Home Blog Page 11

ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರ ಬಹಿಷ್ಕಾರ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಈ ಬಾರಿ ಪದವಿ ಪರೀಕ್ಷಾ ಕಾರ್ಯ ಹಾಗೂ ಮೌಲ್ಯಮಾಪನ ಕಾರ್ಯವನ್ನು ರಾಜ್ಯಾದ್ಯಂತ ಬಹಿಷ್ಕರಿಸುವ ಮೂಲಕ ಸರ್ಕಾರ ಮತ್ತು ವಿಶ್ವವಿದ್ಯಾಲಯಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಪರಿಣಾಮವಾಗಿ ಕೊಪ್ಪಳ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಪರೀಕ್ಷಾ ನಿರ್ವಹಣೆಗೆ ಅಡಚಣೆ ಉಂಟಾಗಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸುವ ಅನಿವಾರ್ಯತೆ ಎದುರಾಗಿದೆ.

2025-26ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಸುಮಾರು 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಐದು ಹಂತದ ಕೌನ್ಸೆಲಿಂಗ್ ಮೂಲಕ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಲಾಗಿತ್ತು. ಶೈಕ್ಷಣಿಕ ಅರ್ಹತೆಗೆ ಆದ್ಯತೆ ನೀಡಿ ನೇಮಕ ಪ್ರಕ್ರಿಯೆ ನಡೆಸಲಾಗಿದ್ದು, ಕೆಲ ಕೋರ್ಸ್‌ಗಳಿಗೆ ಅನುಭವ ಆಧಾರದ ಮೇಲೆ ನಾನ್-ಯುಜಿಸಿ ನಿಯಮಾನುಸಾರ ಆಯ್ಕೆ ಮಾಡಿಕೊಳ್ಳಲಾಗಿತ್ತು.

ಈ ಬಾರಿ ನಕಲಿ ದಾಖಲೆಗಳ ಹಾವಳಿ ತಪ್ಪಿಸಲು ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿತ್ತು. ಇದರ ಪರಿಣಾಮ ಕೆಲವರು ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ಸಲ್ಲಿಸಿದ್ದು, ಪ್ರಕ್ರಿಯೆ ಇನ್ನೂ ಮುಂದುವರಿದಿದೆ.

ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ವರ್ಷದ ಅಂತ್ಯದ ಅವಧಿ ಏಕರೂಪದಲ್ಲಿಲ್ಲ. ಕೆಲವು ವಿವಿಗಳಲ್ಲಿ ಎಪ್ರಿಲ್, ಇನ್ನೂ ಕೆಲವು ಕಡೆ ಮೇ ಹಾಗೂ ಜೂನ್ ತಿಂಗಳಲ್ಲಿ ಅತಿಥಿ ಉಪನ್ಯಾಸಕರ ಸೇವೆ ಸ್ಥಗಿತಗೊಳಿಸಲಾಗುತ್ತಿದೆ. ಈಗಾಗಲೇ ಸೇವೆಯಿಂದ ಬಿಡುಗಡೆಗೊಂಡಿರುವ ಉಪನ್ಯಾಸಕರು ಪರೀಕ್ಷೆ ಹಾಗೂ ಮೌಲ್ಯಮಾಪನ ಕಾರ್ಯದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರನ್ನು ಪ್ರಶ್ನೆಪತ್ರಿಕೆ ಸಿದ್ಧತೆ, ಬಿಒಇ, ಸ್ಕ್ವಾಡ್ ಮೊದಲಾದ ಪರೀಕ್ಷಾ ಕಾರ್ಯಗಳಲ್ಲಿ ಬಳಸದೇ ಇರುವ ಧೋರಣೆ ವಿರುದ್ಧವೂ ಅಸಮಾಧಾನ ವ್ಯಕ್ತವಾಗಿದೆ. “ಪಾಠ ಮಾಡುವಾಗ ಸಮಸ್ಯೆಯಾಗದವರು ಪ್ರಶ್ನೆಪತ್ರಿಕೆ ಸಿದ್ಧಪಡಿಸುವಾಗ ಸಮಸ್ಯೆಯಾಗುತ್ತಾರೆಯೇ?” ಎನ್ನುವುದು ಅವರ ಪ್ರಶ್ನೆ.

ಅತಿಥಿ ಉಪನ್ಯಾಸಕರನ್ನು ಕೆಲವೆಡೆ ಕಾಯಂ ಬೋಧಕರು ‘ಜೀತದಾಳು’ಗಳಂತೆ ಕಾಣುತ್ತಿರುವುದು ಬೇಸರ ತಂದಿದೆ. ಹತ್ತು ತಿಂಗಳು ಸೇವೆಯಲ್ಲಿ ಮುಂದುವರಿಸಿ ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ.

ಇದೀಗ ಕೆಲವು ಕಾಲೇಜುಗಳಲ್ಲಿ ಪರೀಕ್ಷೆಗಳು ಆರಂಭಗೊಂಡಿದ್ದು, ಪರೀಕ್ಷಾ ಕಾರ್ಯ ನಿರ್ವಹಣೆಗೆ ಪ್ರಾಚಾರ್ಯರು ಪರದಾಡುವಂತಾಗಿದೆ. ಪರ್ಯಾಯವಾಗಿ ಖಾಸಗಿ ಪಿಯು ಕಾಲೇಜುಗಳ ಅತಿಥಿ ಉಪನ್ಯಾಸಕರನ್ನು ಪರೀಕ್ಷಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಆದರೆ ಮೌಲ್ಯಮಾಪನ ಕಾರ್ಯವನ್ನು ಹೇಗೆ ನಿರ್ವಹಿಸುವುದು ಎಂಬುದು ವಿಶ್ವವಿದ್ಯಾಲಯಗಳಿಗೆ ದೊಡ್ಡ ಸವಾಲಾಗಿದೆ.

“ರಾಜ್ಯ ಸಂಘಟನೆಯ ಕರೆಯ ಮೇರೆಗೆ ಪರೀಕ್ಷಾ ಹಾಗೂ ಮೌಲ್ಯಮಾಪನ ಕಾರ್ಯವನ್ನು ಬಹಿಷ್ಕರಿಸಿದ್ದೇವೆ. ಕೆಲವರು ಬೆದರಿಕೆಗೆ ಹೆದರಿ ಕೆಲಸಕ್ಕೆ ಹಾಜರಾಗಿರುವುದು ಗೊತ್ತಾಗಿದೆ. ಯಾವುದಕ್ಕೂ ಅಂಜಬೇಡಿ. ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಯುತ್ತದೆ.”

