Home Blog Page 10

ಕೇಸರಿ ಪೇಟಕ್ಕೆ ಅವಕಾಶ ಇಲ್ಲ; ‘ಹಳೆಯ ಪರಂಪರೆ ಮಾತ್ರ ಮಾನ್ಯ’ ಎಂದ ಸಿಎಂ ಸಿದ್ದರಾಮಯ್ಯ

0

ಮೈಸೂರು: ಶಾಲೆಗಳಿಗೆ ಕೇಸರಿ ಶಾಲು ಹಾಕಿಕೊಂಡು ಬರುವಂತಿಲ್ಲ ಹಾಗೂ ಹೊಸ ರೀತಿಯ ಕೇಸರಿ ಪೇಟಕ್ಕೂ ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, “ಪರಂಪರೆಯಿಂದ ಇದ್ದ ಪೇಟಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಈಗ ಹೊಸ ಬಣ್ಣದ ಪೇಟ ಹಾಕಿಕೊಂಡು ಬಂದರೆ ಅವಕಾಶ ಇರುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

“ಹಿಜಾಬ್ ವಿಚಾರ ಮಾತ್ರವಲ್ಲ, ಜನಿವಾರ, ಶಿವಧಾರ, ಪೇಟ ಇವುಗಳಿಗೂ ಅವಕಾಶ ನೀಡಿದ್ದೇವೆ. ಆದರೆ ಹೊಸ ರೂಪದಲ್ಲಿ ಯಾವುದೇ ಧಾರ್ಮಿಕ ಅಥವಾ ರಾಜಕೀಯ ಗುರುತು ತರುವುದಕ್ಕೆ ಅವಕಾಶ ಇಲ್ಲ” ಎಂದು ಹೇಳಿದರು.

ಹೈಕಮಾಂಡ್ ಭೇಟಿಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, “ನನ್ನನ್ನು ಇನ್ನೂ ಕರೆದಿಲ್ಲ. ಹೈಕಮಾಂಡ್ ಕರೆದಾಗ ದೆಹಲಿಗೆ ಹೋಗುತ್ತೇನೆ” ಎಂದರು. ಸಂಪುಟ ಪುನಾರಚನೆ ಬಗ್ಗೆ ಕೇಳಿದಾಗ, “ಚರ್ಚೆ ನಡೆದರೆ ಕ್ರಮ ಕೈಗೊಳ್ಳುತ್ತೇನೆ” ಎಂದು ಉತ್ತರಿಸಿದರು.

ಮೈಸೂರು ಪ್ರವಾಸದ ವೇಳೆ ಸಿಎಂ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು. ರಸ್ತೆ, ವಿದ್ಯುತ್ ಹಾಗೂ ಬಸ್ ನಿಲ್ದಾಣ ಕಾಮಗಾರಿಗಳ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಪೋಕ್ಸೋ ಕೇಸ್​​: ಹರಿಹರ ಠಾಣೆಗೆ ವಚನಾನಂದ ಸ್ವಾಮೀಜಿ ಆಗಮನ, ಮೆಡಿಕಲ್ ಟೆಸ್ಟ್ ಸಾಧ್ಯತೆ

ದಾವಣಗೆರೆ: ವಚನಾನಂದ ಸ್ವಾಮೀಜಿ ವಿರುದ್ಧ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣವನ್ನು ಹರಿಹರ ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ದಾವಣಗೆರೆ ಎಸ್‌ಪಿ ಹೆಚ್.ಟಿ. ಶೇಖರ್ ತಿಳಿಸಿದ್ದಾರೆ.

ಬಾಲಕನ ತಾಯಿ ನೀಡಿದ ದೂರಿನ ಆಧಾರದಲ್ಲಿ ವಚನಾನಂದ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಬಾಲಕನ ಮೇಲೆ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ನೊಂದ ಬಾಲಕನ ಹೇಳಿಕೆ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.

ಈ ಹಿಂದೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಠಾಣೆಯಲ್ಲಿ ಶೂನ್ಯ ಎಫ್‌ಐಆರ್ ದಾಖಲಾಗಿತ್ತು. ಬಳಿಕ ಘಟನೆ ನಡೆದಿದೆ ಎನ್ನಲಾದ ಸ್ಥಳದ ವ್ಯಾಪ್ತಿಗೆ ಅನುಗುಣವಾಗಿ ಪ್ರಕರಣವನ್ನು ಹರಿಹರ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದೆ.

