Home Blog Page 11

ಜಕ್ಕಲಿಯಲ್ಲಿ ರಕ್ತದಾನಕ್ಕೆ ಯುವಕರ ಉತ್ಸಾಹ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ರಕ್ತದಾನ ಶಿಬಿರಗಳು ತುರ್ತು ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ ಜೀವದಾನ ನೀಡುವ ಅತ್ಯಂತ ಮಾನವೀಯ ಹಾಗೂ ಪವಿತ್ರ ಸಾಮಾಜಿಕ ಕಾರ್ಯಗಳಾಗಿವೆ ಎಂದು ನ್ಯಾಯವಾದಿ ವಿದ್ಯಾಧರ ಶಿರಗುಂಪಿ ಹೇಳಿದರು.

ಸಮೀಪದ ಜಕ್ಕಲಿ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಯುವ ಸೇವಾ ಸಂಘದ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆಯಲಿರುವ ಮಧ್ಯರಾತ್ರಿ ಧ್ವಜಾರೋಹಣ ಕಾರ್ಯಕ್ರಮದ ಪ್ರಯುಕ್ತ, ಗದುಗಿನ ಬಸವೇಶ್ವರ ರಕ್ತ ಕೇಂದ್ರದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ಯುವ ಮುಖಂಡ ಅನಿಲ್ ತಳವಾರ ಮಾತನಾಡಿ, ಅಪಘಾತ, ಶಸ್ತ್ರಚಿಕಿತ್ಸೆ, ಹೆರಿಗೆ ಹಾಗೂ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ರಕ್ತ ಸಂಜೀವಿನಿಯಾಗಿದೆ. ‘ರಕ್ತದಾನವೇ ಮಹಾದಾನ’ ಎಂಬ ಸಂದೇಶವನ್ನು ಸಮಾಜಕ್ಕೆ ಸಾರುವಲ್ಲಿ ಇಂತಹ ಶಿಬಿರಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು.

ಶಿಬಿರದಲ್ಲಿ ೩೬ಕ್ಕೂ ಅಧಿಕ ಜನರು ರಕ್ತದಾನ ಮಾಡಿದರು. ಗದುಗಿನ ಬಸವೇಶ್ವರ ರಕ್ತ ಕೇಂದ್ರದ ಆಡಳಿತಾಧಿಕಾರಿ ಅನಿಲಕುಮಾರ ಹಂದ್ರಾಳ, ಸಮಾಲೋಚಕ ಸುಭಾಷ್ ಶಾಲವಾಡ ಹಾಗೂ ತಂತ್ರಜ್ಞರಾದ ಸರೋಜಾ ಪತ್ತಾರ, ಆಕಾಶ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಅನಿಲ್ ಕಿಟಗೇರಿ, ನಾಗರಾಜ ಕಡಗದ, ಶಿವಕುಮಾರ್ ಸ್ಟಾಂಪಿನ್, ಮಂಜುನಾಥ ವಾಲಿ, ಆನಂದ ಕೊಪ್ಪದ, ವಿಶ್ವನಾಥ ಬುಳ್ಳಾ, ಅಂದಾನಪ್ಪ ಬಳಿಗೇರ, ಮುತ್ತು ಮೇಟಿ, ಮಹಾಂತೇಶ ಇಟಗಿ, ಪ್ರವೀಣ್ ಕೊಪ್ಪದ, ಅಮರ ಬುಳ್ಳಾ, ರವಿಕಿರಣ್ ಕಮ್ಮಾರ, ಸಂಗಮೇಶ ಪರಡ್ಡಿ, ಸೂರಜ್ ಮೆಣಸಿನಕಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೂ ಮುನ್ನ ರಕ್ತದಾನ ಮಾಡುವ ಮೂಲಕ ಜಕ್ಕಲಿ ಯುವಕರು ಮಾನವೀಯತೆಯ ಸಂದೇಶ ಸಾರಿರುವುದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.

“ಒಬ್ಬ ವ್ಯಕ್ತಿ ಮಾಡುವ ರಕ್ತದಾನದಿಂದ ಹಲವಾರು ಜೀವಗಳನ್ನು ಉಳಿಸುವ ಪುಣ್ಯದ ಅವಕಾಶ ದೊರೆಯುತ್ತದೆ. ರಕ್ತದಾನದಿಂದ ದೇಹದಲ್ಲಿ ಹೊಸ ರಕ್ತಕಣಗಳ ಉತ್ಪತ್ತಿಗೂ ಸಹಕಾರಿಯಾಗುತ್ತದೆ. ಪ್ರತಿಯೊಬ್ಬರೂ ರಕ್ತದಾನದ ಮಹತ್ವ ಅರಿತು ಇಂತಹ ಮಾನವೀಯ ಕಾರ್ಯಗಳಲ್ಲಿ ಕೈಜೋಡಿಸಬೇಕು.”

                         — ವಿದ್ಯಾಧರ ಶಿರಗುಂಪಿ, ನ್ಯಾಯವಾದಿ

ಆ.15ರಿಂದ ಶಿರಹಟ್ಟಿ ತಾಲೂಕಿನಲ್ಲಿ ಜಾಬ್ ಕಾರ್ಡ್ ಮೇಳ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಗ್ರಾಮೀಣ ಪ್ರದೇಶದ ಅರ್ಹ ಕುಟುಂಬಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ವಿಕಸಿತ ಭಾರತ–GRAM G ಯೋಜನೆಯಡಿ ಆ.15ರಿಂದ ಶಿರಹಟ್ಟಿ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಜಾಬ್ ಕಾರ್ಡ್ ಮೇಳ ಹಾಗೂ ವಿಶೇಷ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ತಿಳಿಸಿದ್ದಾರೆ.

ಉದ್ಯೋಗ ಬಯಸುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ವಿಶೇಷ ಚೇತನರು, ಮಹಿಳಾ ನೇತೃತ್ವದ ಕುಟುಂಬಗಳು, ಭೂರಹಿತ ಕೂಲಿ ಕಾರ್ಮಿಕರು ಸೇರಿದಂತೆ ಅರ್ಹ ಗ್ರಾಮೀಣ ಕುಟುಂಬಗಳಿಗೆ ತ್ವರಿತವಾಗಿ ಜಾಬ್ ಕಾರ್ಡ್ ಒದಗಿಸುವುದು ಅಭಿಯಾನದ ಉದ್ದೇಶವಾಗಿದೆ. ಈ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಮಾನವ ದಿನಗಳ ಸೃಷ್ಟಿಗೂ ಆದ್ಯತೆ ನೀಡಲಾಗುತ್ತಿದೆ ಎಂದರು.

