಳು ಆರಂಭವಾಗಿ ಎರಡು ತಿಂಗಳು ಕಳೆದಿದ್ದರೂ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಅಗತ್ಯ ಮೂಲ ಸೌಲಭ್ಯಗಳು ಇನ್ನೂ ಸಮರ್ಪಕವಾಗಿ ದೊರೆತಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಹಾಗೂ ಎಐಡಿಎಸ್ಓ ಗದಗ ಜಿಲ್ಲಾ ಘಟಕ ಆರೋಪಿಸಿವೆ.

ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆಗಳು, ವಿದ್ಯಾರ್ಥಿಗಳಿಗೆ ವಿತರಿಸಬೇಕಿರುವ ಶೂ ಮತ್ತು ಸಾಕ್ಸ್ ಇನ್ನೂ ಲಭ್ಯವಾಗಿಲ್ಲ. ಇದೇ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಎಲ್ಲ ವಿದ್ಯಾರ್ಥಿಗಳಿಗೆ ಸರ್ಕಾರವೇ ನೋಟ್‌ಬುಕ್‌ಗಳನ್ನು ಪೂರೈಸುವುದಾಗಿ ಘೋಷಿಸಿದ್ದರೂ, ಇದುವರೆಗೆ ಶಾಲೆಗಳಿಗೆ ನೋಟ್‌ಬುಕ್‌ಗಳು ತಲುಪಿಲ್ಲ ಎಂದು ದೂರಿವೆ.

ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿರುವ ಮೊಟ್ಟೆ ಮತ್ತು ಬಾಳೆಹಣ್ಣಿಗೆ ಸರ್ಕಾರ ನಿಗದಿಪಡಿಸಿರುವ ಅನುದಾನವು ಮಾರುಕಟ್ಟೆ ದರಕ್ಕಿಂತ ಕಡಿಮೆಯಿದ್ದು, ಹೆಚ್ಚುವರಿ ವೆಚ್ಚವನ್ನು ಶಿಕ್ಷಕರೇ ತಮ್ಮ ಜೇಬಿನಿಂದ ಭರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕಾದ ಶಿಕ್ಷಣ ಸಚಿವರ ನೇಮಕವೂ ರಾಜ್ಯದಲ್ಲಿ ಇನ್ನೂ ಆಗಿಲ್ಲ ಎಂದು ಸಂಘಟನೆಗಳು ಟೀಕಿಸಿವೆ. ಶಿಕ್ಷಣದ ಬಗ್ಗೆ, ವಿಶೇಷವಾಗಿ ಬಡ ರೈತರು ಹಾಗೂ ಕಾರ್ಮಿಕರ ಮಕ್ಕಳು ವ್ಯಾಸಂಗ ಮಾಡುವ ಸರ್ಕಾರಿ ಶಾಲೆಗಳ ಕುರಿತು ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿವೆ.

ಕೂಡಲೇ ರಾಜ್ಯಕ್ಕೆ ಶಿಕ್ಷಣ ಸಚಿವರನ್ನು ನೇಮಿಸಿ, ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್, ನೋಟ್‌ಬುಕ್ ಸೇರಿದಂತೆ ಎಲ್ಲ ಮೂಲ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸಬೇಕು ಎಂದು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಯವರನ್ನು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಮತ್ತು ಎಐಡಿಎಸ್ಓ ಆಗ್ರಹಿಸಿವೆ.

“ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕೂಡಲೇ ಒದಗಿಸಬೇಕು. ಶಿಕ್ಷಣ ಸಚಿವರನ್ನು ಶೀಘ್ರ ನೇಮಿಸಿ ಶಿಕ್ಷಣ ಕ್ಷೇತ್ರದ ಸಮಸ್ಯೆಗಳಿಗೆ ಸರ್ಕಾರ ಆದ್ಯತೆ ನೀಡಬೇಕು.”

– ಪ್ರೊ. ಎ. ಮುರಿಗೆಪ್ಪ, ರಾಜ್ಯಾಧ್ಯಕ್ಷರು, ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ; ಎಂ. ಶಾಂತಿ, ಜಿಲ್ಲಾ ಸಂಚಾಲಕರು, ಎಐಡಿಎಸ್ಓ ಗದಗ ಜಿಲ್ಲೆ

ತಮಿಳುನಾಡಿಗೆ ಕಾವೇರಿ ನೀರು ಬಿಡಬೇಡಿ: ಬೊಮ್ಮಾಯಿ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ನವದೆಹಲಿ: ಕರ್ನಾಟಕದಲ್ಲಿ ಪ್ರಸ್ತುತ ಕುಡಿಯುವ ನೀರಿನ ಅಗತ್ಯಕ್ಕೆ ಮಾತ್ರ ಸಾಕಾಗುವಷ್ಟು ನೀರು ಲಭ್ಯವಿದ್ದು, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಬಾರದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ದೆಹಲಿಯಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸುತ್ತಿರುವ ಕಾನೂನು ತಂಡ ಹಾಗೂ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ಮತ್ತು ಕಾವೇರಿ ಜಲ ನಿಯಂತ್ರಣ ಸಮಿತಿ (CWRC)ಗಳಲ್ಲಿ ರಾಜ್ಯದ ಪ್ರಾತಿನಿಧ್ಯ ದುರ್ಬಲವಾಗಿದೆ ಎಂದು ಆರೋಪಿಸಿದರು.

