Home Blog Page 118

‘ಆ ಕಣ್ಣುಗಳೇ ಸಾಕು…’: ಶಿವಣ್ಣನ ಸ್ಕ್ರೀನ್ ಪ್ರೆಸೆನ್ಸ್ ನೋಡಿ ಫಿದಾ ಆದ ಜಾನ್ಹವಿ ಕಪೂರ್!

‘ಪೆದ್ದಿ’ ಚಿತ್ರದ ಮೂಲಕ ಕನ್ನಡದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಜೊತೆ ತೆರೆ ಹಂಚಿಕೊಂಡಿರುವ ಬಾಲಿವುಡ್ ನಟಿ ಜಾನ್ಹವಿ ಕಪೂರ್, ಶಿವಣ್ಣನ ನಟನಾ ಶೈಲಿ ಹಾಗೂ ಕಣ್ಣಿನ ಎಕ್ಸ್‌ಪ್ರೆಶನ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರುದಲ್ಲಿ ನಡೆದ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಜಾನ್ಹವಿ, “ಶಿವರಾಜ್ ಕುಮಾರ್ ಸರ್ ಜೊತೆ ನನಗೆ ಒಂದು ಸೀನ್ ಮಾತ್ರ ಇತ್ತು. ಆದರೆ ಆ ಒಂದು ಸೀನ್ನಲ್ಲೇ ಅವರು ಎಷ್ಟು ಅದ್ಭುತ ನಟ ಅನ್ನೋದು ಗೊತ್ತಾಯ್ತು. ಅವರ ಕಣ್ಣುಗಳಲ್ಲೇ ಪವರ್ ಇದೆ. ಅವರು ಡೈಲಾಗ್ ಹೇಳೋದಕ್ಕಿಂತ ಕಣ್ಣಿನಿಂದಲೇ ಸೀನ್ ಹಿಡಿದುಕೊಳ್ಳುತ್ತಾರೆ” ಎಂದು ಹೇಳಿದ್ದಾರೆ.

ಇನ್ನೂ ಅವರ ಜೊತೆ ಹೆಚ್ಚು ನಟಿಸುವ ಅವಕಾಶ ಸಿಗಲಿಲ್ಲ ಎಂಬ ಬೇಸರವನ್ನೂ ವ್ಯಕ್ತಪಡಿಸಿದ ಜಾನ್ಹವಿ, “ಭವಿಷ್ಯದಲ್ಲಿ ಮತ್ತೆ ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಗಲಿ” ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಜಾನ್ಹವಿ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸಿದ್ದು ವಿಶೇಷವಾಗಿತ್ತು. ಅಭಿಮಾನಿಗಳ ಚಪ್ಪಾಳೆಗಳ ನಡುವೆ ಅವರು ಕನ್ನಡದಲ್ಲಿ ಮಾತು ಆರಂಭಿಸಿದ್ದು ಗಮನ ಸೆಳೆಯಿತು.

‘ಪೆದ್ದಿ’ ಸಿನಿಮಾದಲ್ಲಿ ರಾಮ್ ಚರಣ್ ನಾಯಕನಾಗಿ ನಟಿಸಿದ್ದು, ಶಿವರಾಜ್ ಕುಮಾರ್ ಗೌಡ ನಾಯ್ಡು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಗಪತಿ ಬಾಬು, ದಿವ್ಯೇಂದು ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದ್ದು, ಎ.ಆರ್ ರೆಹಮಾನ್ ಸಂಗೀತ ನೀಡಿದ್ದಾರೆ.

ಸೈಬರ್ ಖದೀಮರ ಬಲೆಗೆ ಬಿದ್ದ ಪದ್ಮಶ್ರೀ ವಿಜೇತ: ಮಧ್ಯರಾತ್ರಿ ಬಂದ ಮೆಸೇಜ್ʼನಿಂದ ಕ್ಷಣಾರ್ಧದಲ್ಲಿ ಹಣ ಮಾಯಾ

ಬೆಂಗಳೂರು: ಸೈಬರ್ ವಂಚಕರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ದೇಶದ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕೃತರನ್ನೂ ಬಿಡದ ಮಟ್ಟಿಗೆ ವಂಚನೆ ಜಾಲ ವಿಸ್ತರಿಸಿದೆ. ಖ್ಯಾತ ಪ್ಯಾರಾ ಅಥ್ಲೀಟ್ ಹಾಗೂ ಪದ್ಮಶ್ರೀ ಪುರಸ್ಕೃತ ಕೆ.ವೈ. ವೆಂಕಟೇಶ್ ಅವರ ಬ್ಯಾಂಕ್ ಖಾತೆಯಿಂದ ಸುಮಾರು ₹90 ಸಾವಿರ ಹಣವನ್ನು ಸೈಬರ್ ಖದೀಮರು ದೋಚಿರುವ ಘಟನೆ ಬೆಳಕಿಗೆ ಬಂದಿದೆ.

