Home Blog Page 117

ಗರ್ಭಪಾತದ ನಂತರ ಸುರಕ್ಷಿತ ಆರೈಕೆ ಅಗತ್ಯ; ಮಹಿಳೆಯರು ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ!

0

ಗರ್ಭಪಾತದ ನಂತರ, ಮಹಿಳೆಯ ದೇಹದಲ್ಲಿ ಹಲವಾರು ಬದಲಾವಣೆಗಳು ಸಂಭವಿಸುತ್ತವೆ. ಗರ್ಭಾಶಯ ತನ್ನ ಸಾಮಾನ್ಯ ಸ್ಥಿತಿಗೆ ಮರಳಲು ಮತ್ತು ದೇಹ ಚೇತರಿಸಿಕೊಳ್ಳಲು ಸಮಯ ಬೇಕಾಗುತ್ತದೆ. ಈ ಅವಧಿಯಲ್ಲಿ ಸರಿಯಾದ ಆರೈಕೆಯಿಲ್ಲದಿದ್ದರೆ, ಸೋಂಕು, ಅತಿಯಾದ ರಕ್ತಸ್ರಾವ, ದೌರ್ಬಲ್ಯ ಮತ್ತು ಇತರ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ.

ಡಾ. ಸಲೋನಿ ಚಡ್ಡಾ – ಆರ್‌ಎಂಎಲ್ ಆಸ್ಪತ್ರೆ ತಿಳಿಸುವಂತೆ:

  • ಗರ್ಭಪಾತದ ನಂತರ ಹೆಚ್ಚು ಶ್ರಮ ಅಥವಾ ಭಾರವಾದ ದೈಹಿಕ ಕೆಲಸ ಮಾಡಬಾರದು. ದೈಹಿಕ ಪರಿಶ್ರಮ ರಕ್ತಸ್ರಾವವನ್ನು ಹೆಚ್ಚಿಸುತ್ತದೆ ಮತ್ತು ಚೇತರಿಕೆಯನ್ನು ನಿಧಾನಗೊಳಿಸುತ್ತದೆ.
  • ವೈದ್ಯರ ಸಲಹೆಯಿಲ್ಲದೆ ಔಷಧಿಗಳನ್ನು ತೆಗೆದುಕೊಳ್ಳಬಾರದು. ನಿಗದಿತ ಔಷಧಿ ಕೋರ್ಸ್ ಅನ್ನು ಪೂರ್ಣಗೊಳಿಸದಿರುವುದೂ ಹಾನಿಕಾರಕವಾಗಿದೆ.
  • ನೋವು, ಸೌಮ್ಯ ಜ್ವರ ಅಥವಾ ಅಸಹಜ ರಕ್ತಸ್ರಾವವನ್ನು ಸಾಮಾನ್ಯವೆಂದು ನಿರ್ಲಕ್ಷಿಸಬಾರದು. ಇವು ವೈದ್ಯರ ತಕ್ಷಣದ ಪರಿಶೀಲನೆಗೆ ಕಾರಣವಾಗಬಹುದು.
  • ಶುಚಿತ್ವದಲ್ಲಿ ನಿರ್ಲಕ್ಷ್ಯ ಮಾಡಬಾರದು. ಹಳೆಯ ಅಥವಾ ಒದ್ದೆಯಾದ ಬಟ್ಟೆಗಳನ್ನು ಧರಿಸುವುದರಿಂದ ಸೋಂಕುಗಳ ಸಾಧ್ಯತೆ ಹೆಚ್ಚುತ್ತದೆ.
  • ಸೂಚಿಸಲಾದ ವಿಶ್ರಾಂತಿ ಅವಧಿಯನ್ನು ತಪ್ಪಿಸಬಾರದು. ತಪಾಸಣೆಗಳನ್ನು ನಿರ್ಲಕ್ಷಿಸಬಾರದು.
  • ಮಾನಸಿಕ ಒತ್ತಡವನ್ನು ನಿರ್ಲಕ್ಷಿಸಬಾರದು. ಭಾವನಾತ್ಮಕ ಬೆಂಬಲವನ್ನು ಪಡೆಯುವುದು ಚೇತರಿಕೆಗೆ ಸಹಾಯಕ.

ಆಹಾರ ಮತ್ತು ಜೀವನಶೈಲಿ:

  • ಹಸಿರು ತರಕಾರಿ, ಹಣ್ಣು, ಬೇಳೆ, ಹಾಲು, ಮೊಸರು ಮುಂತಾದ ಪೌಷ್ಟಿಕ ಮತ್ತು ಸಮತೋಲಿತ ಆಹಾರ ಸೇವಿಸಬೇಕು. ಇವು ಕಬ್ಬಿಣ, ಪ್ರೋಟೀನ್ ಮತ್ತು ವಿಟಮಿನ್‌ಗಳಲ್ಲಿ ಸಮೃದ್ಧವಾಗಿವೆ ಮತ್ತು ದೇಹವನ್ನು ಬಲಪಡಿಸುತ್ತವೆ.
  • ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು.
  • ಜಂಕ್ ಫುಡ್, ಹೆಚ್ಚು ಎಣ್ಣೆ, ಮಸಾಲೆ, ಆಲ್ಕೋಹಾಲ್, ಧೂಮಪಾನ ಮತ್ತು ಅತಿಯಾದ ಕಾಫಿ ಸೇವನೆಯು ಚೇತರಿಕೆಯನ್ನು ನಿಧಾನಗೊಳಿಸುತ್ತವೆ; ಇವನ್ನು ತಪ್ಪಿಸಬೇಕು.

