Home Blog Page 118

ವೈದ್ಯರ ದಿನಾಚರಣೆಗೆ ಎಸ್‌ಪಿ ರೋಹನ್ ಜಗದೀಶ್‌ಗೆ ಆಹ್ವಾನ

0

ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ವೈದ್ಯಕೀಯ ಸಂಘ (ಐಎಂಎ) ಗದಗ ಘಟಕದ ಪದಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರನ್ನು ಭೇಟಿ ಮಾಡಿ, 2025-26ನೇ ಸಾಲಿನ ಡಿಜಿ ಮತ್ತು ಐಜಿಪಿ ಪ್ರಶಂಸಾ ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ಸನ್ಮಾನಿಸಿದರು. ಇದೇ ವೇಳೆ ಜುಲೈ 1ರಂದು ನಡೆಯಲಿರುವ ವೈದ್ಯರ ದಿನಾಚರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸುವಂತೆ ಆಹ್ವಾನಿಸಿದರು.

ಐಎಂಎ ಗದಗ ಅಧ್ಯಕ್ಷ ಡಾ. ಶ್ರೀಧರ್ ಕುರಡಗಿ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಡಾ. ಎಸ್.ಆರ್. ನಾಗನೂರ, ಖಜಾಂಚಿ ಡಾ. ಜಯರಾಜ್, ರೆಡ್‌ಕ್ರಾಸ್ ಅಧ್ಯಕ್ಷ ಡಾ. ಗೋಡ್‌ಬೋಲೆ ಹಾಗೂ ಉಪಾಧ್ಯಕ್ಷ ಡಾ. ಪ್ಯಾರಾಲಿ ನೂರಾನಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಡಾ. ಪ್ಯಾರಾಲಿ ನೂರಾನಿ, ಯುವ ಎಸ್‌ಪಿ ರೋಹನ್ ಜಗದೀಶ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಗದಗ ಜಿಲ್ಲೆಯ ಲಕ್ಕುಂಡಿ, ಕಿಮ್ಸ್, ಶಿಕ್ಷಣ ಕ್ಷೇತ್ರ ಹಾಗೂ ಹುಲಕೋಟಿಯ ಕಿಡ್ನಿ ಕಸಿ ಸೇರಿದಂತೆ ಜಿಲ್ಲೆಯ ವಿವಿಧ ಕ್ಷೇತ್ರಗಳ ಅಭಿವೃದ್ಧಿ ಕುರಿತು ಚರ್ಚಿಸಿದರು.

ಅಲ್ಲದೆ, ಗದಗ ಶಾಸಕ ಎಚ್.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ದೊರೆತು, ಅವರ ಸೇವೆ ಮತ್ತಷ್ಟು ವ್ಯಾಪಕವಾಗಿ ಜಿಲ್ಲೆಗೆ ಲಭಿಸಲಿ ಎಂದು ಆಶಯ ವ್ಯಕ್ತಪಡಿಸಿದರು.

₹6 ಕೋಟಿ ರಸ್ತೆ ಕಾಮಗಾರಿಗೆ ಹಸಿರು ನಿಶಾನೆ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಹಗರಿಬೊಮ್ಮನಹಳ್ಳಿ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು ₹6 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ. ನೇಮಿರಾಜ್ ನಾಯಕ್ ಭೂಮಿಪೂಜೆ ಹಾಗೂ ಉದ್ಘಾಟನೆ ನೆರವೇರಿಸಿದರು.

ಪಟ್ಟಣದ ತೇರುಬೀದಿ ರಸ್ತೆಯಿಂದ ಗುರುಭವನದ ರಸ್ತೆವರೆಗೆ 2024-25 ಹಾಗೂ 2025-26ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಮೈಕ್ರೋ ಯೋಜನೆಯಡಿ ಸುಮಾರು ₹2 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.

