Home Blog Page 111

ಕಾಲೇಜಿನ ಎಡವಟ್ಟು; ಪರೀಕ್ಷೆ ಬರೆಯಲು ಬಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಂಗಾಲು- ಆಗಿದ್ದೇನು?

0

ಯಾದಗಿರಿ: ರಾಜ್ಯದಲ್ಲಿ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭಗೊಂಡಿದ್ದು, 7.10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು 1,217 ಕೇಂದ್ರಗಳಲ್ಲಿ ಪರೀಕ್ಷೆಗೆ ಕುಳಿತುಕೊಂಡಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನೇತೃತ್ವದಲ್ಲಿ ನಡೆಸಲಾಗುತ್ತಿರುವ ಪರೀಕ್ಷೆಗೆ ಸಿಸಿ ಕ್ಯಾಮರಾ ಕಣ್ಗಾವಲು ಮತ್ತು ಬಿಗಿ ಭದ್ರತೆ ಒದಗಿಸಲಾಗಿದೆ.

ಆದರೆ, ಯಾದಗಿರಿಯಲ್ಲಿ ಕೆಲವು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಕುರಿತು ಗೊಂದಲಕ್ಕೀಡಾಗಿದ್ದಾರೆ. ಹಾಲ್ ಟಿಕೆಟ್‌ನಲ್ಲಿ ನಮೂದಿಸಿರುವ ವಿಳಾಸ ಮತ್ತು ವಾಸ್ತವಿಕ ಕೇಂದ್ರ ವಿಳಾಸ ಬೇರೆಯಾಗಿದ್ದ ಕಾರಣ, ಕೆಲ ವಿದ್ಯಾರ್ಥಿಗಳು ಸಬಾ ಪಿಯು ಕಾಲೇಜು ಕೇಂದ್ರವನ್ನು ಹುಡುಕಲು ಪರದಾಡಬೇಕಾಯಿತು. ಉದಾಹರಣೆಗೆ, ಕಾಲೇಜು ಲುಂಬಿನಿ ಪಾರ್ಕ್ ಹತ್ತಿರ ಇದ್ದರೂ, ಹಾಲ್ ಟಿಕೆಟ್‌ನಲ್ಲಿ ಗಂಜ್ ರೋಡ್ ಎಂದು ಉಲ್ಲೇಖವಾಗಿತ್ತು. ಅಂತಿಮವಾಗಿ ಸ್ಥಳೀಯರ ಸಹಾಯದಿಂದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ತಲುಪಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್ 17ರವರೆಗೆ ನಡೆಯಲಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಮೊಬೈಲ್ ನಿರ್ಬಂಧ, ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ನಿಷೇಧ, ಅನಧಿಕೃತ ವ್ಯಕ್ತಿಗಳ ಪ್ರವೇಶ ನಿಷೇಧ, ಚಿತ್ರೀಕರಣ ಹಾಗೂ ಸ್ಫೋಟಕ ವಸ್ತು ನಿರ್ಬಂಧ ಸೇರಿದಂತೆ ಸಂಪೂರ್ಣ ಭದ್ರತಾ ಕ್ರಮಗಳು ಜಾರಿಗೆ ಬಂದಿವೆ.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ. ಅವರು “ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ, ಉತ್ತಮ ಅಂಕಗಳ ಜೊತೆಗೆ ಉಜ್ವಲ ಭವಿಷ್ಯವೂ ನಿಮ್ಮದಾಗಲಿ” ಎಂದು ಸಂದೇಶ ನೀಡಿದ್ದಾರೆ.

Gadaga Crime News: ಆಸ್ತಿ ಕಲಹ; ಮಗನಿಂದಲೇ ತಂದೆಯ ಭೀಕರ ಕೊಲೆ!

0

ಲಕ್ಷ್ಮೇಶ್ವರ: ಆಸ್ತಿ ವಿಚಾರಕ್ಕೆ ಶುರುವಾದ ಗಲಾಟೆ ತಂದೆಯ ಕೊಲೆಯಲ್ಲಿ ಅಂತ್ಯವಾಗಿರುವ ದಾರುಣ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸಮೀಪದ ಗೋವನಾಳ ಗ್ರಾಮದಲ್ಲಿ ಜರುಗಿದೆ.