ಸರಿಯಾದ ಆರೈಕೆಯಿಂದ ದೇಹ ಬೇಗ ಗುಣಮುಖವಾಗುತ್ತದೆ, ಭವಿಷ್ಯದ ಆರೋಗ್ಯ ಸಮಸ್ಯೆಗಳ ಅಪಾಯ ಕಡಿಮೆಯಾಗುತ್ತದೆ ಮತ್ತು ಮಹಿಳೆಯ ಶಾರೀರಿಕ ಮತ್ತು ಮಾನಸಿಕ ಕ್ಷೇಮ ಸಾಧನೆ ಸುಗಮವಾಗುತ್ತದೆ.

 

ಹಬ್ಬದಲ್ಲಿ ರಾಸಾಯನಿಕ ಬಣ್ಣ ಬಳಸದಿರಿ: ಸಿಪಿಐ ಬಿ.ವ್ಹಿ. ನ್ಯಾಮಗೌಡ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಸೇರಿ ತಾಲೂಕಿನಾದ್ಯಂತ ನಡೆಯಲಿರುವ ಹೋಳಿ ಹಬ್ಬವನ್ನು ಎಲ್ಲರೂ ಶಾಂತಿ-ಸೌಹಾರ್ದತೆಯಿಂದ ಆಚರಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಐ ಬಿ.ವ್ಹಿ. ನ್ಯಾಮಗೌಡ ಹೇಳಿದರು.

ಅವರು ಗುರುವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬದ ಪ್ರಯುಕ್ತ ಕರೆಯಲಾಗಿದ್ದ ಶಾಂತಿ ಸಭೆಯಲ್ಲಿ ಮಾತನಾಡುತ್ತಿದ್ದರು.

ಹಬ್ಬಗಳು ನಾಡಿನ ಸಂಪ್ರದಾಯದ ಪ್ರತೀಕ ಮತ್ತು ಪರಸ್ಪರರಲ್ಲಿ ಸ್ನೇಹ, ಸೌಹಾರ್ದತೆ ಬೆಸೆಯುವ ಕೊಂಡಿಯಾಗಿವೆ. ಹಬ್ಬದ ಸಂದರ್ಭದಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ರಾಸಾಯನಿಕಯುಕ್ತ ಬಣ್ಣ ಬಳಸಬಾರದು. ಮುಂಜಾಗೃತ ಕ್ರಮವಾಗಿ ಸೂಕ್ತ ಬಂದೋಬಸ್ತ್ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅಹಿತಕರ ಘಟನೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಹಬ್ಬದ ದಿನ ಬೇಕಾಬಿಟ್ಟಿ ವರ್ತನೆಯಿಂದ ಸಾಮಾಜಿಕ ಶಾಂತಿಗೆ ಭಂಗವನ್ನುಂಟುಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಹಬ್ಬದ ಸಮಯದಲ್ಲಿ ಪಿಯುಸಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯುತ್ತಿರುವುದರಿಂದ ಪರೀಕ್ಷಾರ್ಥಿಗಳಿಗೆ ತೊಂದರೆಯಾಗದಂತೆ ಹಬ್ಬ ಆಚರಣೆ ಮಾಡಬೇಕು ಎಂದು ಹೇಳಿದರು.

ಪಿಎಸ್‌ಐ ನಾಗರಾಜ ಗಡದ ಮಾತನಾಡಿ, ಹಬ್ಬದಲ್ಲಿ ರಾಸಾಯನಿಕ ಮಿಶ್ರಿತ ಬಣ್ಣವನ್ನು ಬಳಸಬೇಡಿ, ಹಬ್ಬದ ದಿನ ಬೈಕ್‌ಗಳ ಕರ್ಕಶ ಶಬ್ದ ಹಾಗೂ ಟ್ರ್ಯಾಕ್ಟರ್‌ನಲ್ಲಿ ಅಬ್ಬರದ ಸೌಂಡ್ ಮೂಲಕ ಸಾರ್ವಜನಿಕರಿಗೆ, ವಿದ್ಯಾರ್ಥಿಗಳ ಓದಿಗೆ ತೊಂದರೆ ಮಾಡಬೇಡಿ. ಕಳೆದ ಬಾರಿ ವಿದ್ಯಾರ್ಥಿನಿಯರು ಇರುವ ಬಸ್‌ನಲ್ಲಿ ಬಣ್ಣ ಎರಚಿ ವಿದ್ಯಾರ್ಥಿನಿಯರ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿತ್ತು. ಅಂತಹ ಘಟನೆಗಳು ನಡೆಯದಂತೆ ನಿಗಾವಹಿಸುತ್ತೇವೆ. ಹೋಳಿ ಹಬ್ಬವನ್ನು ಸಹೋದರತ್ವ ಭಾವನೆಯಿಂದ ಶಾಂತಿಯುತ ಮತ್ತು ಅರ್ಥಪೂರ್ಣವಾಗಿ ಆಚರಿಸಿ ಎಂದರು.