ಇದೇ ವೇಳೆ ಕೆಚ್ಚಿನಬಂಡಿ ಬಸ್‌ಸ್ಟ್ಯಾಂಡ್ ಕ್ರಾಸ್‌ನಿಂದ ರಾರಾಳ್ ತಾಂಡಾ ವೃತ್ತದವರೆಗೆ, ಕೆಚ್ಚಿನ ಮಂಡಿ ಗ್ರಾಮದ ಒಳರಸ್ತೆ ಹಾಗೂ ಹೊಸ ಆನಂದ ದೇವನಹಳ್ಳಿವರೆಗೆ ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿಗೆ ಸುಮಾರು ₹4 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ನೇಮಿರಾಜ್ ನಾಯಕ್, ಕ್ಷೇತ್ರದಾದ್ಯಂತ ವಿವಿಧ ಅನುದಾನಗಳಡಿ ಒಟ್ಟು ₹90 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಹಿಂದಿನ ಹತ್ತು ವರ್ಷಗಳಲ್ಲಿ ಆಗದ ರಸ್ತೆ ಹಾಗೂ ಮೂಲಸೌಕರ್ಯ ಕಾಮಗಾರಿಗಳನ್ನು ತಮ್ಮ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ತುಂಗಭದ್ರ ಡ್ಯಾಂನ 30 ಸ್ಟೀಲ್ ಗೇಟ್‌ಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಏಕೆ ತೆರಳಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ, ಅಧಿಕಾರಿಗಳು ಹಾಗೂ ನೀರಾವರಿ ಸಚಿವರಿಂದ ಆಹ್ವಾನ ಬಂದಿದ್ದರೂ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಜನರ ಕೆಲಸಗಳಿಗೆ ಆದ್ಯತೆ ನೀಡಿದ ಕಾರಣ ಕಾರ್ಯಕ್ರಮಕ್ಕೆ ತೆರಳಲಿಲ್ಲ ಎಂದು ಸ್ಪಷ್ಟಪಡಿಸಿದರು.

ಗುರುಭವನ ರಸ್ತೆ ಕಾಮಗಾರಿಯನ್ನು ಕರ್ನಾಟಕ ಭೂಸೇನಾ ನಿಗಮ ಹಾಗೂ ಕೆಚ್ಚಿನ ಮಂಡಿ ರಸ್ತೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ನವೀನ್ ಸಂಜ್ಯೋತ, ಬಿಜೆಪಿ ಮಂಡಲ ಅಧ್ಯಕ್ಷ ಬೆಣಕಲ್ ಪ್ರಕಾಶ್, ಬಿಜೆಪಿ ಮುಖಂಡ ಸಂದೀಪ್ ಶಿವಮೊಗ್ಗ, ಜೆಡಿಎಸ್ ಕ್ಷೇತ್ರಾಧ್ಯಕ್ಷ ವೈ. ಮಲ್ಲಿಕಾರ್ಜುನ, ಕನ್ನಿಹಳ್ಳಿ ಚಂದ್ರಶೇಖರ್, ಸರ್ದಾರ್ ಯಮನೂರಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

“ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ₹90 ಕೋಟಿ ವೆಚ್ಚದ ಗುರಿ ಹೊಂದಿದ್ದೇವೆ. ಜನರು ನನ್ನನ್ನು ಗೆಲ್ಲಿಸಿ ಕಳುಹಿಸಿರುವುದರಿಂದ ಅವರ ಕೆಲಸಕ್ಕೆ ಮೊದಲ ಆದ್ಯತೆ ನೀಡುತ್ತಿದ್ದೇನೆ. ಪ್ರತಿಯೊಂದು ಗ್ರಾಮಕ್ಕೂ ಗುಣಮಟ್ಟದ ರಸ್ತೆ ಮತ್ತು ಮೂಲಸೌಕರ್ಯ ಕಲ್ಪಿಸುವುದು ನನ್ನ ಸಂಕಲ್ಪ.”

– ಕೆ. ನೇಮಿರಾಜ್ ನಾಯಕ್, ಶಾಸಕ, ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ

ಕಸದ ವಾಹನಗಳ ಮೇಲೆ ಜಿಬಿಎ ಡಿಜಿಟಲ್ ನಿಗಾ: ‘ಮಾತ್ರ’ ಆ್ಯಪ್ ಮೂಲಕ ಮಾರ್ಗ ಮೇಲ್ವಿಚಾರಣೆ

ಬೆಂಗಳೂರು: ನಗರದಲ್ಲಿ ಕಸ ಸಂಗ್ರಹಣೆ ಮತ್ತು ವಿಲೇವಾರಿ ಸಮಸ್ಯೆಗೆ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ.

ನಿಗದಿತ ಮಾರ್ಗದಲ್ಲಿ ಕಸದ ವಾಹನಗಳ ಸಂಚಾರ ಕಡ್ಡಾಯಗೊಳಿಸುವ ಉದ್ದೇಶದಿಂದ ‘ಮಾತ್ರ’ ಆ್ಯಪ್ ಮೂಲಕ ವಾಹನಗಳ ಚಲನವಲನದ ಮೇಲೆ ನಿಗಾ ಇಡುವ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ನಗರದ ಹಲವು ಪ್ರದೇಶಗಳಲ್ಲಿ ಮನೆಗಳಿಗೆ ಕಸದ ವಾಹನಗಳು ನಿಯಮಿತವಾಗಿ ಬಾರದ ಕಾರಣ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಸುರಿಯುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಬ್ಲಾಕ್ ಸ್ಪಾಟ್‌ಗಳ ಸಂಖ್ಯೆ ಏರಿಕೆಯಾಗಿದ್ದು, ನಗರ ಸ್ವಚ್ಛತೆ ಕಾಪಾಡುವುದು ಅಧಿಕಾರಿಗಳಿಗೆ ಸವಾಲಾಗಿದೆ.

