Home Blog Page 12

ಚರಂಡಿ ನೀರಿಗೆ ಮುಳುಗಿದ 150 ಎಕರೆ ಕೃಷಿಭೂಮಿ!

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಪಟ್ಟಣದ ಚರಂಡಿ ನೀರು ಲಂಡಿಹಳ್ಳದ ಮೂಲಕ ಹರಿದು ಅಡರಕಟ್ಟಿ ಹಾಗೂ ಮಂಜಲಾಪುರ ಗ್ರಾಮದ ರೈತರ ಜಮೀನುಗಳಿಗೆ ನುಗ್ಗುತ್ತಿರುವ ಪರಿಣಾಮ ಸುಮಾರು 150 ಎಕರೆ ಫಲವತ್ತಾದ ಕೃಷಿಭೂಮಿ ಹಾನಿಗೊಳಗಾಗಿದ್ದು, 300ಕ್ಕೂ ಹೆಚ್ಚು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿ ರೈತರು ಸೋಮವಾರ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ರೈತ ಮುಖಂಡ ಹಾಗೂ ವಕೀಲ ರವಿಕಾಂತ ಅಂಗಡಿ, ಪಟ್ಟಣದ ಕಲುಷಿತ ಚರಂಡಿ ನೀರು ಕೃಷಿ ಭೂಮಿಗೆ ಹರಿಯುತ್ತಿರುವುದರಿಂದ ಉಳುಮೆ ನಡೆಸಲು ಸಾಧ್ಯವಾಗುತ್ತಿಲ್ಲ. ರೈತರ ಜೀವನಾಧಾರವಾಗಿರುವ ಫಲವತ್ತಾದ ಭೂಮಿ ಹಾಳಾಗುತ್ತಿದ್ದು, ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಇಲಾಖೆ ಈ ಗಂಭೀರ ಸಮಸ್ಯೆಯನ್ನು ತುರ್ತಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಒಂದು ವಾರದೊಳಗೆ ಜಿಲ್ಲಾಧಿಕಾರಿಗಳು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ರೈತರೊಂದಿಗೆ ಸಭೆ ನಡೆಸಿ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಇಲ್ಲವಾದಲ್ಲಿ ಅಡರಕಟ್ಟಿ ಗ್ರಾಮದಿಂದ ಗದಗ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆ ನಡೆಸಿ, ರೈತರು ಸೇರಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಂಜುನಾಥ ಮಾಗಡಿ, ಬಿ.ಟಿ. ಚಂದ್ರಶೇಖರ, ಬಸವರಾಜ ಹೀರೆಮನಿ, ಮುತ್ತಣ್ಣ ಗಡೆಪ್ಪನವರ, ಸಿದ್ದಣ್ಣ ಹವಳದ, ನಿಂಗಪ್ಪ ಪ್ಯಾಟಿ, ಚನ್ನಬಸಪ್ಪ ಹಳೆಮನಿ, ರಾಮಣ್ಣ ಚಿಕ್ಕಣ್ಣವರ, ಗಂಗನಗೌಡ್ರ ಪಾಟೀಲ, ಮಾಂತೇಶ ಹವಳದ, ಯಲ್ಲಪ್ಪ ರೊಳ್ಳಿ ಸೇರಿದಂತೆ ಅಡರಕಟ್ಟಿ ಹಾಗೂ ಮಂಜಲಾಪುರ ಗ್ರಾಮದ ರೈತರು ಉಪಸ್ಥಿತರಿದ್ದರು.

“ಒಂದು ವಾರದೊಳಗೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಅಡರಕಟ್ಟಿಯಿಂದ ಗದಗ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ.”

– ರವಿಕಾಂತ ಅಂಗಡಿ, ರೈತ ಮುಖಂಡ ಹಾಗೂ ವಕೀಲ

ಗ್ರಾಮ ಬಿಟ್ಟು ಹೋದರೆ ಕ್ರಮ ಖಚಿತ!

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಓ) ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು (ವಿಎ) ಕಡ್ಡಾಯವಾಗಿ ತಮ್ಮ ಕೇಂದ್ರಸ್ಥಾನದಲ್ಲೇ ಕಾರ್ಯನಿರ್ವಹಿಸಬೇಕು. ಸರ್ಕಾರದ ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಅಧಿಕಾರಿಗಳ ಚಲನವಲನದ ಮೇಲೆ ಪ್ರತಿದಿನ ನಿಗಾ ವಹಿಸಿ, ಜನರಿಗೆ ಅವರು ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಸೋಮವಾರ ಶಿರಹಟ್ಟಿಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಬರ ಪರಿಹಾರ ಮತ್ತು ವಿಪತ್ತು ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಲೂಕು ಮಟ್ಟದ ಅಧಿಕಾರಿಗಳೂ ಕೇಂದ್ರಸ್ಥಾನದಲ್ಲಿಯೇ ಇರಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಗ್ರಾಮಗಳಲ್ಲಿ ಉದ್ಯೋಗವಿಲ್ಲದೆ ಜನರು ಗುಳೆ ಹೋಗುತ್ತಿರುವುದರಿಂದ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಎನ್‌ಆರ್‌ಇಜಿಎ) ಕಾಮಗಾರಿಗಳನ್ನು ತಕ್ಷಣವೇ ಆರಂಭಿಸಬೇಕು ಎಂದು ಸೂಚಿಸಿದರು.