ಹಿರಿಯರಾದ ಪಿ.ಬಿ. ಖರಾಟೆ, ಗಂಗಾಧರ ಮೆಣಸಿನಕಾಯಿ ಮಾತನಾಡಿ, ಸ್ನೇಹ ಸೌಹಾರ್ದತೆ ಮತ್ತು ಧಾರ್ಮಿಕ ಬಾಂಧವ್ಯ ವೃದ್ಧಿಸುವ ಪವಿತ್ರ ಹೋಳಿ ಹಬ್ಬಕ್ಕೆ ಸಾಂಪ್ರದಾಯಿಕ, ವೈಜ್ಞಾನಿಕ ಹಿನ್ನೆಲೆಯಿದ್ದು, ಅವುಗಳನ್ನು ಮುಂದಿನ ಸಮಾಜಕ್ಕೆ ಕೊಂಡೊಯ್ಯುವ ಜವಾಬ್ದಾರಿ ಎಲ್ಲರದ್ದಾಗಿದೆ. ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಪೊಲೀಸ್ ಮತ್ತು ಪುರಸಭೆ ಜಂಟಿ ಕಾರ್ಯಾಚರಣೆ ಮೂಲಕ ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಈ ವೇಳೆ ಶಿವಣ್ಣ ಕಟಗಿ, ಮಾಬುಸಾಬ ಮುಳುಗುಂದ, ಶರಣು ಗೋಡಿ, ನವೀನ ಹಿರೇಮಠ, ವಿಜಯ ಕುಂಬಾರ, ಹಾಲಪ್ಪ ಸೂರಣಗಿ, ಮಂಜುನಾಥ ಶೆರಸೂರಿ, ಮಲ್ಲೇಶಪ್ಪ ಬಸಾಪುರ, ದಾವೂದಖಾನ ಕಾರಡಗಿ, ಯೂನುಷ್ ಚೌರಿ, ಗೋಪಿ ಪಾಣಿಗಟ್ಟಿ, ಮುತ್ತು ಪಾಣಿಗಟ್ಟಿ, ಭರಮಗೌಡ ಪಾಣಿಗಟ್ಟಿ, ಮಂಜುನಾಥ ಕೊಡಳ್ಳಿ, ಫಕ್ಕೀರೇಶ ಅಣ್ಣಿಗೇರಿ, ಬಸಣ್ಣ ಬೆಂಗಳೂರು, ಜಗದೀಶ ಕೋಲಕಾರ, ಶೇಖಣ್ಣ ಹಂಜಗಿ, ಹಿಂದೂ-ಮುಸ್ಲಿಂ ಬಾಂಧವರು ಇದ್ದರು.

ಮಾ.3ರಂದು ಎಲ್ಲೆಡೆ ಕಾಮರತಿ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಕೆಲ ಗ್ರಾಮಗಳಲ್ಲಿ ಬಣ್ಣದೋಕುಳಿ ನಡೆಯಲಿದೆ. ಮಾ. 4ರಂದು ತಾಲೂಕಿನ ಗ್ರಾಮೀಣ ಭಾಗದಲ್ಲಿ ಮತ್ತು ಮಾ. 7ರಂದು ಲಕ್ಷ್ಮೇಶ್ವರದಲ್ಲಿ ರಂಗ ಪಂಚಮಿ ನಡೆಯಲಿದೆ. ಇತ್ತೀಚೆಗಷ್ಟೇ ಗ್ರಾಮದೇವಿ ಜಾತ್ರೆ ನಡೆದ ಹಿನ್ನೆಲೆಯಲ್ಲಿ ಈ ವರ್ಷ ಶಿಗ್ಲಿಯಲ್ಲಿ ರಂಗಿನೋಕುಳಿ ಆಡದಿರಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ.

ಪ್ರಜ್ವಲ್ ರಿತ್ತಿಗೆ ನಿವೇಶನ ವಿತರಣೆ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ತನ್ನ ಮನೆ ನಿರ್ಮಾಣದ ಸಂದರ್ಭದಲ್ಲಿ ಚಿನ್ನಾಭರಣಗಳ ನಿಧಿ ಸಿಕ್ಕಿದ್ದನ್ನು ಸರ್ಕಾರಕ್ಕೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಬಾಲಕ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಗುರುವಾರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನಿವೇಶನವನ್ನು ವಿತರಿಸಿದರು.

ಈ ಕುರಿತು ಮಾಹಿತಿ ನೀಡಿದ ಅಭಿವೃದ್ಧಿ ಅಧಿಕಾರಿ ಅಮೀರನಾಯಕ, ಮಾರುತಿ ನಗರದ 7 ಎಕರೆ ಕ್ಷೇತ್ರದಲ್ಲಿಯ 274/4ರ ಸರ್ವೇಯಲ್ಲಿ ನಿವೇಶನವನ್ನು ವಿತರಿಸಲಾಗಿದ್ದು, ಸ್ಥಳದಲ್ಲಿ ಜಿ.ಪಿ.ಎಸ್ ಭಾವಚಿತ್ರವನ್ನು ತೆಗೆಯಲಾಗಿದೆ ಎಂದು ತಿಳಿಸಿದರು.


ಮಂತ್ರಾಲಯ ದರ್ಶನ ಮುಗಿಸಿ ವಾಪಸಾಗುತ್ತಿದ್ದ ವೇಳೆ ದುರಂತ – ಚಳ್ಳಕೆರೆಯಲ್ಲಿ ಕಾರು-ಲಾರಿ ಡಿಕ್ಕಿ, ಮೂವರು ಸಾವು

0

ಚಿತ್ರದುರ್ಗ: ಮಂತ್ರಾಲಯದಲ್ಲಿ ರಾಘವೇಂದ್ರಸ್ವಾಮಿ ದರ್ಶನ ಮುಗಿಸಿ ವಾಪಸಾಗುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ ನಡೆದಿದೆ.

ಹಿರೆಹಳ್ಳಿ ಟೋಲ್ ಸಮೀಪ ಕಾರು ಹಾಗೂ ಲಾರಿಯ ನಡುವೆ ಭಾರೀ ಡಿಕ್ಕಿ ಸಂಭವಿಸಿದೆ. ಮಂತ್ರಾಲಯದಿಂದ ತಿಪಟೂರು ಕಡೆಗೆ ಪ್ರಯಾಣಿಸುತ್ತಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ.

ಈ ಅಪಘಾತ ಚಳ್ಳಕೆರೆ ವ್ಯಾಪ್ತಿಯ ತಳಕು ಪೊಲೀಸ್ ಠಾಣೆ ಹದ್ದಿನಲ್ಲಿ ನಡೆದಿದೆ. ಡಿಕ್ಕಿಯ ತೀವ್ರತೆಗೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.