ಈ ಸಮಸ್ಯೆಗೆ ಪರಿಹಾರವಾಗಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಕೋರಮಂಗಲದಲ್ಲಿ ಪ್ರಾಯೋಗಿಕವಾಗಿ ‘ಮಾತ್ರ’ ಆ್ಯಪ್ ಯೋಜನೆ ಆರಂಭಿಸಲಾಗಿದೆ. ಕಸದ ವಾಹನಗಳ ಚಾಲಕರ ಮೊಬೈಲ್‌ಗಳಲ್ಲಿ ಈ ಆ್ಯಪ್ ಅಳವಡಿಸಲಾಗಿದ್ದು, ನಿಗದಿತ ಮಾರ್ಗದಿಂದ ವಾಹನಗಳು ಬೇರೆಡೆಗೆ ತೆರಳಿದರೆ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ಲಭ್ಯವಾಗಲಿದೆ.

ಈ ತಂತ್ರಜ್ಞಾನ ಯಶಸ್ವಿಯಾದರೆ, ಉಳಿದ ನಾಲ್ಕು ನಗರ ಪಾಲಿಕೆಗಳಿಗೂ ಇದೇ ವ್ಯವಸ್ಥೆಯನ್ನು ವಿಸ್ತರಿಸಲು ಜಿಬಿಎ ಯೋಜನೆ ರೂಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹೊಸ ವ್ಯವಸ್ಥೆಯಿಂದ ಮನೆ-ಮನೆಗೆ ಕಸ ಸಂಗ್ರಹಣೆ ಸಮರ್ಪಕವಾಗಿ ನಡೆಯುವ ನಿರೀಕ್ಷೆ ವ್ಯಕ್ತವಾಗಿದ್ದು, ನಗರದಲ್ಲಿ ಕಸ ರಾಶಿ ಹಾಗೂ ಬ್ಲಾಕ್ ಸ್ಪಾಟ್‌ಗಳ ಸಮಸ್ಯೆಗೆ ಕಡಿವಾಣ ಬೀಳುವ ವಿಶ್ವಾಸ ವ್ಯಕ್ತವಾಗಿದೆ.

ಮಳೆ ಕೊರತೆಯಿಂದ ಕುರಿ ಸಾಕಾಣಿಕೆಗೆ ಭಾರೀ ಹೊಡೆತ; ಸಂಕಷ್ಟದಲ್ಲಿ ಕುರಿಗಾಹಿಗಳ ಬದುಕು!

ಬೀದರ್: ಮಳೆಗಾಲ ಆರಂಭವಾಗಿ ಹಲವು ವಾರಗಳು ಕಳೆದರೂ ಬೀದರ್ ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗದ ಕಾರಣ ರೈತರ ಜೊತೆಗೆ ಕುರಿ-ಮೇಕೆ ಸಾಕಾಣಿಕೆಯನ್ನು ಅವಲಂಬಿಸಿರುವ ಕುರಿಗಾಹಿಗಳ ಜೀವನವೂ ಸಂಕಷ್ಟಕ್ಕೆ ಸಿಲುಕಿದೆ.

ಕಾಡು ಹಾಗೂ ಬಯಲು ಪ್ರದೇಶಗಳಲ್ಲಿ ಹಸಿರು ಸಂಪೂರ್ಣ ಮಾಯವಾಗಿದ್ದು, ಕುರಿಗಳಿಗೆ ಮೇವು ಮತ್ತು ಕುಡಿಯುವ ನೀರು ಸಿಗದೆ ಕುರಿಗಾಹಿಗಳು ಪ್ರತಿದಿನ ಹತ್ತಾರು ಕಿಲೋಮೀಟರ್ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಬಾರಿ ಮುಂಗಾರು ಕೈಕೊಟ್ಟಿರುವುದರಿಂದ ಜಿಲ್ಲೆಯಲ್ಲಿ ಬಯಲು ಪ್ರದೇಶಗಳು ಸಂಪೂರ್ಣ ಒಣಗಿದ್ದು, ಸಾಮಾನ್ಯವಾಗಿ ಹಚ್ಚಹಸಿರಿನಿಂದ ಕಂಗೊಳಿಸುವ ಪ್ರದೇಶಗಳು ಈಗ ಬರಿದಾಗಿವೆ. ಕಾಡಿನಲ್ಲೂ ಮೇವು ಸಿಗದ ಕಾರಣ ಕುರಿಗಾಹಿಗಳು ಪ್ರತಿದಿನ ಹೊಸ ಪ್ರದೇಶಗಳ ಹುಡುಕಾಟದಲ್ಲಿ ಅಲೆದಾಡುತ್ತಿದ್ದಾರೆ.