ಪಾಪಿ ಮಗನಿಂದಲೇ ತಂದೆಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಶಂಕರಗೌಡ ಕುಬೇರಗೌಡ ದ್ಯಾವನಗೌಡ್ರ (60) ಕೊಲೆಯಾದ ತಂದೆ. ಪ್ರಭು ಶಂಕರಗೌಡ ದ್ಯಾವನಗೌಡ್ರ (23) ಕೊಲೆ ಮಾಡಿದ ಪಾಪಿ ಮಗ.

ಪ್ರಾಥಮಿಕ ತನಿಖೆ ಪ್ರಕಾರ, ಕುಟುಂಬದ 2 ಎಕರೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಜಗಳವೇ ಕೊಲೆಗೆ ಕಾರಣವಾಗಿದೆ. ಘಟನೆಯ ಸಮಯದಲ್ಲಿ ಆರೋಪಿಯು ಕುಡಿದ ಮದ್ಯದಲ್ಲಿದ್ದ ಎನ್ನಲಾಗಿದೆ.

ಕೊಲೆಗೀಡಾದ ಶಂಕರಗೌಡನಿಗೆ ಪ್ರಭು ಎರಡನೇ ಪತ್ನಿಯಿಂದ ಜನಿಸಿದ ಮಗನಾಗಿದ್ದಾನೆ. ಸುಮಾರು 30 ವರ್ಷಗಳ ಹಿಂದೆ ಮೊದಲ ಪತ್ನಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದರು ಎಂಬ ಸಂಗತಿಯೂ ಹೊರಬಿದ್ದಿದೆ.

ಘಟನೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ ಜಗದೀಶ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಚಾಕುವಿನಿಂದ ಇರಿದು ವಿವಾಹಿತ ಪ್ರಿಯತಮೆ ಕೊಂದ ಪ್ರಿಯಕರ: ಅನಾಥರಾದ ಇಬ್ಬರು ಮಕ್ಕಳು

0

ಚಿಕ್ಕಬಳ್ಳಾಪುರ: ವಿವಾಹಿತೆಯೊಬ್ಬಳನ್ನು ಪ್ರಿಯಕರ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ಬೆಳಕಿಗೆ ಬಂದಿದೆ. ಈ ದುರ್ಘಟನೆಯಿಂದ ಮೃತಳ ಇಬ್ಬರು ಪುಟ್ಟ ಮಕ್ಕಳು ಅನಾಥರಾಗಿದ್ದಾರೆ.

ಮೃತ ಮಹಿಳೆ ತೇಜಸ್ವಿನಿ (26) ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡನನ್ನು ಬಿಟ್ಟು ಇಬ್ಬರು ಮಕ್ಕಳೊಂದಿಗೆ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಳು. ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡು, ಅಲ್ಲಿಯೇ ನೀಡಲಾಗಿದ್ದ ಒಂದು ಕೊಠಡಿಯಲ್ಲಿ ಮಕ್ಕಳೊಂದಿಗೆ ವಾಸಿಸುತ್ತಿದ್ದಳು.

ಅಲ್ಲಿ ಪರಿಚಯವಾದ ಸಂದೀಪ್ (20) ಎಂಬ ಯುವಕನೊಂದಿಗೆ ತೇಜಸ್ವಿನಿಗೆ ಆತ್ಮೀಯತೆ ಬೆಳೆದಿತ್ತು ಎನ್ನಲಾಗಿದೆ. ಕಳೆದ ಒಂದು ತಿಂಗಳ ಹಿಂದೆ ಇಬ್ಬರೂ ಬೇರೆ ಮನೆ ಮಾಡಿಕೊಂಡು ಜೀವನ ಆರಂಭಿಸಿದ್ದರು.

ಎರಡು ದಿನಗಳ ಹಿಂದೆ ತೇಜಸ್ವಿನಿ ಮತ್ತು ಸಂದೀಪ್ ಸ್ನೇಹಿತೆ ಅರುಣಾ ಅವರ ಮನೆಯಲ್ಲಿ ತಂಗಿದ್ದಾಗ ಮದ್ಯ ಸೇವನೆಯ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಜಗಳದ ವೇಳೆ ಮದ್ಯದ ಪಾಕೆಟ್ ಕತ್ತರಿಸಲು ಇಟ್ಟುಕೊಂಡಿದ್ದ ಚಾಕುವಿನಿಂದ ಸಂದೀಪ್ ತೇಜಸ್ವಿನಿಯ ಹೊಟ್ಟೆ ಭಾಗಕ್ಕೆ ಇರಿದಿದ್ದಾನೆ.

