Home Blog Page 12

ಜಕ್ಕಲಿಯಲ್ಲಿ ಆ.14ರಂದು ಮಧ್ಯರಾತ್ರಿ ಧ್ವಜಾರೋಹಣ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಮೀಪದ ಜಕ್ಕಲಿ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಯುವಸೇವಾ ಸಂಘದ ವತಿಯಿಂದ ಆ.14ರಂದು ಮಧ್ಯರಾತ್ರಿ 12 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಮಿಥುನ್ ಗಾಣಿಗೇರ ತಿಳಿಸಿದರು.

ನರೇಗಲ್ಲ ಹಿರೇಮಠದ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕೊಪ್ಪಳ ಜಿಲ್ಲೆಯ ಕುಣಿಕೇರಿ ಗ್ರಾಮದ ಸಮಾಜಸೇವಕಿ ಹಾಗೂ ದಾನಿ ಹುಚ್ಚಮ್ಮ ಚೌದ್ರಿ ಪಾಲ್ಗೊಳ್ಳಲಿದ್ದಾರೆ. ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರಿ ಶಾಲೆ ನಿರ್ಮಿಸಲು ತಮ್ಮ ಎರಡು ಎಕರೆ ಜಮೀನು ದಾನ ಮಾಡಿರುವ ಅವರ ನಿಸ್ವಾರ್ಥ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಆಹ್ವಾನಿಸಲಾಗಿದೆ ಎಂದರು.

ಹುಚ್ಚಮ್ಮ ಚೌದ್ರಿ ಅವರು ತಮ್ಮೂರಿನ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು ಎಂಬ ಆಶಯದಿಂದ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕೋಟ್ಯಂತರ ರೂಪಾಯಿ ಮೌಲ್ಯದ ಎರಡು ಎಕರೆ ಜಮೀನನ್ನು ಸರ್ಕಾರಿ ಶಾಲೆ ನಿರ್ಮಾಣಕ್ಕೆ ನೀಡಿದ್ದಾರೆ. ಹಲವು ವರ್ಷ ಇದೇ ಶಾಲೆಯಲ್ಲಿ ಬಿಸಿಯೂಟದ ಅಡುಗೆ ಕೆಲಸ ಮಾಡಿದ್ದ ಅವರು, ಇಂದಿಗೂ ಸರಳ ಜೀವನ ನಡೆಸುತ್ತ ಕೂಲಿ ಕೆಲಸ ಮಾಡುತ್ತಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಆ.14ರಂದು ಸಂಜೆ 6ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಮಧ್ಯರಾತ್ರಿ 12ಕ್ಕೆ ಧ್ವಜಾರೋಹಣ ನೆರವೇರಲಿದೆ. ಇದೇ ವೇಳೆ ಅಮೋಘ ಭಾರತ, ಪ್ರಥಿಕ್ ಕುಂದಗೋಳ, ಮಾಜಿ ಸೈನಿಕರಾದ ಮಲ್ಲಪ್ಪ ಮುಗಳಿ, ಬಸವರಾಜ ಕೋರಿ, ಮಹೇಶ್ವರಯ್ಯ ಹಿರೇಮಠ, ಯುವ ಸಾಧಕಿಯರಾದ ಪ್ರೀತಿ ಬುಳ್ಳಾ ಹಾಗೂ ಸೃಷ್ಟಿ ಮೇಟಿ ಅವರನ್ನು ಸನ್ಮಾನಿಸಲಾಗುವುದು.

ಗ್ರಾಮದ ಮಕ್ಕಳು, ಯುವಕರು, ಮಹಿಳೆಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಿಥುನ ಗಾಣಿಗೇರ ಮನವಿ ಮಾಡಿದರು.

ಬಾಕಿ ಬಿಲ್‌ಗೆ ನ್ಯಾಯಾಲಯದ ಚಾಟಿ: ಗದಗ ಡಿಸಿ ಕಚೇರಿಯ ಕಂಪ್ಯೂಟರ್, ಪೀಠೋಪಕರಣ ಜಪ್ತಿ

0

ಗದಗ: ನಗರೋತ್ಥಾನ ಕಾಮಗಾರಿಯ ಬಿಲ್ ಬಾಕಿ ಉಳಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದ ಮೇರೆಗೆ ಗದಗ ಜಿಲ್ಲಾಧಿಕಾರಿಗಳ ಕಚೇರಿಯ ಕಂಪ್ಯೂಟರ್ ಹಾಗೂ ಪೀಠೋಪಕರಣಗಳನ್ನು ಜಪ್ತಿ ಮಾಡಿರುವ ಘಟನೆ ನಡೆದಿದೆ.

2012–13ರ ಅವಧಿಯಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ, ಮುಂಡರಗಿ ಹಾಗೂ ಮುಳಗುಂದ ಪಟ್ಟಣಗಳಲ್ಲಿ ನಗರೋತ್ಥಾನ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಗುತ್ತಿಗೆದಾರ ಎಸ್.ಎಸ್. ಪೊಲೀಸ್ ಪಾಟೀಲ ಅವರು ಸುಮಾರು ₹15 ಕೋಟಿ ವೆಚ್ಚದ ಕಾಮಗಾರಿಗಳನ್ನು ನಿರ್ವಹಿಸಿದ್ದರು ಎನ್ನಲಾಗಿದೆ.

ಈ ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ಸುಮಾರು ₹18 ಲಕ್ಷ ಬಿಲ್ ಬಾಕಿ ಉಳಿದಿತ್ತು. ಬಾಕಿ ಮೊತ್ತ ಪಾವತಿಯಾಗದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ನ್ಯಾಯಾಲಯದ ಮೊರೆ ಹೋಗಿದ್ದರು.

ಪ್ರಕರಣದ ವಿಚಾರಣೆ ಬಳಿಕ ಬಾಕಿ ಮೊತ್ತದ ಹಿನ್ನೆಲೆಯಲ್ಲಿ ಸುಮಾರು ₹40 ಲಕ್ಷ ಪಾವತಿಸುವಂತೆ ನ್ಯಾಯಾಲಯ ಸೂಚಿಸಿತ್ತು. ಈ ಮೊತ್ತ ಪಾವತಿಯಾಗದ ಹಿನ್ನೆಲೆಯಲ್ಲಿ ನ್ಯಾಯಾಲಯವು ಜಪ್ತಿ ಆದೇಶ ನೀಡಿದೆ ಎನ್ನಲಾಗಿದೆ. ಕಚೇರಿಯ ಕಂಪ್ಯೂಟರ್, ಪೀಠೋಪಕರಣ ಜಪ್ತಿ
ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿದ್ದ ಕಂಪ್ಯೂಟರ್ ಹಾಗೂ ಪೀಠೋಪಕರಣಗಳನ್ನು ಜಪ್ತಿ ಮಾಡಲಾಗಿದೆ.

ಬಿಲ್ ಪಾವತಿಗೆ ಸಂಬಂಧಿಸಿದ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲೇ ಜಪ್ತಿ ಕ್ರಮ ನಡೆದಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಹುಲಕೋಟಿಯ ಶ್ರೀ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆ.13ರಂದು ಪದವಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲೊಂದಾದ ಯುವನಿಧಿ ಯೋಜನೆ ಕುರಿತು ಅರಿವು ಹಾಗೂ ವೃತ್ತಿಮಾರ್ಗದರ್ಶನ ಕಾರ್ಯಕ್ರಮ ನಡೆಯಿತು.

ಗದಗ ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ ಹಾಗೂ ಗದಗ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಯುವನಿಧಿ ಯೋಜನೆಯ ಸದುಪಯೋಗ ಪಡೆದುಕೊಂಡು ಭವಿಷ್ಯ ರೂಪಿಸಿಕೊಳ್ಳುವ ಕುರಿತು ಮಾರ್ಗದರ್ಶನ ನೀಡಲಾಯಿತು.

ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಅಧಿಕಾರಿಗಳು ಯೋಜನೆಯ ಅರ್ಹತೆ, ನೋಂದಣಿ ಹಾಗೂ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. 2023ರಿಂದ ಪದವಿ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿರುವ, ಕನಿಷ್ಠ ಆರು ತಿಂಗಳ ಕಾಲ ಉದ್ಯೋಗವಿಲ್ಲದಿರುವ ಅರ್ಹ ಅಭ್ಯರ್ಥಿಗಳಿಗೆ ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ.