ಬೆಳಗ್ಗೆಯಿಂದಲೇ ನೂರಾರು ಕುರಿಗಳನ್ನು ಕರೆದುಕೊಂಡು ಕಾಡು, ಗುಡ್ಡ ಹಾಗೂ ಬಯಲು ಪ್ರದೇಶಗಳಲ್ಲಿ ಸುತ್ತಾಡಿದರೂ ಸಮರ್ಪಕ ಮೇವು ದೊರೆಯುತ್ತಿಲ್ಲ. ಇದರಿಂದ ಕುರಿಗಳನ್ನು ಸಾಕುವುದು ದಿನದಿಂದ ದಿನಕ್ಕೆ ಸವಾಲಾಗಿ ಪರಿಣಮಿಸಿದೆ.

ಕೆರೆ, ಹಳ್ಳ ಹಾಗೂ ನೀರಿನ ತೊರೆಗಳು ಬತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆಯೂ ತೀವ್ರಗೊಂಡಿದೆ. ಕೆಲವೊಮ್ಮೆ ದೂರದ ಗ್ರಾಮಗಳಿಗೆ ತೆರಳಿ ಕುರಿಗಳಿಗೆ ನೀರು ಕುಡಿಸಿ ಮತ್ತೆ ಮೇವು ಹುಡುಕುವ ಅನಿವಾರ್ಯತೆ ಎದುರಾಗಿದೆ.

ಕಳೆದ ಮೂರು ತಿಂಗಳಿಂದ ಇದೇ ಪರಿಸ್ಥಿತಿ ಮುಂದುವರಿದಿದ್ದು, ಸಮರ್ಪಕ ಆಹಾರ ಸಿಗದ ಕಾರಣ ಕುರಿಗಳ ತೂಕ ಗಣನೀಯವಾಗಿ ಇಳಿಕೆಯಾಗುತ್ತಿದೆ. ಹಸಿವಿನಿಂದ ಬಳಲುತ್ತಿರುವ ಕುರಿಗಳು ದುರ್ಬಲವಾಗುತ್ತಿದ್ದು, ವಿವಿಧ ರೋಗಗಳಿಗೆ ತುತ್ತಾಗುವ ಆತಂಕ ಹೆಚ್ಚಿದೆ.

ಇದರಿಂದ ಕುರಿ ಸಾಕಾಣಿಕೆಯನ್ನು ಜೀವನೋಪಾಯವಾಗಿ ನಂಬಿಕೊಂಡಿರುವ ಕುಟುಂಬಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರ ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಅಗತ್ಯ ನೆರವು ನೀಡಬೇಕು ಎಂದು ಕುರಿಗಾಹಿಗಳು ಆಗ್ರಹಿಸಿದ್ದಾರೆ.

ಮುಂಗಾರು ಮತ್ತೆ ಚುರುಕು: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಾಳೆ ಭಾರೀ ಮಳೆ ಸಾಧ್ಯತೆ!

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದ್ದು, ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕ ಭಾಗದ ಜನರು ಎಚ್ಚರಿಕೆಯಿಂದಿದ್ದು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಇದೀಗ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗಕ್ಕೂ ವ್ಯಾಪಿಸುವ ಸಾಧ್ಯತೆ ಇದೆ. ಜೂನ್ 27ರಂದು ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಕೆಲವೆಡೆ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ.

ಈ ಭಾಗಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಇದೇ ರೀತಿಯ ಮಳೆಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದೇ ವೇಳೆ, ಜೂನ್ 25ರ ಬೆಳಿಗ್ಗೆ 8.30ರಿಂದ ಜೂನ್ 26ರ ಬೆಳಿಗ್ಗೆ 8.30ರವರೆಗೆ ವಿಜಯಪುರ ಜಿಲ್ಲೆಯ ಚಡಚಣದಲ್ಲಿ 72.2 ಮಿಲಿ ಮೀಟರ್ ಮಳೆಯಾಗಿದ್ದು, ರಾಜ್ಯದಲ್ಲೇ ಅತಿ ಹೆಚ್ಚು ಮಳೆ ದಾಖಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಜಲವಳ್ಳಿಯಲ್ಲಿ 70.5 ಮಿಲಿ ಮೀಟರ್, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುದುವೆಟ್ಟುವಿನಲ್ಲಿ 50.5 ಮಿಲಿ ಮೀಟರ್ ಹಾಗೂ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಇನ್ನಾದಲ್ಲಿ 46 ಮಿಲಿ ಮೀಟರ್ ಮಳೆಯಾಗಿದೆ.