ಇದೇ ವೇಳೆ ಹರ ಮಠದ ವಿಚಾರವಾಗಿ ಲೆಕ್ಕ ಕೇಳುವ ಮತ್ತು ಲೆಕ್ಕ ಕೊಡುವ ಕಾರ್ಯಕ್ರಮದ ಹಿನ್ನೆಲೆ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಎರಡು ಗುಂಪುಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಕಾರಣ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

ಮಠದಲ್ಲಿ ಪೂಜೆ ಹೊರತುಪಡಿಸಿ ಯಾವುದೇ ಸಭೆ, ಸಮಾರಂಭ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಜಿಲ್ಲಾಧಿಕಾರಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಮೇ 31ರವರೆಗೆ ಈ ಆದೇಶ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ವಿಚಾರಣೆಗೆ ವಚನಾನಂದ ಸ್ವಾಮೀಜಿ ಇಂದು ಹರಿಹರ ಗ್ರಾಮಾಂತರ ಠಾಣೆಗೆ ಹಾಜರಾಗಿದ್ದಾರೆ. ಪೊಲೀಸರು ಅವರಿಂದ ಹೇಳಿಕೆ ಪಡೆದು ಮುಂದಿನ ತನಿಖೆ ಮುಂದುವರಿಸಲಿದ್ದಾರೆ.

ಪ್ರಕರಣ ದಾಖಲಾಗಿರುವ ಹಿನ್ನೆಲೆ ಸ್ವಾಮೀಜಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆ ಇದ್ದು, ಹರಿಹರ ತಾಲೂಕು ಆಸ್ಪತ್ರೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಮೌನಿ ರಾಯ್ ದಾಂಪತ್ಯದಲ್ಲಿ ಸಂಕಷ್ಟ? ಪತಿಯಿಂದ ಆರ್ಥಿಕ ವಂಚನೆ ಆರೋಪದ ವದಂತಿ

ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಇಬ್ಬರೂ ಇನ್‌ಸ್ಟಾಗ್ರಾಂನಲ್ಲಿ ಪರಸ್ಪರ ಅನ್‌ಫಾಲೋ ಮಾಡಿರುವುದು ಹಾಗೂ ಫೋಟೋಗಳನ್ನು ಅಳಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ.

ಕೆಲವು ಮಾಧ್ಯಮ ವರದಿಗಳ ಪ್ರಕಾರ, ಸೂರಜ್ ನಂಬಿಯಾರ್ ಅವರು ಮೌನಿ ರಾಯ್ ಅವರನ್ನು ಆರ್ಥಿಕವಾಗಿ ವಂಚಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆ ಇಬ್ಬರ ನಡುವೆ ಸಂಬಂಧ ಹದಗೆಟ್ಟಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

ಆದರೆ ಈ ಎಲ್ಲ ಆರೋಪಗಳು ಅಧಿಕೃತವಾಗಿ ದೃಢಪಟ್ಟಿಲ್ಲ. ಈ ಕುರಿತು ಮೌನಿ ಅಥವಾ ಸೂರಜ್ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ಮೌನಿ ತಮ್ಮ ಇನ್‌ಸ್ಟಾಗ್ರಾಂ ಮೂಲಕ “ಸ್ವಲ್ಪ ಗೌಪ್ಯತೆ ನೀಡಿ” ಎಂದು ಮನವಿ ಮಾಡಿದ್ದಾರೆ ಎಂಬುದು ಗಮನ ಸೆಳೆದಿದೆ.

ಸೂರಜ್ ನಂಬಿಯಾರ್ ತಮ್ಮ ಖಾತೆಯನ್ನೇ ಅಳಿಸಿದ್ದಾರೆ ಎಂಬ ಮಾತುಗಳೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಬೆಳವಣಿಗೆಗಳ ನಡುವೆ ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಮೌನಿ ರಾಯ್ 2022ರಲ್ಲಿ ಸೂರಜ್ ನಂಬಿಯಾರ್ ಅವರನ್ನು ವಿವಾಹವಾಗಿದ್ದರು. ಮದುವೆಗೆ ಮೊದಲು ಇಬ್ಬರೂ ಸುಮಾರು ಮೂರು ವರ್ಷಗಳ ಕಾಲ ಸಂಬಂಧದಲ್ಲಿದ್ದರು.

12 ನೇ ತರಗತಿಯವರೆಗೆ ಧಾರ್ಮಿಕ ಸಂಕೇತಗಳನ್ನು ವಿದ್ಯಾರ್ಥಿಗಳು ಧರಿಸಬಹುದು: CM ಸಿದ್ದರಾಮಯ್ಯ

ಮೈಸೂರು: ಪ್ರಾಥಮಿಕ ತರಗತಿಯಿಂದ 12 ನೇ ತರಗತಿಯವರೆಗೆ ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಬಹುದು. ಈಗಾಗಲೇ ಸಾಂಪ್ರದಾಯಿಕವಾಗಿ ಅನುಸರಿಸುವ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು. ಹೊಸದಾಗಿ ಮಾಡುವಂತಿಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದರು.