ಅಪಘಾತದ ಶಬ್ದ ಕೇಳಿ ಸ್ಥಳೀಯರು ತಕ್ಷಣವೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಕ್ಕೆ ಮುಂದಾದರು. ಬಳಿಕ ತಳಕು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತರ ಗುರುತು ಹಾಗೂ ಹೆಚ್ಚಿನ ವಿವರಗಳನ್ನು ಸಂಗ್ರಹಿಸುವ ಕಾರ್ಯ ಮುಂದುವರೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಈ ದುರ್ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದ್ದು, ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಪತ್ರಿಕೋದ್ಯಮಕ್ಕೆ ಗದಗ ಜಿಲ್ಲೆಯ ಕೊಡುಗೆ ಅಪಾರ: ಕೆ. ವಿ. ಪ್ರಭಾಕರ್

0

ಗದಗ: ಗದಗ ಜಿಲ್ಲೆ ಕಲೆ, ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶಿಷ್ಟ ಗುರುತನ್ನು ಹೊಂದಿದ್ದು, ಪತ್ರಿಕೋದ್ಯಮಕ್ಕೆ ಜಿಲ್ಲೆಯ ಕೊಡುಗೆ ಅಪಾರವಾಗಿದೆ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ್ ಅಭಿಪ್ರಾಯಪಟ್ಟರು.

ನಗರದ ಹಾತಲಗೇರಿ ರಸ್ತೆಯಲ್ಲಿರುವ ರತ್ನಾಕರವಾಣಿ ಕನ್ನಡ ದಿನಪತ್ರಿಕೆ ಕಾರ್ಯಾಲಯಕ್ಕೆ ಗುರುವಾರ ಭೇಟಿ ನೀಡಿ ಮಾತನಾಡಿದ ಅವರು, ಅವ್ವ ದತ್ತಿ ನಿಧಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ಅಂಗವಾಗಿ ಗದಗ ನಗರಕ್ಕೆ ಆಗಮಿಸಿರುವುದಾಗಿ ತಿಳಿಸಿದರು. ಗದಗ ಐತಿಹಾಸಿಕ ತಾಣವಾಗಿದ್ದು, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಜಿಲ್ಲೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪತ್ರಕರ್ತರ ಸಮಸ್ಯೆಗಳ ಪರಿಹಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಸಮಾಜ ಸುಧಾರಣೆಯಲ್ಲಿ ಮಾಧ್ಯಮದ ಪಾತ್ರವನ್ನು ಅವರು ಸಮಗ್ರವಾಗಿ ಅರಿತುಕೊಂಡಿದ್ದು, ಆ ನಿಟ್ಟಿನಲ್ಲಿ ಪತ್ರಕರ್ತರಿಗೆ ಅಗತ್ಯ ಗೌರವ ನೀಡುತ್ತಿದ್ದಾರೆ ಎಂದು ಹೇಳಿದರು.

ಮಾಧ್ಯಮ ಸಲಹೆಗಾರನಾಗಿ ಪತ್ರಕರ್ತರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ಸರ್ಕಾರ ಹೆಚ್ಚಿನ ಮಹತ್ವ ನೀಡಿದ್ದು, ಯಾವುದೇ ಕಾರಣಕ್ಕೂ ಜಿಲ್ಲಾ ಪತ್ರಿಕೆಗಳ ಜಾಹೀರಾತು ಕಡಿತವಾಗಬಾರದೆಂದು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಯೋಜನೆ ಜಾರಿಗೆ ತಂದಿದ್ದು, ವಿಶೇಷ ಆರೋಗ್ಯ ಯೋಜನೆ ಕುರಿತು ಚರ್ಚೆ ನಡೆಯುತ್ತಿದೆ. ಸರ್ಕಾರ ಸದಾ ಪತ್ರಿಕೆಗಳ ಬೆಂಬಲಕ್ಕೆ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಹಿರಿಯರಿಂದ ಅಭಿನಂದನೆ

ಹಿರಿಯ ವರದಿಗಾರ ಅನಂತ್ ಕಾರ್ಕಳ ಮಾತನಾಡಿ, “ಕೆ. ವಿ. ಪ್ರಭಾಕರ್ ಅವರು ಮಾಧ್ಯಮ ಸಲಹೆಗಾರರಾದ ಬಳಿಕ ಮಾಧ್ಯಮ ಹಾಗೂ ಪತ್ರಿಕೆಗಳ ಸಮಸ್ಯೆಗಳ ಕುರಿತು ಸಮಗ್ರ ಅಧ್ಯಯನ ನಡೆಸಿ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪರಿಹಾರಕ್ಕೆ ಸ್ಪಂದಿಸುವಂತೆ ಮಾಡಿದ್ದಾರೆ. ಅವರ ಕಾರ್ಯ ಶ್ಲಾಘನೀಯ,” ಎಂದು ಹೇಳಿದರು.