ಮಳೆ ತೀವ್ರಗೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ತಗ್ಗು ಪ್ರದೇಶದ ನಿವಾಸಿಗಳು, ರೈತರು ಹಾಗೂ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ.

ಕಿಡ್ನಿ ಆರೋಗ್ಯ ಕಾಪಾಡಲು ಈ 5 ಅಭ್ಯಾಸಗಳನ್ನು ಇಂದೇ ರೂಢಿಸಿಕೊಳ್ಳಿ!

0

ಕಿಡ್ನಿ ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಇದು ಪ್ರತಿದಿನ ಸುಮಾರು 180–200 ಲೀಟರ್ ರಕ್ತವನ್ನು ಶುದ್ಧೀಕರಿಸಿ, ದೇಹದಲ್ಲಿನ ವಿಷಕಾರಿ ತ್ಯಾಜ್ಯ ಹಾಗೂ ಹೆಚ್ಚುವರಿ ದ್ರವವನ್ನು ಹೊರಹಾಕುತ್ತದೆ.

ಕಿಡ್ನಿ ಆರೋಗ್ಯ ಹದಗೆಟ್ಟರೆ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ ಕಿಡ್ನಿಯ ಆರೈಕೆಗೆ ಕೆಲವು ಆರೋಗ್ಯಕರ ಅಭ್ಯಾಸಗಳನ್ನು ಪಾಲಿಸುವುದು ಅಗತ್ಯ.

1. ಪ್ರತಿದಿನ ವ್ಯಾಯಾಮ ಮಾಡಿ
ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ವಾಕಿಂಗ್, ವ್ಯಾಯಾಮ ಅಥವಾ ಈಜು ಮಾಡುವುದರಿಂದ ತೂಕ ಮತ್ತು ರಕ್ತದೊತ್ತಡ ನಿಯಂತ್ರಣದಲ್ಲಿದ್ದು, ಕಿಡ್ನಿಗಳ ಆರೋಗ್ಯಕ್ಕೂ ಸಹಕಾರಿ.

2. ಸಕ್ಕರೆ ಸೇವನೆ ಕಡಿಮೆ ಮಾಡಿ
ಅತಿಯಾದ ಸಕ್ಕರೆ ಸೇವನೆಯಿಂದ ಮಧುಮೇಹದ ಅಪಾಯ ಹೆಚ್ಚುತ್ತದೆ. ಮಧುಮೇಹವು ಕಿಡ್ನಿ ವೈಫಲ್ಯದ ಪ್ರಮುಖ ಕಾರಣಗಳಲ್ಲಿ ಒಂದಾಗಿರುವುದರಿಂದ ಸಿಹಿ ಪದಾರ್ಥಗಳು ಮತ್ತು ಸಕ್ಕರೆ ಪಾನೀಯಗಳನ್ನು ಮಿತವಾಗಿ ಸೇವಿಸಿ.

3. ರಕ್ತದೊತ್ತಡ ನಿಯಂತ್ರಿಸಿ
ಅಧಿಕ ರಕ್ತದೊತ್ತಡವು ಕಿಡ್ನಿಗಳ ಮೇಲೆ ಹೆಚ್ಚಿನ ಒತ್ತಡ ಉಂಟುಮಾಡುತ್ತದೆ. ಆದ್ದರಿಂದ ನಿಯಮಿತವಾಗಿ ಬಿಪಿ ಪರೀಕ್ಷೆ ಮಾಡಿಸಿಕೊಂಡು, ಅಗತ್ಯವಿದ್ದರೆ ವೈದ್ಯರ ಸಲಹೆ ಪಡೆಯಿರಿ.

4. ಆರೋಗ್ಯಕರ ಆಹಾರ ಸೇವಿಸಿ
ತರಕಾರಿ, ಹಣ್ಣುಗಳು, ಧಾನ್ಯಗಳು ಮತ್ತು ಬೇಳೆಕಾಳುಗಳನ್ನು ಆಹಾರದಲ್ಲಿ ಸೇರಿಸಿ. ಸಮತೋಲನ ಆಹಾರವು ದೇಹದ ತೂಕವನ್ನು ನಿಯಂತ್ರಿಸಿ ಕಿಡ್ನಿಗಳನ್ನು ಆರೋಗ್ಯವಾಗಿರಲು ನೆರವಾಗುತ್ತದೆ.

5. ಉಪ್ಪಿನ ಪ್ರಮಾಣ ಕಡಿಮೆ ಮಾಡಿ
ಹೆಚ್ಚು ಉಪ್ಪು ಸೇವಿಸುವುದರಿಂದ ರಕ್ತದೊತ್ತಡ ಹೆಚ್ಚಾಗಬಹುದು. ಸಂಸ್ಕರಿತ ಆಹಾರಗಳನ್ನು ಕಡಿಮೆ ಮಾಡಿ, ನಿಂಬೆ, ಬೆಳ್ಳುಳ್ಳಿ ಹಾಗೂ ನೈಸರ್ಗಿಕ ಸುವಾಸನೆ ಪದಾರ್ಥಗಳನ್ನು ಬಳಸುವುದು ಉತ್ತಮ.