ಹುಟ್ಟಿನಿಂದಲೇ ಅಕೊಂಡ್ರೋಪ್ಲಾಸಿಯಾ ಸಮಸ್ಯೆಯಿಂದ ಬಳಲುತ್ತಿದ್ದರೂ ಅದನ್ನು ಸವಾಲಾಗಿ ಸ್ವೀಕರಿಸಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಕೆ.ವೈ. ವೆಂಕಟೇಶ್, 50ಕ್ಕೂ ಹೆಚ್ಚು ಕ್ರೀಡಾಕೂಟಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರವು 2021ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.

ಇದೀಗ ಅವರೇ ಸೈಬರ್ ವಂಚಕರ ಬಲೆಗೆ ಬಿದ್ದಿದ್ದಾರೆ. ಕೆಲ ದಿನಗಳ ಹಿಂದೆ ಮಧ್ಯರಾತ್ರಿ ವೇಳೆ ಅವರ ಮೊಬೈಲ್ ಸಂಖ್ಯೆಗೆ ನಿರಂತರವಾಗಿ ಒಟಿಪಿ ಸಂದೇಶಗಳು ಬರುತ್ತಿದ್ದವು. ಅಸಮಯದಲ್ಲಿ ಸತತವಾಗಿ ಒಟಿಪಿ ಬರುತ್ತಿರುವುದರಿಂದ ಅನುಮಾನಗೊಂಡ ವೆಂಕಟೇಶ್, ಮರುದಿನ ಬೆಳಗ್ಗೆ ಬ್ಯಾಂಕ್ ಶಾಖೆಗೆ ತೆರಳಿ ಖಾತೆ ಪರಿಶೀಲಿಸಿದ್ದಾರೆ.

ಈ ವೇಳೆ ಹಂತ ಹಂತವಾಗಿ ಖಾತೆಯಿಂದ ಒಟ್ಟು ₹90 ಸಾವಿರ ಹಣ ಕಡಿತವಾಗಿರುವುದು ಬೆಳಕಿಗೆ ಬಂದಿದೆ. ವಿಶೇಷವೆಂದರೆ, ಯಾವುದೇ ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳದಿದ್ದರೂ ಸಹ ಸೈಬರ್ ವಂಚಕರು ತಾಂತ್ರಿಕ ತಂತ್ರಗಳನ್ನು ಬಳಸಿ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಕೆ.ವೈ. ವೆಂಕಟೇಶ್ ಅವರು ಬೆಂಗಳೂರಿನ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಂಚಕರ ಬ್ಯಾಂಕ್ ಖಾತೆ ಹಾಗೂ ಐಪಿ ಅಡ್ರೆಸ್ ಪತ್ತೆಹಚ್ಚಲು ಸೈಬರ್ ಕ್ರೈಂ ವಿಭಾಗದ ನೆರವಿನೊಂದಿಗೆ ತನಿಖೆ ಮುಂದುವರಿಸಿದ್ದಾರೆ.

ನಾಯಿ ಕಚ್ಚಿದ್ದನ್ನು ನೆಗ್ಲೆಕ್ಟ್‌ ಮಾಡಿದ ಯುವಕ: ಎರಡು ತಿಂಗಳ ಬಳಿಕ ದಾರುಣ ಸಾವು!

0

ಬಾಗಲಕೋಟೆ: ಒಂದು ಸಣ್ಣ ನಿರ್ಲಕ್ಷ್ಯವೇ ಯುವಕನ ಜೀವ ಕಸಿದುಕೊಂಡ ದಾರುಣ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಜಾತ್ರೆಯ ವೇಳೆ ಹುಚ್ಚು ನಾಯಿ ಕಚ್ಚಿದ್ದರೂ ರೇಬಿಸ್ ಲಸಿಕೆ ಪಡೆಯದೆ ಕಾಲಹರಣ ಮಾಡಿದ 22 ವರ್ಷದ ಯುವಕ ಇದೀಗ ರೇಬಿಸ್ ಸೋಂಕಿಗೆ ಬಲಿಯಾಗಿದ್ದಾನೆ.