ಡಾ. ವೀರಣ್ಣ ಸಜ್ಜನರ

“ಜೂನ್‌ವರೆಗೂ ಸೇವೆಯಲ್ಲಿ ಮುಂದುವರಿಸಿದರೆ ಪರೀಕ್ಷಾ ಕಾರ್ಯದಲ್ಲಿ ಕೈಜೋಡಿಸುತ್ತೇವೆ. ಮನೆಯಿಂದ ಹೊರಗೆ ನೂಕಿ ಮನೆ ಕೆಲಸ ಮಾಡು ಎಂದರೆ ಹೇಗೆ ಸಾಧ್ಯ? ಗೌರವದಿಂದ ನಡೆಸಿಕೊಳ್ಳುವ ಪ್ರಾಚಾರ್ಯರೂ ಇದ್ದಾರೆ. ಕೆಲವರು ಸೇವಾ ಪ್ರಮಾಣ ಪತ್ರ ನೀಡುವುದಿಲ್ಲ ಎಂದು ಬೆದರಿಸುತ್ತಿದ್ದಾರೆ.”

ಡಾ. ಹನುಮಂತಗೌಡ ಕಲ್ಮನಿ

“ಜೂನ್ 4 ಮತ್ತು 5ರಂದು ಹೆಚ್ಚಿನ ವಿದ್ಯಾರ್ಥಿಗಳು ಹಾಜರಾಗುವ ಪರೀಕ್ಷೆಗಳಿದ್ದವು. ಸ್ವಲ್ಪ ಮಟ್ಟಿಗೆ ತೊಂದರೆ ಉಂಟಾಯಿತು. ಪರ್ಯಾಯವಾಗಿ ಖಾಸಗಿ ಪಿಯು ಕಾಲೇಜುಗಳ ಉಪನ್ಯಾಸಕರನ್ನು ಬಳಸಿಕೊಂಡಿದ್ದೇವೆ. ಸದ್ಯ ಪರೀಕ್ಷೆಗಳು ಸುಗಮವಾಗಿ ನಡೆದಿವೆ.”

ಪ್ರೊ. ವೈ.ಬಿ. ಅಂಗಡಿ

“ಕೊಪ್ಪಳ ವಿವಿ ವ್ಯಾಪ್ತಿಯ ಗಂಗಾವತಿ ಹಾಗೂ ಕೊಪ್ಪಳ ಕಾಲೇಜುಗಳಲ್ಲಿ ಹೆಚ್ಚಿನ ಪರೀಕ್ಷಾ ಕೊಠಡಿಗಳಿವೆ. ಅಲ್ಲಿ ಸ್ವಲ್ಪ ತೊಂದರೆ ಆಗಬಹುದು. ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಸರ್ಕಾರದ ಉನ್ನತಾಧಿಕಾರಿಗಳಿಗೆ ತಿಳಿಸಿದ್ದೇವೆ.”

ಡಾ. ಎಸ್.ವಿ. ಡಾಣಿ

ಸರ್ಕಾರದೊಳಗಿನ ಭಿನ್ನಮತ ಇನ್ನೂ ಉಲ್ಬಣ: ಗೋವಿಂದಗೌಡ್ರ

ಗದಗ: ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಬದಲಾವಣೆಯ ಮೂಲಕ ಹೊಸ ರಾಜಕೀಯ ನಾಟಕಕ್ಕೆ ನಾಂದಿ ಹಾಡಿದ್ದು, ಹೊಸ ಸಚಿವ ಸಂಪುಟ ರಚನೆಯಾದ ಕೆಲವೇ ದಿನಗಳಲ್ಲಿ ಭಿನ್ನಮತ ಸ್ಫೋಟಗೊಂಡಿರುವುದು ಸರ್ಕಾರದ ಅಸ್ಥಿರತೆಯ ಸೂಚಕವಾಗಿದೆ ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ ಟೀಕಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಪ್ರಮಾಣವಚನ ಸ್ವೀಕರಿಸಿದ 14 ಸಚಿವರಲ್ಲೇ ಈಗಾಗಲೇ ಕೆಲವರು ಅಸಮಾಧಾನ ಹೊರಹಾಕಿರುವುದು ಸರ್ಕಾರದ ಒಳಜಗಳವನ್ನು ಬಹಿರಂಗಪಡಿಸಿದೆ ಎಂದು ಆರೋಪಿಸಿದರು. ಉಳಿದ ಶಾಸಕರಲ್ಲೂ ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಯುತ್ತಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದಲ್ಲಿ ಹಿರಿಯರು, ಹೊಸ ಕಾಂಗ್ರೆಸ್ಸಿಗರು, ವಿವಿಧ ಗುಂಪುಗಳ ರಾಜಕಾರಣ ಜೋರಾಗಿದ್ದು, ಇದು ಪಕ್ಷದ ಪತನಕ್ಕೆ ಕಾರಣವಾಗಲಿದೆ ಎಂದು ಗೋವಿಂದಗೌಡ್ರ ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಮುಂಗಾರು ಆರಂಭವಾಗಿರುವ ಈ ಸಂದರ್ಭದಲ್ಲಿ ರೈತರಿಗೆ ಸಮರ್ಪಕ ಬೀಜ ಮತ್ತು ಗೊಬ್ಬರ ಪೂರೈಕೆಯತ್ತ ಸರ್ಕಾರ ಗಮನ ಹರಿಸಬೇಕಿತ್ತು. ಆದರೆ ಕಾಂಗ್ರೆಸ್ ನಾಯಕರು ಆಂತರಿಕ ಕಚ್ಚಾಟ ಮತ್ತು ಅಧಿಕಾರದ ರಾಜಕಾರಣದಲ್ಲಿ ತೊಡಗಿರುವುದು ರೈತರ ಹಿತಾಸಕ್ತಿಗೆ ಧಕ್ಕೆಯಾಗಿದೆ ಎಂದು ಅವರು ಆರೋಪಿಸಿದರು.

ಮುಂಗಾರು ಹಿನ್ನೆಲೆಯಲ್ಲಿ ಜನ, ಜಾನುವಾರು ಹಾಗೂ ಆಸ್ತಿಪಾಸ್ತಿಗಳಿಗೆ ಹಾನಿಯಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಅಗತ್ಯವಿದೆ. ಆದರೆ ಆಡಳಿತ ಪಕ್ಷದ ಶಾಸಕರು ಅಧಿಕಾರದ ಲೆಕ್ಕಾಚಾರಕ್ಕಾಗಿ ಕ್ಷೇತ್ರಗಳನ್ನು ಬಿಟ್ಟು ಬೆಂಗಳೂರು ಹಾಗೂ ದೆಹಲಿಗೆ ಸುತ್ತಾಟ ನಡೆಸುತ್ತಿರುವುದು ದುಃಖಕರ ಬೆಳವಣಿಗೆ ಎಂದು ಟೀಕಿಸಿದರು.

ಮಳೆಯಿಂದ ಯಾವುದೇ ಅನಾಹುತ ಸಂಭವಿಸಿದರೆ ಅದರ ನೈತಿಕ ಹೊಣೆಗಾರಿಕೆಯನ್ನು ಸರ್ಕಾರವೇ ಹೊತ್ತುಕೊಳ್ಳಬೇಕಾಗುತ್ತದೆ ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ ಎಚ್ಚರಿಸಿದರು.