ಪದವೀಧರರಿಗೆ ತಿಂಗಳಿಗೆ ₹3,000 ಹಾಗೂ ಡಿಪ್ಲೊಮಾ ಅಭ್ಯರ್ಥಿಗಳಿಗೆ ₹1,500 ಭತ್ಯೆ ದೊರೆಯಲಿದ್ದು, ಗರಿಷ್ಠ ಎರಡು ವರ್ಷಗಳವರೆಗೆ ಸೌಲಭ್ಯ ಪಡೆಯಬಹುದು. ಅರ್ಹರು ಸೇವಾ ಸಿಂಧು ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಯಿತು.

ಕಾಲೇಜಿನ ಪ್ರಾಚಾರ್ಯ ಅಪ್ಪಣ್ಣ ಹಂಜಿ, ಸಹಾಯಕ ಉದ್ಯೋಗಾಧಿಕಾರಿ ಎಚ್ಚರಪ್ಪ ಬಡಿಗೇರ, ಆಪ್ತ ಸಮಾಲೋಚಕ ಆನಂದ ಹೊಂಬಳ ಸೇರಿದಂತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜಾಬ್‌ ಕಾರ್ಡ್‌ ಮೇಳಕ್ಕೆ ರೋಣ–ಗಜೇಂದ್ರಗಡ ತಾಪಂ ಸಜ್ಜು

0

ವಿಜಯಸಾಕ್ಷಿ ಸುದ್ದಿ, ರೋಣ: ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ಸ್ಥಳೀಯವಾಗಿಯೇ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ವಿಕಸಿತ ಭಾರತ–G RAM G ಯೋಜನೆಯಡಿ ಜಾಬ್‌ ಕಾರ್ಡ್‌ ಮೇಳ ಹಾಗೂ ವಿಶೇಷ ಜಾಗೃತಿ ಅಭಿಯಾನವನ್ನು ಆ.15ರಿಂದ ರೋಣ ಮತ್ತು ಗಜೇಂದ್ರಗಡ ತಾಲೂಕುಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ತಿಳಿಸಿದ್ದಾರೆ.

ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಆ.15ರಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಬ್‌ ಕಾರ್ಡ್‌ ಮೇಳ ಆಯೋಜಿಸಲಾಗುತ್ತಿದ್ದು, ರೋಣ ಹಾಗೂ ಗಜೇಂದ್ರಗಡ ತಾಲೂಕುಗಳಲ್ಲಿಯೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಕಲ್ಪಿಸುವುದರ ಜತೆಗೆ ಹೆಚ್ಚಿನ ಮಾನವ ದಿನಗಳ ಸೃಷ್ಟಿಗೆ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು ಎಂದರು.

ಜಾಬ್‌ ಕಾರ್ಡ್‌ ಪರಿಶೀಲನೆ, ಹೊಸ ಕಾರ್ಡ್‌ಗೆ ಅವಕಾಶ

ಜಾಬ್‌ ಕಾರ್ಡ್ ಹೊಂದಿರುವ ಕುಟುಂಬಗಳ ಮಾಹಿತಿಯನ್ನು ಪರಿಶೀಲಿಸುವುದು, ಅರ್ಹರಿಗೆ ಹೊಸ ಜಾಬ್‌ ಕಾರ್ಡ್‌ ಮಾಡಿಸಿಕೊಡುವುದು, ಹಳೆಯ ಕಾರ್ಡ್‌ ನವೀಕರಣ, e-KYC ಪೂರ್ಣಗೊಳಿಸುವುದು ಹಾಗೂ ಉದ್ಯೋಗದ ಬೇಡಿಕೆ ಸ್ವೀಕರಿಸುವುದಕ್ಕೆ ಮೇಳದಲ್ಲಿ ಆದ್ಯತೆ ನೀಡಲಾಗುವುದು.

ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ಕುಟುಂಬಗಳಿಗೆ ನಿಯಮಾನುಸಾರ ಸ್ವೀಕೃತಿ ನೀಡುವ ವ್ಯವಸ್ಥೆಯನ್ನೂ ಗ್ರಾಮ ಪಂಚಾಯಿತಿಗಳಲ್ಲಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಇದರ ಜತೆಗೆ ಮನೆ-ಮನೆಗೆ ಭೇಟಿ ನೀಡಿ ಯೋಜನೆಯ ಕುರಿತು ಮಾಹಿತಿ ನೀಡುವುದು, ಗ್ರಾಮಮಟ್ಟದಲ್ಲಿ ಸಭೆ ನಡೆಸುವುದು, ಪೋಸ್ಟರ್‌–ಬ್ಯಾನರ್‌ಗಳ ಮೂಲಕ ಜಾಗೃತಿ ಮೂಡಿಸುವುದು ಹಾಗೂ ಮೇಳದ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಲು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚಿಸಲಾಗಿದೆ ಎಂದರು.

ಕಾರ್ಮಿಕರ ಹಾಜರಾತಿ, ಕಾಮಗಾರಿಗಳ ಪ್ರಗತಿ ಹಾಗೂ ಸಂಬಂಧಿತ ದಾಖಲೆಗಳನ್ನು ಡಿಜಿಟಲ್‌ ವ್ಯವಸ್ಥೆಯ ಮೂಲಕ ನಿರ್ವಹಿಸಲು ಒತ್ತು ನೀಡಲಾಗುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಂಬಂಧಿತ ಕಾರ್ಯಕರ್ತರು ಸಮನ್ವಯದಿಂದ ಕಾರ್ಯನಿರ್ವಹಿಸಿ ಅರ್ಹ ಕುಟುಂಬಗಳಿಗೆ ಯೋಜನೆಯ ಸೌಲಭ್ಯ ತಲುಪಿಸುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.

“ಉದ್ಯೋಗದ ಅವಕಾಶವನ್ನು ಅರ್ಹ ಕುಟುಂಬಗಳ ಮನೆಬಾಗಿಲಿಗೆ ತಲುಪಿಸುವುದು ನಮ್ಮ ಮುಖ್ಯ ಉದ್ದೇಶ. ಜಾಬ್‌ ಕಾರ್ಡ್‌, e-KYC ಹಾಗೂ ಉದ್ಯೋಗದ ಬೇಡಿಕೆ ಸಲ್ಲಿಕೆ ಕುರಿತು ಮಾಹಿತಿ ಅಗತ್ಯವಿರುವವರು ತಮ್ಮ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಬೇಕು. ಜಾಬ್‌ ಕಾರ್ಡ್‌ ಮೇಳದ ಸದುಪಯೋಗ ಪಡೆದು ಉದ್ಯೋಗದ ಬೇಡಿಕೆ ಸಲ್ಲಿಸಿ, ಸ್ಥಳೀಯ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ.”

ಚಂದ್ರಶೇಖರ ಬಿ. ಕಂದಕೂರ

ಕಾರ್ಯನಿರ್ವಾಹಕ ಅಧಿಕಾರಿ, ತಾಪಂ ರೋಣ–ಗಜೇಂದ್ರಗಡ

ವಿಂಡ್‌ ಕಂಪನಿಗಳ ಹಾವಳಿಗೆ ಬ್ರೇಕ್‌ ಹಾಕಿ

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಗಜೇಂದ್ರಗಡ–ರೋಣ ತಾಲೂಕು ವ್ಯಾಪ್ತಿಯಲ್ಲಿ ವಿಂಡ್‌ ಹಾಗೂ ಸೋಲಾರ್‌ ಕಂಪನಿಗಳ ಭಾರಿ ವಾಹನಗಳ ಸಂಚಾರದಿಂದ ಗ್ರಾಮೀಣ ರಸ್ತೆಗಳು ಹದಗೆಟ್ಟಿದ್ದು, ರೈತರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಅಭಿವೃದ್ಧಿ ವೇದಿಕೆ ಆ.18ರಿಂದ ಗಜೇಂದ್ರಗಡದಲ್ಲಿ ವಿಂಡ್‌ ಕಂಪನಿಗಳ ವಾಹನಗಳನ್ನು ತಡೆದು ಅಹೋರಾತ್ರಿ ಹಾಗೂ ಅನಿರ್ದಿಷ್ಟಾವಧಿ ಹೋರಾಟ ನಡೆಸಲು ಮುಂದಾಗಿದೆ.