ವಿಜಯಪುರ ಜಿಲ್ಲೆಯ ಗೋಲಸಂಗಿ ಗ್ರಾಮದ ಪ್ರದೀಪ್ ಚಂದ್ರಶೇಖರ ಹಳೇರೊಳ್ಳಿ ಕಳೆದ ಮಾರ್ಚ್‌ನಲ್ಲಿ ಮನ್ನಿಕೇರಿ ಚಂದ್ರಾದೇವಿ ಜಾತ್ರೆಗೆ ತೆರಳಿದ್ದ ವೇಳೆ ನಾಯಿಯ ಕಚ್ಚಿಗೆ ಒಳಗಾಗಿದ್ದ. ಆದರೆ ಗಾಯ ಗಂಭೀರವಲ್ಲ ಎಂದುಕೊಂಡು ಚಿಕಿತ್ಸೆ ಹಾಗೂ ರೇಬಿಸ್ ನಿರೋಧಕ ಲಸಿಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಕಳೆದ ಒಂದು ವಾರದಿಂದ ಆತನ ಆರೋಗ್ಯದಲ್ಲಿ ತೀವ್ರ ಏರುಪೇರು ಕಾಣಿಸಿಕೊಂಡಿದ್ದು, ರೇಬಿಸ್ ಲಕ್ಷಣಗಳು ದೃಢಪಟ್ಟ ಬಳಿಕ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ಆದರೆ ಸೋಂಕು ದೇಹದಾದ್ಯಂತ ವ್ಯಾಪಿಸಿದ್ದರಿಂದ ವೈದ್ಯಕೀಯ ಚಿಕಿತ್ಸೆ ಫಲಕಾರಿಯಾಗಲಿಲ್ಲ.

ತಡರಾತ್ರಿ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಯುವಕ ಮೃತಪಟ್ಟಿದ್ದಾನೆ. “ನಾಯಿ ಕಚ್ಚಿದ ಕೂಡಲೇ ರೇಬಿಸ್ ಲಸಿಕೆ ಪಡೆಯಲೇಬೇಕು, ಇಲ್ಲದಿದ್ದರೆ ಜೀವಕ್ಕೆ ಅಪಾಯ ಖಚಿತ” ಎಂಬ ಆರೋಗ್ಯ ಇಲಾಖೆಯ ಎಚ್ಚರಿಕೆಗೆ ಈ ಘಟನೆ ಮತ್ತೊಂದು ಗಂಭೀರ ಉದಾಹರಣೆಯಾಗಿದೆ.

ಆಗ್ರಾ-ಲಕ್ನೋ ಎಕ್ಸ್​ಪ್ರೆಸ್​ವೇಯಲ್ಲಿ ಬಸ್ ಪಲ್ಟಿ: ಆರು ಮಂದಿ ಸಾವು, ಹಲವರಿಗೆ ಗಾಯ

ಉನ್ನಾವೋ: ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ದೆಹಲಿಯಿಂದ ಬಿಹಾರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಕನಿಷ್ಠ 6 ಮಂದಿ ಮೃತಪಟ್ಟಿದ್ದಾರೆ. 10ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ.

ಔರಾಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬಸ್ ಸಂಪೂರ್ಣ ಜಖಂಗೊಂಡಿದ್ದು, ಸ್ಥಳದಲ್ಲೇ ಹಲವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಮಾಹಿತಿ ತಿಳಿದ ತಕ್ಷಣವೇ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.

ಮೃತರಲ್ಲಿ ಸಬ್ ಇನ್ಸ್‌ಪೆಕ್ಟರ್ ರಾಮಚಂದ್ರ ಮತ್ತು ಕೈದಿ ಛತ್ರಪಾಲ್ ಕೂಡ ಸೇರಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಇಬ್ಬರೂ ಸಿವಾನ್‌ನಿಂದ ದೆಹಲಿಗೆ ತೆರಳಿ ಹಿಂತಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ತಕ್ಷಣ ಲಕ್ನೋದ ಟ್ರಾಮಾ ಸೆಂಟರ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ವೇಗವಾಗಿ ಚಲಿಸುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಪಲ್ಟಿಯಾಗಿದೆ ಎನ್ನಲಾಗಿದೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

16ನೇ ಬಾರಿ ಜೈಲಿನಿಂದ ಹೊರಗೆ ಬಂದ ರಾಮ್ ರಹೀಮ್: ಮತ್ತೆ 30 ದಿನ ಪೆರೋಲ್ ನೀಡಿದ ಸರ್ಕಾರ!

ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಮತ್ತೊಮ್ಮೆ 30 ದಿನಗಳ ಪೆರೋಲ್ ಮಂಜೂರು ಮಾಡಲಾಗಿದೆ. ಸಾಧ್ವಿಗಳ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಶಿಕ್ಷೆ ಅನುಭವಿಸುತ್ತಿರುವ ರಾಮ್ ರಹೀಮ್ ಸೋಮವಾರ ಬೆಳಗ್ಗೆ ಬಿಗಿ ಭದ್ರತೆಯ ನಡುವೆ ರೋಹ್ಟಕ್‌ನ ಸುನಾರಿಯಾ ಜೈಲಿನಿಂದ ಹೊರಬಂದು ಸಿರ್ಸಾ ಆಶ್ರಮಕ್ಕೆ ತೆರಳಿದ್ದಾರೆ.