ಜಾಬ್ ಕಾರ್ಡ್, ಇ-ಕೆವೈಸಿಗೆ ಆದ್ಯತೆ

ಈಗಾಗಲೇ ಜಾಬ್ ಕಾರ್ಡ್ ಹೊಂದಿರುವ ಕುಟುಂಬಗಳ ಮಾಹಿತಿಯನ್ನು ಪರಿಶೀಲಿಸುವುದು, ಅಗತ್ಯವಿರುವವರಿಗೆ ಹೊಸ ಜಾಬ್ ಕಾರ್ಡ್ ನೀಡುವುದು, ನವೀಕರಣ, e-KYC ಪೂರ್ಣಗೊಳಿಸುವುದು ಹಾಗೂ ಉದ್ಯೋಗದ ಬೇಡಿಕೆ ಸ್ವೀಕರಿಸುವ ಕಾರ್ಯ ನಡೆಯಲಿದೆ. ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಕುಟುಂಬಗಳಿಗೆ ನಿಯಮಾನುಸಾರ ಸ್ವೀಕೃತಿ ನೀಡಲು ಗ್ರಾಮ ಪಂಚಾಯಿತಿಗಳಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ.

ಮನೆ–ಮನೆ ಭೇಟಿ, ಗ್ರಾಮಸಭೆ, ಪೋಸ್ಟರ್ ಹಾಗೂ ಬ್ಯಾನರ್‌ಗಳ ಮೂಲಕ ಯೋಜನೆಯ ಕುರಿತು ಜಾಗೃತಿ ಮೂಡಿಸಲಾಗುವುದು. ಗ್ರಾಮೀಣ ಜನರು ಅಗತ್ಯ ದಾಖಲೆಗಳೊಂದಿಗೆ ತಮ್ಮ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿ ಯೋಜನೆಯ ಸದುಪಯೋಗ ಪಡೆಯಬೇಕು ಎಂದು ಅವರು ಮನವಿ ಮಾಡಿದ್ದಾರೆ.

“ಉದ್ಯೋಗದ ಅವಕಾಶವನ್ನು ಅರ್ಹ ಕುಟುಂಬಗಳ ಮನೆಬಾಗಿಲಿಗೆ ತಲುಪಿಸುವುದು ನಮ್ಮ ಮುಖ್ಯ ಉದ್ದೇಶ. ಜಾಬ್ ಕಾರ್ಡ್, e-KYC ಹಾಗೂ ಉದ್ಯೋಗದ ಬೇಡಿಕೆ ಸಲ್ಲಿಕೆ ಕುರಿತು ಮಾಹಿತಿ ಅಗತ್ಯವಿದ್ದರೆ ಸಾರ್ವಜನಿಕರು ತಮ್ಮ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಬೇಕು. ಯೋಜನೆಯ ಅನುಷ್ಠಾನದಲ್ಲಿ ಜನರ ಸಹಕಾರ ಅತ್ಯಂತ ಮುಖ್ಯ.”

                         — ರಾಮಣ್ಣ ದೊಡ್ಡಮನಿ, ಇಒ, ತಾಪಂ ಶಿರಹಟ್ಟಿ

ಅಣ್ಣಿಗೇರಿಯಲ್ಲಿ ಆ.15ರಿಂದ ಶರಣ ಶ್ರಾವಣ

0

ವಿಜಯಸಾಕ್ಷಿ ಸುದ್ದಿ, ಅಣ್ಣಿಗೇರಿ: ಲಿಂಗೈಕ್ಯ ಡಾ. ತೋಂಟದ ಸಿದ್ದಲಿಂಗ ಸ್ವಾಮೀಜಿ ಅವರು ಜೀವಿತಾವಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಅಪ್ರತಿಮ ಸಾಧನೆಗಳನ್ನು ಸ್ಮರಿಸುವ ‘ಶರಣ ಶ್ರಾವಣ’ ಉಪನ್ಯಾಸ ಮಾಲಿಕೆ ಆ.15ರಿಂದ ಸೆ.5ರವರೆಗೆ ಪಟ್ಟಣದಲ್ಲಿ ನಡೆಯಲಿದೆ.

ಸ್ಥಳೀಯ ಬಸವ ಕೇಂದ್ರ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ ಯುವ ಘಟಕದ ಆಶ್ರಯದಲ್ಲಿ ಪ್ರತಿ ಶನಿವಾರ ಸಂಜೆ ಪಟ್ಟಣದ ನಿಂಗಮ್ಮ ಹೂಗಾರ ವಿದ್ಯಾಲಯದ ಬಳಿಯ ತೋಂಟದಾರ್ಯ ಪ್ರಸಾದ ನಿಲಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ನಾಲ್ಕು ವಾರಗಳ ಕಾಲ ನಡೆಯಲಿರುವ ಉಪನ್ಯಾಸ ಮಾಲಿಕೆಯಲ್ಲಿ ಕ್ರಮವಾಗಿ ಡಾ. ಶಾಂತಾ ಲಕ್ಷ್ಮೇಶ್ವರ, ಸುಮಿತ್ರಾ ಹುಣಸಿಮರದ, ಬಿ.ಡಿ. ನಲವಡಿ ಹಾಗೂ ಎನ್.ಎಸ್. ಮೇಲ್ಮರಿ ಉಪನ್ಯಾಸ ನೀಡಲಿದ್ದಾರೆ.

ಕಾರ್ಯಕ್ರಮಗಳಿಗೆ ಕ್ರಮವಾಗಿ ಮಲ್ಲಿಕಾರ್ಜುನ ಸುರಕೋಡ, ಶಿವಯೋಗಿ ಹುಬ್ಬಳ್ಳಿ, ವೀರೇಶ ಶಾನುಭೋಗರ ಹಾಗೂ ಲಿಂಗರಾಜ ಕುಲಕರ್ಣಿ ಅಧ್ಯಕ್ಷತೆ ವಹಿಸಲಿದ್ದಾರೆ.