ಶಿರಹಟ್ಟಿ, ಲಕ್ಷ್ಮೇಶ್ವರ ಹಾಗೂ ಮುಂಡರಗಿ ತಾಲೂಕುಗಳಲ್ಲಿ ಶೇ.27ರಷ್ಟು ಮಳೆ ಕೊರತೆ ಉಂಟಾಗಿದ್ದು, ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರತಿ ರೈತರಿಗೆ ಕನಿಷ್ಠ ₹50 ಸಾವಿರ ಪರಿಹಾರ ನೀಡುವಂತೆ ಒತ್ತಾಯಿಸಲಾಗಿದೆ. ಅಲ್ಲದೆ, ಮುಖ್ಯಮಂತ್ರಿ ಘೋಷಿಸಿರುವ ₹1 ಕೋಟಿ ಪರಿಹಾರದ ಕ್ರಿಯಾ ಯೋಜನೆಯನ್ನು ಶೀಘ್ರ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿಗಳ ಕಾರ್ಯವೈಖರಿ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಲಮಾಣಿ, ಪಿಡಿಓಗಳು ಪ್ರತಿದಿನ ಗ್ರಾಮ ಪಂಚಾಯಿತಿಯಲ್ಲಿ ಹಾಜರಿದ್ದು ಜಿಪಿಎಸ್ ಆಧಾರಿತ ಫೋಟೋ ಅಪ್‌ಲೋಡ್ ಮಾಡಬೇಕು. ಇದುವರೆಗೆ ಬಹುತೇಕ ಪಂಚಾಯಿತಿಗಳಲ್ಲಿ ಸಮರ್ಪಕ ಕ್ರಿಯಾ ಯೋಜನೆ ಸಿದ್ಧವಾಗಿಲ್ಲ. ಒಂದು ವಾರದೊಳಗೆ ಕ್ರಿಯಾ ಯೋಜನೆ ಪೂರ್ಣಗೊಳಿಸಿ ಗ್ರಾಮೀಣ ಪ್ರದೇಶಗಳಲ್ಲಿ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಹಳೆಯ ಬಿಲ್‌ಗಳನ್ನು ನಿಯಮಾನುಸಾರ ಮಾಡದೇ ಇಚ್ಛೆ ಬಂದವರಿಗೆ ಬಿಲ್ ಪಾವತಿಸಿರುವ ಪ್ರಕರಣಗಳು ಗಮನಕ್ಕೆ ಬಂದಿವೆ. ಇಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ವರದಿ ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ತಹಸೀಲ್ದಾರ್ ಕೆ. ರಾಘವೇಂದ್ರ ರಾವ್, ತಾಪಂ ಇಒ ಆರ್.ವಿ. ದೊಡ್ಡಮನಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಪಿಡಿಓಗಳು ಉಪಸ್ಥಿತರಿದ್ದರು.

“ಪಿಡಿಓ ಹಾಗೂ ವಿಎಗಳು ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲಿರಬೇಕು. ಒಂದು ವಾರದೊಳಗೆ ಉದ್ಯೋಗ ಖಾತರಿ ಕಾಮಗಾರಿಗಳು ಆರಂಭವಾಗಬೇಕು. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಉಸ್ತುವಾರಿ ಸಚಿವರಿಗೆ ವರದಿ ಸಲ್ಲಿಸಲಾಗುವುದು.”