ಪ್ರಸ್ತುತ ರಾಜ್ಯದ ಜಲಾಶಯಗಳಲ್ಲಿ ಕುಡಿಯುವ ನೀರಿನ ಅಗತ್ಯಕ್ಕೆ ಮಾತ್ರ ಸಾಕಾಗುವಷ್ಟು ನೀರಿದ್ದು, ಬೇರೆ ಯಾವುದೇ ಉದ್ದೇಶಕ್ಕೆ ನೀರು ಬಳಸುವ ಪರಿಸ್ಥಿತಿ ಇಲ್ಲ. ಇಂತಹ ಸಂದರ್ಭದಲ್ಲಿ ತಮಿಳುನಾಡು ನೀರು ಬಿಡುವಂತೆ ಒತ್ತಡ ಹೇರುತ್ತಿದೆ. ರಾಜ್ಯದ ನೈಜ ಪರಿಸ್ಥಿತಿಯನ್ನು ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ಮುಂದೆ ಸಮರ್ಥವಾಗಿ ಮಂಡಿಸುವಲ್ಲಿ ರಾಜ್ಯದ ಪ್ರತಿನಿಧಿಗಳು ವಿಫಲರಾಗಿದ್ದಾರೆ. ಇದೇ ಕಾರಣದಿಂದ ತಮಿಳುನಾಡು ಪದೇ ಪದೇ ನೀರು ಕೇಳುತ್ತಿದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೂ ಈ ಕುರಿತು ಮಾತನಾಡಿದ್ದು, ರಾಜ್ಯದ ಹಿತಾಸಕ್ತಿಯನ್ನು ರಕ್ಷಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ರೈತರು ಈಗಾಗಲೇ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಹಿತಾಸಕ್ತಿ ಹಾಗೂ ಕುಡಿಯುವ ನೀರಿನ ಭದ್ರತೆಯನ್ನು ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ. ತಮ್ಮ ಸರ್ಕಾರದ ಅವಧಿಯಲ್ಲೂ ಇಂತಹ ಸಂದರ್ಭಗಳಲ್ಲಿ ಕಾನೂನು ಹೋರಾಟ ನಡೆಸಿ ನೀರು ಹರಿಸಿರಲಿಲ್ಲ. ಈಗಿನ ಸರ್ಕಾರವೂ ಅದೇ ರೀತಿಯ ದೃಢ ನಿಲುವು ತಾಳಿ, ರೈತರ ಹಿತಾಸಕ್ತಿಯನ್ನು ರಕ್ಷಿಸಬೇಕು ಎಂದು ಬೊಮ್ಮಾಯಿ ಆಗ್ರಹಿಸಿದರು.

ಆಗಸ್ಟ್ 1ರಂದು ಮಕ್ಕಳ ಶರಣ ಸಾಹಿತ್ಯ ಸಮ್ಮೇಳನ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಕದಳಿ ವೇದಿಕೆ ಹಾಗೂ ಶ್ರೀ ಜಗದ್ಗುರು ಬೂದೀಶ್ವರ ವಿದ್ಯಾಪೀಠ, ಹೊಸಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಗದಗ ಜಿಲ್ಲಾ ದ್ವಿತೀಯ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನವನ್ನು ಆಗಸ್ಟ್‌ 1ರಂದು ಹೊಸಹಳ್ಳಿ ಗ್ರಾಮದ ಶ್ರೀ ಜಗದ್ಗುರು ಬೂದೀಶ್ವರ ಸಂಸ್ಥಾನ ಮಠದಲ್ಲಿ ಆಯೋಜಿಸಲಾಗಿದೆ ಎಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಕೆ.ಎ. ಬಳಿಗೇರ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಅವರು, ಬೆಳಿಗ್ಗೆ 8.30ಕ್ಕೆ ರಾಷ್ಟ್ರಧ್ವಜ, ನಾಡಧ್ವಜ ಹಾಗೂ ಪರಿಷತ್ ಧ್ವಜಾರೋಹಣ ನೆರವೇರಲಿದ್ದು, ಜಗದ್ಗುರು ಅಭಿನವ ಬೂದೀಶ್ವರ ಮಹಾಸ್ವಾಮೀಜಿ, ಕೆ.ಎ. ಬಳಿಗೇರ ಹಾಗೂ ಕದಳಿ ವೇದಿಕೆ ಜಿಲ್ಲಾ ಅಧ್ಯಕ್ಷೆ ಸುಧಾ ಹುಚ್ಚಣ್ಣವರ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದರು.

ಬೆಳಿಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಮಕ್ಕಳ ಸಾಹಿತಿ ಡಾ. ನಿಂಗು ಸೊಲಗಿ ಸಮ್ಮೇಳನಾಧ್ಯಕ್ಷರಾಗಿದ್ದು, ಜಗದ್ಗುರು ಅಭಿನವ ಬೂದೀಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮಾಜಿ ಶಾಸಕ ಡಿ.ಆರ್. ಪಾಟೀಲ ಸಮ್ಮೇಳನ ಉದ್ಘಾಟಿಸಲಿದ್ದು, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಗ್ರಂಥ ಲೋಕಾರ್ಪಣೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ವಚನ ಗಾಯನ ಹಾಗೂ ಶಾಲಾ ಮಕ್ಕಳಿಂದ ವಚನ ನೃತ್ಯ ಪ್ರದರ್ಶನ ನಡೆಯಲಿದೆ.

ಮಧ್ಯಾಹ್ನ 12 ಗಂಟೆಗೆ ‘ಮರೆಯಲಾಗದ ನಾಡಿನ ಶರಣರು’ ವಿಷಯದ ಗೋಷ್ಠಿ ನಡೆಯಲಿದ್ದು, ಅಶೋಕ ಉಂಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಶಾಂಕ ಸಂಕದಾಳ, ಐಶ್ವರ್ಯ ಪಾಟೀಲ ಹಾಗೂ ಶ್ರೀದೇವಿ ಗಾಳಪ್ಪನವರ ಉಪನ್ಯಾಸ ನೀಡಲಿದ್ದಾರೆ. ಇದೇ ವೇಳೆ ಬಾಲ ವಿಜ್ಞಾನಿ ಪುನೀತರೆಡ್ಡಿ ಎನ್.ಎ. ಅವರು ಆಪ್ಟಿಕಲ್ ಟೆಲಿಸ್ಕೋಪ್ ತಯಾರಿಕೆಯ ಪ್ರಾತ್ಯಕ್ಷಿಕೆ ನೀಡಲಿದ್ದಾರೆ.

ಮಧ್ಯಾಹ್ನ 2.30ಕ್ಕೆ ‘ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಕರೋ, ಪಾಲಕರೋ ಯಾರು ಶ್ರೇಷ್ಠರು?’ ಎಂಬ ವಿಷಯದ ಕುರಿತು ಮಕ್ಕಳ ಹರಟೆ ಗೋಷ್ಠಿ ನಡೆಯಲಿದ್ದು, ಡಾ. ಜಿ.ಬಿ. ಪಾಟೀಲ ಹಾಗೂ ಈಶ್ವರ ಮೇಡ್ಲೇರಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಿಕ್ಷಕರು ಮತ್ತು ಪಾಲಕರ ಪರವಾಗಿ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ಮಂಡಿಸಲಿದ್ದಾರೆ.

ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಬಳಗಾನೂರಿನ ಶ್ರೀ ಶಿವಶಾಂತವೀರ ಶರಣರು ಸಾನ್ನಿಧ್ಯ ವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ‘ಬಾಲ ಶರಣಸಿರಿ’ ಪ್ರಶಸ್ತಿಗೆ ಆಯ್ಕೆಯಾದ ಮೈಲಾರಿ ವಗ್ಗರ, ಪ್ರಿಯಾಂಕಾ ಲಮಾಣಿ, ಪ್ರೀತಮ್ ಕಬ್ಬೇರಹಳ್ಳಿ, ಪ್ರೀತಿ ಬುಳ್ಳಾ, ದಿಂಗಾಲೇಶ ಜಂಗಳಿ, ಹರ್ಷಿತಾ ಕೋರಿಶೆಟ್ಟರ, ರಾಹುಲ್ ಕಾರಭಾರಿ ಹಾಗೂ ಪ್ರಣಮ್ಯ ಗುಜಮಾಗಡಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಗುವುದು.

ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು, ಸಾಹಿತಿಗಳು, ಶಿಕ್ಷಣ ತಜ್ಞರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದು, ಸಾಹಿತ್ಯಾಸಕ್ತರು ಮತ್ತು ಶರಣ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೆ.ಎ. ಬಳಿಗೇರ ಮನವಿ ಮಾಡಿದ್ದಾರೆ.

ಜೋಳಿಗೆ ಹಿಡಿದು ವ್ಯಸನ ಭಿಕ್ಷೆ ಬೇಡಿದ ಮಹಾನ್ ಸಂತ!

0

ಮಾಜವನ್ನು ಬದಲಾಯಿಸಲು ಕಾನೂನು, ಶಿಕ್ಷೆ ಅಥವಾ ಭಯಕ್ಕಿಂತಲೂ ಮನಪರಿವರ್ತನೆಯೇ ಅತ್ಯಂತ ದೊಡ್ಡ ಅಸ್ತ್ರ ಎಂಬುದನ್ನು ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿದ ಮಹಾನ್ ಸಮಾಜ ಸುಧಾರಕರಲ್ಲಿ ಲಿಂಗೈಕ್ಯ ಡಾ. ಮಹಾಂತ ಶಿವಯೋಗಿ ಅಜ್ಜನವರು ಅಗ್ರಗಣ್ಯರು.

ಕೈಯಲ್ಲಿ ಕೆಂಪು ಬಣ್ಣದ ಜೋಳಿಗೆ, ಹೃದಯದಲ್ಲಿ ಸಮಾಜದ ನೋವು, ತುಟಿಗಳಲ್ಲಿ ಜಾಗೃತಿಯ ಸಂದೇಶ ಹೊತ್ತು ದೇಶ-ವಿದೇಶಗಳಲ್ಲಿ ಸಂಚರಿಸಿದ ಅವರು, ಲಕ್ಷಾಂತರ ಜನರ ಬದುಕಿನಲ್ಲಿ ಹೊಸ ಬೆಳಕು ಮೂಡಿಸಿದರು. ಜನರಿಂದ ಹಣವಲ್ಲ, ಮದ್ಯ, ತಂಬಾಕು, ಗುಟ್ಕಾ, ಬೀಡಿ, ಸಿಗರೇಟ್ ಸೇರಿದಂತೆ ತಮ್ಮ ದುಷ್ಚಟಗಳನ್ನೇ ಜೋಳಿಗೆಗೆ ಹಾಕುವಂತೆ ಭಿಕ್ಷೆ ಬೇಡಿದ ಅವರ ಅಪರೂಪದ ಅಭಿಯಾನ ವಿಶ್ವದಲ್ಲೇ ವಿಶಿಷ್ಟ ಸಾಮಾಜಿಕ ಜಾಗೃತಿ ಚಳವಳಿಯಾಗಿ ಗುರುತಿಸಿಕೊಂಡಿದೆ.

ಅವರ ಈ ಅಪೂರ್ವ ಸೇವೆಯನ್ನು ಗೌರವಿಸಿ ಕರ್ನಾಟಕ ಸರ್ಕಾರವು ಪ್ರತಿವರ್ಷ ಆಗಸ್ಟ್ 1ರಂದು ‘ವ್ಯಸನ ಮುಕ್ತ ದಿನಾಚರಣೆ’ಯನ್ನು ರಾಜ್ಯಾದ್ಯಂತ ಆಚರಿಸುತ್ತಿದೆ. ಯುವಜನತೆಯಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನಕ್ಕೆ ವಿಶೇಷ ಮಹತ್ವ ನೀಡಲಾಗಿದೆ.

ಬಾಲ್ಯದಲ್ಲೇ ಸನ್ಯಾಸ, ಸಮಾಜ ಸೇವೆಯತ್ತ ಪಯಣ

1930ರ ಆಗಸ್ಟ್ 1ರಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಜನಿಸಿದ ಡಾ. ಮಹಾಂತ ಶಿವಯೋಗಿಗಳು ಬಾಲ್ಯದಲ್ಲಿಯೇ ಆಧ್ಯಾತ್ಮಿಕ ಬದುಕಿನತ್ತ ಆಕರ್ಷಿತರಾದರು. ಕೇವಲ 10ನೇ ವಯಸ್ಸಿನಲ್ಲೇ ಸನ್ಯಾಸ ಸ್ವೀಕರಿಸಿ ಸವದಿಯ ವಿರಕ್ತ ಮಠದ ಚಿಕ್ಕ ಸ್ವಾಮೀಜಿಗಳಾದರು.