ಈ ಕುರಿತು ವೇದಿಕೆಯ ಪದಾಧಿಕಾರಿಗಳು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ವೇದಿಕೆಯ ರಾಜ್ಯಾಧ್ಯಕ್ಷ ವಿನಾಯಕ ಜರತಾರಿ ಮಾತನಾಡಿ, ಗಜೇಂದ್ರಗಡ–ರೋಣ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಹುರಾಷ್ಟ್ರೀಯ ಪವನ ವಿದ್ಯುತ್ ಕಂಪನಿಗಳು, ಸೋಲಾರ್ ಕಂಪನಿಗಳು ಹಾಗೂ ಆರ್‌ಎಂಸಿ ಕಾಂಕ್ರೀಟ್ ಘಟಕಗಳ ಹಾವಳಿ ಮಿತಿಮೀರಿದೆ ಎಂದು ಆರೋಪಿಸಿದರು.

ವಿಂಡ್ ಕಂಪನಿಗಳ ಅತಿಭಾರದ ಹಾಗೂ ಅತಿಉದ್ದದ ವಾಹನಗಳು ಹಗಲು–ರಾತ್ರಿ ಗ್ರಾಮೀಣ ರಸ್ತೆಗಳ ಮೂಲಕ ಸಂಚರಿಸುತ್ತಿರುವುದರಿಂದ ರಸ್ತೆಗಳು ಸಂಪೂರ್ಣ ಹದಗೆಟ್ಟು, ತಗ್ಗು–ಗುಂಡಿಗಳು ನಿರ್ಮಾಣವಾಗಿವೆ. ರೈತರು ಜಮೀನುಗಳಿಗೆ ತೆರಳುವುದಕ್ಕೂ, ಗ್ರಾಮಸ್ಥರು ನಿತ್ಯ ಸಂಚಾರ ನಡೆಸುವುದಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

CSR ಹಣದಲ್ಲಿ ರಸ್ತೆಗಳ ಅಭಿವೃದ್ಧಿಗೆ ಆಗ್ರಹ

ವಿಂಡ್ ಕಂಪನಿಗಳ ವಾಹನ ಸಂಚಾರದಿಂದ ಹದಗೆಟ್ಟಿರುವ ಎಲ್ಲ ಗ್ರಾಮೀಣ ರಸ್ತೆಗಳನ್ನೂ ಕಂಪನಿಗಳ ಸಿಎಸ್‌ಆರ್‌ ನಿಧಿಯಲ್ಲಿ ದುರಸ್ತಿ ಹಾಗೂ ಅಭಿವೃದ್ಧಿಪಡಿಸಬೇಕು. ಇದಕ್ಕಾಗಿ ಕ್ರಿಯಾ ಯೋಜನೆ ರೂಪಿಸಿ, ಅಂದಾಜು ವೆಚ್ಚ ಹಾಗೂ ಕಾಮಗಾರಿ ಪೂರ್ಣಗೊಳಿಸುವ ಕಾಲಮಿತಿಯನ್ನು ನಿಗದಿಪಡಿಸಬೇಕು. ಕಂಪನಿಗಳು ತಮ್ಮ ಲೆಟರ್‌ಹೆಡ್‌ನಲ್ಲಿ ಈ ವಿವರಗಳಿಗೆ ಸಹಿ ಹಾಗೂ ಮುದ್ರೆ ಹಾಕಿ ಜಿಲ್ಲಾಧಿಕಾರಿಗೆ ಸಲ್ಲಿಸುವ ಜತೆಗೆ ಅದರ ಪ್ರತಿಯನ್ನು ಸಾರ್ವಜನಿಕರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಈ ಬೇಡಿಕೆ ಈಡೇರುವವರೆಗೆ ವಿಂಡ್ ಕಂಪನಿಗಳ ವಾಹನಗಳಿಗೆ ತಾಲೂಕು ವ್ಯಾಪ್ತಿಯಲ್ಲಿ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.

ಒಂದು ಲಕ್ಷ ಗಿಡ ನೆಡಲು ಬೇಡಿಕೆ

ವಿಂಡ್ ಕಂಪನಿಗಳ ಕಾಮಗಾರಿಯಿಂದ ಹಾನಿಗೊಳಗಾಗಿರುವ ಪರಿಸರವನ್ನು ಮರುಸ್ಥಾಪಿಸಬೇಕು. ಕಡಿದಿರುವ ಗಿಡಮರಗಳ ಬದಲಿಗೆ ಗಜೇಂದ್ರಗಡ–ರೋಣ ತಾಲೂಕುಗಳಲ್ಲಿ ಒಂದು ಲಕ್ಷ ಗಿಡಗಳನ್ನು ನೆಟ್ಟು, 10 ವರ್ಷಗಳ ಕಾಲ ಅವುಗಳ ಸಂರಕ್ಷಣೆ ಜವಾಬ್ದಾರಿಯನ್ನು ಕಂಪನಿಗಳೇ ವಹಿಸಬೇಕು ಎಂದು ಆಗ್ರಹಿಸಿದರು.

ಗಿಡಗಳ ರಕ್ಷಣೆ ಹಾಗೂ ಪೋಷಣೆಗಾಗಿ 100ಕ್ಕೂ ಹೆಚ್ಚು ಸ್ಥಳೀಯರನ್ನು 10 ವರ್ಷಗಳ ಅವಧಿಗೆ ನೇಮಿಸಿ, ಪ್ರತಿ ಕಾರ್ಮಿಕರಿಗೆ ತಿಂಗಳಿಗೆ ₹30 ಸಾವಿರ ವೇತನ ನೀಡಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟರು.

ಹಳ್ಳ–ಕೊಳ್ಳ, ಚೆಕ್‌ಡ್ಯಾಂ ನಿರ್ಮಾಣಕ್ಕೂ ಒತ್ತಾಯ

ವಿಂಡ್ ಕಂಪನಿಗಳ ಕಾಮಗಾರಿಯಿಂದ ಹಾನಿಗೊಳಗಾಗಿರುವ ಹಳ್ಳ–ಕೊಳ್ಳ, ಸರುವೆ, ಕಿರುಹಳ್ಳ, ಒಳಗಟ್ಟಿ ಹಾಗೂ ಸೇತುವೆಗಳನ್ನು ಮರುನಿರ್ಮಿಸಬೇಕು. ತಾಲೂಕು ವ್ಯಾಪ್ತಿಯ ಅಗತ್ಯ ಸ್ಥಳಗಳಲ್ಲಿ ಚೆಕ್‌ಡ್ಯಾಂ ಹಾಗೂ ಸೇತುವೆಗಳನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಇದರ ಜತೆಗೆ ರೈತರ ಜಮೀನಿನಲ್ಲಿ ಉತ್ಪಾದನೆಯಾಗುವ ವಿದ್ಯುತ್‌ನಿಂದ ರೋಣ–ಗಜೇಂದ್ರಗಡ ತಾಲೂಕಿನ ರೈತರ ಹೊಲ–ತೋಟಗಳಿಗೆ ನಿರಂತರವಾಗಿ ಉಚಿತ ತ್ರಿಫೇಸ್ ವಿದ್ಯುತ್ ನೀಡಬೇಕು. ರೈತರ ಜಮೀನಿನಲ್ಲಿ ಅಳವಡಿಸಿರುವ ವಿದ್ಯುತ್‌ ಘಟಕಗಳಿಂದ ರೈತರಿಗೆ ಶೇರ್ ನೀಡಬೇಕು ಎಂದು ಒತ್ತಾಯಿಸಿದರು.