ಎಸ್.ವಿ. ಕುರಡಗಿ, ಡಾ. ಸುಧಾ ಕೌಜಗೇರಿ, ಚನ್ನಬಸಮ್ಮ ಹಗೇದಕಟ್ಟಿಮಠ ಹಾಗೂ ಕಿರಣ ಬೂದಿಹಾಳ ಉಪಸ್ಥಿತರಿರುವರು. ದಾಸೋಹ ಸೇವೆಯನ್ನು ಶೋಭಾ ಕುರಡಗಿ, ಕವಿತಾ ಬಿರಸಲ್, ಸಾವಿತ್ರಿ ಹರ್ಲಾಪೂರ, ಅನ್ನಪೂರ್ಣ ಆಕಳವಾಡಿ ಹಾಗೂ ಆದ್ಯಾ ದಿವಟರ ವಹಿಸಿಕೊಂಡಿದ್ದಾರೆ.

ಶರಣ ಸಾಹಿತ್ಯ ಹಾಗೂ ಡಾ. ತೋಂಟದ ಸಿದ್ದಲಿಂಗ ಸ್ವಾಮೀಜಿ ಅವರ ಸಾಧನೆಗಳ ಕುರಿತು ನಡೆಯುವ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಂಘಟಕರು ಮನವಿ ಮಾಡಿದ್ದಾರೆ.

ಸಂಗೀತ ನಮ್ಮ ಸಂಸ್ಕೃತಿಯ ಸಂಕೇತ: ಪ್ರೀತಿ ಹೊನ್ನಗುಡಿ

0

ವಿಜಯಸಾಕ್ಷಿ ಸುದ್ದಿ, ಗದಗ: ಸಂಗೀತ ಕೇವಲ ಮನರಂಜನೆಗೆ ಸೀಮಿತವಲ್ಲ, ಅದು ನಮ್ಮ ಸಂಸ್ಕೃತಿ ಹಾಗೂ ಭವ್ಯ ಪರಂಪರೆಯ ಸಂಕೇತವಾಗಿದೆ. ಸಂಗೀತ ಮಾನಸಿಕ ನೆಮ್ಮದಿ ನೀಡುವುದರ ಜತೆಗೆ ಭಗವಂತನ ಒಲುಮೆಗೂ ಕಾರಣವಾಗುವ ಮಾಧ್ಯಮವಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮಹಿಳಾ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರೀತಿ ಹೊನ್ನಗುಡಿ ಹೇಳಿದರು.

ಎಸ್.ವಿ.ಟಿ. ಪ್ಯಾರಾ ಮೆಡಿಕಲ್ ಕಾಲೇಜಿನ ಸಭಾಭವನದಲ್ಲಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ‘ಪುಟ್ಟರಾಜ ಸಂಗೀತ ಸಂಭ್ರಮ–26’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಪುಟ್ಟರಾಜ ಗವಾಯಿಗಳು ಸಂಗೀತದ ಮೂಲಕ ಭಗವಂತನ ಒಲುಮೆ ಪಡೆದು ನಡೆದಾಡುವ, ಮಾತನಾಡುವ ದೇವರು ಎನಿಸಿಕೊಂಡಿದ್ದರು. ವೀರೇಶ್ವರ ಪುಣ್ಯಾಶ್ರಮದ ಮೂಲಕ ಸಂಗೀತ ಸೇವೆ ಸಲ್ಲಿಸಿ ನಮ್ಮ ಭವ್ಯ ಪರಂಪರೆಯನ್ನು ಎತ್ತಿಹಿಡಿದಿದ್ದಾರೆ. ಅವರ ಶಿಷ್ಯ–ಪ್ರಶಿಷ್ಯರು ಗದುಗಿನ ಕೀರ್ತಿಯನ್ನು ದೇಶ-ವಿದೇಶಗಳಲ್ಲಿ ಹೆಚ್ಚಿಸಿದ್ದಾರೆ. ಸಂಗೀತವನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು” ಎಂದು ಪ್ರೀತಿ ಹೊನ್ನಗುಡಿ ಹೇಳಿದರು.

ಕಾರ್ಯಕ್ರಮವನ್ನು ವನಜಾಕ್ಷಿ ಎಸ್. ತೋಟಗಂಟಿಮಠ ಉದ್ಘಾಟಿಸಿದರು. ಸೇವಾ ಸಮಿತಿ ಅಧ್ಯಕ್ಷ ಪಂ. ಫಕೀರೇಶ್ವರ ಶಾಸ್ತ್ರಿ ಹಿರೇಮಠ ಬೆಳ್ಳಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎಸ್.ವಿ.ಟಿ. ಅಧ್ಯಕ್ಷ ಡಾ. ಸಂತೋಷ ತೋಟಗಂಟಿಮಠ ಸೇವಾ ಸಮಿತಿಯ ಕಾರ್ಯವನ್ನು ಶ್ಲಾಘಿಸಿದರು.

ಸುಕ್ರುಸಾಬ ಮುಲ್ಲಾ ಹಾರ್ಮೋನಿಯಂ ಸೋಲೋ, ಸಂಜಯಕುಮಾರ ಅರ್ಕಸಾಲಿ ವಯೋಲಿನ್ ಸೋಲೋ, ನಾಗೇಂದ್ರ ಅಕ್ಕಸಾಲಿ ತಬಲಾ ಸೋಲೋ, ಕುಮಾರ ಮಠ ಗುತ್ತರಗಿ ಹಿಂದೂಸ್ತಾನಿ ಗಾಯನ ಹಾಗೂ ಕೃತಿಕಾ ಶರಣಯ್ಯ ಹಿಡ್ಕಿಮಠ ವಚನ ಗಾಯನ ಪ್ರಸ್ತುತಪಡಿಸಿ ಸಂಗೀತಾಸಕ್ತರನ್ನು ರಂಜಿಸಿದರು.

ಈ ಸಂದರ್ಭದಲ್ಲಿ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಲಾ ವಿಕಾಸ ಪರಿಷತ್ ವತಿಯಿಂದ ಪುಸ್ತಕ ದಾಸೋಹ ಯೋಜನೆಯಡಿ 200 ಯುವಕರಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು.