ಕಿಡ್ನಿ ಆರೋಗ್ಯವಾಗಿದ್ದರೆ ದೇಹವೂ ಆರೋಗ್ಯವಾಗಿರುತ್ತದೆ. ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ ಹಾಗೂ ಉತ್ತಮ ಜೀವನಶೈಲಿಯಿಂದ ಕಿಡ್ನಿ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಬಹುದು.

‘ಸತ್ತವರ ಖಾತೆಗೆ ಹಣ ಹೋಗಿದೆ, ಸರಿಪಡಿಸುತ್ತಿದ್ದೇವೆ’: ಗೃಹಲಕ್ಷ್ಮಿ ವಿವಾದಕ್ಕೆ ಹೆಚ್‌.ಎಂ. ರೇವಣ್ಣ ಸ್ಪಷ್ಟನೆ

0

ರಾಯಚೂರು: ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಸಿಎಜಿ ವರದಿಯಲ್ಲಿರುವ 60 ಕೋಟಿ ರೂ. ಹಣ ಬ್ಯಾಂಕ್ ಖಾತೆ ಇಲ್ಲದವರಿಗೆ ಜಮೆಯಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಹೆಚ್‌.ಎಂ. ರೇವಣ್ಣ ಸ್ಪಷ್ಟಪಡಿಸಿದ್ದಾರೆ. ಆದರೆ ಮೃತಪಟ್ಟ ಫಲಾನುಭವಿಗಳ ಖಾತೆಗಳಿಗೆ ಹಣ ಜಮೆಯಾಗಿರುವುದು ನಿಜವಾಗಿದ್ದು, ಆ ಹಣವನ್ನು ಮರುಪಡೆಯುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಎಂದು ತಿಳಿಸಿದ್ದಾರೆ.

ರಾಯಚೂರಿನಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನೆ ವೇಳೆ 2.80 ಲಕ್ಷ ಮೃತ ಫಲಾನುಭವಿಗಳು ಪತ್ತೆಯಾಗಿದ್ದು, ಅವರ ಖಾತೆಗಳಿಗೆ 115 ಕೋಟಿ ರೂ. ಜಮೆಯಾಗಿರುವುದು ಗೊತ್ತಾಗಿದೆ. ಇದರಲ್ಲಿ 15 ಕೋಟಿ ರೂ. ಈಗಾಗಲೇ ವಾಪಸ್ ಪಡೆಯಲಾಗಿದ್ದು, ಉಳಿದ 100 ಕೋಟಿ ರೂ. ವಸೂಲಿಗೆ ಬ್ಯಾಂಕ್‌ಗಳೊಂದಿಗೆ ಮಾತುಕತೆ ನಡೆಯುತ್ತಿದೆ ಎಂದರು.

ಒಂದೇ ಬ್ಯಾಂಕ್ ಖಾತೆಗೆ 20 ಮಂದಿ ಫಲಾನುಭವಿಗಳ ಹಣ ಜಮೆಯಾಗಿದೆ ಎಂಬ ಆರೋಪದ ಕುರಿತು ಮಾಹಿತಿ ಪಡೆದು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ ಅವರು, ಯೋಜನೆ ಆರಂಭದ ವೇಳೆಯಲ್ಲಿ ಸಂಪೂರ್ಣ ಆನ್‌ಲೈನ್ ನೋಂದಣಿ ಹಾಗೂ ಹಣ ವರ್ಗಾವಣೆ ವ್ಯವಸ್ಥೆ ಜಾರಿಗೊಳಿಸಿದ್ದರಿಂದ ಕೆಲವು ತಾಂತ್ರಿಕ ಲೋಪಗಳು ಕಂಡುಬಂದಿವೆ ಎಂದು ಹೇಳಿದರು.

ಗೃಹಜ್ಯೋತಿ ಯೋಜನೆಯ ಉಚಿತ ವಿದ್ಯುತ್ ಸೌಲಭ್ಯವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿರುವ ಪ್ರಕರಣಗಳು ಹಾಗೂ ಅನ್ನಭಾಗ್ಯ ಯೋಜನೆಯಲ್ಲಿ ನಕಲಿ ರೇಷನ್ ಕಾರ್ಡ್ ಬಳಕೆಯ ಆರೋಪಗಳ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಟೀಕೆಗೆ ಪ್ರತಿಕ್ರಿಯಿಸಿದ ರೇವಣ್ಣ, “ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವುದು ಕಾಂಗ್ರೆಸ್ ಸರ್ಕಾರ. ಲೋಪಗಳು ಕಂಡುಬಂದಲ್ಲಿ ಅವುಗಳನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ. ಗ್ಯಾರಂಟಿ ಯೋಜನೆಗಳು ಜಾರಿಯಾಗುವುದಿಲ್ಲ ಎಂದು ಹೇಳಿದವರಿಗೆ ಈಗ ಉತ್ತರ ಸಿಕ್ಕಿದೆ” ಎಂದು ತಿರುಗೇಟು ನೀಡಿದರು.