ಅವರು ಇಂದು ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಧಾರ್ಮಿಕ ಸಂಕೇತಗಳ ವಿಚಾರದಲ್ಲಿ ಬಿಜೆಪಿ ಎತ್ತಿರುವ ತಕರಾರಿಗೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಮುಖ್ಯಮಂತ್ರಿಗಳು ಮೇಲಿನಂತೆ ಪ್ರತಿಕ್ರಿಯೆ ನೀಡಿದರು.

ಪ್ರಧಾನಿಗಳ ಹೇಳಿಕೆ ಸರಿಯಿಲ್ಲ

ಪ್ರಧಾನಿ ನರೇಂದ್ರ ಮೋದಿಯವರು ಡೀಸಲ್ ಬಳಕೆ ಕಡಿತಗೊಳಿಸಲು ತಮ್ಮ ಬೆಂಗಾವಲನ್ನು ಕಡಿತಗೊಳಿಸಿದ್ದು ಈ ಬಗ್ಗೆ ಕರ್ನಾಟಕದಲ್ಲಿಯೂ ಮಾಡಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ಅದು ಕೇವಲ ತಾತ್ಕಾಲಿಕ ಕ್ರಮವಷ್ಟೇ. ಪ್ರಧಾನಿಗಳು ಹೇಳಿರುವುದು ಸರಿಯಾದ ಕ್ರಮವಲ್ಲ. ಅದಕ್ಕೆ ಬದಲು ಬೇರೆ ದೇಶಗಳೊಂದಿಗೆ ಮಾತನಾಡಿ ಒಮ್ಮತಕ್ಕೆ ಬರುವುದು ಸೂಕ್ತ ಎಂದರು.

ಸಂಪುಟ ಪುನರ್ ರಚನೆ ಮಾಡುವ ಉದ್ದೇಶವಿದೆ

ಸಂಪುಟ ಪುನರ್ ರಚನೆಗೆ ಸಂಬಂಧಿಸಿದಂತೆ ದೆಹಲಿಗೆ ಪ್ರಯಾಣ ಬೆಳಸುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಸಂಪುಟ ಪುನರ್ ರಚನೆ ಮಾಡುವ ಉದ್ದೇಶವಿದೆ ಎಂದರು.

ಕೇಂದ್ರ ಸರ್ಕಾರ ನೀಟ್ ಪರೀಕ್ಷೆಯನ್ನು ಸರಿಯಾಗಿ ನಿರ್ವಹಿಸಿಲ್ಲ

ನೀಟ್ ಪ್ರಶ್ನೆ ಪತ್ರಿಕೆ ಉತ್ತರ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಮಾತನಾಡಿ ನೀಟ್ ಕೇಂದ್ರ ಸರ್ಕಾರ ಪರೀಕ್ಷೆಯನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ.ಇದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದರು.

ತಮಿಳುನಾಡಿನಲ್ಲಿ ಮದ್ಯ ಖರೀದಿಗೆ 21 ವರ್ಷ ವಯಸ್ಸು ಕಡ್ಡಾಯ: ವಿಜಯ್ ಸರ್ಕಾರದಿಂದ ಹೊಸ ಆದೇಶ

ಚೆನ್ನೈ: ಜೋಸೆಫ್ ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರ ರಾಜ್ಯದಲ್ಲಿ ಮದ್ಯಪಾನ ನಿಯಂತ್ರಣವನ್ನು ಮತ್ತಷ್ಟು ಕಠಿಣಗೊಳಿಸುವ ಮಹತ್ವದ ಕ್ರಮ ಕೈಗೊಂಡಿದೆ. ಇನ್ನು ಮುಂದೆ ಮದ್ಯ ಖರೀದಿ ಹಾಗೂ ಮಾರಾಟಕ್ಕೆ ಕನಿಷ್ಠ ವಯಸ್ಸನ್ನು 21 ವರ್ಷ ಎಂದು ನಿಗದಿಪಡಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಜೋಸೆಫ್ ವಿಜಯ್ ಸರ್ಕಾರ ಈ ನಿರ್ಧಾರ ಜಾರಿಗೆ ತಂದಿದ್ದು, ಸಾರ್ವಜನಿಕ ಆರೋಗ್ಯ ಮತ್ತು ಮದ್ಯಪಾನ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ.

ಈಗಾಗಲೇ ದೇವಾಲಯಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಬಸ್ ನಿಲ್ದಾಣಗಳ ಸಮೀಪದಲ್ಲಿದ್ದ 717 TASMAC ಮದ್ಯದಂಗಡಿಗಳನ್ನು ಮುಚ್ಚಲು ಸರ್ಕಾರ ಆದೇಶ ನೀಡಿದ್ದ ಬೆನ್ನಲ್ಲೇ ಇದೀಗ ಮತ್ತೊಂದು ಕಠಿಣ ಕ್ರಮ ಜಾರಿಗೆ ಬಂದಿದೆ.

ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮದ ಅಂಗಡಿಗಳ ಸಿಬ್ಬಂದಿಗೆ ಗ್ರಾಹಕರ ವಯಸ್ಸನ್ನು ಕಡ್ಡಾಯವಾಗಿ ಪರಿಶೀಲಿಸುವಂತೆ ಸೂಚಿಸಲಾಗಿದೆ. ಅನುಮಾನ ಉಂಟಾದರೆ ಆಧಾರ್ ಕಾರ್ಡ್ ಸೇರಿದಂತೆ ಅಧಿಕೃತ ಗುರುತಿನ ಚೀಟಿಗಳನ್ನು ಪರಿಶೀಲಿಸಿ, 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡಬಾರದು ಎಂದು ಸರ್ಕಾರ ಸ್ಪಷ್ಟ ಸೂಚನೆ ನೀಡಿದೆ.

ಇದರ ಜೊತೆಗೆ ಮದ್ಯದಂಗಡಿಗಳ ಕಾರ್ಯಾಚರಣೆ ಸಮಯವನ್ನು ಕಡಿಮೆ ಮಾಡುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ. ಪ್ರಸ್ತುತ ಮಧ್ಯಾಹ್ನ 12ರಿಂದ ರಾತ್ರಿ 10ರವರೆಗೆ ಕಾರ್ಯನಿರ್ವಹಿಸುತ್ತಿರುವ ಅಂಗಡಿಗಳನ್ನು ರಾತ್ರಿ 8 ಗಂಟೆಗೆ ಮುಚ್ಚುವ ಪ್ರಸ್ತಾಪವೂ ಚರ್ಚೆಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ TASMAC ರಾಜ್ಯದ ಪ್ರಮುಖ ಆದಾಯ ಮೂಲಗಳಲ್ಲಿ ಒಂದಾಗಿದೆ. 2025ರಲ್ಲಿ 48,344 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ ದಾಖಲಾಗಿದ್ದು, ಇದು ರಾಜ್ಯದ ಅತಿ ಹೆಚ್ಚು ಆದಾಯ ತರುವ ಇಲಾಖೆಗಳಲ್ಲೊಂದು ಎಂದು ಹೇಳಲಾಗಿದೆ.

ಸರ್ಕಾರದ ಆದೇಶದಂತೆ ದೇವಾಲಯಗಳ ಬಳಿ ಇರುವ 276 ಅಂಗಡಿಗಳು, ಶಿಕ್ಷಣ ಸಂಸ್ಥೆಗಳ ಸಮೀಪದ 186 ಅಂಗಡಿಗಳು ಹಾಗೂ ಬಸ್ ನಿಲ್ದಾಣಗಳ ಹತ್ತಿರದ 255 ಅಂಗಡಿಗಳನ್ನು ಮುಂದಿನ ಎರಡು ವಾರಗಳಲ್ಲಿ ಮುಚ್ಚಲಾಗುತ್ತದೆ. ಇದರಿಂದ ರಾಜ್ಯದಲ್ಲಿನ ಒಟ್ಟು TASMAC ಅಂಗಡಿಗಳ ಸಂಖ್ಯೆ 4,048ಕ್ಕೆ ಇಳಿಯಲಿದೆ.

ಯುವಜನರಲ್ಲಿ ಮಾದಕ ವ್ಯಸನ ತಡೆದು ಸಾರ್ವಜನಿಕ ಆರೋಗ್ಯ ಕಾಪಾಡುವ ಉದ್ದೇಶದಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ. ಇದೇ ವೇಳೆ ಜೋಸೆಫ್ ವಿಜಯ್ ಅವರ ಟಿವಿಕೆ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ‘ಮಾದಕ ವಸ್ತು ಮುಕ್ತ ತಮಿಳುನಾಡು’ ನಿರ್ಮಿಸುವ ಭರವಸೆ ನೀಡಿತ್ತು.

ಕಲ್ಲೇಶ್ವರ-ಬಸವಣ್ಣ ಮೂರ್ತಿಗಳು ಭಗ್ನ: ಗ್ರಾಮದಲ್ಲಿ ಉದ್ವಿಗ್ನ ವಾತಾವರಣ

ಹಗರಿಬೊಮ್ಮನಹಳ್ಳಿ: ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ-2 ಗ್ರಾಮದಲ್ಲಿ ಮಧ್ಯರಾತ್ರಿ ದುಷ್ಕರ್ಮಿಗಳು ನಡೆಸಿದ ಕೃತ್ಯದಿಂದ ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಗ್ರಾಮದ ಆರಾಧ್ಯ ದೈವಗಳಾದ ಕಲ್ಲೇಶ್ವರ ಸ್ವಾಮಿ ಹಾಗೂ ಬಸವಣ್ಣ ಮೂರ್ತಿಗಳನ್ನು ಕಿಡಿಗೇಡಿಗಳು ಭಗ್ನಗೊಳಿಸಿರುವ ಘಟನೆ ಬೆಳಗಿನ ಜಾವ ಬೆಳಕಿಗೆ ಬಂದಿದೆ.