ಈ ವರ್ಷ ಇದು ಅವರ ಎರಡನೇ ಪೆರೋಲ್ ಆಗಿದ್ದು, ಶಿಕ್ಷಾ ಅವಧಿಯಲ್ಲಿ ಒಟ್ಟು 16ನೇ ಬಾರಿ ಜೈಲು ಹೊರಗೆ ಬಂದಿದ್ದಾರೆ. ಅಧಿಕೃತ ಅಂಕಿಅಂಶಗಳ ಪ್ರಕಾರ, 3,193 ದಿನಗಳ ಶಿಕ್ಷಾ ಅವಧಿಯಲ್ಲಿ ರಾಮ್ ರಹೀಮ್ ಈಗಾಗಲೇ 406 ದಿನಗಳನ್ನು ಜೈಲು ಹೊರಗೇ ಕಳೆದಿದ್ದಾರೆ ಎಂಬ ಮಾಹಿತಿ ಭಾರೀ ಚರ್ಚೆಗೆ ಕಾರಣವಾಗಿದೆ.

2017ರಲ್ಲಿ ಇಬ್ಬರು ಮಹಿಳಾ ಶಿಷ್ಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ವಿಶೇಷ ಸಿಬಿಐ ನ್ಯಾಯಾಲಯ ರಾಮ್ ರಹೀಮ್‌ಗೆ 20 ವರ್ಷಗಳ ಶಿಕ್ಷೆ ವಿಧಿಸಿತ್ತು. ಬಳಿಕ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಹತ್ಯೆ ಪ್ರಕರಣ ಮತ್ತು ಡೇರಾ ಮ್ಯಾನೇಜರ್ ರಂಜಿತ್ ಸಿಂಗ್ ಕೊಲೆ ಸಂಚು ಪ್ರಕರಣದಲ್ಲೂ ಆತ ದೋಷಿ ಎಂದು ಘೋಷಿಸಲ್ಪಟ್ಟಿದ್ದ.

ಆದರೆ ನಂತರ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಕೆಲ ಪ್ರಕರಣಗಳಲ್ಲಿ ರಾಮ್ ರಹೀಮ್‌ಗೆ ರಿಲೀಫ್ ನೀಡಿತ್ತು. ಇದೀಗ ಹರಿಯಾಣ ಉತ್ತಮ ನಡವಳಿಕೆ ಕೈದಿಗಳ ತಾತ್ಕಾಲಿಕ ಬಿಡುಗಡೆ ಕಾಯ್ದೆಯಡಿ ಮತ್ತೆ ಪೆರೋಲ್ ಸಿಕ್ಕಿದ್ದು, ಈ ನಿರ್ಧಾರ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಅಕ್ರಮ ಸಂಬಂಧ ಶಂಕೆ; ಗಾಢ ನಿದ್ದೆಯಲ್ಲಿದ್ದ ಪತಿಯ ಖಾಸಗಿ ಅಂಗ ಕತ್ತರಿಸಿದ ಪತ್ನಿ!

ಛತ್ತೀಸ್‌ಗಢದ: ಬಿಲಾಸ್‌ಪುರದಲ್ಲಿ ಕೌಟುಂಬಿಕ ಕಲಹ ಭೀಕರ ತಿರುವು ಪಡೆದುಕೊಂಡಿದ್ದು, ವಿವಾಹೇತರ ಸಂಬಂಧದ ಅನುಮಾನ ಹಿನ್ನೆಲೆ ಪತ್ನಿಯೊಬ್ಬಳು ಗಾಢ ನಿದ್ದೆಯಲ್ಲಿದ್ದ ಪತಿಯ ಖಾಸಗಿ ಅಂಗವನ್ನು ಕತ್ತಿಯಿಂದ ದಾಳಿ ನಡೆಸಿದ ಆಘಾತಕಾರಿ ಘಟನೆ ನಡೆದಿದೆ. ದಾಳಿಯಲ್ಲಿ ಪತಿ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಗೊಂಡ ವ್ಯಕ್ತಿಯನ್ನು ರಾಜೇಶ್ ಕೌಶಿಕ್ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಮೇಸ್ತ್ರಿಯಾಗಿರುವ ರಾಜೇಶ್ ಮೇಲೆ ಅವರ ಪತ್ನಿ ದ್ರೌಪದಿ ಬಾಯಿ ದಾಳಿ ನಡೆಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ದಂಪತಿಯ ನಡುವೆ ಕಳೆದ ಕೆಲವು ತಿಂಗಳಿಂದ ನಿರಂತರ ಕೌಟುಂಬಿಕ ಜಗಳಗಳು ನಡೆಯುತ್ತಿದ್ದು, ರಾಜೇಶ್‌ಗೆ ಬೇರೆ ಮಹಿಳೆಯೊಂದಿಗೆ ಸಂಬಂಧವಿದೆ ಎಂಬ ಅನುಮಾನ ದ್ರೌಪದಿಗೆ ಇತ್ತು ಎನ್ನಲಾಗಿದೆ.