ಕಾಶಿಯಲ್ಲಿ ಸಂಸ್ಕೃತ, ಹಿಂದಿ, ಯೋಗ, ಶಾಸ್ತ್ರೀಯ ಸಂಗೀತ ಹಾಗೂ ಆಧ್ಯಾತ್ಮಿಕ ವಿದ್ಯೆಗಳಲ್ಲಿ ಉನ್ನತ ಶಿಕ್ಷಣ ಪಡೆದ ಅವರು, ತಮ್ಮ ಜ್ಞಾನವನ್ನು ಸಮಾಜದ ಒಳಿತಿಗಾಗಿ ಬಳಸುವ ಸಂಕಲ್ಪ ಕೈಗೊಂಡರು. 1970ರಲ್ಲಿ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ 19ನೇ ಪೀಠಾಧಿಪತಿಗಳಾಗಿ ಅಧಿಕಾರ ವಹಿಸಿಕೊಂಡ ನಂತರ ಸಮಾಜಮುಖಿ ಕಾರ್ಯಗಳಿಗೆ ಹೊಸ ದಿಕ್ಕು ನೀಡಿದರು.

ಒಂದು ಕುಟುಂಬದ ದುರಂತದಿಂದ ಹುಟ್ಟಿದ ಮಹಾನ್ ಚಳವಳಿ

ಅತಿಯಾದ ಮದ್ಯಪಾನದಿಂದ ಮೃತಪಟ್ಟ ಯುವಕನ ಮನೆಗೆ ಸಾಂತ್ವನ ಹೇಳಲು ತೆರಳಿದಾಗ ಕಂಡ ದೃಶ್ಯ ಶ್ರೀಗಳ ಬದುಕಿನ ದಿಕ್ಕನ್ನೇ ಬದಲಿಸಿತು. ಗಂಡನನ್ನು ಕಳೆದುಕೊಂಡ ಪತ್ನಿ, ಹಸಿವಿನಿಂದ ಕಣ್ಣೀರು ಸುರಿಸುತ್ತಿದ್ದ ಮಕ್ಕಳು, ದಿಕ್ಕಿಲ್ಲದೆ ನಿಂತ ಕುಟುಂಬವನ್ನು ಕಂಡ ಅವರು, ಇದು ಕೇವಲ ಒಂದು ಕುಟುಂಬದ ದುಃಖವಲ್ಲ, ಸಾವಿರಾರು ಮನೆಗಳ ವಾಸ್ತವ ಎಂದು ಅರಿತುಕೊಂಡರು.

ಈ ಅನುಭವವೇ 1975ರಲ್ಲಿ ‘ಮಹಾಂತ ಜೋಳಿಗೆ’ ಅಭಿಯಾನಕ್ಕೆ ಕಾರಣವಾಯಿತು.

ಹಣವಲ್ಲ, ದುಷ್ಚಟಗಳನ್ನೇ ಜೋಳಿಗೆಗೆ ಹಾಕಿ!

ಕೈಯಲ್ಲಿ ಕೆಂಪು ಜೋಳಿಗೆ ಹಿಡಿದು ಮನೆ-ಮನೆಗೆ ತೆರಳುತ್ತಿದ್ದ ಶ್ರೀಗಳು,

“ಮದ್ಯ, ತಂಬಾಕು, ಗುಟ್ಕಾ, ಬೀಡಿ, ಸಿಗರೇಟ್ ಹಾಗೂ ಎಲ್ಲ ರೀತಿಯ ದುಷ್ಚಟಗಳನ್ನು ಈ ಜೋಳಿಗೆಗೆ ಹಾಕಿ… ಇನ್ನು ಮುಂದೆ ಅವುಗಳಿಂದ ದೂರವಿರಿ” ಎಂದು ಮನವಿ ಮಾಡುತ್ತಿದ್ದರು.

ಅವರ ಮಾತಿನಲ್ಲಿ ಭಯ ಇರಲಿಲ್ಲ; ಪ್ರೀತಿ, ಕಾಳಜಿ ಹಾಗೂ ಬದುಕಿನ ಮೌಲ್ಯಗಳಿದ್ದವು. ಪರಿಣಾಮ ಸಾವಿರಾರು ಜನರು ವ್ಯಸನ ತೊರೆದು ಹೊಸ ಬದುಕು ಆರಂಭಿಸಿದರು.

ಸುಮಾರು 42 ವರ್ಷಗಳ ಕಾಲ ದೇಶದ ಮೂಲೆಮೂಲೆಗೂ ಹಾಗೂ ಇಂಗ್ಲೆಂಡ್ ಸೇರಿದಂತೆ ವಿದೇಶಗಳಿಗೂ ತೆರಳಿ ವ್ಯಸನ ಮುಕ್ತ ಸಮಾಜಕ್ಕಾಗಿ ಅವರು ನಿರಂತರ ಜನಜಾಗೃತಿ ಮೂಡಿಸಿದರು.

ವ್ಯಸನ ನಿರ್ಮೂಲನೆ ಮಾತ್ರವಲ್ಲ… ಸಮಾಜ ಸುಧಾರಣೆಯ ಮಹಾಯಜ್ಞ

ಡಾ. ಮಹಾಂತ ಶಿವಯೋಗಿ ಅಜ್ಜನವರ ಸೇವೆ ವ್ಯಸನ ನಿರ್ಮೂಲನೆಗೆ ಮಾತ್ರ ಸೀಮಿತವಾಗಿರಲಿಲ್ಲ.

ಅವರು ನಿರಂತರ ಅನ್ನದಾಸೋಹ, ವಚನ ಮಾಂಗಲ್ಯ, ದೇವದಾಸಿ ವಿಮೋಚನಾ ಚಳವಳಿ, ದೇವದಾಸಿಯರ ಮಕ್ಕಳಿಗಾಗಿ ಟ್ರಸ್ಟ್ ಸ್ಥಾಪನೆ, ನಿರುದ್ಯೋಗಿಗಳು ಹಾಗೂ ವಿಧವೆಯರಿಗಾಗಿ ‘ಕಾಯಕ ಸಂಜೀವಿನಿ’ ಸಂಸ್ಥೆ, ಯೋಗ ಮತ್ತು ನಿಸರ್ಗ ಚಿಕಿತ್ಸಾ ಕೇಂದ್ರಗಳು, ಪರಿಶಿಷ್ಟ ಜಾತಿ ಹಾಗೂ ಪಂಗಡದ ಯುವಕರಿಗೆ ಧರ್ಮ ಸಂಸ್ಕಾರ, ಮಹಿಳಾ ಸಾಧಕಿಯರಿಗೆ ಜಂಗಮ ದೀಕ್ಷೆ ನೀಡಿ ಮಠಾಧಿಪತಿಗಳನ್ನಾಗಿ ಮಾಡುವುದು, ಮಠದ ಜಮೀನಿನಲ್ಲಿ ರೈತರಿಗೆ ಕೃಷಿಗೆ ಅವಕಾಶ ಕಲ್ಪಿಸುವುದು ಹಾಗೂ ಬರಗಾಲದ ಸಂದರ್ಭದಲ್ಲಿ ಗಂಜಿ ಕೇಂದ್ರಗಳನ್ನು ಆರಂಭಿಸುವ ಮೂಲಕ ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದರು.