ವಿಜಯಕುಮಾರ ಹಿರೇಮಠ, ಅನಿತಾ ತೋಟಗಂಟಿಮಠ, ಸ್ನೇಹಾ ಹಿರೇಮಠ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಪಂ. ಸಿ.ಕೆ.ಎಚ್. ಶಾಸ್ತ್ರೀ ಕಡಣಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕುಮಾರ ಹಿರೇಮಠ ವಂದಿಸಿದರು.

ವಿದ್ಯುತ್ ಯಂತ್ರದಲ್ಲಿ ಸಿಲುಕಿದ್ದ ಸಿಬ್ಬಂದಿಯ ಕೈ ಉಳಿಸಿದ ಬಂಟ್ವಾಳದ ಬಾಲಕ! ಮನ್ವಿತ್ ಸಾಹಸಕ್ಕೆ ಭಾರಿ ಮೆಚ್ಚುಗೆ

0

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಸಮಯಪ್ರಜ್ಞೆ ಮತ್ತು ಧೈರ್ಯದಿಂದ ಅಕ್ಷರ ದಾಸೋಹ ಸಿಬ್ಬಂದಿಯನ್ನು ದೊಡ್ಡ ಅಪಾಯದಿಂದ ರಕ್ಷಿಸಿದ ಘಟನೆ ನಡೆದಿದೆ.

ವಿದ್ಯಾರ್ಥಿ ಮನ್ವಿತ್‌ನ ಈ ಸಾಹಸಕ್ಕೆ ಶಾಲೆಯ ಶಿಕ್ಷಕರು, ಸ್ಥಳೀಯರು ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಂಟ್ವಾಳ ತಾಲೂಕಿನ ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಕ್ಷರ ದಾಸೋಹ ವಿಭಾಗದಲ್ಲಿ ಸಿಬ್ಬಂದಿಯೊಬ್ಬರು ವಿದ್ಯುತ್ ಚಾಲಿತ ತೆಂಗಿನಕಾಯಿ ತುರಿಯುವ ಯಂತ್ರದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಅವರ ಕೈಬೆರಳು ಚಾಲನೆಯಲ್ಲಿದ್ದ ಯಂತ್ರದೊಳಗೆ ಸಿಲುಕಿಕೊಂಡಿತು.

ನೋವಿನ ತೀವ್ರತೆಯಿಂದ ಸಿಬ್ಬಂದಿ ಕಿರುಚಾಡತೊಡಗಿದ್ದು, ಕೆಲ ಕ್ಷಣ ತಡವಾದರೂ ಗಂಭೀರ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು.

ಆ ವೇಳೆ ಅಲ್ಲೇ ಇದ್ದ 5ನೇ ತರಗತಿ ವಿದ್ಯಾರ್ಥಿ ಮನ್ವಿತ್ ಪರಿಸ್ಥಿತಿಯ ಗಂಭೀರತೆ ಅರಿತು ಎದೆಗುಂದದೆ ತಕ್ಷಣ ವಿದ್ಯುತ್ ಸ್ವಿಚ್ ಆಫ್ ಮಾಡಿದ್ದಾನೆ. ಇದರಿಂದ ಯಂತ್ರದ ಕಾರ್ಯಾಚರಣೆ ಕೂಡಲೇ ನಿಂತಿದ್ದು, ಸಿಬ್ಬಂದಿಯ ಕೈಗೆ ಇನ್ನಷ್ಟು ಹಾನಿಯಾಗುವುದನ್ನು ತಡೆಯಲು ಸಾಧ್ಯವಾಗಿದೆ.

ಬಾಲಕನ ಸಮಯೋಚಿತ ನಿರ್ಧಾರದಿಂದ ದೊಡ್ಡ ಅಪಾಯ ತಪ್ಪಿದ್ದು, ಶಾಲೆಯಲ್ಲಿ ಇದ್ದ ಶಿಕ್ಷಕರು ಹಾಗೂ ಸಿಬ್ಬಂದಿ ಮನ್ವಿತ್‌ನ ಧೈರ್ಯವನ್ನು ಶ್ಲಾಘಿಸಿದ್ದಾರೆ.

ವಿದ್ಯಾರ್ಥಿ ಮನ್ವಿತ್‌ನ ಸಾಹಸಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಸಾಮಾಜಿಕ ಜಾಲತಾಣದ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

“ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮನ್ವಿತ್‌ನ ಸಮಯಪ್ರಜ್ಞೆ ಮತ್ತು ಧೈರ್ಯ ನಿಜಕ್ಕೂ ಹೃದಯಸ್ಪರ್ಶಿ ಹಾಗೂ ಶ್ಲಾಘನೀಯ. ಅಡುಗೆ ಸಿಬ್ಬಂದಿಯನ್ನು ಅಪಾಯದಿಂದ ರಕ್ಷಿಸಿದ ಮನ್ವಿತ್‌ಗೆ ಹೃದಯಪೂರ್ವಕ ಅಭಿನಂದನೆಗಳು” ಎಂದು ತಿಳಿಸಿದ್ದಾರೆ.

ಅಲ್ಲದೆ, “ವಿದ್ಯುತ್ ಚಾಲಿತ ಕಾಯಿ ತುರಿಯುವ ಯಂತ್ರದಲ್ಲಿ ಸಿಬ್ಬಂದಿಯ ಕೈಬೆರಳು ಸಿಲುಕಿಕೊಂಡಾಗ ಪರಿಸ್ಥಿತಿಯ ಗಂಭೀರತೆ ಅರಿತು ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಮೂಲಕ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವನ್ನು ಮನ್ವಿತ್ ತಪ್ಪಿಸಿದ್ದಾನೆ. ಅವನ ಮಾನವೀಯ ಕಾಳಜಿ, ಧೈರ್ಯ ಮತ್ತು ಸಮಯಪ್ರಜ್ಞೆ ಎಲ್ಲರಿಗೂ ಮಾದರಿಯಾಗಲಿ. ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ಬೆಳೆದು ನಾಡಿಗೆ ಕೀರ್ತಿ ತರಲಿ” ಎಂದು ಹಾರೈಸಿದ್ದಾರೆ.

ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಹುಲಕೋಟಿಯ ಶ್ರೀ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆ.13ರಂದು ಪದವಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲೊಂದಾದ ಯುವನಿಧಿ ಯೋಜನೆ ಕುರಿತು ಅರಿವು ಹಾಗೂ ವೃತ್ತಿಮಾರ್ಗದರ್ಶನ ಕಾರ್ಯಕ್ರಮ ನಡೆಯಿತು.

ಗದಗ ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ ಹಾಗೂ ಗದಗ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಯುವನಿಧಿ ಯೋಜನೆಯ ಸದುಪಯೋಗ ಪಡೆದುಕೊಂಡು ಭವಿಷ್ಯ ರೂಪಿಸಿಕೊಳ್ಳುವ ಕುರಿತು ಮಾರ್ಗದರ್ಶನ ನೀಡಲಾಯಿತು.

ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಅಧಿಕಾರಿಗಳು ಯೋಜನೆಯ ಅರ್ಹತೆ, ನೋಂದಣಿ ಹಾಗೂ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. 2023ರಿಂದ ಪದವಿ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿರುವ, ಕನಿಷ್ಠ ಆರು ತಿಂಗಳ ಕಾಲ ಉದ್ಯೋಗವಿಲ್ಲದಿರುವ ಅರ್ಹ ಅಭ್ಯರ್ಥಿಗಳಿಗೆ ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ.

ಪದವೀಧರರಿಗೆ ತಿಂಗಳಿಗೆ ₹3,000 ಹಾಗೂ ಡಿಪ್ಲೊಮಾ ಅಭ್ಯರ್ಥಿಗಳಿಗೆ ₹1,500 ಭತ್ಯೆ ದೊರೆಯಲಿದ್ದು, ಗರಿಷ್ಠ ಎರಡು ವರ್ಷಗಳವರೆಗೆ ಸೌಲಭ್ಯ ಪಡೆಯಬಹುದು. ಅರ್ಹರು ಸೇವಾ ಸಿಂಧು ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಯಿತು.

ಕಾಲೇಜಿನ ಪ್ರಾಚಾರ್ಯ ಅಪ್ಪಣ್ಣ ಹಂಜಿ, ಸಹಾಯಕ ಉದ್ಯೋಗಾಧಿಕಾರಿ ಎಚ್ಚರಪ್ಪ ಬಡಿಗೇರ, ಆಪ್ತ ಸಮಾಲೋಚಕ ಆನಂದ ಹೊಂಬಳ ಸೇರಿದಂತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜನಮನಸೂರೆಗೊಂಡ ‘ಶ್ರೀದೇವಿ ಮಹಾತ್ಮೆ’ ದೊಡ್ಡಾಟ!

0

ವಿಜಯಸಾಕ್ಷಿ ಸುದ್ದಿ, ಗದಗ: ಉತ್ತರ ಕರ್ನಾಟಕದ ಜನಪದ ರಂಗಕಲೆಯ ವೈಶಿಷ್ಟ್ಯವನ್ನು ಸಾರುವ ‘ಶ್ರೀದೇವಿ ಮಹಾತ್ಮೆ’ ದೊಡ್ಡಾಟ ಪ್ರದರ್ಶನ ಕಲಾಪ್ರೇಮಿಗಳ ಮನಸೂರೆಗೊಂಡಿತು.

ಮುಳಗುಂದ ನಾಕಾ ಬಳಿಯ ಶ್ರೀ ಅಡವೀಂದ್ರಸ್ವಾಮಿ ಮಠದಲ್ಲಿ ಬೆಟಗೇರಿಯ ಬಿ.ಬಿ. ಬಣ್ಣದ ಜನಪದ ಕಲಾ ಮೇಳ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಹಾಗೂ ಶ್ರೀ ಅಡವೀಂದ್ರಸ್ವಾಮಿ ಮಠದ ಶಿವಾನುಭವ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ದೊಡ್ಡಾಟ ಪ್ರದರ್ಶನಕ್ಕೆ ಗದಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ, ಸಾಹಿತಿ ಹಾಗೂ ಸಂಶೋಧಕ ಡಾ. ರಾಜೇಂದ್ರ ಎಸ್. ಗಡಾದ ಮದ್ದಳೆ ಬಾರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೊಡ್ಡಾಟ, ಸಣ್ಣಾಟ, ತೊಗಲುಗೊಂಬೆಯಾಟ ಸೇರಿದಂತೆ ಜನಪದ ಕಲೆಗಳು ನಮ್ಮ ಸಾಂಸ್ಕೃತಿಕ ಪರಂಪರೆಯ ಜೀವಂತ ಪ್ರತೀಕಗಳಾಗಿವೆ. ಜನಪದೀಯರು ಆತ್ಮೀಯತೆ, ನಂಬಿಕೆ ಹಾಗೂ ಭಾವನಾತ್ಮಕತೆಯಿಂದ ಇವುಗಳನ್ನು ತಲೆಮಾರಿನಿಂದ ತಲೆಮಾರಿಗೆ ಉಳಿಸಿಕೊಂಡು ಬಂದಿದ್ದಾರೆ ಎಂದರು.

ಜಾಗತೀಕರಣ, ನಗರೀಕರಣ ಹಾಗೂ ಕೈಗಾರೀಕರಣದ ಪರಿಣಾಮ ಅನೇಕ ಜನಪದ ಕಲೆಗಳು ನಶಿಸುವ ಹಂತದಲ್ಲಿವೆ. ಕಲಾತಂಡಗಳು ಹಾಗೂ ಕಲಾವಿದರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಲಾವಿದರನ್ನು ಪ್ರೋತ್ಸಾಹಿಸಿ, ಕಲಾತಂಡಗಳಿಗೆ ಬೆಂಬಲ ನೀಡುವ ಮೂಲಕ ದೊಡ್ಡಾಟದಂತಹ ಅಪರೂಪದ ಕಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಜನಪದೀಯರದ್ದಾಗಿದೆ ಎಂದು ಹೇಳಿದರು.