ಗಾಯಗೊಂಡ ತೇಜಸ್ವಿನಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಿ ಹೊಲಿಗೆ ಹಾಕಲಾಗಿತ್ತು. ಆದರೆ ಮನೆಗೆ ಬಂದ ಬಳಿಕ ವೈದ್ಯರು ನೀಡಿದ ಔಷಧಿಗಳನ್ನು ಸೇವಿಸದೆ ಮದ್ಯ ಸೇವಿಸಿ ಮಲಗಿದ್ದಾಳೆ ಎಂದು ತಿಳಿದುಬಂದಿದೆ. ಇದರಿಂದ ಗಾಯ ಸೆಪ್ಟಿಕ್ ಆಗಿ ಹೊಟ್ಟೆಯಲ್ಲಿ ಸೋಂಕು ವ್ಯಾಪಿಸಿ ಆರೋಗ್ಯ ಸ್ಥಿತಿ ಗಂಭೀರಗೊಂಡಿದೆ.

ಮತ್ತೆ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಅಂಗಾಂಗ ವೈಫಲ್ಯದಿಂದ ತೇಜಸ್ವಿನಿ ಮೃತಪಟ್ಟಿದ್ದಾಳೆ.

ಮೃತಳ ಮೂರು ವರ್ಷದ ಮಗು ಏನೂ ಅರಿಯದೇ ಸಂಬಂಧಿಕರ ಮಡಿಲಲ್ಲಿ ಆಟವಾಡುತ್ತಿದ್ದು, ಹತ್ತು ವರ್ಷದ ಬಾಲಕ ತಾಯಿಯ ಸಾವಿನ ವಿಷಯ ತಿಳಿದು ಅಳುತ್ತಿದ್ದ ದೃಶ್ಯಗಳು ಕಣ್ಣೀರು ತರಿಸುವಂತಿವೆ.

ಘಟನೆ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಪೊಲೀಸರು ಸಂದೀಪ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಹಣ ಮತ್ತು ಮದ್ಯದ ವಿಚಾರಕ್ಕೆ ಗಲಾಟೆಯಾಗಿದ್ದು, ಆಕಸ್ಮಿಕವಾಗಿ ಚಾಕು ತಗುಲಿದೆ ಎಂದು ಸಂದೀಪ್ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಮಕ್ಕಳ ಭವಿಷ್ಯದ ಬಗ್ಗೆ ಕುಟುಂಬಸ್ಥರು ಚಿಂತೆಯಲ್ಲಿ ಮುಳುಗಿದ್ದಾರೆ.

ರೀಲ್‌ ಬಳಿಕ ರಿಯಲ್‌ನಲ್ಲೂ ಒಂದಾದ ಅಮೃತಧಾರೆ ಜೋಡಿ

ತೆರೆಮೇಲೆ ಒಟ್ಟಿಗೆ ನಟಿಸುತ್ತಾ ಪ್ರೀತಿಯಲ್ಲಿ ಬೀಳುವುದು ಹೊಸದೇನಲ್ಲ. ಇದೀಗ ಕಿರುತೆರೆಯಲ್ಲಿ ಮತ್ತೊಂದು ಜೋಡಿ ರಿಯಲ್ ಲೈಫ್‌ನಲ್ಲಿ ಒಂದಾಗಲು ಸಿದ್ಧವಾಗಿದೆ.

ಜೀ ಕನ್ನಡದ ಅಮೃತಧಾರೆ ಧಾರಾವಾಹಿಯಲ್ಲಿ ಜೆಡಿ ಪಾತ್ರ ಮಾಡುತ್ತಿರುವ ರಾಣವ್ ಗೌಡ ಹಾಗೂ ಕಲರ್ಸ್ ಕನ್ನಡದ ಭಾರ್ಗವಿ ಎಲ್ಎಲ್ಬಿ ಧಾರಾವಾಹಿಯಲ್ಲಿ ಭಾಗರ್ವಿ ಪಾತ್ರದಲ್ಲಿ ನಟಿಸುತ್ತಿರುವ ರಾಧಾ ಭಗವತಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಇಬ್ಬರೂ ಬೇರೆ ಬೇರೆ ವಾಹಿನಿಗಳಲ್ಲಿ ಕೆಲಸ ಮಾಡುತ್ತಿದ್ದರೂ, ಇವರ ಪರಿಚಯ ಮತ್ತು ಪ್ರೀತಿ ‘ಅಮೃತಧಾರೆ’ ಧಾರಾವಾಹಿಯಲ್ಲಿಯೇ ಮೊಳಕೆಯೊಡೆದಿತ್ತು. ರಾಧಾ ಭಗವತಿ ಈ ಹಿಂದೆ ‘ಅಮೃತಧಾರೆ’ಯಲ್ಲಿ ಮಲ್ಲಿ ಎಂಬ ಪಾತ್ರ ನಿರ್ವಹಿಸಿದ್ದರು. ಆ ಪಾತ್ರದಲ್ಲಿ ಅವರು ಜೆಡಿ ಪತ್ನಿಯಾಗಿ ಕಾಣಿಸಿಕೊಂಡಿದ್ದರು. ಬಳಿಕ ‘ಭಾರ್ಗವಿ ಎಲ್ಎಲ್ಬಿ’ ಅವಕಾಶ ದೊರಕಿದ ಹಿನ್ನೆಲೆಯಲ್ಲಿ ಧಾರಾವಾಹಿಯಿಂದ ಹೊರಬಂದಿದ್ದರು.