ಈ ಸಂದರ್ಭದಲ್ಲಿ ನಿಂಗಪ್ಪ ಚವಡಿ, ಎಚ್. ಎಂ. ಶರೀಫನವರ್, ರಾಮಕೃಷ್ಣ ರೊಳ್ಳಿ, ಶರಣು ದೊಡ್ಡೂರ, ಪ್ರಕಾಶ್ ಕರಿ, ಸಂಜೀವ್ ಪಾಂಡ್ರೆ, ಗಣೇಶ್ ಪೈ, ರಮೇಶ್ ಭಜಂತ್ರಿ, ದೇವಪ್ಪ ಲಿಂಗದಾಳ, ಗಿರೀಶ್ ಕಮ್ಮಾರ್, ವಿನಯ್ ಪೂಜಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಕೆ. ವಿ. ಪ್ರಭಾಕರ್ ಅವರು ಮಾಧ್ಯಮ ಸಲಹೆಗಾರರಾದ ನಂತರ ಸರ್ಕಾರ ಮತ್ತು ಮಾಧ್ಯಮದ ನಡುವೆ ಸಮನ್ವಯ ಹೆಚ್ಚಾಗಿದೆ. ಮಾಧ್ಯಮ ಕ್ಷೇತ್ರಕ್ಕೆ ಅವರದೇ ಆದ ವಿಶೇಷ ಕೊಡುಗೆ ಇದೆ. ರತ್ನಾಕರವಾಣಿ ಕನ್ನಡ ದಿನಪತ್ರಿಕೆ ಕಾರ್ಯಾಲಯಕ್ಕೆ ಆಗಮಿಸಿ ಶುಭ ಹಾರೈಸಿರುವುದು ಸಂತಸ ತಂದಿದೆ.”

— ಜಗದೀಶ್ ಎಸ್. ಪಿ.
ಸಂಪಾದಕರು, ರತ್ನಾಕರವಾಣಿ ಕನ್ನಡ ದಿನಪತ್ರಿಕೆ

ಕುಡಿಯುವ ನೀರಿಲ್ಲದೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ!

0

ವಿಜಯಸಾಕ್ಷಿ ಸುದ್ದಿ, ಕೊಟ್ಟೂರು: ತಾಲೂಕು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲದೆ ಪ್ರಯಾಣಿಕರು ದಿನನಿತ್ಯ ತೊಂದರೆ ಅನುಭವಿಸುವಂತಾಗಿದೆ. ಈ ನಿರ್ಲಕ್ಷ್ಯದಿಂದ ಬೇಸತ್ತು ಸಾರ್ವಜನಿಕರು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಸರ್ಕಾರಿ ಬಸ್ ತಂಗುದಾಣವಾಗಿದ್ದರೂ ಶುದ್ಧ ಕುಡಿಯುವ ನೀರಿನ ಘಟಕವೇ ಇಲ್ಲದಿರುವುದು ಆಶ್ಚರ್ಯಕಾರಿಯಾಗಿದೆ. ದೂರದ ಊರುಗಳಿಂದ ಬರುವ ಮಹಿಳೆಯರು, ವೃದ್ಧರು, ಮಕ್ಕಳು ಸೇರಿದಂತೆ ಅನೇಕ ಪ್ರಯಾಣಿಕರು ನೀರಿನ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ.

ಸ್ಥಿತಿವಂತರು ಹಾಗೂ ಮಧ್ಯಮ ವರ್ಗದವರು ಹಣ ನೀಡಿ ಅಂಗಡಿಗಳಲ್ಲಿ ಸಿಗುವ ಬಾಟಲ್ ನೀರನ್ನು ಖರೀದಿಸಿ ದಾಹ ತೀರಿಸಿಕೊಳ್ಳುವ ಪರಿಸ್ಥಿತಿ ಇದೆ. ಆದರೆ ಹಳ್ಳಿಗಳಿಂದ ಕೂಲಿ ಕೆಲಸಕ್ಕಾಗಿ ಪಟ್ಟಣಕ್ಕೆ ಬರುವ ಬಡ ಕಾರ್ಮಿಕರು ದುಡ್ಡು ಕೊಟ್ಟು ನೀರು ಖರೀದಿಸಲು ಸಾಧ್ಯವಾಗದೆ ಸಣ್ಣಪುಟ್ಟ ಹೋಟೆಲ್‌ಗಳನ್ನು ಅವಲಂಬಿಸುವಂತಾಗಿದೆ.

ಹಲವು ವರ್ಷಗಳಿಂದಲೂ ಈ ಸಮಸ್ಯೆ ಮುಂದುವರಿದಿದ್ದರೂ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಶಾಶ್ವತ ಪರಿಹಾರಕ್ಕೆ ಮುಂದಾಗಿಲ್ಲ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಇನ್ನಾದರೂ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡು ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಪ್ರಯಾಣಿಕರ ಮೂಲಭೂತ ಅಗತ್ಯವನ್ನು ಪೂರೈಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಗೃಹಲಕ್ಷ್ಮಿ ಹಣ ದೇವಾಲಯ ನಿರ್ಮಾಣಕ್ಕೆ ದೇಣಿಗೆ: ತಿಮ್ಮಾಪುರ ಮಹಿಳೆಯರ ಅಭೂತಪೂರ್ವ ನಿರ್ಧಾರ!

0

ಗದಗ: ಗದಗ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಸಾಮಾಜಿಕ–ಆಧ್ಯಾತ್ಮಿಕ ಬದ್ಧತೆಯೊಂದು ಗಮನಸೆಳೆಯುವ ಘಟನೆ ನಡೆದಿದೆ. ಕರ್ನಾಟಕ ರಾಜ್ಯ ಸರ್ಕಾರ ಮಹಿಳೆಯರಿಗೆ ನೀಡುತ್ತಿರುವ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರ ಖಾತೆಗೆ ಜಮಾದ ರೂ.2000 ನೆರವು ಮೊತ್ತವನ್ನು ಗ್ರಾಮದಲ್ಲಿನ ಶ್ರೀ ರೇಣುಕಾದೇವಿ ಎಲ್ಲಮ್ಮನ ದೇವಸ್ಥಾನ ಕಟ್ಟಡ ಕಾಮಗಾರಿಗೆ ದೇಣಿಗೆಯಾಗಿ ನೀಡುವ ನಿರ್ಧಾರವನ್ನು ಗ್ರಾಮ ಮಹಿಳೆಯರು ಕೈಗೊಂಡಿದ್ದಾರೆ.