ಬೆಳಿಗ್ಗೆ ಗ್ರಾಮಸ್ಥರು ದೇವಸ್ಥಾನಕ್ಕೆ ಆಗಮಿಸಿದ ವೇಳೆ ಮೂರ್ತಿಗಳು ಧ್ವಂಸಗೊಂಡಿರುವುದು ಕಂಡುಬಂದಿದ್ದು, ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಜನರು ಸ್ಥಳಕ್ಕೆ ಜಮಾಯಿಸಿದರು. ಘಟನೆಗೆ ಸಂಬಂಧಿಸಿದಂತೆ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಕಿಡಿಗೇಡಿಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಮಾಜದ ಶಾಂತಿ, ಸೌಹಾರ್ದತೆಗೆ ಧಕ್ಕೆ ತರುವ ಇಂತಹ ಕೃತ್ಯಗಳನ್ನು ಯಾವ ಕಾರಣಕ್ಕೂ ಸಹಿಸಲಾಗುವುದಿಲ್ಲ. ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ಬಲೆ ಬೀಸಿರುವುದಾಗಿ ತಿಳಿದುಬಂದಿದೆ. ತಪ್ಪಿತಸ್ಥರನ್ನು ಶೀಘ್ರ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕೇರಳ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಆಯ್ಕೆ: AICC ಅಧಿಕೃತ ಘೋಷಣೆ

ತಿರುವನಂತಪುರಂ: ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರ ಹೆಸರನ್ನು ಎಐಸಿಸಿ ಅಧಿಕೃತವಾಗಿ ಘೋಷಿಸಿದೆ. ಹಲವು ದಿನಗಳ ಲೆಕ್ಕಾಚಾರಗಳು ಹಾಗೂ ಆಂತರಿಕ ಚರ್ಚೆಗಳ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕೇರಳ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಕೆ.ಸಿ. ವೇಣುಗೋಪಾಲ್, ವಿ.ಡಿ. ಸತೀಶನ್ ಹಾಗೂ ರಮೇಶ್ ಚೆನ್ನಿತ್ತಲ ಅವರ ಹೆಸರುಗಳು ಪ್ರಮುಖವಾಗಿ ಚರ್ಚೆಯಲ್ಲಿದ್ದವು. ಆದರೆ ಅಂತಿಮವಾಗಿ ಪಕ್ಷದ ಹೈಕಮಾಂಡ್ ವಿ.ಡಿ. ಸತೀಶನ್ ಅವರನ್ನು ನೂತನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ.

ಏಪ್ರಿಲ್ 9ರಂದು ಕೇರಳ ವಿಧಾನಸಭಾ ಚುನಾವಣೆ ನಡೆದಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಿತ್ತು. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಒಟ್ಟು 140 ಸ್ಥಾನಗಳಲ್ಲಿ 102 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿತು. ಆಡಳಿತಾರೂಢ ಎಲ್‌ಡಿಎಫ್ ಕೇವಲ 35 ಸ್ಥಾನಗಳಿಗೆ ಸೀಮಿತವಾಗಿ ಹೀನಾಯ ಸೋಲು ಅನುಭವಿಸಿತು. ಆದರೂ ನೂತನ ಸಿಎಂ ಆಯ್ಕೆಗೆ ಕಾಂಗ್ರೆಸ್ ನಾಯಕತ್ವಕ್ಕೆ ಸುಮಾರು 10 ದಿನಗಳ ಕಾಲ ಚರ್ಚೆ ನಡೆಸಬೇಕಾಯಿತು.

ನೂತನ ಮುಖ್ಯಮಂತ್ರಿ ಘೋಷಣೆ ನಂತರ ತಿರುವನಂತಪುರಂನ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ. ಪಟಾಕಿ ಸಿಡಿಸಿ, ಘೋಷಣೆ ಕೂಗಿ ಸಂತೋಷ ವ್ಯಕ್ತಪಡಿಸಲಾಗಿದೆ.