ಪ್ರಕೃತಿಯ ಉಳಿವಿಗೆ ಯುವಕರೇ ಶಕ್ತಿ: ಡಾ. ವಿ.ಟಿ. ನಾಯ್ಕರ್

ವಿಜಯಸಾಕ್ಷಿ ಸುದ್ದಿ, ಗದಗ: ವಿಶ್ವ ಪರಿಸರ ದಿನವು ಕೇವಲ ಆಚರಣೆಯ ದಿನವಲ್ಲ. ಮುಂದಿನ ಪೀಳಿಗೆಗಾಗಿ ಹಸಿರು ಮತ್ತು ಆರೋಗ್ಯಕರ ಭೂಮಿಯನ್ನು ಉಳಿಸುವ ಸಂಕಲ್ಪದ ದಿನವಾಗಿದೆ” ಎಂದು ನಗರದ ಶ್ರೀ ವಿ.ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ಪ್ರಾಚಾರ್ಯರು ಡಾ. ವಿ.ಟಿ. ನಾಯ್ಕರ್ ಅಭಿಪ್ರಾಯಪಟ್ಟರು.

ನಗರದ ಆದರ್ಶ ಶಿಕ್ಷಣ ಸಮಿತಿ ಅಧೀನದ ಶ್ರೀ ವಿ.ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ ಐಕ್ಯೂಎಸಿ, ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಮೇರಾ ಯುವ ಭಾರತ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿದ ಡಾ. ನಾಯ್ಕರ್, ಪರಿಸರವು ಮಾನವ ಜೀವನದ ಅವಿಭಾಜ್ಯ ಅಂಗವಾಗಿದ್ದು, ಗಾಳಿ, ನೀರು, ಮಣ್ಣು, ಮರಗಳು ಹಾಗೂ ಜೀವಜಾಲಗಳು ಸೇರಿ ಪರಿಸರವನ್ನು ನಿರ್ಮಿಸುತ್ತವೆ ಎಂದು ಹೇಳಿದರು.

“ಪರಿಸರ ಮಾಲಿನ್ಯ, ಅರಣ್ಯ ನಾಶ, ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆ ಇಂದಿನ ಜಗತ್ತಿನ ಗಂಭೀರ ಸಮಸ್ಯೆಗಳಾಗಿವೆ. ಇಂತಹ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಬೇಕು,” ಎಂದು ಅವರು ಕರೆ ನೀಡಿದರು.

ಮೇರಾ ಯುವ ಭಾರತ್ ಜಿಲ್ಲಾ ಯುವ ಅಧಿಕಾರಿ ಶ್ರೀ ರಾಕೇಶ್ ರೆಡ್ಡಿ ಮಾತನಾಡಿ, “ಪರಿಸರ ಎಂದಾಗ ನಮಗೆ ಮೊದಲಾಗಿ ನೆನಪಾಗುವುದು ಸಾಲುಮರದ ತಿಮ್ಮಕ್ಕ. ಯಾವುದೇ ಸರ್ಕಾರಿ ನೆರವಿಲ್ಲದೆ ಸಾವಿರಾರು ಮರಗಳನ್ನು ಮಕ್ಕಳಂತೆ ಸಾಕಿ ಬೆಳೆಸಿದ ಅವರ ಜೀವನ ಯುವಕರಿಗೆ ಮಾದರಿಯಾಗಿದೆ,” ಎಂದು ಹೇಳಿದರು.

ಸಾಲುಮರದ ತಿಮ್ಮಕ್ಕ ಅವರ ಸೇವೆ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಒಬ್ಬ ವ್ಯಕ್ತಿಯ ಸಂಕಲ್ಪ ಸಮಾಜದ ಮೇಲೆ ಎಷ್ಟು ದೊಡ್ಡ ಪ್ರಭಾವ ಬೀರುತ್ತದೆ ಎಂಬುದಕ್ಕೆ ಅವರು ಜೀವಂತ ಉದಾಹರಣೆಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಪ್ರೊ. ಬಿ.ಪಿ. ಜೈನರ, ಮೇರಾ ಯುವ ಭಾರತ್ ಕಾರ್ಯಕ್ರಮ ಸಂಯೋಜಕ ಶ್ರೀ ರವಿ ಹೊಂಬಾಳಿ, ಡಾ. ಸವಿತಾ ಬಂಡಾರ್ಕರ್, ಡಾ. ಸುನಿತಾ ನಾಯಕ್, ಪ್ರೊ. ಎಸ್.ಬಿ. ಜಾದವ್, ಪ್ರೊ. ಫಿರೋಜ್ ಖಾನ್, ಶ್ರೀ ಪ್ರಶಾಂತ್ ಹೊಂಬಾಳಿ, ಪ್ರೊ. ಸುನಿತಾ ತಿರ್ಲಾಪುರ, ಪ್ರೊ. ಮೋಹನ್ ಡಿ., ಶ್ರೀ ವಿ.ಎಲ್. ಕಲಬುರ್ಗಿ, ಶ್ರೀ ರವೀಶ್, ಶ್ರೀ ಬಡಿಗೇರ್, ಶ್ರೀಮತಿ ಸವಿತಾ ಇಬ್ಬನಿ, ಶ್ರೀಮತಿ ಪುರೋಹಿತ್, ಶ್ರೀಮತಿ ಭಾಗ್ಯಲಕ್ಷ್ಮಿ ಹಾಗೂ ಎನ್‌ಎಸ್‌ಎಸ್ ವಿದ್ಯಾರ್ಥಿ ಪ್ರತಿನಿಧಿ ಕು. ಭರತ್ ಸ್ವಾಮಿ ಸೇರಿದಂತೆ ಸ್ವಯಂಸೇವಕರು ಉಪಸ್ಥಿತರಿದ್ದರು.

“ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ಹೆಚ್ಚು ಗಿಡ ನೆಡಿ, ನೀರನ್ನು ಸಂರಕ್ಷಿಸಿ; ಪ್ರಕೃತಿಯನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ.”

ಡಾ. ವಿ.ಟಿ. ನಾಯ್ಕರ್

ಕೆರೆಯಲ್ಲೇ ಕನಸು ಬಿತ್ತಿದ ಮಹಿಳೆಯರು

ವಿಜಯಸಾಕ್ಷಿ ಸುದ್ದಿ, ಗದಗ: DAY-NRLM ಸಂಜೀವಿನಿ ಯೋಜನೆಯಡಿ ಜಾರಿಗೊಂಡಿರುವ “ಮತ್ಸ್ಯ ಸಂಜೀವಿನಿ” ಯೋಜನೆ ಗದಗ ಜಿಲ್ಲೆಯಲ್ಲಿ ಮಹಿಳಾ ಸಬಲೀಕರಣಕ್ಕೆ ಹೊಸ ಮಾದರಿಯಾಗಿದೆ. ಮೀನುಗಾರಿಕೆಯನ್ನು ಆಧಾರವಾಗಿಸಿಕೊಂಡು ಗ್ರಾಮೀಣ ಮಹಿಳೆಯರು ಸ್ವಾವಲಂಬನೆಯತ್ತ ಹೆಜ್ಜೆ ಇಟ್ಟಿದ್ದು, ಈಗ ಈ ಯೋಜನೆ ಜಿಲ್ಲೆಯಾದ್ಯಂತ ಗಮನ ಸೆಳೆಯುತ್ತಿದೆ.

ತಾಲೂಕಿನ ಹಾತಲಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಬಾಪುರ ಗ್ರಾಮದ ಪ್ರಕೃತಿ ಸಂಜೀವಿನಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಮೀನು ಸಾಕಾಣಿಕೆ ಮೂಲಕ ಉತ್ತಮ ಆದಾಯ ಗಳಿಸಿ ಇತರ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ಹಿಂದೆ ಕೂಲಿ ಕೆಲಸ ಹಾಗೂ ಅಲ್ಪ ಪ್ರಮಾಣದ ಕೃಷಿಯನ್ನೇ ನಂಬಿಕೊಂಡಿದ್ದ ಮಹಿಳೆಯರು ಇಂದು ತಮ್ಮದೇ ಆದ ಉದ್ಯಮವನ್ನು ಯಶಸ್ವಿಯಾಗಿ ನಡೆಸುತ್ತಿರುವುದು ವಿಶೇಷ.

ಜಿಲ್ಲೆಯಾದ್ಯಂತ 16 ಗ್ರಾಮ ಪಂಚಾಯತ್ ಮಟ್ಟದ ಕೆರೆಗಳನ್ನು ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳ ಮೂಲಕ ಗುತ್ತಿಗೆ ಪಡೆದು ಸ್ವಸಹಾಯ ಸಂಘಗಳ ಸದಸ್ಯರಿಗೆ ಮೀನುಗಾರಿಕೆ ಚಟುವಟಿಕೆ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದೇ ಯೋಜನೆಯಡಿ ಹಾತಲಗೇರಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಹಾಗೂ ಪ್ರಕೃತಿ ಸಂಜೀವಿನಿ ಮಹಿಳಾ ಸ್ವಸಹಾಯ ಸಂಘ ಕೈಜೋಡಿಸಿ ಯಶಸ್ವಿ ಮೀನುಗಾರಿಕೆ ಮಾದರಿಯನ್ನು ನಿರ್ಮಿಸಿದೆ.

2025ರಲ್ಲಿ ಜಿಲ್ಲಾ ಪಂಚಾಯತ್ ಗದಗ ಜಿಲ್ಲಾ ಸಂಪನ್ಮೂಲ ಕೇಂದ್ರ, ಹುಲಕೋಟೆಯಲ್ಲಿ ಮೀನುಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಮೂರು ದಿನಗಳ ವಸತಿ ಸಹಿತ ವಿಶೇಷ ತರಬೇತಿ ಆಯೋಜಿಸಲಾಗಿತ್ತು. ಮೀನು ಸಾಕಾಣಿಕೆಯ ವೈಜ್ಞಾನಿಕ ವಿಧಾನಗಳು, ಕೆರೆ ನಿರ್ವಹಣೆ, ಮೀನುಗಳ ಪೋಷಣೆ, ಆಹಾರ ವ್ಯವಸ್ಥೆ ಹಾಗೂ ಮಾರುಕಟ್ಟೆ ಸಂಪರ್ಕ ಕುರಿತು ಮಹಿಳೆಯರಿಗೆ ಸಮಗ್ರ ಮಾಹಿತಿ ನೀಡಲಾಯಿತು.

ತರಬೇತಿ ಬಳಿಕ ಅಮೃತ ಸರೋವರ ಯೋಜನೆಯಡಿ ನಿರ್ಮಿಸಲಾದ ಕೆರೆಯನ್ನು ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗೆ ಪಡೆದುಕೊಂಡಿತು. ಬಳಿಕ ಸಂಘದ ಸದಸ್ಯರು ಮೀನುಗಾರಿಕೆ ಚಟುವಟಿಕೆಗೆ ಚಾಲನೆ ನೀಡಿದರು.

ಮೀನುಗಾರಿಕೆ ಇಲಾಖೆಯ ಮಾರ್ಗದರ್ಶನದಲ್ಲಿ ಸುಮಾರು 12 ಸಾವಿರ ಕಟ್ಲಾ ಹಾಗೂ ರೋಹು ಮೀನು ಮರಿಗಳನ್ನು ಕೆರೆಗೆ ಬಿಡಲಾಯಿತು. ತಾಲೂಕು ಸಂಜೀವಿನಿ ಯೋಜನೆ ಅಧಿಕಾರಿಗಳು, ಕೃಷಿ ಸಖಿಯರು ಹಾಗೂ ಪಶು ಸಖಿಯರು ನಿರಂತರ ತಾಂತ್ರಿಕ ಸಲಹೆ ನೀಡಿದರು.

ಪ್ರತಿದಿನ ಕೆರೆಯ ನಿರ್ವಹಣೆ, ಮೀನುಗಳಿಗೆ ಆಹಾರ ಒದಗಿಸುವುದು ಹಾಗೂ ಬೆಳವಣಿಗೆಯ ಮೇಲ್ವಿಚಾರಣೆಯನ್ನು ಮಹಿಳೆಯರು ಸ್ವತಃ ನಿರ್ವಹಿಸಿದರು. ಸುಮಾರು ಎಂಟರಿಂದ ಒಂಬತ್ತು ತಿಂಗಳ ಪರಿಶ್ರಮದ ಬಳಿಕ ಮೊದಲ ಹಂತದ ಕೊಯ್ಲಿನಲ್ಲಿ ಸುಮಾರು 60 ಕೆ.ಜಿ. ಮೀನುಗಳನ್ನು ಸಂಗ್ರಹಿಸಲಾಯಿತು.

ಸ್ಥಳೀಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ ₹65 ದರದಲ್ಲಿ ಮಾರಾಟವಾಗಿದ್ದು, ಮೀನುಗಳ ತೂಕ 700 ಗ್ರಾಂದಿಂದ 1 ಕೆ.ಜಿ.ವರೆಗೆ ಇತ್ತು. ಮೀನು ಮಾರಾಟದಿಂದ ಬಂದ ಆದಾಯ ಮಹಿಳೆಯರ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸಲು ನೆರವಾಗಿದೆ.

“ಮತ್ಸ್ಯ ಸಂಜೀವಿನಿ” ಯೋಜನೆ ಕೇವಲ ಆದಾಯದ ಮೂಲವಾಗಿಲ್ಲ, ಮಹಿಳೆಯರಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣ, ಸ್ವಾವಲಂಬನೆ ಹಾಗೂ ಉದ್ಯಮಶೀಲತೆಯ ಮನೋಭಾವ ಬೆಳೆಸಿದೆ. ಸಾರ್ವಜನಿಕ ಸಂಪನ್ಮೂಲವಾಗಿದ್ದ ಕೆರೆಯನ್ನು ಸಮುದಾಯದ ಆರ್ಥಿಕ ಅಭಿವೃದ್ಧಿಗೆ ಬಳಸಿಕೊಂಡಿರುವುದು ಗ್ರಾಮೀಣ ಅಭಿವೃದ್ಧಿಯ ಮಾದರಿಯಾಗಿದೆ.