ಸೀರಿಯಲ್ ಚಿತ್ರೀಕರಣದ ಸಮಯದಲ್ಲೇ ಇವರಿಬ್ಬರ ಮಧ್ಯೆ ಪ್ರೀತಿ ಬೆಳೆದಿದೆ ಎಂದು ಹೇಳಲಾಗುತ್ತಿದೆ. ಈಗ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡು ಹೊಸ ಬದುಕಿಗೆ ಕಾಲಿಡಲು ಸಜ್ಜಾಗಿದೆ.

ರಾಣವ್ ಗೌಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಇಬ್ಬರೂ ಹಾರ ಹಾಕಿಕೊಂಡಿರುವ ಫೋಟೋ ಹಂಚಿಕೊಂಡು “ಫೈನಲಿ” ಎಂಬ ಕ್ಯಾಪ್ಶನ್ ನೀಡಿದ್ದಾರೆ. ಈ ಪೋಸ್ಟ್ ನೋಡಿದ ಅಭಿಮಾನಿಗಳಲ್ಲಿ ಮೊದಲಿಗೆ ಮದುವೆಯೇ ಆಗಿಬಿಟ್ಟಿತೇ ಎಂಬ ಕುತೂಹಲ ಮೂಡಿತ್ತು. ಆದರೆ, ಇವರು ನಿಶ್ಚಿತಾರ್ಥ ಮಾತ್ರ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ.

ರಾಣವ್ ಗೌಡ ‘ಅಮೃತಧಾರೆ’ ಜೊತೆಗೆ ‘ಶುಭಸ್ಯ ಶೀಘ್ರಂ’ ಧಾರಾವಾಹಿಯಲ್ಲೂ ಅಭಿನಯಿಸುತ್ತಿದ್ದಾರೆ. ರಾಧಾ ಭಗವತಿ ‘ಭಾರ್ಗವಿ ಎಲ್ಎಲ್ಬಿ’ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.

ತೆರೆ ಮೇಲಿನ ಜೋಡಿ ಇದೀಗ ನಿಜ ಜೀವನದಲ್ಲೂ ಒಂದಾಗುತ್ತಿರುವುದು ಅಭಿಮಾನಿಗಳಿಗೆ ಖುಷಿ ಹಾಗೂ ಅಚ್ಚರಿ ಎರಡನ್ನೂ ತಂದಿದೆ.

ದಲಿತರಿಗೆ ಕ್ಷೌರ ನಿರಾಕರಣೆ: ಸಿಂಗಟಾಲೂರಲ್ಲಿ ಸರ್ಕಾರದಿಂದಲೇ ಸಲೂನ್ ಆರಂಭ, ಜಾತಿ ಭೇದಭಾವಕ್ಕೆ ತಿರುಗೇಟು

0

ಗದಗ: ದಲಿತ ಸಮುದಾಯದವರಿಗೆ ಕ್ಷೌರ ಸೇವೆ ನೀಡಲು ನಿರಾಕರಿಸಿದ ಘಟನೆಗೆ ತೀವ್ರ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಸಿಂಗಟಾಲೂರ ಗ್ರಾಮದಲ್ಲಿ ಸರ್ಕಾರವೇ ಹೊಸ ಕ್ಷೌರದಂಗಡಿಯನ್ನು ಆರಂಭಿಸಿದೆ.

ಸಾಮಾಜಿಕ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯಿತಿ ಮತ್ತು ಆದಾಯ ಇಲಾಖೆ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಈ ಸಲೂನ್ ಆರಂಭವಾಗಿದ್ದು, ಗ್ರಾಮದಲ್ಲಿ ವರ್ಷಗಳಿಂದ ಮುಂದುವರಿದಿದ್ದ ಜಾತಿ ಆಧಾರಿತ ಭೇದಭಾವಕ್ಕೆ ತೆರೆ ಎಳೆಯುವ ಉದ್ದೇಶದಿಂದ ಕ್ರಮ ಕೈಗೊಳ್ಳಲಾಗಿದೆ.

ಗ್ರಾಮದ ದೈವವಾದ ವೀರಭದ್ರೇಶ್ವರನ ಭಕ್ತರಾಗಿರುವ ಹಡಪದ ಕುಟುಂಬಗಳು ಪರಂಪರೆ ಹೆಸರಿನಲ್ಲಿ ದಲಿತರಿಗೆ ಕ್ಷೌರ ಸೇವೆ ನೀಡುವುದನ್ನು ನಿರಾಕರಿಸುತ್ತಿದ್ದವು. ಈ ಸ್ಥಿತಿ ಪೀಳಿಗೆಗಳಿಂದ ಮುಂದುವರಿದಿದ್ದುದಾಗಿ ತಿಳಿದುಬಂದಿದೆ.

ಗ್ರಾಮದಲ್ಲಿದ್ದ ಏಕೈಕ ಸಲೂನ್‌ಗೆ ದಲಿತ ಯುವಕರು ಭೇಟಿ ನೀಡಲು ಆರಂಭಿಸಿದ ನಂತರ ವಿವಾದ ತೀವ್ರಗೊಂಡಿತು. ಪಂಚಾಯಿತಿಯಿಂದ ಅನುಮತಿ ಪಡೆದು ಅಂಗಡಿ ನಡೆಸುತ್ತಿರುವುದರಿಂದ ಎಲ್ಲ ಸಮುದಾಯದವರಿಗೂ ಸೇವೆ ನೀಡಬೇಕು ಎಂದು ಯುವಕರು ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಅಂಗಡಿ ಮುಚ್ಚಲಾಗಿದ್ದು, ಗ್ರಾಮಸ್ಥರು ಹೇರ್ ಕಟಿಂಗ್ ಮತ್ತು ಶೇವಿಂಗ್‌ಗಾಗಿ ನೆರೆಯ ಗ್ರಾಮಗಳಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸಾಮಾಜಿಕ ಕಲ್ಯಾಣ ಮತ್ತು ಆದಾಯ ಇಲಾಖೆ ಅಧಿಕಾರಿಗಳು ಹಡಪದ ಸಮುದಾಯದವರನ್ನು ಮನವೊಲಿಸಲು ಹಲವು ಪ್ರಯತ್ನಗಳನ್ನು ನಡೆಸಿದರು. ಸೇವೆ ನೀಡಲು ನಿರಾಕರಿಸಿದವರಿಗೆ ನೋಟಿಸ್‌ಗಳನ್ನು ನೀಡಲಾಯಿತು. ಆದರೆ ಯತ್ನ ಫಲಿಸದ ಹಿನ್ನೆಲೆಯಲ್ಲಿ ಕೊನೆಗೆ ಸರ್ಕಾರದ ವತಿಯಿಂದ ಹೊಸ ಕ್ಷೌರದಂಗಡಿ ಆರಂಭಿಸುವ ನಿರ್ಧಾರ ಕೈಗೊಳ್ಳಲಾಯಿತು.

ಫೆಬ್ರವರಿ 26ರಂದು ತಹಶೀಲ್ದಾರ್ ಎರ್ರಿಸ್ವಾಮಿ ಹಾಗೂ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಹೊಸ ಅಂಗಡಿಯನ್ನು ಉದ್ಘಾಟಿಸಲಾಯಿತು. ಪಕ್ಕದ ತಿಪ್ಪಾಪೂರ ಗ್ರಾಮದ ಬಸವರಾಜ್ ಹಡಪದ ಅವರಿಗೆ ಸಾಮಾಜಿಕ ಕಲ್ಯಾಣ ಇಲಾಖೆಯಿಂದ ಅಂಗಡಿ ನೀಡಿ ಸೇವೆ ನೀಡಲು ಅವಕಾಶ ಮಾಡಿಕೊಡಲಾಗಿದೆ.