– ಡಾ. ಚಂದ್ರು ಲಮಾಣಿ, ಶಾಸಕ, ಶಿರಹಟ್ಟಿ

ಧರ್ಮದ ಹಾದಿಯಲ್ಲಿ ನಡೆದವರನ್ನು ಧರ್ಮವೇ ಕಾಪಾಡುತ್ತದೆ: ಅಡ್ನೂರ ಶ್ರೀ

0

ವಿಜಯಸಾಕ್ಷಿ ಸುದ್ದಿ, ಗದಗ: ಧರ್ಮವನ್ನು ರಕ್ಷಿಸುವವರನ್ನು ಧರ್ಮವೇ ರಕ್ಷಿಸುತ್ತದೆ. ಧರ್ಮದ ಹಾದಿಯಲ್ಲಿ ನಡೆಯುವವರ ದುಃಖಗಳು ಔಷಧಿಯಿಂದ ಶಮನವಾದಂತೆ ದೂರವಾಗುತ್ತವೆ. ಧರ್ಮಾಮೃತವನ್ನು ಪಾನ ಮಾಡಿದವರೇ ನಿಜವಾದ ಸುಖಿಗಳು ಎಂದು ಅಡ್ನೂರ ಬೃಹನ್ಮಠದ ಪೂಜ್ಯ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಮಾಂಗಲ್ಯ ಮಂದಿರದಲ್ಲಿ ಗದಗ-ಬೆಟಗೇರಿ ಪಂಚಾಚಾರ್ಯ ಸೇವಾ ಸಂಘದ ಆಶ್ರಯದಲ್ಲಿ ನಡೆದ ‘ಸಿದ್ಧಾಂತ ಶಿಖಾಮಣಿ’ ಆಧ್ಯಾತ್ಮಿಕ ಪ್ರವಚನ ಮಾಲಿಕೆಯಲ್ಲಿ ನೇತೃತ್ವ ವಹಿಸಿ ಅವರು ಮಾತನಾಡಿದರು.

“ಧರ್ಮೋ ರಕ್ಷತಿ ರಕ್ಷಿತಃ” ಎಂಬುದು ಕೇವಲ ನುಡಿಯಲ್ಲ, ಬದುಕಿನ ಸತ್ಯ. ಧರ್ಮವೇ ಮನುಷ್ಯನ ಬದುಕಿನ ಶ್ರೇಷ್ಠ ಶಕ್ತಿಯಾಗಿದ್ದು, ದಯೆ, ಸತ್ಯ ಮತ್ತು ದಾನ ಮನುಷ್ಯನ ನಿಜವಾದ ಆಭರಣಗಳಾಗಿವೆ ಎಂದು ಹೇಳಿದರು.

ಶಿಬಿ ಚಕ್ರವರ್ತಿಯ ಧರ್ಮನಿಷ್ಠೆ, ದಾನವೀರ ಕರ್ಣನ ಉದಾರತೆಯನ್ನು ಉದಾಹರಿಸಿ ಮಾತನಾಡಿದ ಅವರು, ಸಕಲ ಜೀವಿಗಳಲ್ಲಿ ದಯೆ ತೋರುವುದು ನಿಜವಾದ ಧರ್ಮ. ಕೈಗಳಿಗೆ ಬಂಗಾರದ ಬಳೆಗಿಂತ ದಾನವೇ ಭೂಷಣ, ಕಂಠಕ್ಕೆ ಸತ್ಯವೇ ಭೂಷಣ ಹಾಗೂ ಕಿವಿಗಳಿಗೆ ಶಾಸ್ತ್ರಶ್ರವಣವೇ ಭೂಷಣ ಎಂದು ತಿಳಿಸಿದರು.

ಕಾಶಿ ಪೀಠದ ಜಗದ್ಗುರುಗಳ ನೇತೃತ್ವದಲ್ಲಿ ನಡೆಯುತ್ತಿರುವ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ಆತ್ಮಶುದ್ಧಿಗೆ ದಾರಿಯಾಗಿದ್ದು, ಆರು ದಿನಗಳ ಪ್ರವಚನ ಮತ್ತು ಪೂಜೆ ಮುಂದಿನ ವರ್ಷದವರೆಗೆ ಮನಸ್ಸಿಗೆ ಚೈತನ್ಯ ತುಂಬುವ ಆಧ್ಯಾತ್ಮಿಕ ಶಕ್ತಿಯಾಗಿದೆ ಎಂದು ಹೇಳಿದರು.

ನರೇಗಲ್ಲ ಹಿರೇಮಠದ ಪೂಜ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರನ್ನು ಕಾಶಿ ಜಗದ್ಗುರುಗಳು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಮಠಾಧೀಶರು, ಪಂಚಾಚಾರ್ಯ ವೇದ ಆಗಮ ಸಂಸ್ಕೃತ ಪಾಠಶಾಲೆಯ ವಟುಗಳು, ಅಖಿಲ ಭಾರತ ವೀರಶೈವ ಮಹಾಸಭೆಯ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

ವಿಡಿಎಸ್ ಶಾಲೆಯಲ್ಲಿ ವೈವಿಧ್ಯಮಯ ‘ಅಂಬ್ರೆಲಾ ಡೇ’ ಆಚರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಶತಮಾನೋತ್ಸವ ಆಚರಿಸಿರುವ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದ್ಯಾದಾನ ಸಮಿತಿಯ ವಿಡಿಎಸ್ ಕ್ಲಾಸಿಕ್ ಆಂಗ್ಲ ಮಾಧ್ಯಮ ಸಿಬಿಎಸ್ಇ ಶಾಲೆಯಲ್ಲಿ ‘ಅಂಬ್ರೆಲಾ ಡೇ’ (ಮಾನ್ಸೂನ್ ಡೇ)ವನ್ನು ಸಂಭ್ರಮದಿಂದ ಆಚರಿಸಲಾಯಿತು.

1ರಿಂದ 5ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಛತ್ರಿಗಳನ್ನು ರಿಬ್ಬನ್, ಬಲೂನ್, ಮಿಂಚುಪಟ್ಟಿ ಹಾಗೂ ಬಣ್ಣಬಣ್ಣದ ಕಾಗದಗಳಿಂದ ಆಕರ್ಷಕವಾಗಿ ಅಲಂಕರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಾಂಪ್ರದಾಯಿಕ ಉಡುಗೆ ತೊಟ್ಟ ಮಕ್ಕಳು ತುಂತುರು ಮಳೆಯ ನಡುವೆ ಛತ್ರಿಗಳನ್ನು ಹಿಡಿದು ‘ಮಳೆ ಬಿಲ್ಲೆ… ಮಳೆ ಬಿಲ್ಲೆ…’ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಹಿರಿಯ ಶಿಕ್ಷಕಿ ರೇಣುಕಾ ವೆಂಕಟಾಪುರ ಮಾತನಾಡಿ, ಅಂಬ್ರೆಲಾದ ಉಪಯೋಗ, ಮಳೆಯ ಮಹತ್ವ ಹಾಗೂ ಭೂಮಿಯ ಮೇಲಿನ ಜೀವಸಂಕುಲಕ್ಕೆ ಮಳೆಯಿಂದಾಗುವ ಪ್ರಯೋಜನಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು.

ಶಿಕ್ಷಕಿಯರಾದ ಮಂಜುಳಾ ಪರಾಪುರ ಮತ್ತು ಐಶ್ವರ್ಯ ಕುಲಕರ್ಣಿ ಮಕ್ಕಳಿಗೆ ನೃತ್ಯ ತರಬೇತಿ ನೀಡಿ, ಅವರೊಂದಿಗೆ ಸಂಭ್ರಮದಲ್ಲಿ ಭಾಗಿಯಾದರು.

ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ-ಶಿಕ್ಷಕಿಯರು, ಸೇವಾ ತರಬೇತಿ ಪ್ರಶಿಕ್ಷಣಾರ್ಥಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮಾಲಿನ್ಯ ಮುಕ್ತ ಭಾರತದತ್ತ ದಿಟ್ಟ ಹೆಜ್ಜೆ: ವಿಜಯಕುಮಾರ ಗಡ್ಡಿ

0

ವಿಜಯಸಾಕ್ಷಿ ಸುದ್ದಿ, ಗದಗ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಪರಿಸರ ಸಂರಕ್ಷಣೆ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಕೈಗೊಂಡಿರುವ ದೂರದೃಷ್ಟಿಯ ಯೋಜನೆಗಳು ಜಗತ್ತಿಗೆ ಮಾದರಿಯಾಗಿವೆ ಎಂದು ಬಿಜೆಪಿ ಮುಖಂಡ ಹಾಗೂ ಉದ್ಯಮಿ ವಿಜಯಕುಮಾರ ಗಡ್ಡಿ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ದೇಶದ ಮೊದಲ ಹೈಡ್ರೋಜನ್ ಚಾಲಿತ ರೈಲ್ವೆ ಎಂಜಿನ್ ಉದ್ಘಾಟನೆಯು ಪರಿಸರ ಸ್ನೇಹಿ ತಂತ್ರಜ್ಞಾನದತ್ತ ಭಾರತ ಇಟ್ಟಿರುವ ಮಹತ್ವದ ಹೆಜ್ಜೆಯಾಗಿದೆ. ಈ ರೈಲು ಹಾನಿಕಾರಕ ಅನಿಲ ಹೊರಸೂಸದೆ ಕೇವಲ ನೀರಿನ ಆವಿಯನ್ನು ಹೊರಸೂಸುತ್ತದೆ ಎಂದು ತಿಳಿಸಿದ್ದಾರೆ.

ಭಾರತೀಯ ರೈಲ್ವೆಯ ಬಹುತೇಕ ಬ್ರಾಡ್‌ಗೇಜ್ ಮಾರ್ಗಗಳನ್ನು ವಿದ್ಯುದೀಕರಣಗೊಳಿಸಲಾಗಿದ್ದು, ರೈಲು ನಿಲ್ದಾಣಗಳಲ್ಲಿ ಸೌರ ಫಲಕ ಅಳವಡಿಸುವ ಮೂಲಕ ಹಸಿರು ಇಂಧನ ಬಳಕೆಗೆ ಉತ್ತೇಜನ ನೀಡಲಾಗಿದೆ. 130ಕ್ಕೂ ಹೆಚ್ಚು ನಗರಗಳಲ್ಲಿ ವಾಯು ಮಾಲಿನ್ಯ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಕೈಗಾರಿಕೆಗಳ ಮೇಲಿನ ಪರಿಸರ ನಿಯಂತ್ರಣವನ್ನು ಕಟ್ಟುನಿಟ್ಟುಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಒಂದು ಕೋಟಿ ಮನೆಗಳ ಮೇಲ್ಛಾವಣಿಯಲ್ಲಿ ಸೌರ ಫಲಕ ಅಳವಡಿಕೆಗೆ ಆರ್ಥಿಕ ನೆರವು, ನಗರ ಪ್ರದೇಶಗಳಲ್ಲಿ 1,000 ನಗರ ಅರಣ್ಯಗಳ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳನ್ನು ಕೇಂದ್ರ ಸರ್ಕಾರ ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆಗಳು ದೇಶವನ್ನು ಪರಿಸರ ಸ್ನೇಹಿ ಅಭಿವೃದ್ಧಿಯತ್ತ ಕೊಂಡೊಯ್ಯಲಿವೆ ಎಂದು ವಿಜಯಕುಮಾರ ಗಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿ.ಕಾಂ ಪರೀಕ್ಷೆಯಲ್ಲಿ ಎಎಸ್‌ಎಸ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿಯ ಆದರ್ಶ ಶಿಕ್ಷಣ ಸಮಿತಿಯ ಎಎಸ್‌ಎಸ್ ವಾಣಿಜ್ಯ ಮಹಾವಿದ್ಯಾಲಯ 2025-26ನೇ ಶೈಕ್ಷಣಿಕ ವರ್ಷದ ಬಿ.ಕಾಂ 6ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಶೇ.84.13ರಷ್ಟು ಉತ್ತೀರ್ಣತೆ ಸಾಧಿಸಿ ಗಮನಾರ್ಹ ಫಲಿತಾಂಶ ದಾಖಲಿಸಿದೆ.

ಒಟ್ಟು ಫಲಿತಾಂಶದಲ್ಲಿ 73 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 18 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 15 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಪರೀಕ್ಷೆಯಲ್ಲಿ ಸೌಮ್ಯ ಮಿಸ್ಕಿನ್ ಹಾಗೂ ವರ್ಷಾ ಕುಂಬಾರ ತಲಾ ಶೇ.97.71 ಅಂಕ ಗಳಿಸಿ ಕಾಲೇಜಿಗೆ ಜಂಟಿ ಪ್ರಥಮ ಸ್ಥಾನ ಪಡೆದಿದ್ದಾರೆ. ವಿನುತಾ ರಾಯಬಾಗಿ ಶೇ.96.29 ಅಂಕ ಗಳಿಸಿ ದ್ವಿತೀಯ ಸ್ಥಾನ ಹಾಗೂ ರೇಣುಕಾ ಕಾಮೋಜಿ ಶೇ.95.86 ಅಂಕ ಗಳಿಸಿ ತೃತೀಯ ಸ್ಥಾನ ಪಡೆದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದು, ಅವರ ಮುಂದಿನ ಉನ್ನತ ಶಿಕ್ಷಣ ಮತ್ತು ವೃತ್ತಿ ಜೀವನಕ್ಕೆ ಶುಭ ಹಾರೈಸಿದ್ದಾರೆ.

ಸದ್ದಿಲ್ಲದೆ ಲೋಡ್ ಶೆಡ್ಡಿಂಗ್: ಪದೇ ಪದೇ ವಿದ್ಯುತ್ ಕಡಿತ!

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಜ್ಯೋತಿ ಯೋಜನೆ ಜಾರಿಯಲ್ಲಿದ್ದರೂ, ಗದಗ ಜಿಲ್ಲೆಯ ನರೇಗಲ್ಲ ಹೋಬಳಿಯ ಹಲವು ಗ್ರಾಮಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಪದೇ ಪದೇ ವಿದ್ಯುತ್ ಕಡಿತವಾಗುತ್ತಿರುವುದರಿಂದ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥರ ಆರೋಪದಂತೆ, ಪ್ರತಿದಿನ ಬೆಳಗ್ಗೆ 6ರಿಂದ 7.40ರವರೆಗೆ ಮನೆಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುತ್ತಿದೆ. ಇದೇ ವೇಳೆ ಕೃಷಿ ಪಂಪ್‌ಸೆಟ್‌ಗಳಿಗೆ ತ್ರಿಫೇಸ್ ವಿದ್ಯುತ್ ನೀಡಲಾಗುತ್ತಿದ್ದು, ಮನೆಗಳನ್ನು ಕತ್ತಲಲ್ಲಿ ಬಿಡಲಾಗುತ್ತಿದೆ ಎನ್ನುವುದು ಅವರ ಆರೋಪ. ಸಂಜೆ ವೇಳೆಯಲ್ಲೂ ವಿದ್ಯುತ್ ಕಡಿತವಾಗುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ, ಮಕ್ಕಳ ಓದು, ಮನೆ ಕೆಲಸ ಹಾಗೂ ಸಣ್ಣ ವ್ಯಾಪಾರಗಳ ಮೇಲೆ ಪರಿಣಾಮ ಬೀರುತ್ತಿದೆ.