ಜಿಲ್ಲಾ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ನಾಗರಾಜ್ ಚಳ್ಳಜ್ಜಿಮನೆ, ಜಿಲ್ಲಾ ಪಂಚಾಯತ್ ವ್ಯವಸ್ಥಾಪಕರು (ಕೃಷಿ) ಮಡ್ಡೆಪ್ಪ ಮಲ್ಲಿಮಾರ್ ಹಾಗೂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಸಿದ್ದು ಬಿ. ಸತ್ಯಣ್ಣವರ ಅವರು ಯೋಜನೆಯ ಪ್ರತಿಯೊಂದು ಹಂತದಲ್ಲೂ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಿದ್ದು, ಯೋಜನೆಯ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ ಎಂದು ಸಂಘದ ಸದಸ್ಯರು ತಿಳಿಸಿದ್ದಾರೆ.

“ಹಿಂದೆ ನಮ್ಮ ಕುಟುಂಬದ ಆದಾಯ ತುಂಬಾ ಕಡಿಮೆಯಾಗಿತ್ತು. ಸಂಜೀವಿನಿ ಯೋಜನೆಯಡಿ ದೊರೆತ ತರಬೇತಿ ಮತ್ತು ಅವಕಾಶದಿಂದ ಮೀನುಗಾರಿಕೆಯನ್ನು ಕಲಿತು ಇಂದು ಸ್ವಂತ ಆದಾಯ ಗಳಿಸುತ್ತಿದ್ದೇವೆ. ಮಕ್ಕಳ ಶಿಕ್ಷಣ ಹಾಗೂ ಕುಟುಂಬದ ಅಗತ್ಯಗಳನ್ನು ಆತ್ಮವಿಶ್ವಾಸದಿಂದ ಪೂರೈಸುತ್ತಿದ್ದೇವೆ. ಮತ್ಸ್ಯ ಸಂಜೀವಿನಿ ಯೋಜನೆ ನಮ್ಮ ಬದುಕಿಗೆ ಹೊಸ ಬೆಳಕು ತಂದಿದೆ.”

ಶಿವಲೀಲಾ ಹರಿಜನ, ಸದಸ್ಯೆ, ಪ್ರಕೃತಿ ಸಂಜೀವಿನಿ ಮಹಿಳಾ ಸ್ವಸಹಾಯ ಸಂಘ, ಸಂಬಾಪುರ

ಮಹಿಳಾ ಸಬಲೀಕರಣಕ್ಕೆ ‘ಮತ್ಸ್ಯ ಸಂಜೀವಿನಿ’ ಮಾದರಿ

ಗ್ರಾಮೀಣ ಮಹಿಳೆಯರಿಗೆ ಪರ್ಯಾಯ ಜೀವನೋಪಾಯ ಕಲ್ಪಿಸುವ ಉದ್ದೇಶದಿಂದ ಆರಂಭವಾದ “ಮತ್ಸ್ಯ ಸಂಜೀವಿನಿ” ಯೋಜನೆ ಇಂದು ಗದಗ ಜಿಲ್ಲೆಯಲ್ಲಿ ಯಶಸ್ವಿ ಮಾದರಿಯಾಗಿ ಹೊರಹೊಮ್ಮಿದೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹೆಚ್ಚಿಸುವ ಜೊತೆಗೆ ಸಾಮಾಜಿಕ ಗೌರವ ಮತ್ತು ಆತ್ಮಸ್ಥೈರ್ಯ ಬೆಳೆಸುವಲ್ಲಿ ಯೋಜನೆ ಮಹತ್ವದ ಪಾತ್ರ ವಹಿಸುತ್ತಿದೆ.

ರಾಜ್ಯ ಯೋಗಾಸನ ಸ್ಪರ್ಧೆಗೆ ಗದಗ ಜಿಲ್ಲಾ ತಂಡ ಆಯ್ಕೆ

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಯೋಗಾಸನ ಚಾಂಪಿಯನ್‌ಶಿಪ್-2026 ಸ್ಪರ್ಧೆಗಳಲ್ಲಿ ಭಾಗವಹಿಸುವ ಗದಗ ಜಿಲ್ಲಾ ತಂಡವನ್ನು ಆಯ್ಕೆ ಮಾಡಲಾಗಿದೆ. ಗದಗ ಜಿಲ್ಲಾ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್ (ರಿ) ವತಿಯಿಂದ ಆಯೋಜಿಸಿದ್ದ 29ನೇ ಗದಗ ಜಿಲ್ಲಾ ಮಟ್ಟದ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್-2026ರಲ್ಲಿ ವಿಜೇತರಾದ ಸ್ಪರ್ಧಿಗಳು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಜೂನ್ 6 ಮತ್ತು 7ರಂದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಗದಗ ಜಿಲ್ಲೆಯ ಸ್ಪರ್ಧಿಗಳು ವಿವಿಧ ವಿಭಾಗಗಳಲ್ಲಿ ಭಾಗವಹಿಸಲಿದ್ದಾರೆ.

ಬಾಲಕರ ವಿಭಾಗದಲ್ಲಿ ಹರ್ಷವರ್ಧನ ಕೊಲ್ಲರಿ, ನವೀನ ಪಲ್ಲೇದ, ವೆಂಕಟೇಶ ಹಾಲನ್ನವರ, ಆದಿತ್ಯ ಶೇಠ, ಮಲ್ಲಿಕಾರ್ಜುನ ಅಳಗವಾಡಿ, ಚೇತನ ಕೋಟೇಗೌಡ್ರ, ಫಕೀರಯ್ಯ ಕಲ್ಯಾಣಮಠ ಹಾಗೂ ಪ್ರಜ್ವಲ್ ಆಯ್ಕೆಯಾಗಿದ್ದಾರೆ.

ಬಾಲಕಿಯರ ವಿಭಾಗದಲ್ಲಿ

ಅಪಾತ ಬೆಟಗೇರಿ, ಗೌರಿ ನೀಲಗುಂದ, ಲಕ್ಷ್ಮೀ ಬಸರಿ, ಶ್ರೀನವನಿಧಿ ಲದ್ದಿಯವರ, ಮನಿರಾಧಾ ಅಳಗವಾಡಿ, ಸಂಜನಾ ಮಡಿವಾಳರ, ನಮ್ರತಾ ವೆರ್ಣೇಕರ, ಪೂರ್ವಿ ಬಾಳನಗೌಡ್ರ ಹಾಗೂ ಸುಷ್ಮಾ ಮುಂದಿನಮನಿ ಆಯ್ಕೆಯಾಗಿದ್ದಾರೆ.

ಮಹಿಳೆಯರ ವಿಭಾಗದಲ್ಲಿ

ಸುಶ್ಮಿತಾ ಮಾರನಬಸರಿ, ಚೈತ್ರಾ ಸೋಮನಗೌಡ್ರ ಹಾಗೂ ನಿರ್ಮಲಾ ಕೊಟ್ರಣ್ಣನ್ನವರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಸ್ಪರ್ಧೆಯ ನಿರ್ಣಾಯಕರಾಗಿ ಚೇತನ ಚುಂಚಾ, ಸುಮಂಗಲಾ ಹದ್ಲಿ ಹಾಗೂ ಅನುರಾಧಾ ಶಿರಿಯಣ್ಣವರ ಕಾರ್ಯನಿರ್ವಹಿಸಲಿದ್ದಾರೆ.

ಗದಗ ಜಿಲ್ಲಾ ತಂಡಕ್ಕೆ ಆಯ್ಕೆಯಾದ ಸ್ಪರ್ಧಿಗಳು, ನಿರ್ಣಾಯಕರು ಹಾಗೂ ಪ್ರೋತ್ಸಾಹ ನೀಡಿದ ಪಾಲಕರಿಗೆ ಗದಗ ಜಿಲ್ಲಾ ಯೋಗ ಒಕ್ಕೂಟ, ಗದಗ ಜಿಲ್ಲಾ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್ ಪದಾಧಿಕಾರಿಗಳು ಮತ್ತು ಯೋಗಾಸನ ಕ್ರೀಡಾಭಿಮಾನಿಗಳ ಪರವಾಗಿ ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಕ್ರೀಡಾ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರಾದ ಕೆ.ಎಸ್. ಪಲ್ಲೇದ ಹಾಗೂ ಬಸವ ಯೋಗ ಚಿಂತನ ಕೂಟದ ಅಧ್ಯಕ್ಷ ಎಂ.ಎಸ್. ಶಿರಿಯಣ್ಣವರ ಶುಭಾಶಯ ಕೋರಿದ್ದಾರೆ.

ಸಸಿ ನೆಡಿ… ಭವಿಷ್ಯ ಉಳಿಸಿ: ಎಸ್. ಅನ್ವರ್ ಭಾಷಾ

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪರಿಸರ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಪ್ರತಿಯೊಬ್ಬರೂ ಕನಿಷ್ಠ ಒಂದು ಸಸಿಯನ್ನು ನೆಟ್ಟು ಅದರ ಪೋಷಣೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಹಗರಿಬೊಮ್ಮನಹಳ್ಳಿ ಗೃಹರಕ್ಷಕ ದಳ ಘಟಕದ ಅಧಿಕಾರಿ ಎಸ್. ಅನ್ವರ್ ಭಾಷಾ ಹೇಳಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಗರಿಬೊಮ್ಮನಹಳ್ಳಿ ಗೃಹರಕ್ಷಕ ದಳದ ವತಿಯಿಂದ ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪರಿಸರ ಸಂರಕ್ಷಣೆ, ಹಸಿರು ವಾತಾವರಣ ನಿರ್ಮಾಣ ಹಾಗೂ ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರ ಉಳಿಸುವ ಉದ್ದೇಶದಿಂದ ವಿವಿಧ ಜಾತಿಯ ಸಸಿಗಳನ್ನು ನೆಡಲಾಯಿತು. ಸಸಿ ನೆಡುವ ಮೂಲಕ ಪರಿಸರದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಗೃಹರಕ್ಷಕ ದಳದ ಮುಖ್ಯಸ್ಥರು ಶರಣಪ್ಪ, ಹನುಮಂತಪ್ಪ, ಕೆ. ಮಂಜಪ್ಪ, ಜಂಬಣ್ಣ, ಕೊಟ್ರಯ್ಯ, ಗೌಡಪ್ಪ, ಮಂಜುನಾಥ, ವೆಂಕಟೇಶ್ ಪತ್ತಾರ್, ಜಯರಾಜ್ ನಾಯ್ಕ, ಕೊಟ್ರೇಶ್, ಹನುಮಂತಪ್ಪ ಚಿಂತರಪಳ್ಳಿ ಸೇರಿದಂತೆ ಸಿಬ್ಬಂದಿ ಭಾಗವಹಿಸಿ ಸಸಿ ನೆಡುವ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

ಪರಿಸರ ಸಂರಕ್ಷಣೆಯ ಸಂದೇಶ ಸಾರಿದ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಪ್ರತಿ ದಿನವೂ ಪರಿಸರ ದಿನವಾಗಬೇಕು: ಶಾಸಕ ಕೆ. ನೇಮಿರಾಜ್ ನಾಯ್ಕ

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪರಿಸರ ಕಾಳಜಿ ವಿಶ್ವ ಪರಿಸರ ದಿನಾಚರಣೆಗೆ ಮಾತ್ರ ಸೀಮಿತವಾಗದೇ, ಪ್ರತಿದಿನ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯ ಹೊಣೆಗಾರಿಕೆ ಅರಿತು ನಡೆದುಕೊಳ್ಳಬೇಕು ಎಂದು ಶಾಸಕ ಕೆ. ನೇಮಿರಾಜ್ ನಾಯ್ಕ ಹೇಳಿದರು.

ಪಟ್ಟಣದ ಆಡಳಿತ ಸೌಧದ ಆವರಣದಲ್ಲಿ ಅರಣ್ಯ ಇಲಾಖೆ ಹಾಗೂ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

“ಗಿಡ-ಮರಗಳನ್ನು ಬೆಳೆಸುವುದರಿಂದ ಶುದ್ಧ ಗಾಳಿ ಲಭ್ಯವಾಗುತ್ತದೆ. ಕೊರೋನಾ ಸಂದರ್ಭದಲ್ಲಿ ಆಮ್ಲಜನಕದ ಮಹತ್ವ ಎಲ್ಲರಿಗೂ ಅರಿವಾಗಿದೆ. ರೈತರು ಪರಿಸರದ ಹಿತದೃಷ್ಟಿಯಿಂದ ಯೂರಿಯಾ ಗೊಬ್ಬರದ ಬಳಕೆಯನ್ನು ಕಡಿಮೆ ಮಾಡಬೇಕು” ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಾದಾಮಿ ಮೃತ್ಯುಂಜಯ, ತಾಲೂಕು ಅಧ್ಯಕ್ಷ ವೈ. ಮಲ್ಲಿಕಾರ್ಜುನ, ಇಒ ಪಾಲಯ್ಯನಕೋಟೆ ವಿಶ್ವನಾಥ್, ಉಪ ತಹಸೀಲ್ದಾರ್ ಶಿವಕುಮಾರ್ ಗೌಡ್ರು, ಕ್ಷೇತ್ರ ಶಿಕ್ಷಣಾಧಿಕಾರಿ ಯಶ್ ಜಗದೀಶ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ವಿಜಯಕುಮಾರ್ ನಿಚ್ಚಾಪುರ, ಅಬಕಾರಿ ಇಲಾಖೆಯ ಅಧಿಕಾರಿ ಮಮತಾ, ಹನುಮಂತಪ್ಪ ಕುರಿ, ಪಟ್ಟಣ ಪಂಚಾಯಿತಿ ಅಧಿಕಾರಿ ಮಾರೆಪ್ಪ, ಸತೀಶ್ ನಾಯ್ಕ್, ಅರಣ್ಯ ಇಲಾಖೆ ಅಧಿಕಾರಿ ಗಂಟೆ ರಾಜೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