ಘಟನೆ ನಡೆದ ರಾತ್ರಿ ಇಬ್ಬರೂ ಊಟ ಮಾಡಿ ಮಲಗಿದ್ದರು. ಮಧ್ಯರಾತ್ರಿ ರಾಜೇಶ್ ಗಾಢ ನಿದ್ದೆಯಲ್ಲಿದ್ದ ವೇಳೆ ದ್ರೌಪದಿ ಕತ್ತಿಯಿಂದ ದಾಳಿ ನಡೆಸಿದ್ದಾಳೆ. ಗಂಭೀರವಾಗಿ ಗಾಯಗೊಂಡ ರಾಜೇಶ್ ಕಿರುಚುತ್ತಾ ಹೊರಗೆ ಓಡಿಬಂದಿದ್ದು, ಅವರ ಮಗ ಮತ್ತು ಸಂಬಂಧಿಕರು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಸದ್ಯ ರಾಜೇಶ್ ಅವರನ್ನು ಸ್ಥಳೀಯ ಸಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಬೀದರ್ ಪಶು ವಿವಿ ಹಗರಣ ಸಾಬೀತು: ಮಾಜಿ ಉಪಕುಲಪತಿ ಸೇರಿ 6 ಮಂದಿ ಲೋಕಾಯುಕ್ತ ಬಲೆಗೆ

ಬೀದರ್: ರಾಜ್ಯದಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಬೀದರ್ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಬಹುಕೋಟಿ ಹಗರಣ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಸುಮಾರು 45 ಕೋಟಿ ರೂಪಾಯಿ ಅವ್ಯವಹಾರ ನಡೆದಿರುವುದು ತನಿಖೆಯಲ್ಲಿ ಸಾಬೀತಾಗಿದ್ದು, ಲೋಕಾಯುಕ್ತ ಪೊಲೀಸರು ಮಾಜಿ ಉಪಕುಲಪತಿ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರಲ್ಲಿ ಪಶು ವಿವಿಯ ಮಾಜಿ ಉಪಕುಲಪತಿ ಪ್ರೊ. ಹೆಚ್.ಡಿ. ನಾರಾಯಣಸ್ವಾಮಿ, 2017-18ನೇ ಸಾಲಿನ ಹಣಕಾಸು ನಿಯಂತ್ರಣಾಧಿಕಾರಿಯಾಗಿದ್ದ ಕೆ.ಎಲ್. ಸುರೇಶ್, ಮೃತ್ಯುಂಜಯ ಹಿರೇಮಠ, ಬೊಪಣ್ಣ, ಮಂಜುನಾಥ ಹಾಗೂ ರಾಮಗೊಂಡ ಸೇರಿದ್ದಾರೆ.

ಏನಿದು ಹಗರಣ?

2017-18ರ ಅವಧಿಯಲ್ಲಿ ವಿಶ್ವವಿದ್ಯಾಲಯದ ವಿವಿಧ ಸಾಮಗ್ರಿಗಳ ಖರೀದಿಯ ಹೆಸರಿನಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ 45 ಕೋಟಿ ರೂಪಾಯಿಗೂ ಹೆಚ್ಚು ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪ ಕೇಳಿಬಂದಿತ್ತು. ಯಾವುದೇ ವಸ್ತುಗಳನ್ನು ಖರೀದಿಸದೇ ಖಾಸಗಿ ಎಂಟರ್‌ಪ್ರೈಸಸ್‌ಗಳ ಜೊತೆಗೂಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ವರ್ಗಾವಣೆ ಮಾಡಲಾಗಿದೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಈ ಸಂಬಂಧ 2021ರಲ್ಲಿ ಲೋಕಾಯುಕ್ತ ಪೊಲೀಸರು ಮೊದಲ ಹಂತದ ದಾಳಿ ನಡೆಸಿದ್ದರು. ಬಳಿಕ ತನಿಖೆ ತೀವ್ರಗೊಳಿಸಿದ ಅಧಿಕಾರಿಗಳು 2025ರ ಸೆಪ್ಟೆಂಬರ್ 10ರಂದು ರಾಜ್ಯದ 25ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.

ತನಿಖೆ ವೇಳೆ ವಿಶ್ವವಿದ್ಯಾಲಯದ ಉನ್ನತಾಧಿಕಾರಿಗಳು, ಸಿಬ್ಬಂದಿ ಹಾಗೂ ಖಾಸಗಿ ಸಂಸ್ಥೆಗಳ ಮಾಲೀಕರು ಸೇರಿ ಸಂಚು ರೂಪಿಸಿ ಅವ್ಯವಹಾರ ನಡೆಸಿರುವುದು ದೃಢಪಟ್ಟಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಬೀದರ್ ಜಿಲ್ಲಾ ಸತ್ರ ನ್ಯಾಯಾಲಯ ಬಂಧನ ವಾರಂಟ್ ಜಾರಿಗೊಳಿಸಿತ್ತು. ಅದರ ಬೆನ್ನಲ್ಲೇ ಲೋಕಾಯುಕ್ತ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆ ಇದೆ. ಲೋಕಾಯುಕ್ತ ಎಡಿಜಿಪಿ ಮನೀಷ್ ಕರಬಿಕರ್, ಐಜಿಪಿ ಡಾ. ಎ.ಎಸ್. ಸುಬ್ರಮಣ್ಯೇಶ್ವರ ಹಾಗೂ ಎಸ್‌ಪಿ ಸಿ & ಟಿ ಬದ್ರಿನಾಥ್ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆದಿದ್ದು, ಎಸ್‌ಪಿ ಸಿದ್ದರಾಜು ನೇತೃತ್ವದಲ್ಲಿ ಬೀದರ್ ಲೋಕಾಯುಕ್ತ ಡಿಎಸ್ಪಿ ಹಣಮಂತರಾಯ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.