22 ಪ್ರಕರಣಗಳಲ್ಲಿ ಜಪ್ತಿಯಾಗಿದ್ದ ಕೋಟಿ ಕೋಟಿ ಮೌಲ್ಯದ ಮಾದಕ ದ್ರವ್ಯ ಧ್ವಂಸ: ಡ್ರಗ್ ಮಾಫಿಯಾಗೆ ಪೊಲೀಸರ ಖಡಕ್ ಸಂದೇಶ

0

ಬೀದರ್: ಡ್ರಗ್ ಮಾಫಿಯಾಗೆ ಬೀದರ್ ಪೊಲೀಸರು ಮತ್ತೊಮ್ಮೆ ಖಡಕ್ ಸಂದೇಶ ರವಾನಿಸಿದ್ದಾರೆ. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಾದ 22 ಪ್ರಕರಣಗಳಲ್ಲಿ ಜಪ್ತಿಯಾಗಿದ್ದ ₹9.41 ಕೋಟಿ ಮೌಲ್ಯದ ಮಾದಕ ದ್ರವ್ಯಗಳನ್ನು ನಿಯಮಾನುಸಾರ ಧ್ವಂಸಗೊಳಿಸಲಾಗಿದೆ.

ಭಾಲ್ಕಿ ತಾಲೂಕಿನ ಧನ್ನೂರು ಸಮೀಪದ ಜೈವಿಕ ತ್ಯಾಜ್ಯ ವಿಲೇವಾರಿ ಘಟಕದಲ್ಲಿ 997 ಕೆಜಿ ಗಾಂಜಾ, 51 ಸಾವಿರಕ್ಕೂ ಹೆಚ್ಚು ನಶೆ ಗುಳಿಗೆಗಳು ಮತ್ತು 743 ಮಾದಕ ಸಿರಪ್‌ಗಳನ್ನು ಜಿಲ್ಲಾ ಡ್ರಗ್ಸ್ ವಿಲೇವಾರಿ ಸಮಿತಿಯ ನಿಯಮಾವಳಿಯಂತೆ ನಾಶಪಡಿಸಲಾಯಿತು.

ಜಿಲ್ಲಾ ಎಸ್‌ಪಿ ಪ್ರದೀಪ್ ಗುಂಟಿ ನೇತೃತ್ವದಲ್ಲಿ ನಡೆದ ಈ ಪ್ರಕ್ರಿಯೆಯಲ್ಲಿ, ಮಾದಕ ವಸ್ತುಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಮುಂದುವರಿಸಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದರು. ಅಕ್ರಮ ಡ್ರಗ್ಸ್ ಮಾರಾಟ ಮತ್ತು ಸಾಗಣೆಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಸ್‌ಪಿ ಎಚ್ಚರಿಕೆ ನೀಡಿದರು.

ರಾಮಭಕ್ತರ ನಂಬಿಕೆಗೆ ಧಕ್ಕೆ ತಂದವರನ್ನು ಬಿಡುವುದಿಲ್ಲ: ಯೋಗಿ ಆದಿತ್ಯನಾಥ್ ಎಚ್ಚರಿಕೆ

0

ಲಕ್ನೋ: ಅಯೋಧ್ಯೆ ರಾಮಮಂದಿರದ ಕಾಣಿಕೆ ಹಣ ದುರುಪಯೋಗ ಪ್ರಕರಣದ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಠಿಣ ಎಚ್ಚರಿಕೆ ನೀಡಿದ್ದಾರೆ. ರಾಮಭಕ್ತರು ತಮ್ಮ ಭಕ್ತಿ ಮತ್ತು ನಂಬಿಕೆಯಿಂದ ಕಾಣಿಕೆ ನೀಡುತ್ತಾರೆ. ಆ ಹಣದಲ್ಲಿ ಅಕ್ರಮ ಎಸಗುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಡಿಯೋರಿಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ, ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚಿಸಲಾಗಿದ್ದು, ಈಗಾಗಲೇ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ಸನಾತನ ಧರ್ಮದ ಭಾವನೆಗಳಿಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಈ ವಿಚಾರವನ್ನು ರಾಜಕೀಯಗೊಳಿಸುವ ಪ್ರಯತ್ನಗಳ ವಿರುದ್ಧವೂ ಯೋಗಿ ಅಸಮಾಧಾನ ವ್ಯಕ್ತಪಡಿಸಿದರು. ರಾಮಮಂದಿರ ನಿರ್ಮಾಣವನ್ನು ಮೊದಲಿನಿಂದಲೂ ವಿರೋಧಿಸಿದ್ದವರೇ ಈಗ ಈ ವಿಷಯವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