ಕೇರಳ ಕಾಂಗ್ರೆಸ್ ಅಧ್ಯಕ್ಷ ಸನ್ನಿ ಜೋಸೆಫ್ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ತಿರುವನಂತಪುರಂನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಇದು ಪಕ್ಷಕ್ಕೆ ಅತ್ಯಂತ ಸರಿಯಾದ ಹಾಗೂ ಒಳ್ಳೆಯ ನಿರ್ಧಾರ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಹೀನ ಕೃತ್ಯ: ಚಲಿಸುತ್ತಿದ್ದ ಬಸ್ʼ​ನಲ್ಲಿ ಮಹಿಳೆಯ ಮೇಲೆ ಗ್ಯಾಂಗ್ ರೇಪ್! ಡ್ರೈವರ್, ಕಂಡಕ್ಟರ್ ಅರೆಸ್ಟ್

ನವದೆಹಲಿ: ಚಲಿಸುತ್ತಿದ್ದ ಖಾಸಗಿ ಬಸ್ಸಿನೊಳಗೆ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪ ದೆಹಲಿಯ ನಂಗ್ಲೋಯಿ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿ ದೆಹಲಿ ಪೊಲೀಸರು ಬಸ್ ಚಾಲಕ ಮತ್ತು ನಿರ್ವಾಹಕನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

ಸಂತ್ರಸ್ತೆ ನೀಡಿದ ದೂರಿನ ಪ್ರಕಾರ, ಸೋಮವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ಅವರು ಎಂದಿನಂತೆ ಕೆಲಸ ಮುಗಿಸಿ ಸರಸ್ವತಿ ವಿಹಾರ್ ಬಿ-ಬ್ಲಾಕ್ ಬಸ್ ನಿಲ್ದಾಣದ ಬಳಿ ನಡೆದುಕೊಂಡು ಹೋಗುತ್ತಿದ್ದರು. ಇದೇ ವೇಳೆ ಅಲ್ಲೇ ನಿಂತಿದ್ದ ಸ್ಲೀಪರ್ ಬಸ್‌ನ ಬಾಗಿಲ ಬಳಿ ನಿಂತಿದ್ದ ನಿರ್ವಾಹಕರನ್ನು ಸಮಯ ಕೇಳಲು ಅವರು ಹತ್ತಿರ ಹೋಗಿದ್ದಾರೆ.

ಆ ಸಂದರ್ಭದಲ್ಲಿ ಆರೋಪಿಗಳು ಮಹಿಳೆಯನ್ನು ಬಲವಂತವಾಗಿ ಬಸ್ಸಿನೊಳಗೆ ಎಳೆದುಕೊಂಡು ಹೋಗಿ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆಯ ವೇಳೆ ಬಸ್ ದೆಹಲಿಯ ರಾಣಿಬಾಗ್ ಪ್ರದೇಶದವರೆಗೆ ಸುಮಾರು 7 ಕಿಲೋಮೀಟರ್‌ಗಳಷ್ಟು ಚಲಿಸಿದ್ದು, ಈ ಅವಧಿಯಲ್ಲಿ ಕೃತ್ಯ ಎಸಗಲಾಗಿದೆ ಎನ್ನಲಾಗಿದೆ.

ನಂತರ ತಡರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಮಹಿಳೆಯನ್ನು ಬಸ್ಸಿನಿಂದ ಹೊರಗೆ ತಳ್ಳಲಾಗಿದೆ. ಇದರಿಂದ ಮಹಿಳೆಗೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆಯ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳಾದ ಬಸ್ ಚಾಲಕ ಮತ್ತು ನಿರ್ವಾಹಕನನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ಬಳಸಿದ ಖಾಸಗಿ ಬಸ್ ಅನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಈ ಘಟನೆ ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಮತ್ತೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಪೊಲೀಸರು ಪ್ರಕರಣದ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಗಡಿ ಭಾಗದಲ್ಲಿ 214 ಮದ್ದುಗುಂಡು ಪತ್ತೆ; ಕೋಲಾರದಲ್ಲಿ ಆತಂಕ, ಪೊಲೀಸರಿಂದ ತೀವ್ರಗೊಂಡ ತನಿಖೆ

0

ಕೋಲಾರ: ಬಂಗಾರಪೇಟೆ ತಾಲೂಕಿನ ತಮಿಳುನಾಡು ಗಡಿ ಪ್ರದೇಶದಲ್ಲಿ ಭಾರಿ ಪ್ರಮಾಣದ ಬುಲೆಟ್‌ಗಳು ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಒಟ್ಟು 214 ಮದ್ದುಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ದಾಸರಮಲ್ಲ ಬ್ರಿಡ್ಜ್ ಬಳಿ ಅಪರಿಚಿತರು ಈ ಬುಲೆಟ್‌ಗಳನ್ನು ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳ ಪರಿಶೀಲನೆ ವೇಳೆ 135 ಜೀವಂತ ಗುಂಡುಗಳು ಮತ್ತು 85 ಖಾಲಿ ಕಾರ್ಟ್ರಿಡ್ಜ್‌ಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

7.6 mm ಮಾದರಿಯ ಈ ಗುಂಡುಗಳು 1969ರಲ್ಲಿ ಮಹಾರಾಷ್ಟ್ರದಲ್ಲಿ ತಯಾರಾದವುಗಳಾಗಿದ್ದು, ಇವು ಮಿಷನ್ ಗನ್ ಹಾಗೂ ಎಸ್‌ಎಲ್‌ಆರ್ ರೈಫಲ್‌ಗಳಿಗೆ ಬಳಸುವ ಮಾದರಿಯವು ಎಂದು ತಿಳಿದುಬಂದಿದೆ.