ಈ ಕ್ರಮದಿಂದ ಸಿಂಗಟಾಲೂರ ಗ್ರಾಮದಲ್ಲಿ ಎಲ್ಲ ಸಮುದಾಯದವರು ಯಾವುದೇ ಭೇದಭಾವವಿಲ್ಲದೆ ಕ್ಷೌರ ಸೇವೆ ಪಡೆಯುವ ಅವಕಾಶ ದೊರೆತಿದ್ದು, ಸಾಮಾಜಿಕ ಸಮಾನತೆಯತ್ತ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

ಜ್ಯೋತಿಷಿಯ ‘ಅಲ್ಪಾಯುಷಿ’ ಮಾತಿಗೆ ಬೆಚ್ಚಿದ ಯುವತಿ ಆತ್ಮಹತ್ಯೆ? ನೆಲಮಂಗಲ ಎಂಇಐ ಲೇಔಟ್‌ನಲ್ಲಿ ದುರ್ಘಟನೆ

0

ನೆಲಮಂಗಲ: ಮದುವೆಗೆ ಸಿದ್ಧತೆಗಳು ನಡೆಯುತ್ತಿದ್ದ ವೇಳೆ ಯುವತಿಯೊಬ್ಬಳು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲದ ಎಂಇಐ ಲೇಔಟ್‌ನಲ್ಲಿ ನಡೆದಿದೆ.

ವಿದ್ಯಾಜ್ಯೋತಿ (29) ಮೃತಳಾಗಿದ್ದು, ಕೆಲವು ದಿನಗಳ ಹಿಂದೆ ಜ್ಯೋತಿಷಿಯೋರ್ವರು ಆಕೆ ಅಲ್ಪಾಯುಷಿ ಎಂದು ಹೇಳಿದ್ದರೆಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ 9 ದಿನಗಳ ಪೂಜೆ ಮಾಡುವಂತೆ ಸೂಚನೆ ನೀಡಲಾಗಿತ್ತು. 9ನೇ ದಿನ ದೇವರಿಗೆ ತಾಳಿ ಅರ್ಪಿಸಬೇಕೆಂದು ತಿಳಿಸಿದ್ದರಿಂದ ಕುಟುಂಬಸ್ಥರು ಸಿದ್ಧತೆ ನಡೆಸಿದ್ದರು.

ಮಾರಮ್ಮ ದೇವರಿಗೆ ತಾಳಿ ಕೊಡಲು ಕಾರ್ಯಕ್ರಮ ರೂಪಿಸಲಾಗಿತ್ತು. ಮಧ್ಯಾಹ್ನ ಊಟದ ನಂತರ ವಿದ್ಯಾಜ್ಯೋತಿ ತನ್ನ ಕೊಠಡಿಗೆ ತೆರಳಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆಕೆ ವರ್ಕ್ ಫ್ರಾಂ ಹೋಮ್ ಮಾಡುತ್ತಿದ್ದುದರಿಂದ ಮನೆಯವರು ಕೆಲಸದಲ್ಲಿರಬಹುದೆಂದು ಭಾವಿಸಿದ್ದರು.

ಸಂಜೆ ವೇಳೆಗೆ ತಾಯಿ ಹಲವು ಬಾರಿ ಕರೆದರೂ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಅನುಮಾನಗೊಂಡು ಕಿಟಕಿಯಿಂದ ನೋಡಿದಾಗ ಯುವತಿ ನೇಣು ಬಿಗಿದುಕೊಂಡಿರುವುದು ಬೆಳಕಿಗೆ ಬಂದಿದೆ.

ವಿದ್ಯಾಜ್ಯೋತಿಯ ಪೋಷಕರು ಅವಳ ಇಷ್ಟದಂತೆ ಕೊಡಗು ಮೂಲದ ಯುವಕನೊಂದಿಗೆ ಮದುವೆಗೆ ಒಪ್ಪಿಗೆ ನೀಡಿದ್ದರು ಎನ್ನಲಾಗಿದೆ. ಮದುವೆಗೂ ಮುನ್ನ ಈ ದುರ್ಘಟನೆ ಸಂಭವಿಸಿದೆ.

ಘಟನೆ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ. ತನಿಖೆ ಮುಂದುವರೆದಿದೆ.

ಜನತಾ ದರ್ಶನದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಆದೇಶ ಪ್ರತಿಗಳ ವಿತರಣೆ

0

ಗದಗ: ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲರು ಶುಕ್ರವಾರ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಆದೇಶದ ಪ್ರತಿಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬರ್ಚಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕೆ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಗಣ್ಯರಾದ ಸಿದ್ದು ಪಾಟೀಲ, ಎಸ್.ಎನ್. ಬಳ್ಳಾರಿ, ಸುಜಾತಾ ದೊಡ್ಡಮನಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಜನತಾ ದರ್ಶನದಲ್ಲಿ ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ

0

ಗದಗ: ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಅವರು ಶುಕ್ರವಾರ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬರ್ಚಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾ ವಿಕಲಚೇತನರ ಕಲ್ಯಾಣ ಇಲಾಖೆ ಅಧಿಕಾರಿ ಮಹಾಂತೇಶ ಕೆ, ಗಣ್ಯರಾದ ಎಸ್.ಎನ್. ಬಳ್ಳಾರಿ, ಸುಜಾತಾ ದೊಡ್ಡಮನಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಮಾ. 1ರಂದು ಕನಕ ಸಾಹಿತ್ಯ ಸಂಭ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ಬೆಂಗಳೂರಿನ ಕನಕದಾಸರ ಸಾಹಿತ್ಯ ಪ್ರಚಾರ ಸಮಿತಿಯ ಸಹಯೋಗದೊಂದಿಗೆ ಮಾ. 1ರಂದು ಬೆಳಗ್ಗೆ 9.30ಕ್ಕೆ ನಗರದ ಕನಕ ಭವನದಲ್ಲಿ ಕನಕ ಸಾಹಿತ್ಯ ಸಂಭ್ರಮ ಹಾಗೂ 100ನೇ ಉಪನ್ಯಾಸದ ವೇದಿಕೆಯ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಜಿಲ್ಲಾ ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕೀರಪ್ಪ ಹೆಬಸೂರ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರಾಮಕೃಷ್ಣ ಯೋಗಾಶ್ರಮದ ಜಗದ್ಗುರು ಸ್ವಾಮಿ ಯೋಗೇಶ್ವರಾನಂದ ಸ್ವಾಮೀಜಿ, ಮನಸೂರ ಜ. ಡಾ. ಬಸವರಾಜ ದೇವರು ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲಾ ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕೀರಪ್ಪ ಹೆಬಸೂರ ಅಧ್ಯಕ್ಷತೆ ವಹಿಸುವರು. ಹಾಲುಮತ ಭಾಸ್ಕರ ರಾಜ್ಯ ಕನಕಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಲಿಂಗದಾಳ ಹಾಲಪ್ಪ ಕಾರ್ಯಕ್ರಮ ಉದ್ಘಾಟನೆ ಮಾಡುವರು.

ಕೆ.ಎಚ್. ಪಾಟೀಲ ಕಾಲೇಜು ಪ್ರಾಧ್ಯಾಪಕಿ ಡಾ. ಸುಧಾ ಕೌಜಗೇರಿ ಉಪನ್ಯಾಸ ನೀಡುವರು. ಹಸ್ತಪ್ರತಿ ಶಾಸ್ತ್ರ ಪ್ರಾಧ್ಯಾಪಕ ಪ್ರೊ. ಎಫ್.ಟಿ. ಹಳ್ಳಿಕೇರಿ, ಮಂಜುನಾಥ ಹೊನ್ನಣ್ಣವರ, ಡಾ. ಹನಮಗೌಡ ಪಾಟೀಲ, ವಾಸಣ್ಣ ಕುರಡಗಿ, ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ರವಿ ದಂಡಿನ, ಪ್ರಕಾಶ ಕರಿ, ಸುರೇಶ ಕೊಪ್ಪದ, ರಾಜಶೇಖರ ಕಲ್ಲೂರ, ಸಿದ್ಧಲಿಂಗ ಬಂಡು, ಆರ್.ಎಸ್. ಬುರಡಿ, ರಾಮಕೃಷ್ಣ ರೊಳ್ಳಿ ಮುಂತಾದವರು ಭಾಗವಹಿಸುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ಆರ್.ಜಿ. ಕಲ್ಲೂರ, ಬಿ.ಎಸ್. ಕೆರಿ, ಈರಪ್ಪ ಹಳ್ಯಾಳ, ಸಿದ್ದು ಸತ್ಯಣ್ಣವರ, ಪ್ರೊ. ಮಾರುತಿ ಮಡ್ಡಿ, ಸಿದ್ಧಲಿಂಗೇಶ್ವರ ಯಂಡಿಗೇರಿ, ಹೇಮಂತ ಗಿಡ್ಡಹಣ್ಣಮನವರ, ಸೋಮನಗೌಡ ಪಾಟೀಲ, ಮುತ್ತು ಜಡಿ, ರಾಘು ವಗ್ಗನವರ ಇತರರು ಇದ್ದರು.