ಮಹಿಳೆಯರು ರಾತ್ರಿ ಕಾಫಿ ಕುಡಿದರೆ ಏನಾಗುತ್ತದೆ? ಸಂಶೋಧನೆಯಲ್ಲಿ ಹೊರಬಿದ್ದ ಅಚ್ಚರಿಯ ಮಾಹಿತಿ

ಅನೇಕರು ಕಚೇರಿ ಕೆಲಸ, ಅಧ್ಯಯನ ಅಥವಾ ರಾತ್ರಿ ಜಾಗರಣೆಯ ವೇಳೆ ಕಾಫಿ ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ಕಾಫಿಯಲ್ಲಿರುವ ಕೆಫೀನ್ ಆಯಾಸವನ್ನು ಕಡಿಮೆ ಮಾಡಿ ದೇಹಕ್ಕೆ ಚೈತನ್ಯ ನೀಡುತ್ತದೆ ಎನ್ನುವುದು ಸಾಮಾನ್ಯ ನಂಬಿಕೆ. ಆದರೆ ಇತ್ತೀಚಿನ ಅಧ್ಯಯನವೊಂದು ರಾತ್ರಿಯಲ್ಲಿ ಕಾಫಿ ಅಥವಾ ಕೆಫೀನ್ ಆಧಾರಿತ ಪಾನೀಯಗಳನ್ನು ಸೇವಿಸುವುದರಿಂದ ನಿದ್ರಾಹೀನತೆ ಮಾತ್ರವಲ್ಲದೆ, ಮಾನಸಿಕ ವರ್ತನೆಯಲ್ಲಿ ಅಪಾಯಕಾರಿ ಬದಲಾವಣೆಗಳೂ ಉಂಟಾಗಬಹುದು ಎಂದು ಎಚ್ಚರಿಸಿದೆ.

ಎಲ್ ಪಾಸೊದಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದ ಪ್ರಕಾರ, ರಾತ್ರಿ ವೇಳೆಯಲ್ಲಿ ಕೆಫೀನ್ ಸೇವಿಸಿದಾಗ ಮೆದುಳಿನ ನಿಯಂತ್ರಣ ಸಾಮರ್ಥ್ಯ ಕುಂಠಿತವಾಗುತ್ತದೆ. ಇದರ ಪರಿಣಾಮವಾಗಿ ವ್ಯಕ್ತಿಗಳು ತಾರ್ಕಿಕ ಯೋಚನೆ ಇಲ್ಲದೆ ಹಠಾತ್ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಅನಗತ್ಯ ಅಪಾಯಗಳಿಗೆ ಮುಂದಾಗುವುದು ಸೇರಿದಂತೆ ನಕಾರಾತ್ಮಕ ವರ್ತನೆ ತೋರಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