“ಯೂರಿಯಾ ಗೊಬ್ಬರದಿಂದ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಪರ್ಯಾಯವಾಗಿ ರೈತರು ನ್ಯಾನೋ ಗೊಬ್ಬರ ಬಳಕೆ ಮಾಡುವತ್ತ ಗಮನ ಹರಿಸಬೇಕು”

ಕೆ. ನೇಮಿರಾಜ ನಾಯ್ಕ, ಶಾಸಕ

ಪ್ರತಿ ವಿದ್ಯಾರ್ಥಿಯೂ ಒಂದು ಗಿಡದ ಜವಾಬ್ದಾರಿ ವಹಿಸಬೇಕು”: ಜಿ.ಎಂ. ಮಂದಿನಮನಿ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನ ಬೆಳಘಟ್ಟಿ ಸರ್ಕಾರಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಗದಗ ಡಯಟ್ ಉಪ ಪ್ರಾಂಶುಪಾಲರಾದ ಜಿ.ಎಂ. ಮಂದಿನಮನಿ ಶಾಲೆಗೆ ಭೇಟಿ ನೀಡಿ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಚಟುವಟಿಕೆಗಳ ಸಮಗ್ರ ಪರಿಶೀಲನೆ ನಡೆಸಿ ಮಾರ್ಗದರ್ಶನ ನೀಡಿದರು.

ಶಾಲೆಯ ದಾಖಲಾತಿ ಆಂದೋಲನ, ಪಾಲಕ-ಪೋಷಕರ ಮಹಾಸಭೆ, ವಾರ್ಷಿಕ ಕ್ರಿಯಾಯೋಜನೆ, ಸಂಯುಕ್ತ ವೇಳಾಪಟ್ಟಿ, ತರಗತಿವಾರು ಸಾಮರ್ಥ್ಯ ಪಟ್ಟಿ, ಸೇತುಬಂಧ ಕಾರ್ಯಕ್ರಮದ ಪೂರ್ವಸಿದ್ಧತೆ, ಶಾಲಾ ಮೈದಾನದ ಸ್ವಚ್ಛತೆ, ಬೋಧನಾ ಕೊಠಡಿಗಳ ನಿರ್ವಹಣೆ ಸೇರಿದಂತೆ ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ಅವಲೋಕಿಸಿ ಶಿಕ್ಷಕರಿಗೆ ಅಗತ್ಯ ಸಲಹೆಗಳನ್ನು ನೀಡಿದರು.

ನಂತರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಮಹತ್ವವನ್ನು ಮಕ್ಕಳಿಗೆ ತಿಳಿಸಲಾಯಿತು.

ಈ ವೇಳೆ ಮಾತನಾಡಿದ ಜಿ.ಎಂ. ಮಂದಿನಮನಿ, “ಹಸಿರೇ ಉಸಿರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದು ಗಿಡವನ್ನು ನೆಟ್ಟು ಅದರ ಪಾಲನೆ-ಪೋಷಣೆಯ ಜವಾಬ್ದಾರಿ ವಹಿಸಬೇಕು. ಗಿಡಕ್ಕೆ ಮಗುವಿನ ಹೆಸರನ್ನೇ ನಾಮಕರಣ ಮಾಡಿ ಅದರ ಬೆಳವಣಿಗೆಯನ್ನು ಗಮನಿಸುವ ಮೂಲಕ ಪರಿಸರದ ಬಗ್ಗೆ ಕಾಳಜಿ ಹಾಗೂ ಜವಾಬ್ದಾರಿಯನ್ನು ಬೆಳೆಸಬೇಕು” ಎಂದು ಹೇಳಿದರು.

“ಜೂನ್ 5ರಂದು ಮಾತ್ರ ಸಸಿ ನೆಡುವುದರಿಂದ ಪರಿಸರ ಸಂರಕ್ಷಣೆ ಸಾಧ್ಯವಿಲ್ಲ. ವರ್ಷದ ಪ್ರತಿದಿನವೂ ಪರಿಸರದ ಬಗ್ಗೆ ಕಾಳಜಿ ವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು” ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ದೇವಪ್ಪ ಹಾಲಪ್ಪ ಕೋಟಿ, ಉಪಾಧ್ಯಕ್ಷೆ ಅನ್ನಪೂರ್ಣ ಸತ್ಯಪ್ಪ ಕಟ್ಟೆಣ್ಣವರ, ಪ್ರಧಾನ ಗುರು ಅಣ್ಣಪ್ಪ ನೀಲಗಿರಿ, ಹಿರಿಯ ಶಿಕ್ಷಕರಾದ ನಾಗಪ್ಪ ಎಚ್. ಗೊಂದಿ ಹಾಗೂ ಆರ್.ವೈ. ಪಾಟೀಲ, ಅಕ್ಷರ ದಾಸೋಹ ಸಿಬ್ಬಂದಿಗಳಾದ ಪುಷ್ಪ ನಿಚ್ಚಳ ಮತ್ತು ಫಾತಿಮಾ ಬೇಗಂ ನೆಗಳೂರು ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಸಿ ನೆಡುವ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಸಸಿ ನೆಟ್ಟರೆ ಸಾಕಾಗಲ್ಲ- ಉಳಿಸಬೇಕು: ಶ್ರೀಧರ್ ಚಿನಗುಂಡಿ