ಗ್ರಾಮದ ಎಲ್ಲಾ ಫಲಾನುಭವಿಗಳು ತಮ್ಮ ಖಾತೆಗೆ ಜಮಾ ಆದ ಮೊತ್ತವನ್ನು ಸ್ವಯಂಪ್ರೇರಿತವಾಗಿ ದೇವಸ್ಥಾನದ ಅಭಿವೃದ್ಧಿಗೆ ಸಮರ್ಪಿಸಿದ್ದು, ಗ್ರಾಮದಲ್ಲಿ ಭಕ್ತಿಭಾವ ಮತ್ತು ಏಕತೆ ಮೆರೆಯಲಾಗಿದೆ. ಮಹಿಳೆಯರ ಈ ತೀರ್ಮಾನಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದು, ದೇವಸ್ಥಾನದ ನಿರ್ಮಾಣ ಕಾರ್ಯಕ್ಕೆ ದೊಡ್ಡ ಮಟ್ಟದ ಬೆಂಬಲ ಸಿಕ್ಕಂತಾಗಿದೆ.

ಗ್ರಾಮದ ಹಿರಿಯರು ಹಾಗೂ ಯುವಕರು ಮಹಿಳೆಯರ ಈ ದಾನಶೀಲತೆಯನ್ನು ಶ್ಲಾಘಿಸಿದ್ದು, ಗ್ರಾಮಾಭಿವೃದ್ಧಿ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಮಹಿಳೆಯರ ಪಾತ್ರ ಮತ್ತಷ್ಟು ಬಲವಾಗುತ್ತಿರುವುದನ್ನು ಇದು ತೋರಿಸುತ್ತದೆ ಎಂದು ತಿಳಿಸಿದ್ದಾರೆ.

ದೇವಸ್ಥಾನ ಕಟ್ಟಡ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ ಎಂದು ಗ್ರಾಮ ಸಮಿತಿ ತಿಳಿಸಿದೆ.

ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಗದಗ ಜಿಲ್ಲೆಯ ಕಿರಣ್ ಕುಮಾರ್ ಕಟಗಿ ಆಯ್ಕೆ

0

ಗದಗ: ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ನಡೆದ ಚುನಾವಣಾ ಸಂದರ್ಭಗಳು ಹಾಗೂ ವಿವಿಧ ಜಾತ್ರೆ–ಹಬ್ಬಗಳ ಬಂದೋಬಸ್ತ್ ಕರ್ತವ್ಯಗಳಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಶ್ರೇಷ್ಠ ಸೇವೆ ಸಲ್ಲಿಸಿದ್ದಕ್ಕಾಗಿ ೨೦೨೫ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಗದಗ ಜಿಲ್ಲಾ ಬೋಧಕರು ಕಿರಣ್ ಕುಮಾರ್ ಕಟಗಿ ಅವರನ್ನು ಕರ್ನಾಟಕ ಸರ್ಕಾರ ಆಯ್ಕೆ ಮಾಡಿದೆ.

ಚುನಾವಣೆಗಳಂತಹ ಸೂಕ್ಷ್ಮ ಸಂದರ್ಭಗಳಲ್ಲಿ ಕಾನೂನು–ಸುವ್ಯವಸ್ಥೆ ಕಾಪಾಡುವ ಕಾರ್ಯದಲ್ಲಿ ಅವರು ತೋರಿದ ನಿಷ್ಠೆ, ಜವಾಬ್ದಾರಿ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಸಮರ್ಥ ನಿರ್ವಹಣೆ ಗಮನಾರ್ಹವಾಗಿದೆ. ವಿವಿಧ ಜಾತ್ರೆ ಹಾಗೂ ಹಬ್ಬಗಳ ವೇಳೆ ಜನಸಂದಣಿಯನ್ನು ನಿಯಂತ್ರಿಸುವಲ್ಲಿ ಮತ್ತು ಪೊಲೀಸ್ ಇಲಾಖೆಯೊಂದಿಗೆ ಪರಿಣಾಮಕಾರಿ ಸಹಕಾರ ನೀಡುವಲ್ಲಿ ಅವರ ಸೇವೆ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಸಾಧನೆಗೆ ಜಿಲ್ಲಾ ಸಮದೇಶಕರು, ಗೃಹರಕ್ಷಕ ದಳದ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಕಿರಣ್ ಕುಮಾರ್ ಕಟಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಜಿಲ್ಲೆಯ ಗೃಹರಕ್ಷಕ ದಳದ ಪರವಾಗಿ ಈ ಗೌರವ ದೊರೆತಿರುವುದು ಹೆಮ್ಮೆಯ ವಿಷಯವಾಗಿದ್ದು, ಇತರರಿಗೆ ಪ್ರೇರಣೆಯಾಗಿದೆ.