ಇವು ಹಳೆಯ ಸ್ಟಾಕ್‌ನ ಮಿಸ್‌ಫೈರ್ ಅಥವಾ ಡಮ್ಮಿ ಬುಲೆಟ್‌ಗಳಾಗಿರಬಹುದೆಂಬ ಶಂಕೆಯೂ ವ್ಯಕ್ತವಾಗಿದೆ. ಹಲವು ತಿಂಗಳ ಹಿಂದೆಯೇ ಇವುಗಳನ್ನು ಇಲ್ಲಿ ತ್ಯಜಿಸಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಕಾಮಸಮುದ್ರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಮದ್ದುಗುಂಡುಗಳ ಮೂಲ ಹಾಗೂ ಉದ್ದೇಶದ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ.

ಜೀವನಾಂಶ ಪಾವತಿಯಲ್ಲಿ ವಿಳಂಬ: ಪತಿಯ ವಿರುದ್ಧದ ಬಂಧನ ವಾರಂಟ್ ಎತ್ತಿಹಿಡಿದ ಹೈಕೋರ್ಟ್

ಬೆಂಗಳೂರು: ಪತ್ನಿಗೆ ನೀಡಬೇಕಾದ ಜೀವನಾಂಶವನ್ನು ಪಾವತಿಸದೇ ಅನಗತ್ಯ ವಿಳಂಬ ಮಾಡುತ್ತಿದ್ದ ಪತಿಯ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಮಂಗಳೂರು ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಬಂಧನ ವಾರಂಟ್ ಅನ್ನು ಸಮರ್ಥಿಸಿದೆ.

ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಜೀವನಾಂಶ ಬಾಕಿ ಉಳಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಬಂಧನ ವಾರಂಟ್ ಪ್ರಶ್ನಿಸಿ ಸೈಲೇಶ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಡಾ. ಕೆ. ಮನ್ಮಧ ರಾವ್ ಅವರಿದ್ದ ನ್ಯಾಯಪೀಠ ವಜಾಗೊಳಿಸಿದೆ. ನ್ಯಾಯಾಲಯದ ಆದೇಶವನ್ನು ಪಾಲಿಸದಿರುವುದು ಉದ್ದೇಶಪೂರ್ವಕ ಅವಿಧೇಯತೆ ಎಂದು ಪೀಠ ಕಟುವಾಗಿ ಅಭಿಪ್ರಾಯಪಟ್ಟಿದೆ.

ಜೀವನಾಂಶ ಎನ್ನುವುದು ಕೇವಲ ಘೋಷಣಾತ್ಮಕ ಆದೇಶವಲ್ಲ; ಅದನ್ನು ಪಾವತಿಸುವುದು ಸಂಬಂಧಿತ ವ್ಯಕ್ತಿಯ ನಿರಂತರ ಕಾನೂನುಬದ್ಧ ಹೊಣೆಗಾರಿಕೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ವಿಚಾರಣೆ ಬಾಕಿಯಿದೆ ಅಥವಾ ಮಧ್ಯಂತರ ಆದೇಶಗಳಿವೆ ಎಂಬ ನೆಪದಲ್ಲಿ ಜೀವನಾಂಶ ಪಾವತಿಯನ್ನು ಮುಂದೂಡಲು ಅವಕಾಶವಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ 125(3) ಅಡಿಯಲ್ಲಿ ಬಂಧನ ವಾರಂಟ್ ಜಾರಿಗೆ ಸ್ಪಷ್ಟ ಅವಕಾಶವಿದ್ದು, ಅರ್ಜಿದಾರರಿಗೆ ಸಮರ್ಪಕ ಕಾಲಾವಕಾಶ ನೀಡಿದ್ದರೂ ಜೀವನಾಂಶ ಪಾವತಿಸದಿರುವುದಕ್ಕೆ ಸೂಕ್ತ ಕಾರಣ ನೀಡಲು ಅವರು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಗಮನಿಸಿದೆ.

ಇದಲ್ಲದೆ, ಬಂಧನಕ್ಕೂ ಮುನ್ನ ಆಸ್ತಿ ಜಪ್ತಿ ಮಾಡಲೇಬೇಕೆಂಬ ಕಡ್ಡಾಯ ನಿಯಮವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಜೀವನಾಂಶ ಪಾವತಿಸದ ಸಂದರ್ಭಗಳಲ್ಲಿ ದಂಡ ವಿಧಿಸುವುದು ಅಥವಾ ಜೈಲು ಶಿಕ್ಷೆ ನೀಡುವ ಅಧಿಕಾರ ನ್ಯಾಯಾಲಯಕ್ಕೆ ಇದೆ ಎಂದು ಸ್ಪಷ್ಟಪಡಿಸಿದೆ.

ಜೀವನಾಂಶ ಕಾನೂನಿನ ಮೂಲ ಉದ್ದೇಶ ಅಸಹಾಯಕ ಪತ್ನಿ ಮತ್ತು ಮಕ್ಕಳಿಗೆ ಆರ್ಥಿಕ ಭದ್ರತೆ ಒದಗಿಸುವುದಾಗಿದೆ. ಇಂತಹ ಸಂದರ್ಭಗಳಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘಿಸುವವರಿಗೆ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ ಹೈಕೋರ್ಟ್, ಮಂಗಳೂರಿನ ಕೌಟುಂಬಿಕ ನ್ಯಾಯಾಲಯ ಕಾನೂನು ಪ್ರಕಾರ ಬಂಧನ ಮತ್ತು ಹಣ ವಸೂಲಾತಿ ಕ್ರಮಗಳನ್ನು ಮುಂದುವರಿಸಬಹುದು ಎಂದು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ:

ಮಂಗಳೂರು ಮೂಲದ ಸೈಲೇಶ್ ಕುಮಾರ್ ಮತ್ತು ನಿಶಾ ಎಸ್. ಕುಮಾರ್ ಅವರು 1998ರ ಮಾರ್ಚ್ 18ರಂದು ವಿವಾಹವಾಗಿದ್ದು, ದಂಪತಿಗೆ ಯಶ್ ಎಂಬ ಪುತ್ರನಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆ ನಿಶಾ ಅವರು 2014ರಲ್ಲಿ ಮಧ್ಯಂತರ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ ಮೊದಲಿಗೆ ಮಾಸಿಕ 12,750 ರೂ. ಪಾವತಿಸಲು ಆದೇಶಿಸಿತ್ತು. ನಂತರ ಸುದೀರ್ಘ ವಿಚಾರಣೆ ಬಳಿಕ ಪತ್ನಿ ಹಾಗೂ ಮಗನಿಗೆ ವಿವಿಧ ಅವಧಿಗಳಿಗೆ ಅನ್ವಯವಾಗುವಂತೆ ಮಾಸಿಕ 1.80 ಲಕ್ಷದಿಂದ 2.80 ಲಕ್ಷ ರೂ.ವರೆಗೆ ಜೀವನಾಂಶ ಪಾವತಿಸಲು ಹಾಗೂ ಬಾಕಿ ಮೊತ್ತಕ್ಕೆ ಶೇ.7.5ರಷ್ಟು ಬಡ್ಡಿಯೊಂದಿಗೆ ಪಾವತಿಸಲು ನಿರ್ದೇಶಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿ ಸೈಲೇಶ್ ಕುಮಾರ್ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದು, ಅದು ವಿಚಾರಣಾ ಹಂತದಲ್ಲಿದೆ. ಇದೇ ವೇಳೆ ಪತ್ನಿ ನ್ಯಾಯಾಲಯದ ಆದೇಶ ಜಾರಿಗೊಳಿಸಲು ಎಕ್ಸಿಕ್ಯೂಷನ್ ಅರ್ಜಿ ಸಲ್ಲಿಸಿದ್ದರು.

ನ್ಯಾಯಾಲಯ ಸೂಚಿಸಿದಂತೆ ಪರಿಹಾರದ ಶೇ.50ರಷ್ಟು ಮೊತ್ತ ಠೇವಣಿ ಇಡದ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿತ್ತು. ನಂತರ ಬಂಧನಕ್ಕೊಳಗಾದ ಸೈಲೇಶ್ ಕುಮಾರ್ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸೈಲೇಶ್ ಕುಮಾರ್ ಅವರ ಮಾಸಿಕ ಆದಾಯ ಕೇವಲ 42 ಸಾವಿರ ರೂ. ಆಗಿದ್ದು, ಕೋಟ್ಯಂತರ ರೂಪಾಯಿ ಜೀವನಾಂಶ ಪಾವತಿಸಲು ಸಾಧ್ಯವಿಲ್ಲ. ಬಂಧನ ವಾರಂಟ್ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ವಾದ ಮಂಡಿಸಿದ್ದರು. ಆದರೆ ಈ ವಾದವನ್ನು ಹೈಕೋರ್ಟ್ ತಳ್ಳಿ ಹಾಕಿದೆ.

error: Content is protected !!