ಸಮಾಜ ಸೇವೆಗೆ ಸಂದ ಅನೇಕ ಗೌರವಗಳು

ಅವರ ಅಪೂರ್ವ ಸೇವೆಗಾಗಿ ‘ಅಭಿನವ ಚನ್ನಬಸವಣ್ಣ’, ‘ಕಾಯಕನಿಷ್ಠ ಶಿವಯೋಗಿ’, ‘ಪ್ರವಚನ ಪ್ರವೀಣ’, ‘ಕಾಯಕಯೋಗಿ’, ‘ಸಮಾಜ ಸುಧಾರಕ’, ‘ದಲಿತೋದ್ಧಾರ ಮಹಾಂತ’, ‘ಸ್ಪಂದನ ಪ್ರಶಸ್ತಿ’, ‘ಗಣಾಚಾರ ಪ್ರಶಸ್ತಿ’, ‘ಕನಕಶ್ರೀ ಪ್ರಶಸ್ತಿ’, ‘ನಾಡಿನ ಪುಣ್ಯದ ಶಿವಯೋಗಿ ಪ್ರಶಸ್ತಿ’, ‘ಯೋಗರತ್ನ ಪ್ರಶಸ್ತಿ’ ಸೇರಿದಂತೆ ಹಲವಾರು ಪ್ರತಿಷ್ಠಿತ ಗೌರವಗಳು ಅವರಿಗೆ ಲಭಿಸಿವೆ.

ಸಂದೇಶ ಇಂದಿಗೂ ಜೀವಂತ

2018ರಲ್ಲಿ ಡಾ. ಮಹಾಂತ ಶಿವಯೋಗಿ ಅಜ್ಜನವರು ಶಿವೈಕ್ಯರಾದರೂ, ಅವರು ಬಿತ್ತಿದ ವ್ಯಸನ ಮುಕ್ತ ಸಮಾಜದ ಕನಸು ಇಂದಿಗೂ ಲಕ್ಷಾಂತರ ಜನರಿಗೆ ಪ್ರೇರಣೆಯಾಗಿದೆ.

ಇಂದಿನ ದಿನಗಳಲ್ಲಿ ಯುವಜನತೆ ಮಾದಕ ವಸ್ತುಗಳತ್ತ ಆಕರ್ಷಿತರಾಗುತ್ತಿರುವ ಸಂದರ್ಭದಲ್ಲಿ, ಅವರ ‘ಮಹಾಂತ ಜೋಳಿಗೆ’ ಚಳವಳಿ ಇನ್ನಷ್ಟು ಪ್ರಸ್ತುತವಾಗಿದೆ. ಆರೋಗ್ಯವಂತ ವ್ಯಕ್ತಿ, ಸುಖೀ ಕುಟುಂಬ ಹಾಗೂ ಸದೃಢ ಸಮಾಜ ನಿರ್ಮಾಣಕ್ಕೆ ಅವರ ಆದರ್ಶಗಳು ಇಂದಿಗೂ ದಾರಿದೀಪವಾಗಿವೆ.

“ಲಿಂಗೈಕ್ಯ ಡಾ. ಮಹಾಂತ ಶಿವಯೋಗಿ ಅಜ್ಜನವರು ಆರಂಭಿಸಿದ ‘ಮಹಾಂತ ಜೋಳಿಗೆ’ ಅಭಿಯಾನವು ಕೇವಲ ವ್ಯಸನ ವಿರೋಧಿ ಚಳವಳಿಯಲ್ಲ; ಅದು ಸಮಾಜದ ಮನಪರಿವರ್ತನೆಯ ಮಹತ್ವದ ಆಂದೋಲನವಾಗಿದೆ. ಪ್ರತಿಯೊಬ್ಬ ಯುವಕ-ಯುವತಿಯೂ ಮಾದಕ ವಸ್ತುಗಳು ಹಾಗೂ ದುಷ್ಚಟಗಳಿಂದ ದೂರವಿದ್ದು ಆರೋಗ್ಯಯುತ ಜೀವನ ನಡೆಸಬೇಕು. ಆಗಸ್ಟ್ 1ರ ವ್ಯಸನ ಮುಕ್ತ ದಿನಾಚರಣೆಯ ಅಂಗವಾಗಿ ಪ್ರತಿಯೊಬ್ಬರೂ ತಮ್ಮ ಕುಟುಂಬ, ಸ್ನೇಹಿತರು ಹಾಗೂ ಸಮಾಜದಲ್ಲಿ ವ್ಯಸನ ವಿರೋಧಿ ಜಾಗೃತಿ ಮೂಡಿಸುವ ಸಂಕಲ್ಪ ಮಾಡಬೇಕು. ವ್ಯಸನ ಮುಕ್ತ ವ್ಯಕ್ತಿ, ವ್ಯಸನ ಮುಕ್ತ ಕುಟುಂಬ ಮತ್ತು ವ್ಯಸನ ಮುಕ್ತ ಗ್ರಾಮಗಳ ನಿರ್ಮಾಣವೇ ಡಾ. ಮಹಾಂತ ಶಿವಯೋಗಿ ಅಜ್ಜನವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ.”

– ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ, ಗದಗ

ಪ್ರಮುಖಾಂಶಗಳು

  • 1930ರ ಆಗಸ್ಟ್ 1ರಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಜನನ.
  • ಕೇವಲ 10ನೇ ವಯಸ್ಸಿನಲ್ಲೇ ಸನ್ಯಾಸ ಸ್ವೀಕರಿಸಿ ಸವದಿಯ ವಿರಕ್ತ ಮಠದ ಚಿಕ್ಕ ಸ್ವಾಮೀಜಿಗಳಾದರು.
  • ಕಾಶಿಯಲ್ಲಿ ಸಂಸ್ಕೃತ, ಹಿಂದಿ, ಯೋಗ, ಶಾಸ್ತ್ರೀಯ ಸಂಗೀತ ಹಾಗೂ ಆಧ್ಯಾತ್ಮಿಕ ವಿದ್ಯೆಗಳಲ್ಲಿ ಪರಿಣತಿ ಪಡೆದರು.
  • 1970ರಲ್ಲಿ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ 19ನೇ ಪೀಠಾಧಿಪತಿಗಳಾಗಿ ಅಧಿಕಾರ ವಹಿಸಿಕೊಂಡರು.
  • 1975ರಲ್ಲಿ ಐತಿಹಾಸಿಕ ‘ಮಹಾಂತ ಜೋಳಿಗೆ’ ವ್ಯಸನ ವಿರೋಧಿ ಅಭಿಯಾನ ಆರಂಭಿಸಿದರು.
  • 42 ವರ್ಷಗಳ ಕಾಲ ದೇಶ-ವಿದೇಶಗಳಲ್ಲಿ ಸಂಚರಿಸಿ ವ್ಯಸನ ಮುಕ್ತ ಸಮಾಜಕ್ಕಾಗಿ ಜನಜಾಗೃತಿ ಮೂಡಿಸಿದರು.
  • ಅನ್ನದಾಸೋಹ, ದೇವದಾಸಿ ವಿಮೋಚನೆ, ಯೋಗ-ನಿಸರ್ಗ ಚಿಕಿತ್ಸೆ, ಮಹಿಳಾ ಸಬಲೀಕರಣ, ರೈತರಿಗೆ ನೆರವು ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು.
  • ಸಮಾಜ ಸೇವೆಗಾಗಿ ‘ಅಭಿನವ ಚನ್ನಬಸವಣ್ಣ’, ‘ಸಮಾಜ ಸುಧಾರಕ’, ‘ಕಾಯಕಯೋಗಿ’, ‘ಯೋಗರತ್ನ’ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾದರು.
  • 2018ರಲ್ಲಿ ಶಿವೈಕ್ಯರಾದರೂ ಅವರ ವ್ಯಸನ ಮುಕ್ತ ಸಮಾಜದ ಸಂದೇಶ ಇಂದಿಗೂ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದೆ.
  • ಅವರ ಅಪೂರ್ವ ಸಮಾಜ ಸೇವೆಯನ್ನು ಗೌರವಿಸಿ ಕರ್ನಾಟಕ ಸರ್ಕಾರವು ಪ್ರತಿವರ್ಷ ಆಗಸ್ಟ್ 1 ಅನ್ನು ‘ವ್ಯಸನ ಮುಕ್ತ ದಿನಾಚರಣೆ’ಯಾಗಿ ಆಚರಿಸುತ್ತಿದೆ.

ವಸಂತ ಬಿ. ಮಡ್ಲೂರ, ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಗದಗ.

ಬಾಕಿ ಕಡತಗಳ ತ್ವರಿತ ವಿಲೇವಾರಿಗೆ ಸೂಚನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಸಾರ್ವಜನಿಕ ಸೇವೆ ಹಾಗೂ ಬಾಕಿ ಕಡತಗಳ ವಿಲೇವಾರಿಯಲ್ಲಿ ಯಾವುದೇ ಕಾರಣಕ್ಕೂ ಅನಗತ್ಯ ವಿಳಂಬ ಮಾಡಬಾರದು. ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ. ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕಂದಾಯ ಆಡಳಿತ ಹಾಗೂ ಇಲಾಖಾ ಕಾರ್ಯಕಲಾಪಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಭೆಯಲ್ಲಿ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಿದ ಅವರು, ವಿವಿಧ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಆಡಳಿತಾತ್ಮಕ ಕಡತಗಳು, ಸಾರ್ವಜನಿಕ ಅರ್ಜಿಗಳು ಹಾಗೂ ಭೂ-ಕಂದಾಯ ಸಂಬಂಧಿತ ಪ್ರಸ್ತಾವನೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಹಲವು ತಿಂಗಳುಗಳಿಂದ ಹಾಗೂ ವರ್ಷಗಳಿಂದ ಬಾಕಿ ಉಳಿದಿರುವ ಕಡತಗಳನ್ನು ನಿಯಮಾನುಸಾರ ತಕ್ಷಣ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕಡತಗಳ ಪರಿಶೀಲನೆ ವೇಳೆ ಅಗತ್ಯ ದಾಖಲೆಗಳನ್ನು ಸಮರ್ಪಕವಾಗಿ ಪರಿಶೀಲಿಸಬೇಕು. ಆಡಳಿತಾತ್ಮಕ ಅಥವಾ ತಾಂತ್ರಿಕ ಲೋಪಗಳಿದ್ದರೆ ತಕ್ಷಣವೇ ಸರಿಪಡಿಸಬೇಕು. ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಹಾಗೂ ಮೇಲ್ಮನವಿಗಳಿಗೆ ನಿಗದಿತ ಅವಧಿಯೊಳಗೆ ನಿಖರ ಮಾಹಿತಿ ನೀಡಬೇಕು. ಅರ್ಜಿಗಳನ್ನು ಅನಗತ್ಯವಾಗಿ ಮುಂದೂಡುವ ಪ್ರವೃತ್ತಿ ಸಲ್ಲದು ಎಂದು ತಿಳಿಸಿದರು.

ಅಧಿಕಾರಿಗಳು ಕಚೇರಿ ಕೆಲಸಕ್ಕೆ ಮಾತ್ರ ಸೀಮಿತವಾಗದೆ ಅಗತ್ಯವಿದ್ದಲ್ಲಿ ಸ್ಥಳ ಪರಿಶೀಲನೆ ನಡೆಸಬೇಕು. ಉಪವಿಭಾಗ ಮಟ್ಟದಲ್ಲಿ ನಿಯಮಿತ ಸಭೆಗಳನ್ನು ನಡೆಸಿ ಕಂದಾಯ ಇಲಾಖೆಯ ಕಾರ್ಯಗಳನ್ನು ಚುರುಕುಗೊಳಿಸುವಂತೆ ಸೂಚಿಸಿದರು.

ಮುಜರಾಯಿ ದೇವಾಲಯಗಳಲ್ಲಿ ಪಾರದರ್ಶಕ ಆಡಳಿತಕ್ಕೆ ಒತ್ತು

ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಾಲಯಗಳಲ್ಲಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸೇವೆ ಒದಗಿಸಬೇಕು. ದೇವಾಲಯಗಳ ಸುರಕ್ಷತೆಗಾಗಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ಆದಾಯ, ಹುಂಡಿ ಎಣಿಕೆ ಹಾಗೂ ವೆಚ್ಚದ ಲೆಕ್ಕಪತ್ರಗಳನ್ನು ನಿಯಮಿತವಾಗಿ ಪರಿಶೀಲಿಸಿ ಪಾರದರ್ಶಕತೆ ಕಾಪಾಡಬೇಕು ಎಂದು ಸೂಚಿಸಿದರು.

ಅರ್ಚಕರು ಹಾಗೂ ದೇವಾಲಯಗಳ ಆಸ್ತಿ-ಪಾಸ್ತಿಗೆ ಸಂಬಂಧಿಸಿದ ಆಧಾರ್ ಮತ್ತು ಆರ್‌ಟಿಸಿ (RTC) ದಾಖಲೆಗಳನ್ನು ನವೀಕರಿಸುವಂತೆ ಹಾಗೂ ತಹಶೀಲ್ದಾರರು ದೇವಾಲಯಗಳ ಆಡಳಿತವನ್ನು ಖುದ್ದು ಪರಿಶೀಲಿಸುವಂತೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ತಾಲೂಕು ಮಟ್ಟದಲ್ಲಿ ಭೂ ಕಂದಾಯ ಪ್ರಕರಣಗಳು, ಆಕಾರ್‌ಬಂಧ್ ತಿದ್ದುಪಡಿ, ಖಾತೆ ಬದಲಾವಣೆ ಹಾಗೂ ಸಾರ್ವಜನಿಕ ಅರ್ಜಿಗಳ ತ್ವರಿತ ವಿಲೇವಾರಿಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ವಿವಿಧ ಮುಜರಾಯಿ ದೇವಾಲಯಗಳಲ್ಲಿ ಭಕ್ತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಪ್ರಾದೇಶಿಕ ಆಯುಕ್ತರು ನೀಡಿರುವ ಎಲ್ಲ ಸೂಚನೆಗಳನ್ನು ಶೀಘ್ರ ಜಾರಿಗೊಳಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಉಪವಿಭಾಗಾಧಿಕಾರಿ ಗಂಗಪ್ಪ ಎಂ., ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟೂರು, ವಿವಿಧ ತಾಲೂಕುಗಳ ತಹಶೀಲ್ದಾರರು, ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

“ಸಾರ್ವಜನಿಕ ಸೇವೆ ಮತ್ತು ಬಾಕಿ ಕಡತಗಳ ವಿಲೇವಾರಿಯಲ್ಲಿ ವಿಳಂಬಕ್ಕೆ ಅವಕಾಶವಿಲ್ಲ. ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿ, ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು.”
– ಜಾನಕಿ ಕೆ.ಎಂ., ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ

ಶ್ರೀಮಂತರಿಗೊಂದು ಕಾನೂನು… ಬಡವರಿಗೊಂದು ಕಾನೂನಾ?

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಅವಳಿ ನಗರದ ಗಂಗಿಮಡಿ ಬಡಾವಣೆಯ ಲೀಡ್ಕರ್ ಕಾಲೋನಿಯಲ್ಲಿ ನಗರಸಭೆ ನಡೆಸಿದ ಅತಿಕ್ರಮಣ ತೆರವು ಕಾರ್ಯಾಚರಣೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಗುರುವಾರ ಮುಂಜಾನೆ ಜೆಸಿಬಿಗಳ ಮೂಲಕ ಹತ್ತಕ್ಕೂ ಹೆಚ್ಚು ಮನೆಗಳ ಕಂಪೌಂಡ್‌ಗಳನ್ನು ತೆರವುಗೊಳಿಸಿದ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ನಗರಸಭೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಫಾಯಿ ಕರ್ಮಚಾರಿಗಳಿಗೆ ಸರ್ಕಾರ ನೀಡಿರುವ ಮನೆಗಳಲ್ಲಿ ಹಲವು ವರ್ಷಗಳಿಂದ ವಾಸವಿರುವ ಬಡ ಕುಟುಂಬಗಳು ತಮ್ಮ ಖರ್ಚಿನಲ್ಲಿ ಕಂಪೌಂಡ್ ನಿರ್ಮಿಸಿಕೊಂಡಿದ್ದವು. ಯಾವುದೇ ಸಾರ್ವಜನಿಕರಿಗೆ ಅಥವಾ ವಾಹನ ಸಂಚಾರಕ್ಕೆ ತೊಂದರೆಯಾಗದಿದ್ದರೂ ಏಕಾಏಕಿ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ನಿವಾಸಿಗಳು ಆರೋಪಿಸಿದರು.

ಅವಳಿ ನಗರದ ಪ್ರಮುಖ ರಸ್ತೆಗಳಲ್ಲಿ ಫುಟ್‌ಪಾತ್ ಅತಿಕ್ರಮಿಸಿ ನಿರ್ಮಿಸಿರುವ ಬೃಹತ್ ವಾಣಿಜ್ಯ ಕಟ್ಟಡಗಳ ವಿರುದ್ಧ ನಗರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ಬಡವರ ಮನೆಗಳ ಮೇಲೆ ಮಾತ್ರ ಬುಲ್ಡೋಜರ್ ಚಲಾಯಿಸಲಾಗಿದೆ ಎಂದು ಮಹಿಳೆಯರು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್‌ನೊಂದಿಗೆ ಆಗಮಿಸಿ ಕಂಪೌಂಡ್ ತೆರವು ಕಾರ್ಯಾಚರಣೆ ನಡೆಸಿದ ವೇಳೆ ಸ್ಥಳೀಯ ಮಹಿಳೆಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಆದರೂ ಕಾರ್ಯಾಚರಣೆ ಮುಂದುವರಿದಿದ್ದು, ಹಲವು ಮನೆಗಳ ಕಂಪೌಂಡ್‌ಗಳು ನೆಲಸಮಗೊಂಡವು.

ಈ ಕುರಿತು ಪ್ರತಿಕ್ರಿಯಿಸಿದ ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಲಕ್ಷ್ಮಣ ಜೋಗದಂಡಕರ, ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದ್ದ ದೂರಿನ ಹಿನ್ನೆಲೆಯಲ್ಲಿ ನಿಯಮಾನುಸಾರ ಅತಿಕ್ರಮಣ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಸ್ಥಳೀಯರು, ಬಡವರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳದೆ, ಅವಳಿ ನಗರದಲ್ಲಿ ಫುಟ್‌ಪಾತ್ ಹಾಗೂ ರಸ್ತೆ ಅತಿಕ್ರಮಿಸಿ ನಿರ್ಮಿಸಿರುವ ಪ್ರಭಾವಿಗಳ ಕಟ್ಟಡಗಳ ವಿರುದ್ಧವೂ ನಗರಸಭೆ ಇದೇ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಹಡಪದ ಅಪ್ಪಣ್ಣರ ಆದರ್ಶಗಳು ಇಂದಿಗೂ ಪ್ರಸ್ತುತ: ಶಾಕೀರ್ ಸನದಿ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಶಿವಶರಣ ಹಡಪದ ಅಪ್ಪಣ್ಣ ಅವರು ಮಾನವ ಸೇವೆ, ಸಮಾನತೆ ಮತ್ತು ಸೌಹಾರ್ದತೆಯ ಬದುಕನ್ನು ಪ್ರತಿಪಾದಿಸಿದ ಮಹಾನ್ ಶಿವಶರಣರಾಗಿದ್ದು, ಅವರ ತತ್ವಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶಿಯಾಗಿವೆ ಎಂದು ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿ ಹೇಳಿದರು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಬುಧವಾರ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣನವರ ಸಾಮಾಜಿಕ ಕ್ರಾಂತಿಗೆ ಹಡಪದ ಅಪ್ಪಣ್ಣ ಅವರು ಅಪಾರ ಕೊಡುಗೆ ನೀಡಿದ್ದು, ಶರಣರ ವಚನಗಳ ಮೂಲಕ ಸಮಾನತೆ, ಮಾನವೀಯತೆ ಮತ್ತು ಸತ್ಯದ ಬದುಕಿನ ಸಂದೇಶವನ್ನು ಜನರಲ್ಲಿ ಬಿತ್ತಿದರು. ವಿದ್ಯಾರ್ಥಿಗಳಲ್ಲಿ ಬಸವ ತತ್ವಗಳು, ಶರಣರ ವಚನಗಳು ಮತ್ತು ದೇಶದ ಇತಿಹಾಸದ ಕುರಿತು ಅರಿವು ಮೂಡಿಸಿದರೆ ಅವರ ವ್ಯಕ್ತಿತ್ವ ವಿಕಸನದ ಜೊತೆಗೆ ಉತ್ತಮ ಸಮಾಜ ನಿರ್ಮಾಣಕ್ಕೂ ಸಹಕಾರಿಯಾಗಲಿದೆ ಎಂದು ಹೇಳಿದರು.

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ ಹಳಿಯಾಳ ಮಾತನಾಡಿ, ಹಡಪದ ಅಪ್ಪಣ್ಣ ಅವರು ಶ್ರದ್ಧೆ, ಭಕ್ತಿ ಹಾಗೂ ಪ್ರಾಮಾಣಿಕ ಕಾಯಕದ ಮೂಲಕ ಮಾದರಿಯಾಗಿದ್ದು, ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರೇಮಲ್ಲೂರು ಈಶ್ವರನ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಾ. ಈರಣ್ಣ ಇಂಜಗನೇರಿ ಅವರು ಶಿವಶರಣ ಹಡಪದ ಅಪ್ಪಣ್ಣ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಜಿಲ್ಲಾ ಪ್ರತಿನಿಧಿ ಫಕೀರೇಶ ಅಡಿವೆಪ್ಪ ಹಡಪದ, ಜಿಲ್ಲಾ ಹಡಪದ ನೌಕರರ ಸಂಘದ ಪ್ರಮುಖರಾದ ಮಹಾರುದ್ರಪ್ಪ ಪಡೆಸೂರ, ನಿಂಗರಾಜ ಹಡಪದ, ಶಂಕರ ಹಡಪದ, ಮಂಜುಳಾ ಪಡೆಸೂರ, ಕಿರಣ ಹಡಪದ, ಮಾರುತಿ ಹಡಪದ, ಶಿವಕುಮಾರ ಅಣ್ಣಿಗೇರಿ, ನಾಗರಾಜ ಅಂಗಡಿ, ಈರಣ್ಣ ಹಡಪದ, ಸಂಗಮೇಶ ಬೂದಿಹಾಳ, ಫಕೀರಪ್ಪ ಮೂಲಿಮನಿ, ಮಲ್ಲಪ್ಪ ಹಡಪದ ಹಾಗೂ ಶಾಂತವ್ವ ಹಡಪದ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಮಾಜದ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

“ಶರಣರ ವಚನಗಳು ಮಾನವೀಯತೆ, ಸಹಬಾಳ್ವೆ ಮತ್ತು ಸತ್ಯದ ಬದುಕಿಗೆ ದಾರಿದೀಪ. ಯುವಜನತೆ ಮಹನೀಯರ ಆದರ್ಶಗಳನ್ನು ಅಳವಡಿಸಿಕೊಂಡಾಗ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಸಾಧ್ಯ.”
— ಶಾಕೀರ್ ಸನದಿ, ಅಧ್ಯಕ್ಷರು, ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