ತಂದೆ-ತಾಯಿಯನ್ನು ವಾತ್ಸಲ್ಯದಿಂದ ನೋಡಿಕೊಳ್ಳಿ

0

ವಿಜಯಸಾಕ್ಷಿ ಸುದ್ದಿ, ಗದಗ: ತಾಯಿಯ ಪ್ರೀತಿಗೆ ಬೆಲೆ ಕಟ್ಟಲಾಗದು. ಹೀಗಾಗಿ ಪ್ರತಿಯೊಬ್ಬರೂ ತಮ್ಮ ತಂದೆ-ತಾಯಿಯನ್ನು ಪ್ರೀತಿ, ವಾತ್ಸಲ್ಯದಿಂದ ನೋಡಿಕೊಳ್ಳಿ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ನಗರದ ಹೊರವಲಯದಲ್ಲಿ ಗ್ರಾಮ ಗಂಗೋತ್ರಿ ಆವರಣದಲ್ಲಿರುವ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕೌಶಲ್ಯ ವಿಕಾಸ ಭವನದ ಸಭಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದಲ್ಲಿ ಅವ್ವ ಸೇವಾ ಟ್ರಸ್ಟ್ ಮಾತೋಶ್ರೀ ಗಂಗವ್ವ ಶಿವಲಿಂಗಪ್ಪ ಹೊರಟ್ಟಿ ಸ್ಮರಣಾರ್ಥ ರಾಜ್ಯ ಮಟ್ಟದಲ್ಲಿ ಮಹಿಳಾ ಪತ್ರಕರ್ತರಿಗೆ ಸ್ಥಾಪಿಸಿರುವ ‘ದತ್ತಿ ನಿಧಿ’ ಪ್ರಶಸ್ತಿ ಪ್ರದಾನ ಹಾಗೂ `ಗ್ರಾಮೀಣಾಭಿವೃದ್ಧಿಯಲ್ಲಿ ಪತ್ರಿಕೋದ್ಯಮದ ಪಾತ್ರ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಪತ್ರಕರ್ತರು ಪತ್ರಿಕೆಗಳ ಮೂಲಕ ಸಮಾಜದಲ್ಲಿ ಪರಿಣಾಮ ಬೀರುತ್ತಾರೆ. ಹೀಗಾಗಿ ಪತ್ರಿಕೆಗಳ ವರದಿ, ಮಾಹಿತಿ ಹಾಗೂ ಸಮಾಜದಲ್ಲಿ ಅತ್ಯುತ್ತಮ ಸೇವೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತಿದೆ. ಇದಕ್ಕೊಂದು ಪ್ರತ್ಯೇಕ ಸಮಿತಿ ರಚಿಸಿದ್ದೇವೆ. ನಮ್ಮ ತಾಯಿಯ ಸ್ಮರಣೆಯ ಹಿನ್ನೆಲೆಯಲ್ಲಿ ಪ್ರತಿವರ್ಷ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾ ಘಟಕದ ಪತ್ರಿಕಾ ಭವನದ ಮೊದಲ ಮಹಡಿಗೆ ಐದು ಲಕ್ಷ ರೂ. ಅನುದಾನ ನೀಡಲಾಗುವುದು ಎಂದರು.

ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ ಮಾತನಾಡಿ, ಅವ್ವನ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ರಾಜ್ಯಕ್ಕೆ ಮಾದರಿಯಾಗಿದೆ. ಎಷ್ಟೇ ದೊಡ್ಡ ಸ್ಥಾನಕ್ಕೇರಲಿ, ತಾಯಿಗಿಂತ ದೊಡ್ಡದು ಯಾವುದೂ ಇಲ್ಲ. `ಅವ್ವ’ ನಮ್ಮೆಲ್ಲರ ಸಾಧನೆ, ಯಶಸ್ಸಿಗೆ ಸ್ಫೂರ್ತಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾಧ್ಯಕ್ಷ ರಾಜು ಎಂ.ಹೆಬ್ಬಳ್ಳಿ ಮಾತನಾಡಿ, ಸಚಿವರಾದ ಎಚ್.ಕೆ. ಪಾಟೀಲರು ಗದಗದಲ್ಲಿ ಕರ್ನಾಟಕದಲ್ಲಿಯೇ ಮಾದರಿ ಎನ್ನುವ ರೀತಿ ಪತ್ರಿಕಾ ಭವನ ನಿರ್ಮಾಣ ಮಾಡಿದ್ದಾರೆ. ಇದೀಗ ಮೊದಲ ಮಹಡಿಗೆ ಸಭಾಪತಿಗಳು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ಮತ್ತು ಕೆ.ವಿ. ಪ್ರಭಾಕರ ಅವರು ಮುಖ್ಯಮಂತ್ರಿಗಳ ಮೂಲಕ ವಿಶೇಷ ಅನುದಾನ ಕೊಡಿಸುವುದರೊಂದಿಗೆ ಜಿಲ್ಲೆಯ ಕ್ಷೇಮಾಭಿವೃದ್ಧಿ ನಿಧಿಗೆ ಅನುದಾನ ಕೊಡಿಸುವಂತೆ ಮನವಿ ಮಾಡಿದರು.

ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಕುಲಪತಿ (ಪ್ರ) ಹಾಗೂ ಕುಲಸಚಿವ ಪ್ರೊ. ಸುರೇಶ ನಾಡಗೌಡರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಅವ್ವ ಸೇವಾ ಟ್ರಸ್ಟ್ ಜಿಲ್ಲಾ ಸಂಚಾಲಕ ಬಸವರಾಜ ಧಾರವಾಡ, ಜಿಲ್ಲಾ ವಾರ್ತಾಧಿಕಾರಿ ವಸಂತ ಮಡ್ಲೂರು, ಕಾ.ನಿ.ಪ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಅರುಣಕುಮಾರ ಹಿರೇಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ ಸೇರಿದಂತೆ ಸಂಘದ ಪದಾಧಿಕಾರಿಗಳು, ಜಿಲ್ಲೆಯ ಪತ್ರಕರ್ತರು, ವಿದ್ಯಾರ್ಥಿಗಳು ಇದ್ದರು.

ತನುಜಾ ನಾಯಕಗೆ ‘ದತ್ತಿ ನಿಧಿ’ ಪ್ರಶಸ್ತಿ

ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್ ವತಿಯಿಂದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಸ್ಮರಣಾರ್ಥ ಸ್ಥಾಪಿಸಿರುವ ದತ್ತಿ ನಿಧಿಯ 2025-26ನೇ ಸಾಲಿನ ಪ್ರಶಸ್ತಿಯನ್ನು ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಹಿರಿಯ ಉಪಸಂಪಾದಕಿ ತನುಜಾ ನಾಯಕ ಅವರಿಗೆ ನೀಡಿ ಗೌರವಿಸಲಾಯಿತು.