“ರಾಮನೇ ಇಲ್ಲ ಎಂದು ಹೇಳಿದ್ದವರು, ದೇವಾಲಯದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ್ದವರು, ರಾಮಭಕ್ತರ ಮೇಲೆ ಗುಂಡು ಹಾರಿಸಿದ್ದವರು ಮತ್ತು ರಾಮನವಮಿ ವೇಳೆ ಗಲಭೆಗಳಿಗೆ ಕಾರಣರಾದವರೇ ಈಗ ಮತ್ತೆ ಈ ವಿಚಾರವನ್ನು ಎತ್ತುತ್ತಿದ್ದಾರೆ” ಎಂದು ಅವರು ವಾಗ್ದಾಳಿ ನಡೆಸಿದರು.

ಬಂಡೀಪುರ, ನಾಗರಹೊಳೆ ಜಂಗಲ್ ಸಫಾರಿಗೆ ಮತ್ತೆ ಗ್ರೀನ್ ಸಿಗ್ನಲ್: ರಾಜ್ಯ ಸರ್ಕಾರದಿಂದ ಪೂರ್ಣ ಪ್ರಮಾಣದಲ್ಲಿ ಪುನರಾರಂಭ

ಬೆಂಗಳೂರು: ತಜ್ಞರು ಹಾಗೂ ಅಧಿಕಾರಿಗಳ ತಾಂತ್ರಿಕ ಸಮಿತಿಯ ಶಿಫಾರಸಿನ ಮೇರೆಗೆ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಜಂಗಲ್ ಸಫಾರಿ (ಉದ್ಯಾನ ಪ್ರವಾಸ)ಯನ್ನು ಪೂರ್ಣ ಪ್ರಮಾಣದಲ್ಲಿ ಪುನರಾರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಕುರಿತು ತಾಂತ್ರಿಕ ಸಮಿತಿಯ ವರದಿಯನ್ನು ಸರ್ಕಾರ ಅಂಗೀಕರಿಸಿದ್ದು, ವೈಜ್ಞಾನಿಕ ಮೌಲ್ಯಮಾಪನದ ಆಧಾರದ ಮೇಲೆ ಪರಿಣಾಮಕಾರಿ ಸಾಗಣೆ ಸಾಮರ್ಥ್ಯ (Carrying Capacity) ಪರಿಶೀಲಿಸಿ ಜಂಗಲ್ ಸಫಾರಿ ಪುನರಾರಂಭಕ್ಕೆ ಹಸಿರು ನಿಶಾನೆ ನೀಡಲಾಗಿದೆ.

ಸಮಿತಿಯ ಶಿಫಾರಸಿನಂತೆ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ನಿಯಂತ್ರಿತ ರೀತಿಯಲ್ಲಿ ಜಂಗಲ್ ಸಫಾರಿ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಕರ್ನಾಟಕವು ಪರಿಸರ ಪ್ರವಾಸೋದ್ಯಮ ಕ್ಷೇತ್ರದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದ್ದು, ಸುಸ್ಥಿರ ಪ್ರವಾಸೋದ್ಯಮ ಮಾದರಿಯನ್ನು ಅನುಸರಿಸುತ್ತಿದೆ. ಜಂಗಲ್ ಸಫಾರಿ ಪುನರಾರಂಭದಿಂದ ಸ್ಥಳೀಯ ಜನರಿಗೆ ಉದ್ಯೋಗ ಹಾಗೂ ಜೀವನೋಪಾಯದ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗಲಿದ್ದು, ಸ್ಥಳೀಯ ಆರ್ಥಿಕತೆಯ ಬೆಳವಣಿಗೆಗೂ ಉತ್ತೇಜನ ದೊರೆಯಲಿದೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಪರಿಸರ ವ್ಯವಸ್ಥೆಯ ಸಮಗ್ರತೆಯನ್ನು ಕಾಪಾಡುವ ಜೊತೆಗೆ ವನ್ಯಜೀವಿ ಸಂರಕ್ಷಣೆ, ಸ್ಥಳೀಯ ಸಮುದಾಯಗಳ ಜೀವನೋಪಾಯ ಹಾಗೂ ಪ್ರವಾಸಿಗರಿಗೆ ಉತ್ತಮ ಅನುಭವ ಒದಗಿಸುವ ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.