ಅಗ್ರಿಮೆಂಟ್‌ ಕನ್ನಡದಲ್ಲೇ ಇರಲಿ

ವಿಂಡ್ ಕಂಪನಿಗಳಿಗೆ ಸಂಬಂಧಿಸಿದ ವ್ಯವಹಾರ ಹಾಗೂ ನೋಂದಣಿ ಪ್ರಕ್ರಿಯೆಗಳನ್ನು ಕನ್ನಡದಲ್ಲೇ ನಡೆಸಬೇಕು. ಈಗಾಗಲೇ ಮಾಡಿರುವ ಒಪ್ಪಂದಗಳ ಕನ್ನಡ ಪ್ರತಿಯನ್ನು ರೈತರಿಗೆ ನೀಡಬೇಕು. ಇದರಿಂದ ರೈತರಿಗೆ ಬಾಂಡ್ ಹಾಗೂ ಅಗ್ರಿಮೆಂಟ್‌ನಲ್ಲಿರುವ ಷರತ್ತುಗಳು ಸ್ಪಷ್ಟವಾಗಿ ತಿಳಿಯಲಿವೆ ಎಂದು ವಿನಾಯಕ ಜರತಾರಿ ಹೇಳಿದರು.

ಆ.18ರಿಂದ ಆರಂಭವಾಗಲಿರುವ ಹೋರಾಟದಲ್ಲಿ 100ಕ್ಕೂ ಹೆಚ್ಚು ಸಂಘಟನೆಗಳ ಹೋರಾಟಗಾರರು ಭಾಗವಹಿಸಲಿದ್ದಾರೆ ಎಂದು ವೇದಿಕೆ ತಿಳಿಸಿದೆ.

ಲಕ್ಷ್ಮಣ ಬಂಕದ, ಹೂವಾಜಿ ಚಂದೂಕರ, ನೀಲಪ್ಪ ಛಲವಾದಿ, ರಾಘು ಚವ್ಹಾಣ, ಪ್ರಕಾಶ ರಾಠೋಡ, ಚಂದ್ರು ಭೂಷಟ್ಟಿ, ಕುಬೇರ ನಾಯಕ, ಮುತ್ತು ರಾಠೋಡ, ಜೀವನಸಭಾ ಸರ್ಕಾವಾಸ, ಮುತ್ತು ಕಲಾಲ್, ಕುಮಾರ ನಂದಿಕೆಶ್ವರ, ವೀರೇಶ ಮಾಟಲದಿನ್ನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ರೈತರ ಜಮೀನಿನಲ್ಲಿ ವಿದ್ಯುತ್ ಉತ್ಪಾದಿಸಿ ಕಂಪನಿಗಳು ಲಾಭ ಪಡೆಯುತ್ತಿವೆ. ಆದರೆ ಅದೇ ಭಾಗದ ರೈತರು ರಸ್ತೆ, ಪರಿಸರ, ನೀರು ಹಾಗೂ ವಿದ್ಯುತ್ ಸಮಸ್ಯೆ ಎದುರಿಸುವಂತಾಗಬಾರದು. ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಆ.18ರಿಂದ ಅಹೋರಾತ್ರಿ ಹಾಗೂ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು.”

— ವಿನಾಯಕ ಜರತಾರಿ, ರಾಜ್ಯಾಧ್ಯಕ್ಷ, ಕರ್ನಾಟಕ ಅಭಿವೃದ್ಧಿ ವೇದಿಕೆ

ಜನಮನಸೂರೆಗೊಂಡ ‘ಶ್ರೀದೇವಿ ಮಹಾತ್ಮೆ’ ದೊಡ್ಡಾಟ!

0

ವಿಜಯಸಾಕ್ಷಿ ಸುದ್ದಿ, ಗದಗ: ಉತ್ತರ ಕರ್ನಾಟಕದ ಜನಪದ ರಂಗಕಲೆಯ ವೈಶಿಷ್ಟ್ಯವನ್ನು ಸಾರುವ ‘ಶ್ರೀದೇವಿ ಮಹಾತ್ಮೆ’ ದೊಡ್ಡಾಟ ಪ್ರದರ್ಶನ ಕಲಾಪ್ರೇಮಿಗಳ ಮನಸೂರೆಗೊಂಡಿತು.

ಮುಳಗುಂದ ನಾಕಾ ಬಳಿಯ ಶ್ರೀ ಅಡವೀಂದ್ರಸ್ವಾಮಿ ಮಠದಲ್ಲಿ ಬೆಟಗೇರಿಯ ಬಿ.ಬಿ. ಬಣ್ಣದ ಜನಪದ ಕಲಾ ಮೇಳ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಹಾಗೂ ಶ್ರೀ ಅಡವೀಂದ್ರಸ್ವಾಮಿ ಮಠದ ಶಿವಾನುಭವ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ದೊಡ್ಡಾಟ ಪ್ರದರ್ಶನಕ್ಕೆ ಗದಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ, ಸಾಹಿತಿ ಹಾಗೂ ಸಂಶೋಧಕ ಡಾ. ರಾಜೇಂದ್ರ ಎಸ್. ಗಡಾದ ಮದ್ದಳೆ ಬಾರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೊಡ್ಡಾಟ, ಸಣ್ಣಾಟ, ತೊಗಲುಗೊಂಬೆಯಾಟ ಸೇರಿದಂತೆ ಜನಪದ ಕಲೆಗಳು ನಮ್ಮ ಸಾಂಸ್ಕೃತಿಕ ಪರಂಪರೆಯ ಜೀವಂತ ಪ್ರತೀಕಗಳಾಗಿವೆ. ಜನಪದೀಯರು ಆತ್ಮೀಯತೆ, ನಂಬಿಕೆ ಹಾಗೂ ಭಾವನಾತ್ಮಕತೆಯಿಂದ ಇವುಗಳನ್ನು ತಲೆಮಾರಿನಿಂದ ತಲೆಮಾರಿಗೆ ಉಳಿಸಿಕೊಂಡು ಬಂದಿದ್ದಾರೆ ಎಂದರು.

ಜಾಗತೀಕರಣ, ನಗರೀಕರಣ ಹಾಗೂ ಕೈಗಾರೀಕರಣದ ಪರಿಣಾಮ ಅನೇಕ ಜನಪದ ಕಲೆಗಳು ನಶಿಸುವ ಹಂತದಲ್ಲಿವೆ. ಕಲಾತಂಡಗಳು ಹಾಗೂ ಕಲಾವಿದರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಲಾವಿದರನ್ನು ಪ್ರೋತ್ಸಾಹಿಸಿ, ಕಲಾತಂಡಗಳಿಗೆ ಬೆಂಬಲ ನೀಡುವ ಮೂಲಕ ದೊಡ್ಡಾಟದಂತಹ ಅಪರೂಪದ ಕಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಜನಪದೀಯರದ್ದಾಗಿದೆ ಎಂದು ಹೇಳಿದರು.

ಉತ್ತರ ಕರ್ನಾಟಕದ ಜನಪದರಂಗ ಕಲೆಗಳಲ್ಲಿ ದೊಡ್ಡಾಟವು ವಿಶಿಷ್ಟ ಸ್ಥಾನ ಹೊಂದಿದೆ. ಭವ್ಯ ರಂಗಸಜ್ಜಿಕೆ, ವೀರೋಚಿತ ಕುಣಿತ, ಸಂಗೀತ, ವರ್ಣರಂಜಿತ ವೇಷಭೂಷಣ ಹಾಗೂ ವೀರ–ರೌದ್ರ ಪ್ರಧಾನ ಕಥಾವಸ್ತು ಇದರ ವೈಶಿಷ್ಟ್ಯವಾಗಿದೆ. ಹಿಂದೆ ರಾತ್ರಿಯಿಂದ ಬೆಳಗಿನವರೆಗೆ ನಡೆಯುತ್ತಿದ್ದ ದೊಡ್ಡಾಟಗಳು ಇದೀಗ ಕಾಲಕ್ಕೆ ತಕ್ಕಂತೆ ಸಂಕ್ಷಿಪ್ತ ರೂಪ ಪಡೆದುಕೊಂಡಿರುವುದು ಸ್ವಾಗತಾರ್ಹ. ಯುವ ಪೀಳಿಗೆ ಹಾಗೂ ಮಕ್ಕಳು ಇಂತಹ ಕಲೆಗಳನ್ನು ನೋಡಿ, ಅದರ ಮಹತ್ವ ಅರಿಯಬೇಕು ಎಂದರು.