ಇದೇ ಸಂದರ್ಭದಲ್ಲಿ ಗದಗ, ರೋಣ, ಮುಂಡರಗಿ, ನರಗುಂದ, ಶಿರಹಟ್ಟಿ, ಲಕ್ಷ್ಮೇಶ್ವರ ಮತ್ತು ಗಜೇಂದ್ರಗಡ ಪದವಿಪೂರ್ವ ಕಾಲೇಜಿನ ಮತ್ತು ಪ್ರೌಢಶಾಲೆಯ ಹಂತದ ಕನಕದಾಸರ ಸಾಹಿತ್ಯ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಹಾಗೂ 76ರಿಂದ 100ನೇ ಆನ್‌ಲೈನ್ ಗೂಗಲ್ ಮೀಟ್‌ನಲ್ಲಿ ಕನಕದಾಸರ ಸಾಹಿತ್ಯದ ಉಪನ್ಯಾಸ ನೀಡಿದವರಿಗೆ ಸನ್ಮಾನ ಮಾಡಲಾಗುತ್ತದೆ. ಕನಕದಾಸರ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ 42 ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪ್ರಮಾಣ ಪತ್ರ ವಿತರಣೆ ಮಾಡಲಾಗುತ್ತದೆ ಎಂದು ಫಕೀರಪ್ಪ ಹೆಬಸೂರ ತಿಳಿಸಿದರು.

ಜನತಾ ದರ್ಶನದಲ್ಲಿ 1067 ಅಹವಾಲುಗಳ ಸ್ವೀಕೃತಿ

0

ವಿಜಯಸಾಕ್ಷಿ ಸುದ್ದಿ, ಗದಗ: ಶುಕ್ರವಾರ ಜರುಗಿದ ಜಿಲ್ಲಾ ಮಟ್ಟದ ಜನತಾ ದರ್ಶನದಲ್ಲಿ ಜನಸಾಮಾನ್ಯರಿಂದ ಅಹವಾಲುಗಳ ಮಹಾಪೂರವೇ ಹರಿದು ಬಂದಿದೆ. ಸಾರ್ವಜನಿಕರಿಂದ 767 ಅಹವಾಲುಗಳು ನೇರವಾಗಿ ದಾಖಲಾಗಿವೆ, 300 ಆನ್‌ಲೈನ್ ಮೂಲಕ ಅರ್ಜಿಗಳು ಬಂದಿದ್ದು, ಒಟ್ಟು 1067 ವಿವಿಧ ರೀತಿಯ ಅಹವಾಲುಗಳು ಜನತಾ ದರ್ಶನದಲ್ಲಿ ಸ್ವೀಕೃತವಾಗಿವೆ.

ಇವುಗಳಲ್ಲಿ 900 ಅರ್ಜಿಗಳನ್ನು ಪರಿಶೀಲನೆ ಮಾಡಲಾಗಿದೆ. 150 ಅಹವಾಲುಗಳನ್ನು ವಿವರವಾಗಿ ಪರಿಶೀಲನೆ ನಡೆಸಲಾಗಿದೆ. ಜನತಾ ದರ್ಶನ ಕಾರ್ಯಕ್ರಮ ಅತ್ಯಂತ ಶಾಂತಿ, ಶಿಸ್ತಿನಿಂದ ಜರುಗಿದ್ದು, ಇದಕ್ಕೆ ಡಿಸಿ ಸಿ.ಎನ್. ಶ್ರೀಧರ, ಎಸ್‌ಪಿ ರೋಹನ್ ಜಗದೀಶ್, ಡಿಸಿಎಫ್ ಸಂತೋಷ ಕುಮಾರ ಸೇರಿದಂತೆ ಎಲ್ಲ ಅಧಿಕಾರಿಗಳು ಕಾರಣರಾಗಿದ್ದಾರೆ, ಎಲ್ಲರಿಗೂ ಅಭಿನಂದನೆಗಳು ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಡಾ. ವೆಂಕಟೇಶ ಆಲ್ಕೊಡ್ ತಂಡದ ಪ್ರಾರ್ಥನೆ, ನಾಡಗೀತೆಯೊಂದಿಗೆ ಆರಂಭವಾದ ಜನತಾ ದರ್ಶನ ಅಂತಿಮವಾಗಿ ಪೊಲೀಸ್ ಬ್ಯಾಂಡ್‌ನ ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು.

error: Content is protected !!