ಉತ್ತರ ಕರ್ನಾಟಕದ ಜನಪದರಂಗ ಕಲೆಗಳಲ್ಲಿ ದೊಡ್ಡಾಟವು ವಿಶಿಷ್ಟ ಸ್ಥಾನ ಹೊಂದಿದೆ. ಭವ್ಯ ರಂಗಸಜ್ಜಿಕೆ, ವೀರೋಚಿತ ಕುಣಿತ, ಸಂಗೀತ, ವರ್ಣರಂಜಿತ ವೇಷಭೂಷಣ ಹಾಗೂ ವೀರ–ರೌದ್ರ ಪ್ರಧಾನ ಕಥಾವಸ್ತು ಇದರ ವೈಶಿಷ್ಟ್ಯವಾಗಿದೆ. ಹಿಂದೆ ರಾತ್ರಿಯಿಂದ ಬೆಳಗಿನವರೆಗೆ ನಡೆಯುತ್ತಿದ್ದ ದೊಡ್ಡಾಟಗಳು ಇದೀಗ ಕಾಲಕ್ಕೆ ತಕ್ಕಂತೆ ಸಂಕ್ಷಿಪ್ತ ರೂಪ ಪಡೆದುಕೊಂಡಿರುವುದು ಸ್ವಾಗತಾರ್ಹ. ಯುವ ಪೀಳಿಗೆ ಹಾಗೂ ಮಕ್ಕಳು ಇಂತಹ ಕಲೆಗಳನ್ನು ನೋಡಿ, ಅದರ ಮಹತ್ವ ಅರಿಯಬೇಕು ಎಂದರು.

ಶ್ರೀ ಅಡವೀಂದ್ರಸ್ವಾಮಿ ಮಠದ ದಸರಾ ಮಹೋತ್ಸವ ಸಮಿತಿ ಅಧ್ಯಕ್ಷೆ ಸುವರ್ಣ ಮದರಿಮಠ ಹಾಗೂ ಕಲಾಪೋಷಕ ಶ್ರೀನಿವಾಸ ಹುಬ್ಬಳ್ಳಿ ಮಾತನಾಡಿ, ಗದಗ–ಬೆಟಗೇರಿ ಭಾಗದಲ್ಲಿ ದೊಡ್ಡಾಟದಂತಹ ವಿಶಿಷ್ಟ ರಂಗಕಲೆ ಇನ್ನೂ ಜೀವಂತವಾಗಿರುವುದು ಜಿಲ್ಲೆಯ ಹೆಮ್ಮೆಯ ಸಂಗತಿ. ಇದರ ಉಳಿವಿಗೆ ಎಲ್ಲರೂ ಶ್ರಮಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿ.ಬಿ. ಬಣ್ಣದ ಜನಪದ ಕಲಾ ಮೇಳದ ಅಧ್ಯಕ್ಷ ಅಶೋಕ ಬಣ್ಣದ ಅವರು ಕಲಾ ಮೇಳ ಬೆಳೆದು ಬಂದ ಹಾದಿ ಹಾಗೂ ಮಠಮಾನ್ಯಗಳ ಸಹಕಾರವನ್ನು ಸ್ಮರಿಸಿದರು.

ಶ್ರೀಮಠದ ಧರ್ಮದರ್ಶಿ ವೇ. ಮಹೇಶ್ವರ ಸ್ವಾಮೀಜಿ ಮಾತನಾಡಿ, ಮೈಸೂರು ಅರಸರು ಹಾಗೂ ನಾಡಿನ ಮಠಮಾನ್ಯಗಳು ಜನಪದ ಕಲೆಗಳಿಗೆ ನೀಡಿದ ಪ್ರೋತ್ಸಾಹವನ್ನು ಸ್ಮರಿಸಿದರು. ಜನಪದ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಬೇಕು ಎಂದರು.

ಬಳಿಕ ಬೆಟಗೇರಿಯ ಶ್ರೀರಂಗಪ್ಪ ನಾರಾಯಣಕೇರಿ ಹಾಗೂ ಸಂಗಡಿಗರು ‘ಶ್ರೀದೇವಿ ಮಹಾತ್ಮೆ’ ದೊಡ್ಡಾಟವನ್ನು ಮನೋಜ್ಞವಾಗಿ ಪ್ರದರ್ಶಿಸಿ ಕಲಾಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾದರು.

ಅನ್ವಿಕಾ ಬಣ್ಣದ ಪ್ರಾರ್ಥಿಸಿದರು. ಜಿ.ಎಂ. ಯಾನಮಶೆಟ್ಟಿ ಸ್ವಾಗತಿಸಿದರು. ಬಿ.ಎಂ. ಬಿಳೆಯಲಿ ದೊಡ್ಡಾಟದ ಕುರಿತು ಅನಿಸಿಕೆ ಹಂಚಿಕೊಂಡರು. ಕಿರಣ ಬಣ್ಣದ ನಿರೂಪಿಸಿದರು. ಗೀತಾ ಹೂಗಾರ ವಂದಿಸಿದರು.

ಯುವಜನರು ಸರ್ಕಾರಿ ಉದ್ಯೋಗಕ್ಕೆ ಮಾತ್ರ ಸೀಮಿತವಾಗಬಾರದು: ಜಿಲ್ಲಾಧಿಕಾರಿ ಸ್ನೇಹಲ್ ಆರ್.

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಯುವಜನರು ಸರ್ಕಾರಿ ಉದ್ಯೋಗವನ್ನೇ ಗುರಿಯಾಗಿಸಿಕೊಳ್ಳದೆ ಖಾಸಗಿ ಕ್ಷೇತ್ರದಲ್ಲಿರುವ ಉದ್ಯೋಗಾವಕಾಶಗಳನ್ನೂ ಬಳಸಿಕೊಳ್ಳಬೇಕು. ಶಾಲಾ ಹಂತದಿಂದಲೇ ವಿದ್ಯಾರ್ಥಿಗಳಲ್ಲಿ ಜೀವನದ ಗುರಿ, ಕೌಶಲ್ಯ ಹಾಗೂ ಕ್ರೀಡಾಸಕ್ತಿಯನ್ನು ಬೆಳೆಸಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಭವನದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲೆಯ ಎಲ್ಲ ಇಲಾಖೆಗಳ ಪ್ರಗತಿ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.

1ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಓದುವ ಕೌಶಲ್ಯ ಕಡ್ಡಾಯವಾಗಿ ಬರಬೇಕು. ‘ಒಂದು ಶಾಲೆ–ಒಂದು ಕಲೆ–ಒಂದು ಕ್ರೀಡೆ’ ಎಂಬ ಆಶಯದೊಂದಿಗೆ ಅಧಿಕಾರಿಗಳು ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದರು.

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು ಒಂದೇ ಸರ್ಕಾರಿ ಉದ್ಯೋಗದ ಹಿಂದೆ ಬೀಳದೆ ಖಾಸಗಿ ಉದ್ಯೋಗಗಳಿಗೂ ಪ್ರಯತ್ನಿಸಬೇಕು. ಸರ್ಕಾರದ ಯೋಜನೆಗಳ ಜತೆಗೆ ಉದ್ಯೋಗಾವಕಾಶಗಳ ಮಾಹಿತಿ ಹಾಗೂ ಪ್ರೇರಣೆ ನೀಡುವ ಕಾರ್ಯ ನಡೆಯಬೇಕು ಎಂದು ಹೇಳಿದರು.

ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿ, ಪಿಯುಸಿ ಹಾಗೂ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಉದ್ಯೋಗ, ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳು ಹಾಗೂ ತರಬೇತಿ ಕುರಿತು ಮಾಹಿತಿ ನೀಡಬೇಕು ಎಂದರು.

ಯುವಜನರು ಇಂಟರ್ನೆಟ್ ಅನ್ನು ದುರ್ಬಳಕೆ ಮಾಡದೆ ತಮ್ಮ ಗುರಿ ಸಾಧನೆಗೆ ಬಳಸಿಕೊಳ್ಳಬೇಕು. ಶಾಲಾ-ಕಾಲೇಜುಗಳಲ್ಲಿ ದಿನಪತ್ರಿಕೆ ಓದುವ ಅಭ್ಯಾಸ ಬೆಳೆಸಬೇಕು. ಎಲ್ಲ ಶಾಲಾ-ಕಾಲೇಜುಗಳಲ್ಲಿ ಶೌಚಾಲಯ ಹಾಗೂ ನೀರಿನ ವ್ಯವಸ್ಥೆ ಕಡ್ಡಾಯವಾಗಿರಬೇಕು ಎಂದು ಸೂಚಿಸಿದರು.

ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಮಾತನಾಡಿ, ಶಿಕ್ಷಣದ ಜತೆಗೆ ಕ್ರೀಡೆಗೂ ಆದ್ಯತೆ ನೀಡಬೇಕು. ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳನ್ನು ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕು. ಶಾಲೆಗಳಲ್ಲಿ ಡಿಜಿಟಲ್ ಕೌಶಲ್ಯ ತರಬೇತಿ ನೀಡಬೇಕು ಹಾಗೂ ಪ್ರೌಢಶಾಲಾ ಹಂತದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಅರಿವು ಮೂಡಿಸಬೇಕು ಎಂದರು.

ಪ್ರೋಬೆಷನರಿ ಐಎಎಸ್ ಅಧಿಕಾರಿ ಅನುಪ್ರಿಯಾ ಸಾಕ್ಯಾ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಪ್ರಾದೇಶಿಕ ಉಪಅರಣ್ಯ ಸಂರಕ್ಷಣಾಧಿಕಾರಿ ಶೇಕ್ ಅಲಿಂ ಸಿದ್ದಿಕ್ಕಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

“ಪ್ರತಿಯೊಬ್ಬ ಮಗುವಿಗೂ ಶಿಕ್ಷಣದ ಜತೆಗೆ ಕ್ರೀಡೆ ಹಾಗೂ ಜೀವನದ ಗುರಿಯ ಅರಿವು ಮೂಡಬೇಕು. ಅಧಿಕಾರಿಗಳು ಒಂದೊಂದು ಶಾಲೆ ಅಥವಾ ವಸತಿ ನಿಲಯವನ್ನು ದತ್ತು ಪಡೆದು ತಿಂಗಳಲ್ಲಿ ಒಂದು ದಿನ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಅರಿತು ಪರಿಹರಿಸಬೇಕು. ವಿದ್ಯಾರ್ಥಿಗಳಿಗೆ ವಿವಿಧ ಉದ್ಯೋಗಾವಕಾಶಗಳ ಕುರಿತು ಜಾಗೃತಿ ಮೂಡಿಸಬೇಕು.”

                         — ಸ್ನೇಹಲ್ ಆರ್., ಜಿಲ್ಲಾಧಿಕಾರಿ

ಸ್ನೇಹದ ಬಂಧ ಗಟ್ಟಿಗೊಳಿಸಿದ ಇನ್ನರ್ ವೀಲ್ ಕ್ಲಬ್ ಸದಸ್ಯೆಯರು

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಇನ್ನರ್ ವೀಲ್ ಕ್ಲಬ್ ವತಿಯಿಂದ ಕ್ಲಬ್ ಆವರಣದಲ್ಲಿ ಸ್ನೇಹಿತರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸದಸ್ಯೆಯರು ಉತ್ಸಾಹದಿಂದ ಪಾಲ್ಗೊಂಡು ಪರಸ್ಪರ ಫ್ರೆಂಡ್ಶಿಪ್ ಬ್ಯಾಂಡ್ ಧರಿಸಿ, ಸ್ವತಃ ತಯಾರಿಸಿದ ಶುಭಾಶಯ ಪತ್ರಗಳನ್ನು ವಿನಿಮಯ ಮಾಡಿಕೊಂಡರು. ಅಧ್ಯಕ್ಷೆ ಮಂಜುಳಾ ಅಕ್ಕಿ ಅವರು ಸ್ನೇಹಿತರ ದಿನಾಚರಣೆಯ ಮಹತ್ವ ಕುರಿತು ಮಾತನಾಡಿದರು. ಸದಸ್ಯೆಯರು ಜೀವನದಲ್ಲಿ ಸ್ನೇಹ ಹಾಗೂ ಬಾಂಧವ್ಯದ ಮಹತ್ವದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಸ್ನೇಹಿತರ ದಿನದ ಅಂಗವಾಗಿ ವಿವಿಧ ಮನರಂಜನಾ ಆಟಗಳು ಹಾಗೂ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಆಟಗಳಲ್ಲಿ ವಿಜೇತರಾದ ವಿದ್ಯಾ ಗಂಜಿಹಾಳ ಹಾಗೂ ಪ್ರೀತಿ ಹೊನಗುಡಿ ಅವರಿಗೆ ಬಹುಮಾನ ವಿತರಿಸಲಾಯಿತು.