ಶ್ರೀ ಅಡವೀಂದ್ರಸ್ವಾಮಿ ಮಠದ ದಸರಾ ಮಹೋತ್ಸವ ಸಮಿತಿ ಅಧ್ಯಕ್ಷೆ ಸುವರ್ಣ ಮದರಿಮಠ ಹಾಗೂ ಕಲಾಪೋಷಕ ಶ್ರೀನಿವಾಸ ಹುಬ್ಬಳ್ಳಿ ಮಾತನಾಡಿ, ಗದಗ–ಬೆಟಗೇರಿ ಭಾಗದಲ್ಲಿ ದೊಡ್ಡಾಟದಂತಹ ವಿಶಿಷ್ಟ ರಂಗಕಲೆ ಇನ್ನೂ ಜೀವಂತವಾಗಿರುವುದು ಜಿಲ್ಲೆಯ ಹೆಮ್ಮೆಯ ಸಂಗತಿ. ಇದರ ಉಳಿವಿಗೆ ಎಲ್ಲರೂ ಶ್ರಮಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿ.ಬಿ. ಬಣ್ಣದ ಜನಪದ ಕಲಾ ಮೇಳದ ಅಧ್ಯಕ್ಷ ಅಶೋಕ ಬಣ್ಣದ ಅವರು ಕಲಾ ಮೇಳ ಬೆಳೆದು ಬಂದ ಹಾದಿ ಹಾಗೂ ಮಠಮಾನ್ಯಗಳ ಸಹಕಾರವನ್ನು ಸ್ಮರಿಸಿದರು.

ಶ್ರೀಮಠದ ಧರ್ಮದರ್ಶಿ ವೇ. ಮಹೇಶ್ವರ ಸ್ವಾಮೀಜಿ ಮಾತನಾಡಿ, ಮೈಸೂರು ಅರಸರು ಹಾಗೂ ನಾಡಿನ ಮಠಮಾನ್ಯಗಳು ಜನಪದ ಕಲೆಗಳಿಗೆ ನೀಡಿದ ಪ್ರೋತ್ಸಾಹವನ್ನು ಸ್ಮರಿಸಿದರು. ಜನಪದ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಬೇಕು ಎಂದರು.

ಬಳಿಕ ಬೆಟಗೇರಿಯ ಶ್ರೀರಂಗಪ್ಪ ನಾರಾಯಣಕೇರಿ ಹಾಗೂ ಸಂಗಡಿಗರು ‘ಶ್ರೀದೇವಿ ಮಹಾತ್ಮೆ’ ದೊಡ್ಡಾಟವನ್ನು ಮನೋಜ್ಞವಾಗಿ ಪ್ರದರ್ಶಿಸಿ ಕಲಾಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾದರು.

ಅನ್ವಿಕಾ ಬಣ್ಣದ ಪ್ರಾರ್ಥಿಸಿದರು. ಜಿ.ಎಂ. ಯಾನಮಶೆಟ್ಟಿರು. ಬಿ.ಎಂ. ಬಿಳೆಯಲಿ ದೊಡ್ಡಾಟದ ಕುರಿತು ಅನಿಸಿಕೆ ಹಂಚಿಕೊಂಡರು. ಕಿರಣ ಬಣ್ಣದ ನಿರೂಪಿಸಿದರು. ಗೀತಾ ಹೂಗಾರ ವಂದಿಸಿದರು.

ಇನ್ನರ್ ವೀಲ್ ಕ್ಲಬ್ ಸೇವಾ ಚಟುವಟಿಕೆಗಳಿಗೆ ಮತ್ತಷ್ಟು ವೇಗ

0

ವಿಜಯಸಾಕ್ಷಿ ಸುದ್ದಿ, ಗದಗ: ಇನ್ನರ್ ವೀಲ್ ಕ್ಲಬ್ ಗದಗ–ಬೆಟಗೇರಿಯ ಸೇವಾ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ಮತ್ತಷ್ಟು ವೇಗ ನೀಡುವ ಕುರಿತು ನಗರದ ರೋಟರಿ ಐ ಕೇರ್ ಸೆಂಟರ್‌ನ ಕುಷ್ಟಗಿ ಮೆಮೋರಿಯಲ್ ಹಾಲ್‌ನಲ್ಲಿ ನಡೆದ ಮಾಸಿಕ ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯ ಆರಂಭದಲ್ಲಿ ಶ್ರೀಮತಿ ವೀಣಾ ಕಾವೇರಿ ಹಾಗೂ ಶ್ರೀಮತಿ ಮೀನಾಕ್ಷಿ ಕೊರವನವರ ಇನ್ನರ್ ವೀಲ್ ಪ್ರಾರ್ಥನೆ ನೆರವೇರಿಸಿದರು. ಕಾರ್ಯದರ್ಶಿ ಶ್ರೀಮತಿ ಪೂಜಾ ಭೂಮಾ ಹಿಂದಿನ ಸಭೆಯ ನಡಾವಳಿಗಳನ್ನು ಮಂಡಿಸಿ ಅನುಮೋದನೆ ಪಡೆದರು.

ಕ್ಲಬ್ ವತಿಯಿಂದ ಕಳೆದ ತಿಂಗಳಲ್ಲಿ ಕೈಗೊಂಡ ವಿವಿಧ ಸೇವಾ ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಫಲಿತಾಂಶಗಳನ್ನು ಸಭೆಯಲ್ಲಿ ಪರಿಶೀಲಿಸಲಾಯಿತು.

ಮುಂಬರುವ ದಿನಗಳಲ್ಲಿ ಕೈಗೊಳ್ಳಬೇಕಾದ ವಿವಿಧ ಯೋಜನೆಗಳ ಕುರಿತು ಸದಸ್ಯರು ಚರ್ಚಿಸಿ ಸಲಹೆಗಳನ್ನು ನೀಡಿದರು.

ಪಿ.ಡಿ.ಸಿ. ಪ್ರೇಮಾ ಗುಳಗೌಡರ ಅವರು ಕ್ಲಬ್‌ನ ಆಡಳಿತ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವ ವಿಧಾನ, ಕಚೇರಿ ದಾಖಲೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವುದು ಹಾಗೂ ಕಾರ್ಯಕ್ರಮಗಳನ್ನು ಯೋಜನಾಬದ್ಧವಾಗಿ ರೂಪಿಸುವ ಕುರಿತು ಸದಸ್ಯರಿಗೆ ಮಾರ್ಗದರ್ಶನ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷೆ ಶ್ರೀಮತಿ ಮಂಜುಳಾ ಅಕ್ಕಿ ಮಾತನಾಡಿ, ಪಿ.ಡಿ.ಸಿ. ಪ್ರೇಮಾ ಗುಳಗೌಡರ ಮಾರ್ಗದರ್ಶನವು ಕ್ಲಬ್‌ನ ಮುಂದಿನ ಕಾರ್ಯಚಟುವಟಿಕೆಗಳಿಗೆ ಸಹಕಾರಿಯಾಗಲಿದೆ. ಸದಸ್ಯರ ಸಹಕಾರದೊಂದಿಗೆ ಇನ್ನರ್ ವೀಲ್‌ನ ಸೇವೆ ಮತ್ತು ಸ್ನೇಹದ ಧ್ಯೇಯಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸಲಾಗುವುದು ಎಂದರು.

ಸಭೆಯಲ್ಲಿ ಮಾಜಿ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.

ರೈಲು ಹೋರಾಟಕ್ಕೆ ನಿವೃತ್ತ ಸೈನಿಕರ ಬೆಂಬಲ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನರೇಗಲ್ಲ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರ ಬಹುದಿನಗಳ ಬೇಡಿಕೆಯಾಗಿರುವ ಗದಗ–ಕೃಷ್ಣಾವರ–ವಾಡಿ ರೈಲು ಮಾರ್ಗದ ಹೋರಾಟಕ್ಕೆ ನರೇಗಲ್ಲ ನಿವೃತ್ತ ಸೈನಿಕರ ಸಂಘ ಸಂಪೂರ್ಣ ಬೆಂಬಲ ನೀಡಲು ನಿರ್ಧರಿಸಿದೆ ಎಂದು ಸಂಘದ ಅಧ್ಯಕ್ಷ ಶಿವಪುತ್ರಪ್ಪ ಸಂಗನಾಳ ಹೇಳಿದರು.