ವಿಜಯಸಾಕ್ಷಿ ಸುದ್ದಿ, ನರಗುಂದ: “ವಿಶ್ವ ಪರಿಸರ ದಿನವನ್ನು ಕೇವಲ ಆಚರಿಸಿದರೆ ಸಾಲದು. ಪರಿಸರ ಸಂರಕ್ಷಣೆಯನ್ನು ಪ್ರತಿಯೊಬ್ಬರೂ ಜೀವನದ ಅವಿಭಾಜ್ಯ ಅಂಗವನ್ನಾಗಿ ರೂಢಿಸಿಕೊಳ್ಳಬೇಕು. ಸಸಿ ನೆಡುವುದಷ್ಟೇ ಅಲ್ಲ, ಅದು ಮರವಾಗಿ ಬೆಳೆವವರೆಗೂ ಅದರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ” ಎಂದು ನರಗುಂದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಚಿನಗುಂಡಿ ಹೇಳಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಲೂಕಿನ ಬನಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರ್ಲಗೇರಿ ಗ್ರಾಮದಲ್ಲಿ ತಾಲೂಕು ಪಂಚಾಯಿತಿ ನರಗುಂದ ಹಾಗೂ ಬನಹಟ್ಟಿ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮದ ಕುಡಿಯುವ ನೀರಿನ ಟ್ಯಾಂಕ್ ಆವರಣದಲ್ಲಿ 10 ಸಸಿಗಳನ್ನು ನೆಟ್ಟು ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, “ಇಂದು ನೆಟ್ಟಿರುವ ಸಸಿಗಳು ಬೆಳೆದು ಗ್ರಾಮಸ್ಥರು ಹಾಗೂ ಪ್ರಾಣಿ-ಪಕ್ಷಿಗಳಿಗೆ ನೆರಳು ನೀಡುವವರೆಗೂ ಅವುಗಳ ಸಂರಕ್ಷಣೆಯಲ್ಲಿ ಸಾರ್ವಜನಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ” ಎಂದು ಹೇಳಿದರು.

ಗ್ರಾಮಗಳ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಹಾಗೂ ಅವುಗಳ ನಿರ್ವಹಣೆಯಲ್ಲಿಯೂ ಸಾರ್ವಜನಿಕರು ಗ್ರಾಮ ಪಂಚಾಯಿತಿಗೆ ಸಹಕಾರ ನೀಡಬೇಕು ಎಂದು ಕರೆ ನೀಡಿದರು.

ಈ ವೇಳೆ ಮಾತನಾಡಿದ ಬನಹಟ್ಟಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮಂಜುನಾಥ ಗಣಿ, “ಕುಡಿಯುವ ನೀರಿನ ಟ್ಯಾಂಕ್ ಆವರಣವನ್ನು ಸ್ವಚ್ಛಗೊಳಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಮನವಿ ಬಂದ 15 ದಿನಗಳೊಳಗೆ ಸ್ಥಳವನ್ನು ಸ್ವಚ್ಛಗೊಳಿಸಿ ಇಂದು ಅದೇ ಸ್ಥಳದಲ್ಲಿ ಪರಿಸರ ದಿನಾಚರಣೆ ನಡೆಸುತ್ತಿರುವುದು ಸಂತಸದ ಸಂಗತಿ” ಎಂದು ಹೇಳಿದರು.

ಗ್ರಾಮ ಪಂಚಾಯಿತಿ ವತಿಯಿಂದ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಸಾರ್ವಜನಿಕರು ಕಾಪಾಡಿಕೊಂಡು ಹೋಗಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಡಿ. ಪೂಜಾರ, ನಾಗಯ್ಯ ಹಿರೇಮಠ, ವಿರುಪಾಕ್ಷಪ್ಪ ಶಾನವಾಡ, ಶಿವರುದ್ರಪ್ಪ ಸುಳ್ಳದ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮಾಳಪ್ಪ ಪೂಜಾರ, ಬಿಲ್ ಕಲೆಕ್ಟರ್ ಶಿವನಪ್ಪ ಕಲ್ಲಾಪೂರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

“ಪರಿಸರ ದಿನವನ್ನು ಆಚರಿಸುವುದಷ್ಟೇ ಸಾಲದು. ನಾವು ಇಂದು ನೆಟ್ಟ ಸಸಿಗಳು ಮರವಾಗಿ ಬೆಳೆವವರೆಗೂ ಅವುಗಳ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.”

ಶ್ರೀಧರ್ ಚಿನಗುಂಡಿ, ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯಿತಿ ನರಗುಂದ

ಪರಿಸರ ಸ್ವಚ್ಛತೆ ಪ್ರತಿಯೊಬ್ಬರ ಹೊಣೆ: ಕವಿತಾ ದಂಡಿನ

ವಿಜಯಸಾಕ್ಷಿ ಸುದ್ದಿ, ಗದಗ: “ನಾವು ನಮ್ಮ ಮನೆಯನ್ನು ಮಾತ್ರ ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಸಾಲದು. ಸುತ್ತಮುತ್ತಲಿನ ಪರಿಸರವನ್ನೂ ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು” ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ ಹೇಳಿದರು.

ಗದಗ-ಬೆಟಗೇರಿ ನಗರಸಭೆ ವತಿಯಿಂದ ನಗರದ ಸಿದ್ಧಲಿಂಗನಗರದ 15ನೇ ಸಂಖ್ಯೆಯ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹೊಸ ಘನತ್ಯಾಜ್ಯ ನಿರ್ವಹಣಾ ನಿಯಮ-2026 ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾಲೆಯ ಹೊರಾಂಗಣ ಗೋಡೆಗಳ ಮೇಲೆ ಚಿತ್ರ ಬಿಡಿಸುವ ಮೂಲಕ ಮಕ್ಕಳಿಗೆ ಸ್ವಚ್ಛತೆ, ಕಸ ವಿಂಗಡಣೆ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಅರಿವು ಮೂಡಿಸಲಾಯಿತು.

ಶಿಕ್ಷಣ ಸಂಯೋಜಕ ಮುರಳಿ ಸೊಲ್ಲಾಪೂರ ಮಾತನಾಡಿ, “ಶಾಲಾ ಮಕ್ಕಳಿಗೆ ಕಸ ವಿಲೇವಾರಿ, ಸ್ವಚ್ಛತೆ ಹಾಗೂ ಕಸ ವಿಂಗಡಣೆಯ ಕುರಿತು ಪ್ರಾಯೋಗಿಕ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾರ್ವಜನಿಕರು ಮನೆಮಟ್ಟದಲ್ಲೇ ಕಸ ವಿಂಗಡಣೆ ಮಾಡಿ ಪೌರಕಾರ್ಮಿಕರ ಶ್ರಮಕ್ಕೆ ಸಹಕಾರ ನೀಡಬೇಕು” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧಿಕಾರಿಗಳು, ಪರಿಸರ ಅಭಿಯಂತರರು, ನಗರಸಭೆ ಸದಸ್ಯೆ ವಿದ್ಯಾವತಿ ಗಡಗಿ, ಸೂಪರ್‌ವೈಸರ್‌ಗಳು, ಕಮ್ಯುನಿಟಿ ಮೊಬೈಲೈಸರ್‌ಗಳು, ಪೌರಕಾರ್ಮಿಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

“ಪರಿಸರ ಸ್ವಚ್ಛತೆಗೆ ಎಲ್ಲರೂ ಆದ್ಯತೆ ನೀಡಬೇಕು. ಮನೆ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಕಂಪೋಸ್ಟ್ ಮಾಡುವ ಮೂಲಕ ಕಸದಿಂದಲೂ ಸಂಪನ್ಮೂಲ ಸೃಷ್ಟಿಸಬಹುದು”

ಕವಿತಾ ದಂಡಿನ

error: Content is protected !!