ಮಳೆಗಾಲದಲ್ಲಿ ಸಂಜೆ ವಿದ್ಯುತ್ ಇಲ್ಲದ ಕಾರಣ ಫ್ಯಾನ್‌ಗಳು ಸ್ಥಗಿತಗೊಂಡು ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಮಕ್ಕಳು, ವೃದ್ಧರು ಹಾಗೂ ಅನಾರೋಗ್ಯ ಪೀಡಿತರು ರಾತ್ರಿ ನಿದ್ದೆಯಿಲ್ಲದೆ ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಸುವುದು ಅಗತ್ಯವಾದರೂ, ಅದಕ್ಕಾಗಿ ಗೃಹ ಬಳಕೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವುದು ಸರಿಯಲ್ಲ. ಕೃಷಿ ಹಾಗೂ ಗೃಹ ಬಳಕೆಯ ವಿದ್ಯುತ್ ಪೂರೈಕೆಯ ನಡುವೆ ಸಮತೋಲನ ಸಾಧಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಡಿತದ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡುವುದರ ಜೊತೆಗೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಬೆಳೆ ವೀಕ್ಷಿಸಿ ರೈತರೊಂದಿಗೆ ಸಂವಾದ ನಡೆಸಿದ ಡಿಸಿ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಮುಂಗಾರು ಮಳೆ ಕೊರತೆಯಿಂದ ಸಂಕಷ್ಟಕ್ಕೀಡಾಗಿರುವ ರೈತರ ನೆರವಿಗೆ ಜಿಲ್ಲಾಡಳಿತ ಮುಂದಾಗಿದ್ದು, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಶನಿವಾರ ಶಿರಹಟ್ಟಿ ತಾಲೂಕಿನ ಛಬ್ಬಿ ಹಾಗೂ ಬೆಳ್ಳಟ್ಟಿ ಗ್ರಾಮಗಳಿಗೆ ಭೇಟಿ ನೀಡಿ ಹೊಲಗಳಲ್ಲಿ ಬೆಳೆಗಳ ಸ್ಥಿತಿಗತಿ ಪರಿಶೀಲಿಸಿದರು.

ಹೆಸರು, ಮೆಕ್ಕೆಜೋಳ ಹಾಗೂ ಶೇಂಗಾ ಬೆಳೆದ ಜಮೀನುಗಳಲ್ಲಿ ಮಳೆ ಕೊರತೆಯಿಂದ ಒಣಗುತ್ತಿರುವ ಬೆಳೆಗಳನ್ನು ವೀಕ್ಷಿಸಿದ ಅವರು, ರೈತರೊಂದಿಗೆ ನೇರವಾಗಿ ಸಂವಾದ ನಡೆಸಿ ಸಮಸ್ಯೆಗಳ ಕುರಿತು ಮಾಹಿತಿ ಪಡೆದು ಧೈರ್ಯ ತುಂಬಿದರು.

ರೈತರು ಬೆಳೆ ಸಮೀಕ್ಷೆ ಆ್ಯಪ್ ಮೂಲಕ ಬೆಳೆ ವಿವರಗಳನ್ನು ಕಡ್ಡಾಯವಾಗಿ ದಾಖಲಿಸಬೇಕು. ಇದರಿಂದ ಬೆಳೆ ಬಿತ್ತನೆ ಪ್ರದೇಶದ ನಿಖರ ಮಾಹಿತಿ ಸರ್ಕಾರಕ್ಕೆ ಲಭ್ಯವಾಗಲಿದೆ ಎಂದು ತಿಳಿಸಿದರು.

ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ಸಾಲ ಪಡೆದ ರೈತರು ಹೆಸರು ಹಾಗೂ ಹತ್ತಿ ಬೆಳೆಗಳಿಗೆ ಜು.22ರೊಳಗೆ ಬೆಳೆ ವಿಮೆ ನೋಂದಣಿ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಚಿದಾನಂದಪ್ಪ, ತಹಸೀಲ್ದಾರ್ ಕೆ. ರಾಘವೇಂದ್ರರಾವ್, ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ ಕಾಶಪ್ಪನವರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.

ಗೃಹಲಕ್ಷ್ಮಿ ಯೋಜನೆ ಸದುಪಯೋಗಪಡಿಸಿಕೊಳ್ಳಿ: ಪಾರ್ವತಿ ಹೊಂಬಳ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಸರ್ಕಾರದ ವಿವಿಧ ಜನಪರ ಯೋಜನೆಗಳ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು. ವಿಶೇಷವಾಗಿ ಗೃಹಲಕ್ಷ್ಮಿ ಯೋಜನೆ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಮಹತ್ವದ ಕೊಡುಗೆ ನೀಡಿದ್ದು, ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಾರ್ವತಿ ಹೊಂಬಳ ಹೇಳಿದರು.

ಡಂಬಳ ಗ್ರಾಮ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರ ಸಂಯುಕ್ತ ಆಶ್ರಯದಲ್ಲಿ ಗೃಹಲಕ್ಷ್ಮಿ ಯೋಜನೆ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಅರಳಿ ಹಾಗೂ ಬೇವು ಗಿಡಗಳನ್ನು ನೆಡುವ ಮೂಲಕ ಆಯೋಜಿಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂಗನವಾಡಿ ಮೇಲ್ವಿಚಾರಕಿ ಎಸ್.ಎಸ್. ಹಾದಿಮನಿ ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಚಾಂದಬಿ ಅಣ್ಣಿಗೇರಿ ಮಾತನಾಡಿ, ಮಹಿಳೆಯರ ಸ್ವಾವಲಂಬನೆಗೆ ಗೃಹಲಕ್ಷ್ಮಿ ಯೋಜನೆ ಸಹಕಾರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಯಲ್ಲಪ್ಪ ಹಾದಿಮನಿ, ಗೌಸಿದ್ಧಪ್ಪ ಹಳ್ಳಾಕಾರ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ, ಸಹಾಯಕಿಯರು ಹಾಗೂ ಮಹಿಳೆಯರು ಭಾಗವಹಿಸಿದ್ದರು.

ಶಾಲೆಗಳಿಂದ ಕಣ್ಮರೆಯಾಗುತ್ತಿವೆ ನೀತಿ ಪಾಠಗಳು!

0

ವಿಜಯಸಾಕ್ಷಿ ಸುದ್ದಿ, ಗದಗ: ಶಾಲಾ ಪಠ್ಯಕ್ರಮದಿಂದ ನೀತಿ ಪಾಠಗಳು ಹಾಗೂ ನೀತಿ ಕಥೆಗಳು ಕಣ್ಮರೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮಕ್ಕಳಲ್ಲಿ ಕಥೆಗಳನ್ನು ಕೇಳುವ ಆಸಕ್ತಿ ಇಂದಿಗೂ ಜೀವಂತವಾಗಿದ್ದರೂ, ಹೇಳುವವರೇ ಇಲ್ಲದಂತಾಗಿದೆ. ಈ ಕೊರತೆಯಿಂದ ಮಕ್ಕಳು ಮೊಬೈಲ್ ಮತ್ತು ದೂರದರ್ಶನದ ಗೀಳಿಗೆ ಸಿಲುಕಿ ಮೌಲ್ಯಾಧಾರಿತ ಬದುಕಿನಿಂದ ದೂರವಾಗುತ್ತಿದ್ದಾರೆ ಎಂದು ಕಾಶಿ ಜಂಗಮವಾಡಿಮಠದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಕಳವಳ ವ್ಯಕ್ತಪಡಿಸಿದರು.

ನಗರದ ಮಾಂಗಲ್ಯ ಮಂದಿರದಲ್ಲಿ ಗದಗ-ಬೆಟಗೇರಿ ಪಂಚಾಚಾರ್ಯ ಸೇವಾ ಸಂಘದ ಆಶ್ರಯದಲ್ಲಿ ಆಷಾಢ ಮಾಸದ ಅಂಗವಾಗಿ ಆಯೋಜಿಸಿರುವ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಮಾಲಿಕೆಯಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.

ಹಿಂದೆ ಅಜ್ಜ-ಅಜ್ಜಿಯರು ಚಂದಮಾಮ, ವಿಕ್ರಮ-ಬೇತಾಳದಂತಹ ಕಥೆಗಳ ಮೂಲಕ ಮಕ್ಕಳಿಗೆ ನೀತಿ ಬೋಧಿಸುತ್ತಿದ್ದರು. ಆದರೆ ಇಂದು ತಂದೆ-ತಾಯಿಯರು ಉದ್ಯೋಗದಲ್ಲಿ ನಿರತರಾಗಿದ್ದು, ಶಾಲೆಗಳಲ್ಲೂ ನೀತಿ ಕಥೆಗಳಿಗೆ ಸ್ಥಾನ ಕಡಿಮೆಯಾಗಿದೆ. ಪರಿಣಾಮ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ದೊರೆಯುತ್ತಿಲ್ಲ. ಪಾಲಕರು ಮಕ್ಕಳೊಂದಿಗೆ ಸಮಯ ಕಳೆಯಬೇಕು, ಅವರ ಭಾವನೆಗಳನ್ನು ಅರಿತುಕೊಳ್ಳಬೇಕು. ಇಲ್ಲವಾದರೆ ಅದರ ದುಷ್ಪರಿಣಾಮವನ್ನು ಮುಂದಿನ ದಿನಗಳಲ್ಲಿ ಸಮಾಜವೇ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶ್ರೀ ಸಿದ್ಧಾಂತ ಶಿಖಾಮಣಿ ಸಾಮಾನ್ಯ ಗ್ರಂಥವಲ್ಲ. ಜಗದ್ಗುರು ರೇಣುಕ ಭಗವತ್ಪಾದರು ಅಗಸ್ತ್ಯ ಮಹರ್ಷಿಗಳ ಮೂಲಕ ಸಮಸ್ತ ಮನುಕುಲದ ಶ್ರೇಯೋಭಿವೃದ್ಧಿಗಾಗಿ ನೀಡಿದ ದಿವ್ಯೋಪದೇಶವಾಗಿದೆ. ಶ್ರೀಕೃಷ್ಣನು ಅರ್ಜುನನಿಗೆ ಭಗವದ್ಗೀತೆ ಉಪದೇಶಿಸಿದಂತೆ, ರೇಣುಕ ಭಗವತ್ಪಾದರು ನೀಡಿದ ಈ ಗ್ರಂಥವನ್ನು ‘ರೇಣುಕ ಗೀತೆ’ ಎಂದೂ ಕರೆಯಲಾಗುತ್ತದೆ ಎಂದು ಹೇಳಿದರು.

ನರೇಗಲ್ಲ ಮಠದ ಸ್ವಾಮೀಜಿಗಳ ಸೇವೆಯನ್ನು ಶ್ಲಾಘಿಸಿದ ಅವರು, ಅವರ ಪ್ರವಚನ ಸೇವೆ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರಕ್ಕೂ ವಿಸ್ತರಿಸಿದ್ದು, ಶುದ್ಧ ಕನ್ನಡದ ಮೂಲಕ ಸಿದ್ಧಾಂತ ಶಿಖಾಮಣಿಯ ಸಂದೇಶವನ್ನು ಜನರಿಗೆ ತಲುಪಿಸುತ್ತಿರುವುದು ಶ್ಲಾಘನೀಯ ಎಂದರು.

ಗೋಸಂರಕ್ಷಣೆ, ಭಾರತೀಯ ಸಂಸ್ಕೃತಿ ಹಾಗೂ ಕುಟುಂಬ ಮೌಲ್ಯಗಳ ಉಳಿವಿಗೆ ಪ್ರತಿಯೊಬ್ಬರೂ ಬದ್ಧರಾಗಬೇಕು. ಸಾಕು ಪ್ರಾಣಿಗಳನ್ನು ಪ್ರೀತಿಯಿಂದ ಸಾಕಬೇಕು, ಆದರೆ ನಮ್ಮ ಸಂಸ್ಕೃತಿಯ ಮೂಲ ಮೌಲ್ಯಗಳನ್ನು ಮರೆಯಬಾರದು ಎಂದು ಜಗದ್ಗುರುಗಳು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಗಣ್ಯರು, ಪಂಚಾಚಾರ್ಯ ವೇದ ಆಗಮ ಸಂಸ್ಕೃತ ಪಾಠಶಾಲೆಯ ವಟುಗಳು, ಸಂಗೀತ ಕಲಾ ಬಳಗದ ಸದಸ್ಯರು ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.

“ಮಕ್ಕಳಲ್ಲಿ ನೀತಿ ಕಥೆಗಳನ್ನು ಕೇಳುವ ಹಂಬಲ ಇಂದಿಗೂ ಇದೆ. ಆದರೆ ಹೇಳುವವರೇ ಇಲ್ಲದಂತಾಗಿದೆ. ಪಾಲಕರು ಮಕ್ಕಳೊಂದಿಗೆ ಸಮಯ ಕಳೆಯದಿದ್ದರೆ, ಮೊಬೈಲ್‌ವೇ ಅವರ ಗುರುವಾಗುವ ಅಪಾಯವಿದೆ.”

– ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು

ಜು.16ರಿಂದ ನಡೆಯುತ್ತಿರುವ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಮಾಲಿಕೆಗೆ ಜು.21ರಂದು ಸಂಜೆ 7 ಗಂಟೆಗೆ ಮಾಂಗಲ್ಯ ಮಂದಿರದಲ್ಲಿ ಮಂಗಲೋತ್ಸವ ನಡೆಯಲಿದೆ. ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಡಾ. ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಕಾಶಿ ಪೀಠದ ನೂತನ ಜಗದ್ಗುರುಗಳು ಸಾನಿಧ್ಯ ವಹಿಸಲಿದ್ದು, ವಿವಿಧ ಮಠಾಧೀಶರು, ಗಣ್ಯರು ಹಾಗೂ ಭಕ್ತರು ಭಾಗವಹಿಸಲಿದ್ದಾರೆ.