ಜರ್ನಲ್ ಐಸೈನ್ಸ್‌ ಅಧ್ಯಯನದಲ್ಲಿ ಮತ್ತೊಂದು ಮಹತ್ವದ ಅಂಶವೂ ಬೆಳಕಿಗೆ ಬಂದಿದೆ. ಹಗಲಿನಲ್ಲಿ ಕೆಫೀನ್ ಸೇವಿಸಿದಾಗ ಇದೇ ರೀತಿಯ ವರ್ತನಾ ಬದಲಾವಣೆಗಳು ಕಂಡುಬಂದಿಲ್ಲ. ಅಂದರೆ, ಕೆಫೀನ್ ಸೇವಿಸುವ ಸಮಯವು ಮೆದುಳಿನ ಕಾರ್ಯವೈಖರಿ ಮತ್ತು ನಿರ್ಧಾರ ಸಾಮರ್ಥ್ಯದ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಇದಲ್ಲದೆ, ಪುರುಷರಿಗಿಂತ ಮಹಿಳೆಯರಲ್ಲಿ ಈ ಪರಿಣಾಮ ಹೆಚ್ಚು ಕಂಡುಬಂದಿದೆ ಎಂದು ಅಧ್ಯಯನ ತಿಳಿಸಿದೆ. ಮಹಿಳೆಯರ ದೇಹದಲ್ಲಿನ ಹಾರ್ಮೋನ್ ವ್ಯವಸ್ಥೆ ಮತ್ತು ಚಯಾಪಚಯ ಕ್ರಿಯೆಗಳು ಕೆಫೀನ್‌ಗೆ ವಿಭಿನ್ನವಾಗಿ ಪ್ರತಿಕ್ರಿಯಿಸುವುದರಿಂದ ಕಿರಿಕಿರಿ, ಆತಂಕ ಮತ್ತು ಭಾವನಾತ್ಮಕ ಅಸ್ಥಿರತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ವಿಜ್ಞಾನಿಗಳ ಪ್ರಕಾರ, ಸಾಮಾನ್ಯವಾಗಿ ದೇಹ ದಣಿದಾಗ ಅಡೆನೊಸಿನ್ ಎಂಬ ರಾಸಾಯನಿಕ ಮೆದುಳಿನಲ್ಲಿ ಬಿಡುಗಡೆಯಾಗಿ ನಿದ್ರೆಗೆ ಸಹಕಾರ ನೀಡುತ್ತದೆ. ಆದರೆ ಕೆಫೀನ್ ಈ ಪ್ರಕ್ರಿಯೆಯನ್ನು ತಡೆದು ಮೆದುಳನ್ನು ಅತಿಯಾಗಿ ಚುರುಕುಗೊಳಿಸುತ್ತದೆ. ಇದರಿಂದ ರಾತ್ರಿ ವೇಳೆ ಮೆದುಳಿನ ಸಮತೋಲನ ಹದಗೆಟ್ಟು ತೀರ್ಪು ಸಾಮರ್ಥ್ಯ ಮತ್ತು ಭಾವನಾತ್ಮಕ ನಿಯಂತ್ರಣದ ಮೇಲೆ ಪರಿಣಾಮ ಬೀರುತ್ತದೆ.

ಇದರಿಂದ ಮಧ್ಯರಾತ್ರಿ ಅನಗತ್ಯ ಆನ್‌ಲೈನ್ ಖರೀದಿ, ಅಜಾಗರೂಕ ಚಾಲನೆ, ಅತಿವೇಗದಂತಹ ಅಪಾಯಕಾರಿ ವರ್ತನೆಗಳು ಸಂಭವಿಸುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಆರೋಗ್ಯ ತಜ್ಞರ ಪ್ರಕಾರ, ಮಲಗುವ ಮೊದಲು ಕನಿಷ್ಠ ಆರು ಗಂಟೆಗಳ ಕಾಲ ಕಾಫಿ, ಟೀ ಮತ್ತು ಎನರ್ಜಿ ಡ್ರಿಂಕ್ಸ್ ಸೇವನೆ ತಪ್ಪಿಸುವುದು ಉತ್ತಮ. ಇಲ್ಲವಾದರೆ ನಿದ್ರಾಹೀನತೆ, ಆಯಾಸ, ಆತಂಕ ಮತ್ತು ಮಾನಸಿಕ ಒತ್ತಡದ ವಿಷವರ್ತುಲಕ್ಕೆ ಒಳಗಾಗುವ ಅಪಾಯ ಹೆಚ್ಚುತ್ತದೆ ಎಂದು ತಿಳಿಸಿದ್ದಾರೆ.

ತಜ್ಞರು ಹೇಳುವಂತೆ, ಕಾಫಿ ಆರೋಗ್ಯಕರ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವ ಉತ್ತಮ ಪಾನೀಯವಾಗಿದ್ದರೂ, ಅದನ್ನು ಸರಿಯಾದ ಸಮಯದಲ್ಲಿ ಸೇವಿಸುವುದು ಅತ್ಯಂತ ಮುಖ್ಯ. ರಾತ್ರಿ ವೇಳೆಯಲ್ಲಿ ಕಾಫಿ ಸೇವನೆ ಕಡಿಮೆ ಮಾಡಿ ಉತ್ತಮ ನಿದ್ರೆಗೆ ಆದ್ಯತೆ ನೀಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.

ಕಾರ್‌ಗೆ ಬೈಕ್ ಟಚ್ ಮಾಡಿ ರೌಡಿಸಂ.. ಕಾರ್ ಚಾಲಕನಿಗೆ ಯುವತಿಯಿಂದ ಅಶ್ಲೀಲ ಬೈಗುಳ!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಸ್ತೆ ರಂಪಾಟದ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ಕಾರ್‌ಗೆ ಬೈಕ್ ಟಚ್ ಆದ ವಿಚಾರಕ್ಕೆ ಯುವತಿಯೊಬ್ಬಳು ಕಾರ್ ಚಾಲಕನಿಗೆ ನಡುರಸ್ತೆಯಲ್ಲೇ ಅವಾಚ್ಯ ಪದಗಳಿಂದ ನಿಂದಿಸಿರುವ ಘಟನೆ ನಡೆದಿದೆ.

ನಗರದ 8ನೇ ಮೈಲಿ ರಸ್ತೆಯಲ್ಲಿ ನಿನ್ನೆ ಈ ಘಟನೆ ನಡೆದಿದ್ದು, KA 06 HP 1149 ಸಂಖ್ಯೆಯ ಬೈಕ್‌ನಲ್ಲಿ ಬಂದಿದ್ದ ಯುವತಿ ಎಡಭಾಗಕ್ಕೆ ಟರ್ನ್ ಮಾಡುವ ವೇಳೆ ಕಾರ್‌ಗೆ ಟಚ್ ಮಾಡಿದ್ದಾರೆ ಎನ್ನಲಾಗಿದೆ. ಇಂಡಿಕೇಟರ್ ಹಾಕದೇ ಏಕಾಏಕಿ ಟರ್ನ್ ಮಾಡಿದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.

ಈ ಬಗ್ಗೆ ಪ್ರಶ್ನೆ ಮಾಡಿದ ಕಾರ್ ಚಾಲಕನಿಗೆ ಯುವತಿ ಆಕ್ರೋಶ ವ್ಯಕ್ತಪಡಿಸಿ ಅಶ್ಲೀಲ ಹಾಗೂ ಅವಾಚ್ಯ ಪದಗಳಿಂದ ಬೈದಿದ್ದಾರೆ. ನಡು ರಸ್ತೆಯಲ್ಲೇ ಕೆಟ್ಟ ಪದಗಳನ್ನು ಬಳಸಿ ಗದ್ದಲ ಸೃಷ್ಟಿಸಿದ ದೃಶ್ಯಗಳು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿವೆ ಎನ್ನಲಾಗಿದೆ.

ಇನ್ನೂ, ಘಟನೆ ವೇಳೆ ಯುವತಿ ಹೆಲ್ಮೆಟ್ ಧರಿಸದೇ ಸಂಚಾರ ನಿಯಮ ಉಲ್ಲಂಘಿಸಿರುವುದೂ ಕಂಡುಬಂದಿದೆ. ಘಟನೆ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದೆ.

ಕುಡಿದ ಅಮಲಿನ ಗಲಾಟೆ ಕೊಲೆಯಲ್ಲಿ ಅಂತ್ಯ; ದೊಣ್ಣೆ ಹೊಡೆತಕ್ಕೆ ವ್ಯಕ್ತಿ ಸಾವು

ಬೆಂಗಳೂರು: ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ವೈಟ್‌ಫೀಲ್ಡ್ ರಸ್ತೆ ಕುಂದಲಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.

ಮೃತ ವ್ಯಕ್ತಿಯನ್ನು ಮೆಹಬೂಬ್ ಬಾಷಾ (59) ಎಂದು ಗುರುತಿಸಲಾಗಿದ್ದು, ಸುಂದರಮೂರ್ತಿ ಎಂಬಾತ ಕೊಲೆ ಕೃತ್ಯ ಎಸಗಿರುವ ಆರೋಪ ಕೇಳಿಬಂದಿದೆ.

ಮೊನ್ನೆ ಸಂಜೆ ಮೆಹಬೂಬ್ ಬಾಷಾ ಮದ್ಯ ಸೇವಿಸಿ ಮನೆ ಸಮೀಪ ಬಿದ್ದಿದ್ದರು ಎನ್ನಲಾಗಿತ್ತು. ಆರಂಭದಲ್ಲಿ ಇದು ಸಾಮಾನ್ಯ ಅಪಘಾತ ಅಥವಾ ಅಸ್ವಾಭಾವಿಕ ಸಾವು ಎಂದು ಶಂಕಿಸಲಾಗಿತ್ತು. ಆದರೆ ತಲೆಗೆ ಗಂಭೀರ ಗಾಯಗಳಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದರು.

ಮರಣೋತ್ತರ ಪರೀಕ್ಷೆ ಹಾಗೂ ಸ್ಥಳೀಯರ ವಿಚಾರಣೆ ವೇಳೆ ಇದು ಕೊಲೆ ಪ್ರಕರಣ ಎಂಬುದು ಬಹಿರಂಗವಾಗಿದೆ. ಇಬ್ಬರು ವ್ಯಕ್ತಿಗಳ ನಡುವೆ ನಡೆದ ಗಲಾಟೆ ವೇಳೆ ಆರೋಪಿ ಸುಂದರಮೂರ್ತಿ, ಮೆಹಬೂಬ್ ಬಾಷಾ ಅವರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಮೆಹಬೂಬ್ ಬಾಷಾ ಮೃತಪಟ್ಟಿದ್ದಾರೆ. ಆರಂಭದಲ್ಲಿ ದಾಖಲಾಗಿದ್ದ ಯುಡಿಆರ್ ಪ್ರಕರಣವನ್ನು ಇದೀಗ ಕೊಲೆ ಪ್ರಕರಣವಾಗಿ ಪರಿವರ್ತಿಸಲಾಗಿದೆ.

ಈ ಸಂಬಂಧ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ಸುಂದರಮೂರ್ತಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

error: Content is protected !!