ಸ್ನೇಹ, ಸಂತೋಷ ಹಾಗೂ ಒಗ್ಗಟ್ಟಿನ ಸಂದೇಶ ಸಾರಿದ ಕಾರ್ಯಕ್ರಮವು ಸದಸ್ಯೆಯರಲ್ಲಿ ಆತ್ಮೀಯತೆ ಹಾಗೂ ಹೊಸ ಉತ್ಸಾಹ ಮೂಡಿಸಿತು.

ಈ ಸಂದರ್ಭದಲ್ಲಿ ಕ್ಲಬ್ ಅಧ್ಯಕ್ಷೆ ಮಂಜುಳಾ ಅಕ್ಕಿ, ಕಾರ್ಯದರ್ಶಿ ಪೂಜಾ ಭೂಮಾ ಸೇರಿದಂತೆ ಕ್ಲಬ್‌ನ ಸದಸ್ಯೆಯರು ಉಪಸ್ಥಿತರಿದ್ದರು.

ಹಾಲಕೆರೆಯಲ್ಲಿ ಬೆಳ್ಳಿ ರಥೋತ್ಸವದ ಸಂಭ್ರಮಕ್ಕೆ ಮುನ್ನುಡಿ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಹಾಲಕೆರೆ ಗ್ರಾಮದ ಅನ್ನದಾನೇಶ್ವರ ಸಂಸ್ಥಾನ ಮಠದಲ್ಲಿ ಆ.24ರಂದು ನಡೆಯಲಿರುವ ಬೆಳ್ಳಿ ರಥೋತ್ಸವಕ್ಕೆ ಧಾರ್ಮಿಕ ಸಂಭ್ರಮದ ಮುನ್ನುಡಿ ಬಿದ್ದಿದೆ. ಜಗದ್ಗುರು ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಮಂಗಳವಾರ ಪುರಪ್ರವೇಶ ಮಾಡುವ ಮೂಲಕ ರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಗ್ರಾಮದ ಹೊರವಲಯಕ್ಕೆ ಆಗಮಿಸಿದ ಶ್ರೀಗಳನ್ನು ಗ್ರಾಮಸ್ಥರು ವಿವಿಧ ವಾದ್ಯಮೇಳಗಳೊಂದಿಗೆ ಭಕ್ತಿಪೂರ್ವಕವಾಗಿ ಸ್ವಾಗತಿಸಿದರು. ಬಳಿಕ ಅಲಂಕೃತ ಚಕ್ಕಡಿಯಲ್ಲಿ ಶ್ರೀಗಳನ್ನು ಕೂರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಅನ್ನದಾನೇಶ್ವರ ಸಂಸ್ಥಾನ ಮಠಕ್ಕೆ ಕರೆತರಲಾಯಿತು. ಶ್ರೀಗಳು ರಥೋತ್ಸವದ ಸಿದ್ಧತೆಗಳನ್ನು ಪರಿಶೀಲಿಸಿದರು.

‘ಸದಾಚಾರ–ಸದ್ವಿಚಾರವೇ ಬದುಕಿನ ಬೆಳಕು’

ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು, ಮನುಷ್ಯನ ಜೀವನದಲ್ಲಿ ಸದಾಚಾರ ಬಹಳ ಮುಖ್ಯ. ಸದ್ವಿಚಾರಗಳನ್ನು ನಿರಂತರವಾಗಿ ಮೈಗೂಡಿಸಿಕೊಳ್ಳಬೇಕು. ಶಿವಾನುಭವ ಚಿಂತನೆಯಿಂದ ಮನಸ್ಸಿನ ಮೈಲಿಗೆಯನ್ನು ದೂರ ಮಾಡಿಕೊಂಡು ಆತ್ಮಸ್ಥೈರ್ಯ ಹಾಗೂ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಭಕ್ತಿಯಿಂದ ಗುರುವಿನಲ್ಲಿ ಪ್ರಾರ್ಥಿಸಿದಾಗ ಮನೋಭಿಲಾಷೆಗಳು ಫಲಿಸುತ್ತವೆ ಎಂದರು.

ಹಾಲಕೆರೆ ಗ್ರಾಮದ ಭಕ್ತರು ಪ್ರತಿವರ್ಷ ತಪ್ಪದೇ ಪುರಪ್ರವೇಶ ಮಾಡಿಸುವ ಮೂಲಕ ಮಠದ ಮೇಲಿನ ಭಕ್ತಿಯನ್ನು ಮೆರೆದಿದ್ದಾರೆ ಎಂದು ಶ್ರೀಗಳು ಹೇಳಿದರು.

ಆ.14ರಿಂದ 11 ದಿನ ಪುರಾಣ ಪ್ರವಚನ

ಅನ್ನದಾನೇಶ್ವರ ಸಂಸ್ಥಾನ ಮಠದ ಆವರಣದಲ್ಲಿ ಆ.14ರಿಂದ 24ರವರೆಗೆ ಪ್ರತಿದಿನ ಸಂಜೆ 7.30ರಿಂದ ರಾತ್ರಿ 9ರವರೆಗೆ ನಾಲತ್ವಡ ಶ್ರೀ ವೀರೇಶ್ವರ ಶರಣರ ಪುರಾಣ ಪ್ರವಚನ ನಡೆಯಲಿದೆ.

ಪುರಾಣ ಪ್ರಾರಂಭೋತ್ಸವದ ಸಾನ್ನಿಧ್ಯವನ್ನು ಜಗದ್ಗುರು ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ವಹಿಸಲಿದ್ದು, ದರುರ ಸಂಗಮೇಶ್ವರ ಮಠದ ಶ್ರೀ ಕೊಟ್ಟೂರು ಮಹಾಸ್ವಾಮಿಗಳು ಹಾಗೂ ಬನವಾಸಿಯ ಶ್ರೀ ಶಿವಲಿಂಗೇಶ್ವರ ದೇವರು ಸಮ್ಮುಖ ವಹಿಸಲಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.