ಫಲಾನುಭವಿಗಳಿಗೆ ಸಕಾಲದಲ್ಲಿ ಸೌಲಭ್ಯ ವಿತರಿಸಿ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯು ಗದಗ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿಯ ಅಧ್ಯಕ್ಷ ಅಶೋಕ್ ಮಂದಾಲಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಭೆಯಲ್ಲಿ ಮಾತನಾಡಿದ ಅಶೋಕ್ ಮಂದಾಲಿ, ಗದಗ ತಾಲೂಕಿನ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಅಕ್ಟೋಬರ್‌ನಿಂದ ನವೆಂಬರ್ 2025ರವರೆಗೆ 79605 ಅರ್ಜಿಗಳು ನೋಂದಣಿಯಾಗಿದ್ದು, 79179 ಫಲಾನುಭವಿಗಳಿಗೆ ಒಟ್ಟು 31.66 ಕೋಟಿ ರೂ. ಡಿಬಿಟಿ ಮೂಲಕ ಪಾವತಿಸಲಾಗಿದೆ ಎಂದು ತಿಳಿಸಿದ ಅವರು, ಬಾಕಿ ಇರುವ ಅರ್ಜಿಗಳನ್ನು ಶೀಘ್ರವೇ ಪರಿಶೀಲಿಸಿ ಅರ್ಹರಿಗೆ ಸಕಾಲದಲ್ಲಿ ಹಣ ಬಿಡುಗಡೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಯುವನಿಧಿ ಯೋಜನೆಯಡಿಯಲ್ಲಿ ಡಿಸೆಂಬರ್ 2025ರವರೆಗೆ 2,594 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, 1,081 ಅರ್ಹ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆಯಾಗಿದೆ. ಉಳಿದ 1,513 ಅಭ್ಯರ್ಥಿಗಳು ಯೋಜನೆಯ ಷರತ್ತುಗಳ ಪ್ರಕಾರ ಹಂತ ಹಂತವಾಗಿ ಅರ್ಹರಾಗಲಿದ್ದಾರೆ ಎಂದು ವಿವರಿಸಿದರು.

ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಗದಗ ಗ್ರಾಮೀಣ ಭಾಗದಲ್ಲಿ ಜನವರಿ 2026ರವರೆಗೆ 1,80,659 ಸದಸ್ಯರಿಗೆ ಒಟ್ಟು 7,405.80 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗಿದೆ. ಗದಗ ನಗರ ಭಾಗದಲ್ಲಿ 1,33,542 ಸದಸ್ಯರಿಗೆ 5,240.95 ಕ್ವಿಂಟಲ್ ಅಕ್ಕಿ ವಿತರಣೆ ಮಾಡಲಾಗಿದೆ. ಯಾವುದೇ ಅರ್ಹರು ಸೌಲಭ್ಯದಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಗದಗ ಗ್ರಾಮೀಣ ಭಾಗದಲ್ಲಿ 53,122 ಸ್ಥಾವರಗಳು ಅರ್ಹರಾಗಿದ್ದು, 52,951 ಸ್ಥಾವರಗಳು ನೋಂದಣಿಯಾಗಿವೆ. ಉಳಿದ ಅರ್ಹ ಗ್ರಾಹಕರನ್ನೂ ಶೀಘ್ರ ನೋಂದಣಿ ಮಾಡಿಸಿ ಯೋಜನೆಯ ಸದುಪಯೋಗ ಪಡೆಯುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಸದಸ್ಯರಾದ ಈಶ್ವರ ಹುಣಿಸಿಕಟ್ಟಿ, ಶರೀಫ ಬಿಳೆಎಲಿ, ತಾಲೂಕು ಮಟ್ಟದ ಗ್ಯಾರಂಟಿ ಸಮಿತಿಯ ಸದಸ್ಯರುಗಳಾದ ಸಾವಿತ್ರಿ ಹೂಗಾರ, ಸಂಗು ಕರೆಕಲಮಟ್ಟಿ, ಸಂಗಮೇಶ ಎಂ.ಹಾದಿಮನಿ, ರಮೇಶ್ ಹೊನ್ನಿಕಾಯ್ಕರ, ದೇವರಡ್ಡಿ ಬಿ.ತಿರ್ಲಾಪುರ, ಗಣೇಶ್ ಸಿಂಗ್ ಮಿಟಾಡೆ, ಮಲ್ಲಪ್ಪ ಎಚ್.ಬಾರಕೇರ, ಭಾಷಾ ಮಲ್ಲಸಮುದ್ರ ಹಾಗೂ ಮಲ್ಲಯ್ಯ ಕೊರವನವರ ಉಪಸ್ಥಿತರಿದ್ದರು.

ಶಕ್ತಿ ಯೋಜನೆ ಪ್ರಗತಿ ಕುರಿತು ವಿವರಿಸಿ, ಗದಗ ಘಟಕದಲ್ಲಿ 11-06-2023ರಿಂದ 24-02-2026ರವರೆಗೆ 2.85 ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡಿದ್ದು, 89.23 ಕೋಟಿ ರೂ ಮೌಲ್ಯದ ಉಚಿತ ಟಿಕೆಟ್ ವಿತರಿಸಲಾಗಿದೆ. ಬೆಟಗೇರಿ ಘಟಕದಲ್ಲಿ 1.33 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದು, 92.63 ಕೋಟಿ ರೂ ಮೌಲ್ಯದ ಟಿಕೆಟ್ ವಿತರಣೆಯಾಗಿದೆ ಎಂದು ಅಶೋಕ್ ಮಂದಾಲಿ ತಿಳಿಸಿದರು.

error: Content is protected !!