ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ವೈದ್ಯಕೀಯ ಸಂಘ (ಐಎಂಎ) ಗದಗ ಘಟಕದ ಪದಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರನ್ನು ಭೇಟಿ ಮಾಡಿ, 2025-26ನೇ ಸಾಲಿನ ಡಿಜಿ ಮತ್ತು ಐಜಿಪಿ ಪ್ರಶಂಸಾ ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ಸನ್ಮಾನಿಸಿದರು. ಇದೇ ವೇಳೆ ಜುಲೈ 1ರಂದು ನಡೆಯಲಿರುವ ವೈದ್ಯರ ದಿನಾಚರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸುವಂತೆ ಆಹ್ವಾನಿಸಿದರು.
ಐಎಂಎ ಗದಗ ಅಧ್ಯಕ್ಷ ಡಾ. ಶ್ರೀಧರ್ ಕುರಡಗಿ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಡಾ. ಎಸ್.ಆರ್. ನಾಗನೂರ, ಖಜಾಂಚಿ ಡಾ. ಜಯರಾಜ್, ರೆಡ್‌ಕ್ರಾಸ್ ಅಧ್ಯಕ್ಷ ಡಾ. ಗೋಡ್‌ಬೋಲೆ ಹಾಗೂ ಉಪಾಧ್ಯಕ್ಷ ಡಾ. ಪ್ಯಾರಾಲಿ ನೂರಾನಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಡಾ. ಪ್ಯಾರಾಲಿ ನೂರಾನಿ, ಯುವ ಎಸ್‌ಪಿ ರೋಹನ್ ಜಗದೀಶ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಗದಗ ಜಿಲ್ಲೆಯ ಲಕ್ಕುಂಡಿ, ಕಿಮ್ಸ್, ಶಿಕ್ಷಣ ಕ್ಷೇತ್ರ ಹಾಗೂ ಹುಲಕೋಟಿಯ ಕಿಡ್ನಿ ಕಸಿ ಸೇರಿದಂತೆ ಜಿಲ್ಲೆಯ ವಿವಿಧ ಕ್ಷೇತ್ರಗಳ ಅಭಿವೃದ್ಧಿ ಕುರಿತು ಚರ್ಚಿಸಿದರು.
ಅಲ್ಲದೆ, ಗದಗ ಶಾಸಕ ಎಚ್.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ದೊರೆತು, ಅವರ ಸೇವೆ ಮತ್ತಷ್ಟು ವ್ಯಾಪಕವಾಗಿ ಜಿಲ್ಲೆಗೆ ಲಭಿಸಲಿ ಎಂದು ಆಶಯ ವ್ಯಕ್ತಪಡಿಸಿದರು.