ನರೇಗಲ್ಲ ನಿವೃತ್ತ ಸೈನಿಕರ ಸಂಘದ ಕಚೇರಿಯಲ್ಲಿ ನಡೆದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನರೇಗಲ್ಲ ಭಾಗದ ಜನರ ಬಹುದಿನಗಳ ರೈಲು ಬೇಡಿಕೆಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಬೇಕು. ರೈಲು ಸಂಪರ್ಕ ದೊರೆತರೆ ಈ ಭಾಗದ ಜನರಿಗೆ ಸಂಚಾರ, ವ್ಯಾಪಾರ ಹಾಗೂ ಉದ್ಯೋಗ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಮಕ್ಕಳಲ್ಲಿ ದೇಶಾಭಿಮಾನ ಬೆಳೆಸಿ

ನಿವೃತ್ತ ಸೈನಿಕ ಎಂ.ಎಸ್. ಮಲ್ಲನಗೌಡ್ರ ಮಾತನಾಡಿ, ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಶಿಸ್ತು ಹಾಗೂ ದೇಶಾಭಿಮಾನ ಬೆಳೆಸಲು ಪಾಲಕರು ಹೆಚ್ಚಿನ ಗಮನ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಬಳಕೆಗೆ ಹೆಚ್ಚು ಸಮಯ ನೀಡುತ್ತಿದ್ದು, ಪಾಲಕರು ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು ಎಂದರು.

ಉತ್ತಮ ಶಿಕ್ಷಣದ ಜತೆಗೆ ಸಾಮಾಜಿಕ ಜವಾಬ್ದಾರಿ ಹಾಗೂ ಹಿರಿಯರಿಗೆ ಗೌರವ ನೀಡುವ ಗುಣಗಳನ್ನು ಮಕ್ಕಳಲ್ಲಿ ಬೆಳೆಸಬೇಕು. ಕುಟುಂಬದ ಆಸ್ತಿಪಾಸ್ತಿಗಳ ಸುರಕ್ಷತೆಗಾಗಿ ವರ್ಷಕ್ಕೊಮ್ಮೆಯಾದರೂ ಜಮೀನಿನ ಇ-ಉತಾರ ಪಡೆದು ಪರಿಶೀಲಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಗಿಲ್ ವಿಜಯೋತ್ಸವ ಯಶಸ್ಸಿಗೆ ಅಭಿನಂದನೆ

ಜುಲೈ ೨೬ರಂದು ನಡೆದ ಕಾರ್ಗಿಲ್ ವಿಜಯೋತ್ಸವವನ್ನು ಯಶಸ್ವಿಗೊಳಿಸಿದ ಸಂಘದ ಸದಸ್ಯರನ್ನು ಶಿವಪುತ್ರಪ್ಪ ಸಂಗನಾಳ ಅಭಿನಂದಿಸಿದರು.

ಆ.೧೫ರಂದು ಸಂತೆ ಬಜಾರ್‌ನ ಗಣಪತಿ ದೇವಸ್ಥಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಮ್ಮಿಕೊಳ್ಳಲಾಗಿದ್ದು, ನಿವೃತ್ತ ಸೈನಿಕರು, ಸಾರ್ವಜನಿಕರು, ಯುವಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಸಭೆಯಲ್ಲಿ ಗೌರವಾಧ್ಯಕ್ಷ ಶರಣಪ್ಪ ನಾಶಿಪುಡಿ, ಶಿವಪ್ಪ ಶಿವಾಪುರ, ದಾವಲಸಾಬ ಕಿಲ್ಲೇದಾರ, ಸಂಗಪ್ಪ ಕುಷ್ಟಗಿ, ರಾಮಪ್ಪ ರೋಣದ, ಕುಮಾರಸ್ವಾಮಿ ಕೋರಧಾನ್ಯಮಠ, ಪ್ರಭುದೇವ ಮುಕ್ಕನಗೌಡ್ರ, ಮಂದಾಲಪ್ಪ ಸಂಗನಾಳ, ಗುರುಶಾಂತಗೌಡ ಮಲ್ಲನಗೌಡ್ರ, ಸಿದ್ರಾಮಪ್ಪ ಕಟ್ಟಿಮನಿ, ಮಲ್ಲಪ್ಪ ಕಡೆತೋಟದ, ಉಮೇಶ ಕರಮುಡಿ, ಈರಪ್ಪ ದೊಡ್ಡಣ್ಣವರ, ಶಿವಾನಂದ ಬಂಡಿಹಾಳ, ಬಸವೇಶ್ವರ ಚಿಕ್ಕೊಪ್ಪದ, ಈಶ್ವರಚಂದ್ರ ಬಾಗಲಿ, ಬಸವರಾಜ ಯಕ್ಕುಂಡಿ, ಸುಮಿತ್ರಾ ದಳವಾಯಿ, ಬಸವರಾಜ ಕಡೆತೋಟದ, ಇಮಾಮಸಾಬ ಕೋಲಕಾರ, ಮಲ್ಲಮ್ಮ ಭೈರಗೊಂಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಯದರ್ಶಿ ದಾದಾಸಾಬ ನದಾಫ ವಂದಿಸಿದರು.

“ರೈಲು ಹೋರಾಟ ಸಮಿತಿ ಯಾವಾಗ ಸಭೆ ಅಥವಾ ಹೋರಾಟಕ್ಕೆ ಕರೆ ನೀಡಿದರೂ ನಿವೃತ್ತ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಂಪೂರ್ಣ ಬೆಂಬಲ ನೀಡಬೇಕು. ದೇಶದ ಗಡಿಯಲ್ಲಿ ಸೇವೆ ಸಲ್ಲಿಸಿದ ನಾವು ನಿವೃತ್ತಿಯ ನಂತರವೂ ಸಮಾಜದ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ಕೈಜೋಡಿಸಬೇಕು.”

                         — ಶಿವಪುತ್ರಪ್ಪ ಸಂಗನಾಳ,

ಅಧ್ಯಕ್ಷ, ನಿವೃತ್ತ ಸೈನಿಕರ ಸಂಘ, ನರೇಗಲ್ಲ

ನೀಟ್‌–ಎನ್‌ಟಿಎ ರದ್ದತಿಗೆ ವಿಧಾನಸಭೆಯಲ್ಲಿ ನಿರ್ಣಯಕ್ಕೆ ಆಗ್ರಹ!

0

ವಿಜಯಸಾಕ್ಷಿ ಸುದ್ದಿ, ಗದಗ/ಹುಬ್ಬಳ್ಳಿ: ನೀಟ್‌ ಪರೀಕ್ಷೆಯಲ್ಲಿನ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮ ಹಾಗೂ ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆಯಲ್ಲಿನ ಗೊಂದಲಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನೀಟ್‌ ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಕರ್ನಾಟಕ ವಿಧಾನಮಂಡಲದಲ್ಲಿ ನಿರ್ಣಯ ಅಂಗೀಕರಿಸಬೇಕು ಎಂದು ಕರ್ನಾಟಕ ನಾಗರಿಕ ಸಮಾಜ ಆಗ್ರಹಿಸಿದೆ.

ಈ ಕುರಿತು ಮುಖ್ಯಮಂತ್ರಿ ಅವರಿಗೆ ಇ-ಮೇಲ್ ಮೂಲಕ ಮನವಿ ಸಲ್ಲಿಸಿರುವ ನಾಗರಿಕ ಸಮಾಜದ ಗಣ್ಯರು, ವೈದ್ಯಕೀಯ ಪ್ರವೇಶದ ನೀತಿ ಮತ್ತು ಪ್ರಕ್ರಿಯೆಯನ್ನು ರಾಜ್ಯಗಳಿಗೆ ಮರಳಿ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಾಹಿತಿ ಹಾಗೂ ಪ್ರಕಾಶಕ ಬಸವರಾಜ ಸೂಳಿಭಾವಿ ಅವರು ಪತ್ರಿಕೆಯ ಪ್ರಕಟಣೆಗಾಗಿ ಮನವಿಯ ಪ್ರತಿಯನ್ನು ಬಿಡುಗಡೆ ಮಾಡಿದ್ದಾರೆ.

