ಬೆಂಗಳೂರು: ಬೆಂಗಳೂರಿನ ಸಂಚಾರ ದಟ್ಟಣೆಗೆ ಪರಿಹಾರ ನೀಡಬೇಕಿದ್ದ ನಮ್ಮ ಮೆಟ್ರೋ ಯೋಜನೆಗಳ ಕಾಮಗಾರಿ ಮತ್ತೆ ವಿಳಂಬವಾಗುವ ಸಾಧ್ಯತೆ ಇದೆ.
ಬನ್ನೇರುಘಟ್ಟ ರಸ್ತೆಯನ್ನು ಸಂಪರ್ಕಿಸುವ ಮೆಟ್ರೋ ಪಿಂಕ್ ಲೈನ್ ಮೊದಲ ಹಂತದ ಸಂಚಾರವನ್ನು ಆಗಸ್ಟ್ 15ರಂದು ಆರಂಭಿಸುವ ಗುರಿಯನ್ನು ಬಿಎಂಆರ್‌ಸಿಎಲ್ ಹೊಂದಿತ್ತು. ಆದರೆ ಪ್ರಸ್ತುತ ಕಾಮಗಾರಿಯ ವೇಗವನ್ನು ಗಮನಿಸಿದರೆ ಈ ಗಡುವು ತಲುಪುವುದು ಅನುಮಾನವಾಗಿದೆ.
ಪಿಂಕ್ ಲೈನ್ ಯೋಜನೆಯಡಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿಲೋಮೀಟರ್ ಮೇಲ್ಸೇತುವೆ ಮಾರ್ಗವನ್ನು ಸ್ವಾತಂತ್ರ್ಯ ದಿನಾಚರಣೆಯ ವೇಳೆಗೆ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲು ಯೋಜಿಸಲಾಗಿತ್ತು.
ಆದರೆ ಕಾಮಗಾರಿ ಬಹುತೇಕ ಅಂತಿಮ ಹಂತದಲ್ಲಿದ್ದರೂ, ರೈಲು ಸೆಟ್‌ಗಳ ಪೂರೈಕೆ, ಸಿಗ್ನಲಿಂಗ್ ವ್ಯವಸ್ಥೆ ಹಾಗೂ ಸುರಕ್ಷತಾ ಪರೀಕ್ಷೆಗಳು ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಯೋಜನೆ ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿದೆ.
ಕಾಮಗಾರಿ ಸ್ಥಳಗಳಲ್ಲಿ ಅಗತ್ಯ ಪ್ರಮಾಣದ ಕಾರ್ಮಿಕರ ಕೊರತೆ ಹಾಗೂ ಸಣ್ಣಪುಟ್ಟ ನಾಗರಿಕ ಕಾಮಗಾರಿಗಳು ನಿಧಾನಗತಿಯಲ್ಲಿ ನಡೆಯುತ್ತಿರುವುದು ವಿಳಂಬಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಬನ್ನೇರುಘಟ್ಟ ರಸ್ತೆಯ ಭಾರಿ ಸಂಚಾರ ದಟ್ಟಣೆಯಿಂದ ಮುಕ್ತಿ ಸಿಗಲಿದೆ ಎಂದು ಕಾಯುತ್ತಿದ್ದ ಸಾವಿರಾರು ಪ್ರಯಾಣಿಕರಿಗೆ ಮತ್ತಷ್ಟು ಕಾಯುವ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ.
ಇನ್ನು ಪಿಂಕ್ ಲೈನ್‌ನ ಡೈರಿ ಸರ್ಕಲ್‌ನಿಂದ ನಾಗವಾರದವರೆಗಿನ 13.75 ಕಿಲೋಮೀಟರ್ ಭೂಗತ ಮಾರ್ಗದ ಕಾಮಗಾರಿಯೂ ನಿಧಾನಗತಿಯಲ್ಲಿ ಸಾಗುತ್ತಿದೆ. ಮೇಲ್ಸೇತುವೆ ಮಾರ್ಗದ ಸಂಚಾರ ಆರಂಭ 2026ರ ಕೊನೆಯ ಹಂತಕ್ಕೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ.
ಅದೇ ರೀತಿ ಪಿಂಕ್ ಲೈನ್ ಭೂಗತ ಮಾರ್ಗವು 2027ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ಬ್ಲೂ ಲೈನ್ ಕಾಮಗಾರಿಯೂ ವಿಳಂಬವಾಗುತ್ತಿದ್ದು, 2027ರ ಮಧ್ಯಭಾಗದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.