ಮನವಿಯಲ್ಲಿ, ನೀಟ್‌ ಕಡ್ಡಾಯಗೊಳಿಸಿರುವುದರಿಂದ ರಾಜ್ಯಗಳ ಶೈಕ್ಷಣಿಕ ಸ್ವಾಯತ್ತತೆ, ಸಾಮಾಜಿಕ ನ್ಯಾಯ ಹಾಗೂ ಸಮಾನ ಅವಕಾಶಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಲಾಗಿದೆ. ವಿಭಿನ್ನ ಪಠ್ಯಕ್ರಮ, ಭಾಷೆ, ಗ್ರಾಮೀಣ–ನಗರ ಅಸಮಾನತೆ ಹಾಗೂ ಸಾಮಾಜಿಕ–ಆರ್ಥಿಕ ಹಿನ್ನೆಲೆಯ ವಿದ್ಯಾರ್ಥಿಗಳನ್ನು ಒಂದೇ ಪರೀಕ್ಷೆಯ ಮೂಲಕ ಅಳೆಯುವುದು ವಾಸ್ತವ ಸಮಾನತೆಯನ್ನು ಸಾಧಿಸುವುದಿಲ್ಲ ಎಂದು ಹೇಳಲಾಗಿದೆ.

ವಿದ್ಯಾರ್ಥಿಗಳ ಎರಡು ವರ್ಷಗಳ ಶಾಲಾ ಶಿಕ್ಷಣ, ನಿರಂತರ ಕಲಿಕೆ ಮತ್ತು ಪರಿಶ್ರಮವನ್ನು ಒಂದೇ ದಿನದ ಬಹು ಆಯ್ಕೆ ಪ್ರಶ್ನೆಗಳ ಪರೀಕ್ಷೆಗೆ ಸೀಮಿತಗೊಳಿಸುವುದರಿಂದ ಶಾಲಾ ಶಿಕ್ಷಣದ ಮಹತ್ವ ಕುಗ್ಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ದುಬಾರಿ ಕೋಚಿಂಗ್ ಪಡೆಯುವ ಸಾಮರ್ಥ್ಯ ಹೊಂದಿರುವ ನಗರ ಪ್ರದೇಶದ ಹಾಗೂ ಆರ್ಥಿಕವಾಗಿ ಸಬಲ ಕುಟುಂಬಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತಿದ್ದು, ಸರ್ಕಾರಿ ಶಾಲೆ, ಗ್ರಾಮೀಣ ಪ್ರದೇಶ, ಕನ್ನಡ ಮಾಧ್ಯಮ ಹಾಗೂ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ಅಸಮಾನ ಸ್ಪರ್ಧೆ ಎದುರಾಗುತ್ತಿದೆ ಎಂದು ನಾಗರಿಕ ಸಮಾಜದ ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ನಿರ್ವಹಣೆಯ ಲೋಪ ಹಾಗೂ ಅಂಕಗಳ ವಿಶ್ವಾಸಾರ್ಹತೆ ಕುರಿತು ಪದೇಪದೇ ವಿವಾದಗಳು ಎದುರಾಗಿರುವ ಹಿನ್ನೆಲೆಯಲ್ಲಿ ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನೇ ಮರುಪರಿಶೀಲಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ವೈದ್ಯಕೀಯ ಕಾಲೇಜುಗಳಿಗೆ ದ್ವಿತೀಯ ಪಿಯುಸಿ ಅಥವಾ +2ರಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ, ವೈಜ್ಞಾನಿಕ ನಾರ್ಮಲೈಸೇಶನ್ ಹಾಗೂ ಸಂವಿಧಾನಬದ್ಧ ಮೀಸಲಾತಿ ನಿಯಮಗಳನ್ನು ಪಾಲಿಸಿ ಪ್ರವೇಶ ನೀಡುವ ರಾಜ್ಯ ನೀತಿ ರೂಪಿಸಬೇಕು ಎಂದು ಆಗ್ರಹಿಸಲಾಗಿದೆ.

ತಮಿಳುನಾಡು ವಿಧಾನಸಭೆ ಈಗಾಗಲೇ ನೀಟ್‌ನಿಂದ ರಾಜ್ಯಕ್ಕೆ ವಿನಾಯಿತಿ ಪಡೆಯುವ ನಿಟ್ಟಿನಲ್ಲಿ ನಿರ್ಣಯ ಹಾಗೂ ಶಾಸನಾತ್ಮಕ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿರುವ ನಾಗರಿಕ ಸಮಾಜ, ಕರ್ನಾಟಕವೂ ಇದೇ ಮಾದರಿಯಲ್ಲಿ ರಾಜ್ಯದ ಹಕ್ಕು ಮತ್ತು ಸಾಮಾಜಿಕ ನ್ಯಾಯದ ಪರವಾಗಿ ನಿಲುವು ಪ್ರಕಟಿಸಬೇಕು ಎಂದು ಒತ್ತಾಯಿಸಿದೆ.

ಕರ್ನಾಟಕ ವಿಧಾನಮಂಡಲ ಅಧಿವೇಶನದಲ್ಲಿ ನೀಟ್‌ ರದ್ದತಿಗೆ ಕೇಂದ್ರವನ್ನು ಒತ್ತಾಯಿಸುವ ನಿರ್ಣಯ ಅಂಗೀಕರಿಸುವುದು, ಎನ್‌ಟಿಎ ರದ್ದುಗೊಳಿಸಿ ಕೇಂದ್ರೀಕೃತ ಪ್ರವೇಶ ಪರೀಕ್ಷಾ ವ್ಯವಸ್ಥೆಯನ್ನು ಮರುಪರಿಶೀಲಿಸುವಂತೆ ಒತ್ತಾಯಿಸುವುದು, ಪಿಯುಸಿ ಅಂಕ ಆಧಾರಿತ ವೈದ್ಯಕೀಯ ಪ್ರವೇಶ ನೀತಿ ರೂಪಿಸುವುದು ಸೇರಿದಂತೆ ಆರು ಪ್ರಮುಖ ಬೇಡಿಕೆಗಳನ್ನು ಮನವಿಯಲ್ಲಿ ಮುಂದಿಡಲಾಗಿದೆ.

ಇದರ ಜತೆಗೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಶಿಕ್ಷಣ ತಜ್ಞರು, ವೈದ್ಯಕೀಯ ಶಿಕ್ಷಣ ಪರಿಣತರು ಹಾಗೂ ಎಲ್ಲ ರಾಜಕೀಯ ಪಕ್ಷಗಳೊಂದಿಗೆ ಸಾರ್ವಜನಿಕ ಸಮಾಲೋಚನೆ ನಡೆಸಬೇಕು. ನೀಟ್‌ ವಿರೋಧಿ ನಿಲುವು ಹೊಂದಿರುವ ಇತರ ರಾಜ್ಯಗಳೊಂದಿಗೆ ಸಮನ್ವಯ ಸಾಧಿಸಿ ರಾಜ್ಯಗಳ ಶೈಕ್ಷಣಿಕ ಹಕ್ಕು ಹಾಗೂ ಒಕ್ಕೂಟ ವ್ಯವಸ್ಥೆಯ ರಕ್ಷಣೆಗೆ ರಾಷ್ಟ್ರಮಟ್ಟದ ಪ್ರಯತ್ನ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.

ಮನವಿಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನ್ಯಾ. ಗೋಪಾಲಗೌಡ, ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ., ಸಾಹಿತಿ ಬಸವರಾಜ ಸೂಳಿಭಾವಿ, ಪತ್ರಕರ್ತ ರಾಜಾರಾಮ ತಲ್ಲೂರು, ಸಾಹಿತಿ ಡಾ. ಎಚ್.ಎಸ್. ಅನುಪಮಾ, ವಿಶ್ರಾಂತ ಉಪಕುಲಪತಿ ಡಾ. ಸಬಿಹಾ ಭೂಮಿಗೌಡ, ಸಾಹಿತಿಗಳಾದ ಮೂಡ್ನಾಕೂಡ ಚಿನ್ನಸ್ವಾಮಿ, ಕೆ. ನೀಲಾ, ರಹಮತ್ ತರೀಕೆರೆ, ಪ್ರೊ. ಅಶೋಕ ಶೆಟ್ಟರ ಸೇರಿದಂತೆ ರಾಜ್ಯದ ವಿವಿಧ ಕ್ಷೇತ್ರಗಳ 117 ಗಣ್ಯರು ಸಹಿ ಹಾಕಿದ್ದಾರೆ.

ಕರ್ನಾಟಕದ ವಿದ್ಯಾರ್ಥಿಗಳ ಭವಿಷ್ಯ ಹಾಗೂ ಸಂವಿಧಾನಬದ್ಧ ಹಕ್ಕುಗಳನ್ನು ರಕ್ಷಿಸಲು ರಾಜ್ಯ ಸರ್ಕಾರ ಈ ಕುರಿತು ತಕ್ಷಣ ನಿರ್ಣಾಯಕ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕ ಸಮಾಜದ ಪ್ರತಿನಿಧಿಗಳು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ್ದಾರೆ.

ನಾಗರಿಕ ಸಮಾಜದ ಪ್ರಮುಖ ಆಗ್ರಹಗಳು

  • ನೀಟ್‌ ಪರೀಕ್ಷೆ ರದ್ದುಪಡಿಸಿ, ವೈದ್ಯಕೀಯ ಪ್ರವೇಶದ ಅಧಿಕಾರವನ್ನು ರಾಜ್ಯಗಳಿಗೆ ಮರಳಿಸಬೇಕು.
  • ಎನ್‌ಟಿಎ ರದ್ದುಗೊಳಿಸಿ, ಕೇಂದ್ರೀಕೃತ ಪ್ರವೇಶ ಪರೀಕ್ಷಾ ವ್ಯವಸ್ಥೆಯನ್ನು ಮರುಪರಿಶೀಲಿಸಬೇಕು.
  • ದ್ವಿತೀಯ ಪಿಯುಸಿ/+2 ಅಂಕಗಳ ಆಧಾರದ ಮೇಲೆ ವೈದ್ಯಕೀಯ ಪ್ರವೇಶಕ್ಕೆ ರಾಜ್ಯ ನೀತಿ ರೂಪಿಸಬೇಕು.
  • ಸಂವಿಧಾನದ ಅನುಚ್ಛೇದ 254(2)ರಡಿ ಪ್ರತ್ಯೇಕ ಮಸೂದೆ ರೂಪಿಸಿ ರಾಷ್ಟ್ರಪತಿಯ ಅನುಮೋದನೆಗೆ ಕಳುಹಿಸಬೇಕು.
  • ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಶಿಕ್ಷಣ ತಜ್ಞರೊಂದಿಗೆ ಸಾರ್ವಜನಿಕ ಸಮಾಲೋಚನೆ ನಡೆಸಬೇಕು.
  • ನೀಟ್‌ ವಿರೋಧಿ ನಿಲುವಿನ ಇತರ ರಾಜ್ಯಗಳೊಂದಿಗೆ ಸಮನ್ವಯ ಸಾಧಿಸಬೇಕು.

ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಸಿಕ್ಕ ಪೆನ್‌ಡ್ರೈವ್‌ನಲ್ಲಿ ಅಶ್ಲೀಲ ವಿಡಿಯೋಗಳಿಲ್ಲ; ಡಿಸಿಪಿ ಸ್ಪಷ್ಟನೆ

0

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಹೈಸೆಕ್ಯೂರಿಟಿ ಬ್ಯಾರಕ್‌ನಲ್ಲಿ ಪತ್ತೆಯಾದ ಪೆನ್‌ಡ್ರೈವ್‌ನಲ್ಲಿ ಅಶ್ಲೀಲ ವಿಡಿಯೋಗಳಿವೆ ಎಂಬ ವರದಿಯನ್ನು ಪೊಲೀಸರು ಅಲ್ಲಗಳೆದಿದ್ದಾರೆ.

ಪೆನ್‌ಡ್ರೈವ್‌ನಲ್ಲಿ ಯಾವುದೇ ವಿಡಿಯೋಗಳು ಇಲ್ಲ ಎಂದು ಎಲೆಕ್ಟ್ರಾನಿಕ್ಸ್ ಸಿಟಿ ವಿಭಾಗದ ಡಿಸಿಪಿ ಎಂ. ನಾರಾಯಣ ಸ್ಪಷ್ಟಪಡಿಸಿದ್ದಾರೆ.

ಆಗಸ್ಟ್ 11ರಂದು ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ ನಡೆಸಿದ ವೇಳೆ ಹೈಸೆಕ್ಯೂರಿಟಿ ಸೆಲ್‌ನಿಂದ ರೆಡ್ಮಿ ಮೊಬೈಲ್, ಚಾರ್ಜರ್, ಸಿಮ್ ಕಾರ್ಡ್, ಪೆನ್‌ಡ್ರೈವ್ ಹಾಗೂ ಡೈರಿ ಸೇರಿದಂತೆ ನಿಷೇಧಿತ ವಸ್ತುಗಳು ಪತ್ತೆಯಾಗಿದ್ದವು. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿಸಿಪಿ ಎಂ. ನಾರಾಯಣ ಅವರ ಪ್ರಕಾರ, ಜಪ್ತಿ ಮಾಡಿದ ಎಲ್ಲಾ ವಸ್ತುಗಳನ್ನು ಸೀಜ್ ಮಾಡಿ ಸೀಲ್ ಹಾಕಿ ತನಿಖಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಪತ್ತೆಯಾದ ಮೊಬೈಲ್‌ನ ಪಾಸ್‌ವರ್ಡ್ ಇನ್ನೂ ಲಭ್ಯವಾಗಿಲ್ಲ. ಫೋನ್ ಯಾರ ಬಳಕೆಯಲ್ಲಿತ್ತು ಹಾಗೂ ಜೈಲಿನೊಳಗೆ ಹೇಗೆ ತಲುಪಿತು ಎಂಬುದರ ಕುರಿತು ತನಿಖೆ ಮುಂದುವರಿದಿದೆ.

ಜಪ್ತಿ ಮಾಡಿದ ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದ್ದು, ತಾಂತ್ರಿಕ ಸಾಕ್ಷ್ಯಗಳು ಬಂದ ಬಳಿಕ ಪ್ರಜ್ವಲ್ ರೇವಣ್ಣ ಹಾಗೂ ಮತ್ತೋರ್ವ ಆರೋಪಿ ಪ್ರತಾಪ್ ರೈ ಅವರನ್ನು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಜೈಲಿನಲ್ಲಿ ಜಾಮರ್ ಅಳವಡಿಸಿದ್ದರೂ 2G ಹಾಗೂ 3G ನೆಟ್‌ವರ್ಕ್ ಸಿಗುತ್ತಿರುವ ಮಾಹಿತಿ ಬೆಳಕಿಗೆ ಬಂದಿದ್ದು, ಈ ಕುರಿತು ರೆಡ್ಮಿ ಕಂಪನಿಗೂ ಪತ್ರ ಬರೆಯಲು ಪೊಲೀಸರು ನಿರ್ಧರಿಸಿದ್ದಾರೆ. ಈ ಹಿಂದೆ ಜೈಲಿನಲ್ಲಿ ಪತ್ತೆಯಾದ ಸಿಮ್ ಕಾರ್ಡ್‌ಗಳೂ ನಕಲಿ ಗುರುತಿನ ದಾಖಲೆಗಳ ಮೂಲಕ ಪಡೆದಿರುವುದು ತನಿಖೆಯಲ್ಲಿ ಗೊತ್ತಾಗಿದೆ.

ಇದೇ ವೇಳೆ ಜೈಲು ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಪ್ರತ್ಯೇಕ ತನಿಖೆ ನಡೆಸಲು ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಅವರು ಜಿನೇಂದ್ರ ಖನಗಾವಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದಾರೆ.